ನದಿ, ಪರ್ವತಗಳ ಮೇಲೆ ಹಾರುವ ಹೋವರ್​ಬೋರ್ಡ್​ ಇದು! ಚೀನಾ ಯುವಕನ ಪ್ರಯೋಗಕ್ಕೆ ನೆಟ್ಟಿಗರು ವಿಡಿಯೋ | Flying Hoverboard 
ವಿದೇಶ

ನದಿ, ಪರ್ವತಗಳ ಮೇಲೆ ಹಾರುವ ಹೋವರ್​ಬೋರ್ಡ್​ ಇದು! ಚೀನಾ ಯುವಕನ ಪ್ರಯೋಗಕ್ಕೆ ಹುಬ್ಬೇರಿಸಿದ ನೆಟ್ಟಿಗರು | Flying Hoverboard

Flying Hoverboard: ಹಾಲಿವುಡ್​ನ ಆ್ಯಕ್ಷನ್ ಅಥವಾ ಸೈನ್ಸ್​ ಫಿಕ್ಷನ್​ (ಸೈಫೈ) ಸಿನಿಮಾಗಳಲ್ಲಿ ತೋರಿಸುವ​ ಕಾಲ್ಪನಿಕ ದೃಶ್ಯಗಳಂತೆ ಇಲ್ಲೊಂದು ನೈಜ ಘಟನೆಯೂ ಅನೇಕರ ಹುಬ್ಬೇರಿಸಿದ್ದು, ನಿಜಕ್ಕೂ ಇದು ಭೂಮಿ ಮೇಲೆ ನಡೆದ ಘಟನೆಯೇ ಅಥವಾ ಆಧುನಿಕ ಟೆಕ್ನಾಲಜಿ ಎಐ ಸಹಾಯದಿಂದ ಸೃಷ್ಟಿಸಿರುವ ವಿಡಿಯೋನಾ ಎಂದು ಪ್ರಶ್ನಿಸುವಂತೆ ಮಾಡಿದೆ. ಅಸಲಿಗೆ, ಹೋವರ್​ಬೋರ್ಡ್​ನಲ್ಲಿ ಯುವಕನೊಬ್ಬ ಪರ್ವತ, ನದಿಗಳ ಮಧ್ಯೆ ಹಾರುತ್ತಿರುವ ದೃಶ್ಯ ಸತ್ಯವೇ.

ಬೆಟ್ಟ-ಗುಡ್ಡಗಳು, ನದಿಗಳು, ಪರ್ವತ ಶ್ರೇಣಿಗಳ ನಡುವೆ ಒಂದು ಹೋವರ್‌ಬೋರ್ಡ್ ಮೂಲಕ ಹಾರಾಡುತ್ತಿರುವ ಈ ಯುವಕನ ಹೆಸರು ಸಾಂಗ್ ಕ್ಸಿಂಗ್ಯು (26). ಮೂಲತಃ ಚೀನಾದ ಹುಬೈ ಭಾಗದ ನಿವಾಸಿಯಾಗಿರುವ ಈತ ಖುದ್ದಾಗಿ ತಾನೇ ಅಭಿವೃದ್ಧಿಪಡಿಸಿದ ಹಾರುವ ಸಾಧನವನ್ನು ಯಶಸ್ವಿಯಾಗಿ ಪರೀಕ್ಷಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ.

ಈ ವಿಡಿಯೋ ಅ.15ರಂದು ಹಂಚಿಕೊಳ್ಳಲಾಗಿದ್ದು, ಯುವಕ ಯಶಸ್ವಿ ಪ್ರಯೋಗವನ್ನು ತೋರಿಸಿದೆ. ಸೋಶಿಯಲ್ ಮೀಡಿಯಾದಲ್ಲಿ 'ಅಮೇಜಿಂಗ್ ಆಯು' ಎಂದು ಕರೆಯಲ್ಪಡುವ ಸಾಂಗ್, ಸುಮಾರು ಎರಡು ತಿಂಗಳ ಅವಧಿಯಲ್ಲಿ ಹೋವರ್‌ಬೋರ್ಡ್ ಅನ್ನು ಅಭಿವೃದ್ಧಿಪಡಿಸಿದ್ದಾಗಿ ತಿಳಿಸಿದ್ದಾರೆ. ನಾಲ್ಕು ಜನರನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವಂತೆ ವಿನ್ಯಾಸಗೊಳಿಸಲಾದ ಈ ಸಾಧನವು ಎಐ ಟೆಕ್ನಾಲಜಿ ವ್ಯವಸ್ಥೆಯನ್ನು ಸಹ ಒಳಗೊಂಡಿದೆ.

ಗ್ರಾಮೀಣ ಕುಟುಂಬದಲ್ಲಿ ಬೆಳೆದ ಸಾಂಗ್ ತನ್ನ ತಂದೆ ನಡೆಸುತ್ತಿದ್ದ ಕಂಪನಿಯೊಂದರಲ್ಲಿ ಕೆಲಸ ಮಾಡಲು 14ನೇ ವಯಸ್ಸಿನಲ್ಲಿ ಶಾಲೆಗೆ ಗುಡ್​ಬೈ ಹೇಳಿದ. ವಿಮಾನ ಪರೀಕ್ಷೆಗಳ ಬಗ್ಗೆ ದೂರದರ್ಶನ ಕಾರ್ಯಕ್ರಮವನ್ನು ವೀಕ್ಷಿಸಿದ ನಂತರ ಆತ ವಾಯುಯಾನದಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡ. ನಂತರ ಬೇಡವೆಂದು ಬಿಸಾಡಿದ ವಸ್ತುಗಳನ್ನು ಸಂಗ್ರಹಿಸಿ, ಮಾದರಿ ವಿಮಾನಗಳನ್ನು ನಿರ್ಮಿಸಲು ಪ್ರಾರಂಭಿಸಿದ.

2022ರಲ್ಲಿ, ಪಾಳುಬಿದ್ದ ಶೆಡ್​ ಅನ್ನು ತನ್ನದೇ ಸ್ವಂತ ಲ್ಯಾಬೋರೇಟರಿಯನ್ನಾಗಿ ಮಾಡಲು 2.4 ಮಿಲಿಯನ್ ಯುವಾನ್ ಸಾಲವನ್ನು ಪಡೆದುಕೊಂಡ. ಆದ್ರೆ, ಆತನಿಗೆ ವಂಚಕರು ಮೋಸ ಮಾಡಿದ್ದಲ್ಲದೇ, ಸಾಲದ ಸುಳಿವಿಗೆ ಸಿಲುಕಿಸಿ ಪರಾರಿಯಾದರು. ಈ ನಷ್ಟ ಅನುಭವಿಸಿದ ಯುವಕನಿಗೆ, ಅದೃಷ್ಟ ಎಂಬಂತೆ ಟೆಕ್ನಾಲಜಿ ಕಂಪನಿ ಇನ್​ಸ್ಟಾ 360 (Insta360) ಸಂಸ್ಥೆಯವರು 1.8 ಮಿಲಿಯನ್ ಯುವಾನ್ ಹಣವನ್ನು ಸಹಾಯಧನವಾಗಿ ನೀಡುವ ಮೂಲಕ ಹಣಕಾಸಿನ ನೆರವು ನೀಡಿತು,(ಏಜೆನ್ಸೀಸ್).