ವಾಷಿಂಗ್ಟನ್: ಕೃತಕ ಬುದ್ಧಿಮತ್ತೆ (ಎಐ) ಲೋಕದ ದೈತ್ಯ ಸಂಸ್ಥೆಯಾದ ಎನ್ವಿಡಿಯಾ (Nvidia)ದ ಸಿಇಒ ಜೆನ್ಸೆನ್ ಹುವಾಂಗ್ ಅವರ ವಿವಾಹೇತರ ಸಂಬಂಧ ಸದ್ಯ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಸಂಸ್ಥೆಯ ಆಡಳಿತ ಮಂಡಳಿಯು ಸ್ವತಂತ್ರ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಜೆನ್ಸೆನ್ ಹುವಾಂಗ್ ತಮ್ಮ ತಪ್ಪನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಇದಲ್ಲದೇ, ಯುವತಿ ಚೀನಾದ ಸ್ಪೈ ಎಂಬ ಆರೋಪಗಳು ಕೇಳಿಬಂದ ಬೆನ್ನಲ್ಲೇ ಸ್ವತಃ ಚೀನಾ ಸ್ಪಷ್ಟನೆ ನೀಡಿದೆ.
ಬರೋಬ್ಬರಿ 4.5 ಟ್ರಿಲಿಯನ್ ಡಾಲರ್ ಮೌಲ್ಯದ ಟೆಕ್ ಸಂಸ್ಥೆಯ ಸಹ ಸಂಸ್ಥಾಪಕನನ್ನೇ ತನ್ನ ಮೋಹದ ಬಲೆಯಲ್ಲಿ ಬೀಳಿಸಿಕೊಂಡ ಆಲಿಸ್ ಹುವಾಂಗ್ (Alice Huang) ಯಾರು? ಈಕೆ ಚೀನಾದ ಗೂಢಚಾರಿಣಿಯೇ? ಆಕೆಯ ಹಿನ್ನೆಲೆ ಏನು? ಎಂಬ ಕುತೂಹಲಕರ ಮಾಹಿತಿಗಳು ಇದೀಗ ಒಂದೊಂದಾಗಿ ಹೊರಬರುತ್ತಿವೆ. ಈ ಕುರಿತಂತೆ ಅನೇಕ ಊಹಾಪೋಹಗಳು ಹರಿದಾಡುತ್ತಿದ್ದು, ಈಕೆಯೊಬ್ಬಳು ಚೀನಾ ಮೂಲದ ಸ್ಪೈ ಎಂದೇ ಬಿಂಬಿಸಲಾಗುತ್ತಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಚೀನೀ ಸರ್ಕಾರ, ತಮ್ಮ ವಿರುದ್ಧ ಕೇಳಿಬಂದ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್, ಈ ಆರೋಪಗಳು ನಮ್ಮ ದೇಶದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ. ಚೀನಾದ ಸ್ಪೈ ಎಂಬ ಆರೋಪಗಳಿಗೆ ಯಾವುದೇ ಆಧಾರವಿಲ್ಲ. ಇವೆಲ್ಲವೂ ಚೀನಾವನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನಗಳಾಗಿವೆ ಎಂದು ಕಿಡಿಕಾರಿದ್ದಾರೆ.
'ದಿ ನ್ಯೂಯಾರ್ಕ್ ಟೈಮ್ಸ್' ವರದಿಯ ಪ್ರಕಾರ, ಬೀಜಿಂಗ್ಗಾಗಿ ಮಾಹಿತಿ ಸಂಗ್ರಹಿಸುತ್ತಿದ್ದರೆಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಶಂಕಿಸಿದ್ದ ಉದ್ಯಮಿಯೊಬ್ಬರೊಂದಿಗೆ ತಮಗೆ ವೈಯಕ್ತಿಕ ಸಂಬಂಧವಿತ್ತು ಎಂಬುದನ್ನು ಜೆನ್ಸನ್ ಹುವಾಂಗ್ ಕಂಪನಿಯ ಆಡಳಿತ ಮಂಡಳಿಗೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಆ ವ್ಯಕ್ತಿಯ ಹೆಸರನ್ನು ಮಾತ್ರ ಹುವಾಂಗ್ ಬಹಿರಂಗಪಡಿಸಿಲ್ಲ. ಈ ಹಿಂದೆ ಆಲಿಸ್ ಹುವಾಂಗ್ ಎಂಬ ಚೀನಾ ಪ್ರಜೆಯೊಂದಿಗೆ ಅವರು ನಿಕಟ ಸಂಬಂಧ ಹೊಂದಿದ್ದರು ಎಂಬ ವರದಿಯನ್ನೂ ಚೀನಾ ತಳ್ಳಿಹಾಕಿದೆ.
