ಮಾಜಿ ಡಾನ್ ಉಜೈರ್ ಬಲೋಚ್ ಸಹೋದರ ಜುಬೈರ್ ಮೇಲೆ ಶೂಟೌಟ್​ 
ವಿದೇಶ

'ಧುರಂಧರ್​' ಲಿಯಾರಿಯಲ್ಲಿ ಮತ್ತೊಮ್ಮೆ ಶೂಟೌಟ್​: ಮಾಜಿ ಡಾನ್​ ಉಜೈರ್​ ಬಲೋಚ್​ ಸಹೋದರನ ಮೇಲೆ ಗುಂಡಿನ ದಾಳಿ; ಸಾವು-ಬದುಕಿನ ಹೋರಾಟದಲ್ಲಿ ಜುಬೈರ್​! Zubair Baloch Shootout

ವಿನಾಯಕ ನಾಯಕ

ಪ್ರಮುಖ ಮುಖ್ಯಾಂಶಗಳು

  • ಕರಾಚಿಯ ಲಿಯಾರಿನಲ್ಲಿ ಮತ್ತೊಮ್ಮೆ ಗುಂಡಿನ ಶಬ್ದ
  • ಮಾಜಿ ಡಾನ್ ಉಜೈರ್ ಬಲೋಚ್ ಸಹೋದರ ಜುಬೈರ್ ಮೇಲೆ ಶೂಟೌಟ್​
  • ಆಸ್ಪತ್ರೆಯಲ್ಲಿ ಸಾವು- ಬದುಕಿನ ಹೋರಾಟದಲ್ಲಿರುವ ಜುಬೈರ್ ಬಲೋಚ್​
  • ಧುರಂಧರ್​ ಸಿನಿಮಾ ಬಳಿಕ ಮುನ್ನಲೆಗೆ ಬಂದಿದ್ದ ಪಾತ್ರಗಳು
ಲಿಯಾರಿ: ಪಾಕಿಸ್ತಾನದ ಕರಾಚಿಯ ಲಿಯಾರಿ ಪಟ್ಟಣದಲ್ಲಿ ಸಿನಿಮೀಯ ಶೈಲಿಯ ಶೂಟೌಟ್​ ನಡೆದಿದ್ದು, ಇದರಲ್ಲಿ ಲಿಯಾರಿಯ ಮಾಜಿ ಡಾನ್ ಉಜೈರ್ ಬಲೋಚ್ ಸಹೋದರ, ಜುಬೈರ್​ ಬಲೋಚ್​ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಬೈಕ್​ ಏರಿ ಬಂದ ಅಪರಿಚಿತ ಬಂಧೂಕುಧಾರಿಗಳು ಜುಬೈರ್​ ಬಲೋಚ್​ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದು, ಜುಬೈರ್​ ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟ ಮುಂದುವರಿಸಿರುವುದಾಗಿ ತಿಳಿದು ಬಂದಿದೆ.

ಉಜೈರ್ ಸಹೋದರ ಮೇಲೆ ಶೂಟೌಟ್​!

ಪಿಪಲ್ಸ್​ ಅಮನ್​ ಕಮಿಟಿ ಮುಖ್ಯಸ್ಥ, ಲಿಯಾರಿಯ ಕುಖ್ಯಾತ್​ ಡಾನ್​ ಉಜೈರ್ ಬಲೋಚ್, ಸಹೋದರ ಜುಬೈರ್​ ಬಲೋಚ್​ ಮೇಲೆ ಗುಂಡಿನ ದಾಳಿ ನಡೆದಿದ್ದು, ಬುಲೆಟ್​ಗಳು ಕುತ್ತಿಗೆ, ಎದೆಗೆ ತಗುಲಿದ್ದು ತೀವ್ರ ರಸ್ತಸ್ರಾವವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಕರಾಚಿಯ ಸಿವಿಲ್​ ಆಸ್ಪತ್ರೆಯಲ್ಲಿ ಜುಬೈರ್​ಗೆ ಚಿಕಿತ್ಸೆ ಮುಂದುವರಿದಿದೆ.
ಲಿಯಾರಿ ಡಿಐಜಿ ಸೈಯದ್​ ಅಸಾದ್​ ರಜಾ ಹೇಳಿಕೆಯಂತೆ, ಈ ಜುಬೈರ್​ನನ್ನು 2012 ರಲ್ಲಿ ಹಲವು ಕೊಲೆ, ಸುಲಿಗೆ ಮೊದಲಾದ ಪ್ರಕರಣಗಳಲ್ಲಿ ಬಂಧಿಸಲಾಗಿದ್ದು, ಕಳೆದ ವರ್ಷವಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ಅವರು ತಿಳಿಸಿದ್ದಾರೆ.

ತನಿಖೆ ನಡೆಸುತ್ತಿದ್ದೆವೆ!

