Mojtaba Khamenei | ಇರಾನ್‌ನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ
Mojtaba Khamenei: ಅಮೆರಿಕದೊಂದಿಗಿನ ತಿಳುವಳಿಕಾ ಪತ್ರಕ್ಕೆ ಸಹಿ ಹಾಕಿರುವುದನ್ನು ಇರಾನ್‌ನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ದೃಢಪಡಿಸಿದ್ದು, ಇದೇ ವೇಳೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅವರು, ಈ ಒಪ್ಪಂದಕ್ಕೆ ಇರಾನ್‌ನ ಉತ್ಸುಕತೆಯಲ್ಲ, ಬದಲಿಗೆ ಅಮೆರಿಕದ ಹತಾಶೆಯೇ ಕಾರಣ ಎಂದು ಹೇಳಿದ್ದಾರೆ. ಇರಾನ್ ಮತ್ತು ಅಮೆರಿಕ ಅಧ್ಯಕ್ಷರ ನಡುವೆ ತಿಳುವಳಿಕಾ ಪತ್ರಕ್ಕೆ ಸಹಿ ಹಾಕಲಾಗಿದೆ ಎಂದು ತಿಳಿಸಿರುವ ಖಮೇನಿ, ಈ ಹಂತವನ್ನು ತಲುಪಲು ಇರಾನ್ ಅಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸಿದ್ದರೂ, ಅಮೆರಿಕವೇ ಇದಕ್ಕೆ ಹೆಚ್ಚು ಒತ್ತಡ ಹೇರಿತ್ತು ಎಂದಿದ್ದಾರೆ.
ಅಮೆರಿಕ ಅಧ್ಯಕ್ಷರು ತಮ್ಮ ಹತಾಶೆಯಿಂದಾಗಿ, ಈ ಒಪ್ಪಂದವನ್ನು ಸಾಧ್ಯವಾಗಿಸಲು ಎಲ್ಲಾ ರೀತಿಯ ಮಾರ್ಗಗಳನ್ನು ಬಳಸಿದರು ಎಂದು ಖಮೇನಿ ಆರೋಪಿಸಿದ್ದಾರೆ.
ಈ ಒಪ್ಪಂದದ ಬಗ್ಗೆ ತಮಗೆ ವೈಯಕ್ತಿಕವಾಗಿ ಕೆಲವು ಆಕ್ಷೇಪಣೆಗಳಿದ್ದವು ಮತ್ತು ತಾವು ಒಂದು ತತ್ವವಾಗಿ ಭಿನ್ನವಾದ ನಿಲುವನ್ನು ಹೊಂದಿರುವುದಾಗಿ ಖಮೇನಿ ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ಇರಾನ್ ರಾಷ್ಟ್ರದ ಹಕ್ಕುಗಳು ಮತ್ತು ರೆಸಿಸ್ಟೆನ್ಸ್ ಫ್ರಂಟ್ ಅನ್ನು ರಕ್ಷಿಸುವ ಇರಾನ್ ಅಧ್ಯಕ್ಷರ ಬದ್ಧತೆಯ ಆಧಾರದ ಮೇಲೆ ತಾವೂ ಇದಕ್ಕೆ ಅನುಮತಿ ನೀಡಿರುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ಅಮೆರಿಕ ಒಪ್ಪಂದದ ಮೀರಿದ ಬೇಡಿಕೆಗಳನ್ನು ಇಟ್ಟರೆ ಇರಾನ್ ಅದಕ್ಕೆ ಮಣಿಯುವುದಿಲ್ಲ ಎಂದು ಸುಪ್ರಿಂ ಲೀಡರ್ ಎಚ್ಚರಿಕೆ ನೀಡುತ್ತಾ, ಒಪ್ಪಂದದ ಷರತ್ತುಗಳು ಪೂರೈಕೆಯಾಗುವವರೆಗೆ ಕಾಯುವಂತೆ ದೇಶದ ಜನರಿಗೆ ಕರೆ ನೀಡಿದ್ದಾರೆ.