ಇನ್ನು, ಈ ಬೆಳವಣಿಗೆಯ ಬೆನ್ನಲ್ಲೇ ಎನ್ವಿಡಿಯಾ ಕಂಪನಿಯು ಪ್ರಕರಣದ ಕುರಿತು ಆಂತರಿಕ ತನಿಖೆ ಆರಂಭಿಸುವುದಾಗಿ ಘೋಷಿಸಿದ್ದು, ಇತ್ತ ಸೋಮವಾರ ಮಾರುಕಟ್ಟೆ ವಹಿವಾಟು ಆರಂಭಕ್ಕೂ ಮುನ್ನ ಎನ್ವಿಡಿಯಾ ಷೇರುಗಳು ಸುಮಾರು ಶೇ.5ರಷ್ಟು ಕುಸಿತ ಕಂಡಿವೆ. ಈ ಪ್ರಕರಣದಲ್ಲಿ ಪ್ರಮುಖವಾಗಿ ಪರಿಶೀಲಿಸಬೇಕಾದ ಅಂಶಗಳೆಂದರೆ, ಹುವಾಂಗ್ ಅವರಿಗೆ ಯಾವುದೇ ಗೂಢಚರ್ಯೆ ಚಟುವಟಿಕೆಗಳ ಬಗ್ಗೆ ತಿಳಿದಿತ್ತೇ? ಮತ್ತು ಕಂಪನಿಯ ಗೌಪ್ಯ ಅಥವಾ ಕಾರ್ಯತಂತ್ರಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿ ಸೋರಿಕೆಯಾಗಿದೆಯೇ? ಎಂಬುದಾಗಿದೆ ಎಂದು ವಾಷಿಂಗ್ಟನ್ ಮೂಲದ ಏಷ್ಯಾ ಗ್ರೂಪ್ನ ಡಿಜಿಟಲ್ ವಿಭಾಗದ ಮುಖ್ಯಸ್ಥ ಜಾರ್ಜ್ ಚೆನ್ ಅಭಿಪ್ರಾಯಪಟ್ಟಿದ್ದಾರೆ.
ಚೀನಾದಲ್ಲಿ 'ಹುವಾಂಗ್ ಲೇ' (Huang Le) ಎಂದೂ ಕರೆಯಲ್ಪಡುವ ಆಲಿಸ್ ಹುವಾಂಗ್ ಚೀನಾ ದೇಶದ ಪೌರತ್ವ ಹೊಂದಿದ್ದಾರೆ. ಈಕೆಯ ವೃತ್ತಿಜೀವನದ ಹಿನ್ನೆಲೆಯನ್ನು ಕೆದಕಿದಾಗ ಅಚ್ಚರಿಗೊಳಿಸುವ ವಿಷಯಗಳು ಬೆಳಕಿಗೆ ಬಂದಿವೆ. ಚೀನಾದ ಖಾಸಗಿ ಫಂಡ್ ಡೇಟಾಬೇಸ್ ಪ್ರಕಾರ, ಈಕೆ ಹಿಂದೆ ಮಾಧ್ಯಮ ರಂಗದಲ್ಲಿದ್ದು ಹುನಾನ್ ಟಿವಿ (Hunan TV) ಹಾಗೂ ಚೀನಾದ ಸರ್ಕಾರಿ ವಾಹಿನಿ ಸಿಸಿಟಿವಿ (CCTV) ಯಲ್ಲಿ ಟಿವಿ ರಿಪೋರ್ಟರ್ ಆಗಿ ಕೆಲಸ ಮಾಡಿದ್ದರು. ನಂತರ ಹೆಚ್ಎಸ್ಬಿಸಿ (HSBC) ಬ್ಯಾಂಕ್ನ ಪ್ರೈವೇಟ್ ಬ್ಯಾಂಕಿಂಗ್ ವಿಭಾಗದ ಅಧ್ಯಕ್ಷರ ಸಹಾಯಕಿಯಾಗಿ ಮತ್ತು ಸಿಐಟಿಐಸಿ (CITIC) ಸೆಕ್ಯುರಿಟೀಸ್ನಲ್ಲಿ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು.
ಆದರೆ, ಈಕೆಯ ಹಿನ್ನೆಲೆಯ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ. ದಿ ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಹುನಾನ್ ಟಿವಿಯ ಉನ್ನತಾಧಿಕಾರಿಯೊಬ್ಬರು ತಮ್ಮ ಸಂಸ್ಥೆಯಲ್ಲಿ ಆಲಿಸ್ ಹುವಾಂಗ್ ಹೆಸರಿನ ವ್ಯಕ್ತಿ ಕೆಲಸವೇ ಮಾಡಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಚೀನಾದ ಸಿಸಿಟಿವಿ ವಾಹಿನಿಯ ಅಧಿಕೃತ ವೆಬ್ಸೈಟ್ನಲ್ಲೂ ಈಕೆಯ ಯಾವುದೇ ಪ್ರೊಫೈಲ್ ಪತ್ತೆಯಾಗಿಲ್ಲ. ಇದರಿಂದಾಗಿ ಈಕೆ ತನ್ನ ಹಳೆಯ ಗುರುತನ್ನು ಮರೆಮಾಚಿ ಗೂಢಚರ್ಯೆಗಾಗಿ ಮಾಧ್ಯಮ ಮತ್ತು ಬ್ಯಾಂಕಿಂಗ್ ಕ್ಷೇತ್ರದ ನಕಲಿ ಪ್ರೊಫೈಲ್ ಸೃಷ್ಟಿಸಿಕೊಂಡಿದ್ದರೆ ಎಂಬ ಶಂಕೆ ಹೆಚ್ಚಾಗಿದೆ.