ಡಿಐಜಿ ಸೈಯದ್​ ಅಸಾದ್​ ರಜಾ ಪ್ರಕಾರ, ಲಿಯಾರಿ ಪಟ್ಟಣದಲ್ಲಿ ಈ ಶೂಟೌಟ್​ ನಡೆದಿದ್ದು, ಬೈಕ್​ ಏರಿ ಬಂದ ಇಬ್ಬರು ಬಂದೂಕುಧಾರಿಗಳು ಜುಬೈರ್​ ಮೇಲೆ ಒಮ್ಮೆಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ.
ಸಿಡಿದ ಬುಲೆಟ್​ಗಳು ಜುಬೈರ್​ನ ಹೊಟ್ಟೆ, ಕುತ್ತಿಗೆ ಹಾಗೂ ಎದೆಗೆ ತಗುಲಿದ್ದು, ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮುಂದುವರಿದಿದೆ ಎಂದು ಹೇಳಲಾಗುತ್ತಿದೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಬಂದೂಕುಧಾರಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದಾಗಿ ತಿಳಿಸಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಜುಬೈರ್​ ಬಲೋಚ್​ ರಾಜಕೀಯದಲ್ಲಿ ಸಕ್ರಿಯವಾಗಿದ್ದು, ಲಿಯಾರಿ ಭೂಗತ ಲೋಕ ಸಕ್ರಿಯವಾಗಿದ್ದ ಸಮಯದಲ್ಲಿದ್ದ ಇತನ ಹಾಗೂ ಇತನ ಅಣ್ಣನ ವಿರೋಧಿಗಳೇ ಈ ಕೃತ್ಯವನ್ನು ಎಸೆಗಿದ್ದಾಗಿ ಮಾಹಿತಿಯಿದೆ, ಈ ಕೆಲಸವನ್ನು ಯಾರೇ ಮಾಡಿರಲಿ ಅವರನ್ನು ಬಂಧಿಸುವುದಾಗಿ ರಜಾ ಭರವಸೆ ನೀಡಿದ್ದಾರೆ.

ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಉಜೈರ್​!

ಇತ್ತ ತಮ್ಮ ಜುಬೈರ್​ ಬಲೋಚ್​ ಮೇಲೆ ಗುಂಡಿನ ದಾಳಿ ನಡೆದಿದ್ದರೆ, ಅತ್ತ ಅಣ್ಣ ಉಜೈರ್​ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. 2012 ರಲ್ಲಿ ಉಜೈರ್​ ಬಲೋಚ್​ ಹಾಗೂ ಆತನ ಗ್ಯಾಂಗ್​ ಭದ್ರತಾ ಸಿಬ್ಬಂದಿಗಳ ಮೇಲೆ ಶಸಸ್ತ್ರ ದಾಳಿ ನಡೆಸಿದ್ದ ಹಿನ್ನಲೆ ಉಜೈರ್​ ಬಲೋಚ್​ಗೆ ಜೀವಾವಧಿ ಶಿಕ್ಷೆಯನ್ನು ನೀಡಲಾಗಿದೆ. ಪ್ರಸ್ತುತ ಬಲೋಚ್​ ಕರಾಚಿ ಕೇಂದ್ರ ಕಾರಾಗ್ರಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ಧುರಂಧರ್​ ಬಳಿಕ ಮುನ್ನಲೆಗೆ ಬಂದ ಪಾತ್ರಗಳು!

ಕಳೆದ ವರ್ಷ ಬಿಡುಗಡೆ ಕಂಡಿದ್ದ, ಆದಿತ್ಯ ಧರ್​ ನಿರ್ದೇಶನದ ಧುರಂಧರ್​ ಸಿನಿಮಾದಲ್ಲಿ ಭಾರತದ ಗೂಢಾಚರನೊಬ್ಬ ಕರಾಚಿಯ ಲಿಯಾರಿಗೆ ತೆರಳಿ ಅಲ್ಲಿನ ಭೂಗತ ಜಗತ್ತನ್ನು ನಾಶ ಪಡಿಸುವುದನ್ನು ತೋರಿಸಲಾಗಿತ್ತು. ಈ ಸಿನಿಮಾದಲ್ಲಿಯೇ ಉಜೈರ್​ ಬಲೋಚ್​, ರೆಹಮಾನ್​ ಡಕಾಯತ್​​, ಅರ್ಷದ್​ ಪಪ್ಪು ಮೊದಲಾದ ಕುಖ್ಯಾತ ಲಿಯಾರಿ ಗ್ಯಾಂಗ್​ಸ್ಟರ್​ಗಳನ್ನು ಭಾರತೀಯ ಪ್ರೇಕ್ಷಕರಿಗೆ ಪರಿಚಯ ಮಾಡಿಸಲಾಗಿತ್ತು, (ಏಜನ್ಸೀಸ್​).