ಜಿ7 ಶೃಂಗಸಭೆಯ ಮುಕ್ತಾಯದ ನಂತರ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ವರ್ಸೈಲ್ಸ್ ಅರಮನೆಯಲ್ಲಿ ಆಯೋಜಿಸಿದ್ದ ಔತಣಕೂಟದ ಸಂದರ್ಭದಲ್ಲಿ ಈ ತಿಳುವಳಿಕಾ ಪತ್ರಕ್ಕೆ ಸಹಿ ಹಾಕಲಾಯಿತು. ಮ್ಯಾಕ್ರಾನ್ ಅವರು ಎಕ್ಸ್ ಜಾಲತಾಣದಲ್ಲಿ ಈ ಬೆಳವಣಿಗೆಯನ್ನು ಪ್ರಕಟಿಸಿದ್ದು, ಈ ಒಪ್ಪಂದವು ಶಾಶ್ವತ ಶಾಂತಿಗೆ ದಾರಿ ಮಾಡಿಕೊಡುತ್ತದೆ ಮತ್ತು ಹೋರ್ಮುಜ್ ಜಲಸಂಧಿಯನ್ನು ಮತ್ತೆ ಮುಕ್ತಗೊಳಿಸಲು ಅನುವು ಮಾಡಿಕೊಡುತ್ತದೆ ಎಂದು ಬಣ್ಣಿಸಿದ್ದಾರೆ. ಅಧಿಕೃತ ಸಹಿ ಪ್ರಕ್ರಿಯೆಯು ಮೂಲತಃ ಶುಕ್ರವಾರ ಸ್ವಿಟ್ಜರ್ಲೆಂಡ್‌ನಲ್ಲಿ ನಡೆಯಬೇಕಿತ್ತು. ಆದರೆ ಜಿನೆವಾದಲ್ಲಿ ನಿಗದಿಯಾಗಿರುವ ಸಭೆಯು ಯಾವುದೇ ಬದಲಾವಣೆಯಿಲ್ಲದೆ ನಡೆಯಲಿದೆ ಎಂದು ಟೆಹ್ರಾನ್ ದೃಢಪಡಿಸಿದೆ.
ಅಮೆರಿಕ-ಇರಾನ್ ಒಪ್ಪಂದದಲ್ಲಿ ಏನಿದೆ..?
ಈ ದಾಖಲೆಗೆ ಅಧಿಕೃತವಾಗಿ ಅಮೆರಿಕ ಮತ್ತು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನಡುವಿನ ಇಸ್ಲಾಮಾಬಾದ್ ತಿಳುವಳಿಕಾ ಪತ್ರ ಎಂದು ಹೆಸರಿಸಲಾಗಿದೆ. ಇದು ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲಿನ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣವೇ ಮತ್ತು ಶಾಶ್ವತವಾಗಿ ಕೊನೆಗೊಳಿಸಲು ಕರೆ ನೀಡುತ್ತದೆ. ಒಪ್ಪಂದದ ನಿಯಮಗಳ ಪ್ರಕಾರ, ಅಮೆರಿಕವು 30 ದಿನಗಳ ಒಳಗೆ ಇರಾನ್ ಮೇಲಿನ ತನ್ನ ನೌಕಾ ದಿಗ್ಬಂಧನವನ್ನು ಹಿಂತೆಗೆದುಕೊಳ್ಳಲು ಒಪ್ಪಿಕೊಂಡಿದ್ದು, ಈ ಅವಧಿಯಲ್ಲಿ ಹಡಗು ಸಂಚಾರವು ಯುದ್ಧದ ಮುಂಚಿನ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ. ಅಂತಿಮ ಒಪ್ಪಂದಕ್ಕೆ ಬಂದ 30 ದಿನಗಳ ಒಳಗೆ ಇರಾನ್‌ನ ಸುತ್ತಮುತ್ತಲಿನ ಪ್ರದೇಶಗಳಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳಲು ಕೂಡ ಅಮೆರಿಕ ಒಪ್ಪಿಕೊಂಡಿದೆ.
ಇರಾನ್ ತನ್ನ ಕಡೆಯಿಂದ, ಮುಂದಿನ 60 ದಿನಗಳವರೆಗೆ ಯಾವುದೇ ಶುಲ್ಕವಿಲ್ಲದೆ ವಾಣಿಜ್ಯ ಹಡಗುಗಳ ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ತನ್ನ ಅತ್ಯುತ್ತಮ ಪ್ರಯತ್ನಗಳನ್ನು ಮಾಡಲು ಒಪ್ಪಿಕೊಂಡಿದೆ. ಈಗ ತಿಳುವಳಿಕಾ ಪತ್ರಕ್ಕೆ ಸಹಿ ಹಾಕಲಾಗಿದ್ದು, ಸಮಗ್ರ ಅಂತಿಮ ಒಪ್ಪಂದದ ನಿಯಮಗಳ ಕುರಿತು ಮಾತುಕತೆ ನಡೆಸಿ ಒಪ್ಪಂದವನ್ನು ಪೂರ್ಣಗೊಳಿಸಲು ಉಭಯ ದೇಶಗಳಿಗೆ ಒಟ್ಟು 60 ದಿನಗಳ ಕಾಲಾವಕಾಶವಿದೆ(ಏಜೆನ್ಸೀಸ್).