ಘಟನೆಯ ಸ್ಥಳ 
ವಿದೇಶ

ಚೀನಾದಲ್ಲಿ ಕಲ್ಲಿದ್ದಿಲು ಗಣಿ ಸ್ಫೋಟ ಪ್ರಕರಣ; ಸಾವಿನ ಸಂಖ್ಯೆ 82ಕ್ಕೆ ಏರಿಕೆ; ಮುಂದುವರಿದ ರಕ್ಷಣಾ ಕಾರ್ಯಾವರಣೆ | coal mine

ಬೀಜಿಂಗ್: ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದ ಲಿಯುಶೆನ್ಯು ಕಲ್ಲಿದ್ದಲು ಗಣಿಯಲ್ಲಿ(coal mine) ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟವ ಸಂಖ್ಯೆ 82ಕ್ಕೆ ಏರಿಕೆಯಾಗಿದ್ದು, ಸ್ಥಳದಲ್ಲೇ ಇನ್ನೂ ನಾಪತ್ತೆಯಾದ 9 ಮಂದಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ವರದಿಯಾಗಿದೆ.
ಶಾಂಕ್ಸಿ ಪ್ರಾಂತ್ಯದ ಲಿಯುಶೆನ್ಯು ಕಲ್ಲಿದ್ದಲು ಗಣಿಯಲ್ಲಿ ಶುಕ್ರವಾರ ಸಂಜೆ 7:29 ಕ್ಕೆ (1129 GMT) ಸ್ಫೋಟ ಸಂಭವಿಸಿದೆ. ಈ ವೇಳೆ ಒಟ್ಟು 247 ಕಾರ್ಮಿಕರು ನೆಲದಡಿ ಕೆಲಸ ಮಾಡ್ತಿದ್ದರು. ಆರಂಭದಲ್ಲಿ 8 ಮಂದಿ ಮೃತಪಟ್ಟಿದ್ದರು.
ಬೆಳಿಗ್ಗೆ 6:00 ಗಂಟೆಯ ಹೊತ್ತಿಗೆ 201 ಜನರನ್ನು ಸುರಕ್ಷಿತವಾಗಿ ಮೇಲ್ಮೈಗೆ ತರಲಾಗಿತ್ತು. ಆದರೆ ಅವರಲ್ಲಿ ಹಲವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್, ಗಾಯಾಳುಗಳಿಗೆ ಚಿಕಿತ್ಸೆ ನೀಡುವಂತೆ ಸೂಚಿಸಿದ್ದು, ಘಟನೆಯ ಬಗ್ಗೆ ಸಮಗ್ರ ತನಿಖೆಗೆ ಆದೇಶ ನೀಡಿದ್ದಾರೆ. ಮುಂದುವರೆದು, ಎಲ್ಲಾ ಪ್ರದೇಶಗಳು ಮತ್ತು ಇಲಾಖೆಗಳು ಈ ಅಪಘಾತದಿಂದ ಪಾಠಗಳನ್ನು ಕಲಿಯಬೇಕು, ಕೆಲಸದ ಸ್ಥಳದ ಸುರಕ್ಷತೆಯ ಬಗ್ಗೆ ನಿರಂತರವಾಗಿ ಜಾಗರೂಕರಾಗಿರಬೇಕು... ಮತ್ತು ಪ್ರಮುಖ ಮತ್ತು ದುರಂತ ಅಪಘಾತಗಳ ಸಂಭವವನ್ನು ದೃಢನಿಶ್ಚಯದಿಂದ ತಡೆಯಬೇಕು ಮತ್ತು ನಿಗ್ರಹಿಸಬೇಕು ಎಂದು ಹೇಳಿದ್ದಾರೆ.
ಚೀನಾದ ಬಡ ಪ್ರಾಂತ್ಯಗಳಲ್ಲಿ ಒಂದಾದ ಶಾಂಕ್ಸಿ, ದೇಶದ ಕಲ್ಲಿದ್ದಲು ಗಣಿಗಾರಿಕೆ ರಾಜಧಾನಿಯಾಗಿದೆ. ಇತ್ತೀಚಿನ ದಶಕಗಳಲ್ಲಿ ದೇಶದಲ್ಲಿ ಗಣಿ ಸುರಕ್ಷತೆ ಸುಧಾರಿಸಿದೆ, ಆದರೆ ಸುರಕ್ಷತಾ ಶಿಷ್ಟಾಚಾರಗಳು ಹೆಚ್ಚಾಗಿ ಸಡಿಲವಾಗಿರುವ ಉದ್ಯಮದಲ್ಲಿ ಅಪಘಾತಗಳು ಇನ್ನೂ ಆಗಾಗ್ಗೆ ಸಂಭವಿಸುತ್ತವೆ (ಏಜೆನ್ಸೀಸ್).