ಹೂಡಿಕೆ ದಾಖಲೆಗಳ ಪ್ರಕಾರ, ಶಾಂಘೈ ಹೆಕ್ಸಿ ಇನ್ವೆಸ್ಟ್ಮೆಂಟ್ ಮ್ಯಾನೇಜ್ಮೆಂಟ್ ಎಂಬ ಸಂಸ್ಥೆಯಲ್ಲಿ ಆಲಿಸ್ ಹುವಾಂಗ್ ಉನ್ನತ ಹುದ್ದೆಯಲ್ಲಿದ್ದರು. ಈ ಸಂಸ್ಥೆಗೆ ಚೀನಾದ ಗೇಮಿಂಗ್ ಕಂಪನಿ 7ರೋಡ್ ಜತೆ ಸಂಪರ್ಕವಿತ್ತು. ಆಲಿಸ್ ನೇತೃತ್ವದ ಸಂಸ್ಥೆಯು ಮೆಗಾಸ್ಪೀಡ್ ಕಂಪನಿಯನ್ನು ನಡೆಸಿ ನಂತರ ಸ್ವಿಫ್ಟ್ಡೇಟಾಗೆ ಮಾರಾಟ ಮಾಡಿತಾದರೂ, ಆಲಿಸ್ ಮಾತ್ರ ಕಂಪನಿಯ ಪ್ರಮುಖ ಶಕ್ತಿಯಾಗಿ ಮುಂದುವರಿದಿದ್ದರು. ಕಳೆದ ಎರಡು ವರ್ಷಗಳಲ್ಲಿ ಈ ಮೆಗಾಸ್ಪೀಡ್ ಕಂಪನಿಯು ಎನ್ವಿಡಿಯಾದಿಂದ ಬರೋಬ್ಬರಿ 4.8 ಬಿಲಿಯನ್ ಡಾಲರ್ (ಸುಮಾರು 40,000 ಕೋಟಿ ರೂಪಾಯಿ) ಮೌಲ್ಯದ ಚಿಪ್ಗಳನ್ನು ಖರೀದಿ ಮಾಡಿದೆ.
ಇನ್ನು ಜೆನ್ಸೆನ್ ಹುವಾಂಗ್ ಅಕ್ರಮ ಸಂಬಂಧದ ಪ್ರಕರಣದ ಬಗ್ಗೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿದ್ದು, ಜೆನ್ಸೆನ್ ಹುವಾಂಗ್ ಪರ ಬ್ಯಾಟ್ ಬೀಸಿರುವುದು ಅಚ್ಚರಿ ಮೂಡಿಸಿದೆ. ಹ್ಯಾಲೋವೀನ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್, "ಜೆನ್ಸೆನ್ ಹುವಾಂಗ್ ಅತ್ಯಂತ ಪ್ರಾಮಾಣಿಕ ಮತ್ತು ಅದ್ಭುತ ವ್ಯಕ್ತಿ. ಆದರೆ, ವೈಯಕ್ತಿಕವಾಗಿ ಏನು ನಡೆಯುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ" ಎಂದಿದ್ದಾರೆ. ಪ್ರಸ್ತುತ ಎನ್ವಿಡಿಯಾ ಕಂಪನಿಯು ಕ್ವಾರ್ಟರ್ಲಿ 59.69 ಬಿಲಿಯನ್ ಡಾಲರ್ ಲಾಭ ಗಳಿಸುವ ಮೂಲಕ ವಿಶ್ವದ ಅತ್ಯಂತ ಮೌಲ್ಯಯುತ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಸಿಇಒ ಜೆನ್ಸೆನ್ ಹುವಾಂಗ್ ಸುತ್ತಿಕೊಂಡಿರುವ ಈ ಚೀನಿ ಕನ್ಯೆಯ ಹನಿಟ್ರಾಪ್ ವಿವಾದ ಕಂಪನಿಯ ಭವಿಷ್ಯವನ್ನೇ ತೂಗುಯ್ಯಾಲೆಗೆ ತಳ್ಳಿದೆ,(ಏಜೆನ್ಸೀಸ್).