ಯುಎಸ್​ ರೈತರಿಗೆ ಬಂಪರ್ ಲಾಟರಿ: ಭಾರತದ ಬೃಹತ್ ಮಾರುಕಟ್ಟೆ ಈಗ ಮುಕ್ತ; ವಾಷಿಂಗ್ಟನ್ ಹೇಳಿದ ಶೇ.18 ಡೀಲ್‌ನ ಒಳಗುಟ್ಟು ಇಲ್ಲಿದೆ..! 
ವಿದೇಶ

ಯುಎಸ್​ ರೈತರಿಗೆ ಬಂಪರ್ ಲಾಟರಿ: ಭಾರತದ ಬೃಹತ್ ಮಾರುಕಟ್ಟೆ ಈಗ ಮುಕ್ತ; ವಾಷಿಂಗ್ಟನ್ ಹೇಳಿದ ಶೇ.18 ಡೀಲ್‌ನ ಒಳಗುಟ್ಟು ಇಲ್ಲಿದೆ..! India-US Trade Deal

ನವದೆಹಲಿ: ಜಾಗತಿಕ ರಾಜಕೀಯ ಮತ್ತು ಆರ್ಥಿಕ ಭೂಪಟದಲ್ಲಿ ಇಂದು ಒಂದು ಮಹತ್ತರ ಬದಲಾವಣೆ ಸಂಭವಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ದೂರವಾಣಿ ಸಂಭಾಷಣೆಯ ಬೆನ್ನಲ್ಲೇ, ಉಭಯ ದೇಶಗಳ ನಡುವಿನ ವ್ಯಾಪಾರ(India-US Trade Deal) ಸಂಬಂಧದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಅಮೆರಿಕವು ಭಾರತದ ಮೇಲಿನ ಪರಸ್ಪರ ಸುಂಕವನ್ನು ಶೇ.25 ರಿಂದ 18 ಕ್ಕೆ ಇಳಿಸಿದೆ.

ಅಮೆರಿಕದ ಸಂಸದರ ಸಂಭ್ರಮ: ಇದು ಕಾರ್ಯತಂತ್ರದ ಗೆಲುವು

ಈ ಬಗ್ಗೆ ಮಾತನಾಡಿರುವ ಸೆನೆಟ್ ವಿದೇಶಿ ಸಂಬಂಧಗಳ ಸಮಿತಿಯ ಅಧ್ಯಕ್ಷ ಜಿಮ್ ರಿಶ್ ಈ ಒಪ್ಪಂದವನ್ನು ಅತ್ಯುತ್ತಮ ಸಾಧನೆ ಎಂದು ಬಣ್ಣಿಸಿದ್ದಾರೆ. ವಿಶ್ವದ ಅತ್ಯಂತ ಹಳೆಯ ಮತ್ತು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳು ಒಂದಾಗಿರುವುದು ಚೀನಾದ ದುಷ್ಕೃತ್ಯದ ಪ್ರಭಾವವನ್ನು ಎದುರಿಸಲು ಸಹಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಮುಖವಾಗಿ, ಭಾರತವು ಇನ್ಮುಂದೆ ಬೈ ಅಮೆರಿಕನ್ ನೀತಿಗೆ ಒತ್ತು ನೀಡಲು ಒಪ್ಪಿರುವುದು ಅಲ್ಲಿನ ನಾಯಕರಲ್ಲಿ ಹೊಸ ಹುರುಪು ತಂದಿದೆ.

ಅಮೆರಿಕದ ರೈತರಿಗೆ ವರದಾನ: ಏಕೆ ಮತ್ತು ಹೇಗೆ..?

ಅಮೆರಿಕದ ಕೃಷಿ ಕಾರ್ಯದರ್ಶಿ ಬ್ರೂಕ್ ರೋಲಿನ್ಸ್ ಅವರ ಪ್ರಕಾರ, ಈ ಒಪ್ಪಂದವು ಅಮೆರಿಕದ ಗ್ರಾಮೀಣ ಭಾಗದ ಆರ್ಥಿಕತೆಗೆ ಜೀವಕಳೆ ನೀಡಲಿದೆ.
ಮಾರುಕಟ್ಟೆ ವಿಸ್ತರಣೆ: ಭಾರತದ 140 ಕೋಟಿ ಜನಸಂಖ್ಯೆಯ ಬೃಹತ್ ಮಾರುಕಟ್ಟೆ ಈಗ ಅಮೆರಿಕದ ಕೃಷಿ ಉತ್ಪನ್ನಗಳಿಗೆ ಮುಕ್ತವಾಗಿದೆ.
ವ್ಯಾಪಾರ ಕೊರತೆ ನೀಗಿಸುವಿಕೆ: 2024 ರಲ್ಲಿ ಇದ್ದ $1.3 ಬಿಲಿಯನ್ ಕೃಷಿ ವ್ಯಾಪಾರ ಕೊರತೆಯನ್ನು ಈ ಒಪ್ಪಂದವು ತುಂಬಲಿದೆ.
ಬೆಲೆ ಏರಿಕೆ: ಅಮೆರಿಕದ ಕೃಷಿ ಉತ್ಪನ್ನಗಳ ರಫ್ತು ಹೆಚ್ಚಾದಂತೆ ಅಲ್ಲಿನ ರೈತರಿಗೆ ಉತ್ತಮ ಬೆಲೆ ಸಿಗಲಿದ್ದು, ಇದು ಅಮೆರಿಕಾ ಫಸ್ಟ್ ನೀತಿಗೆ ಸಂದ ಜಯವಾಗಿದೆ.

ಟ್ರಂಪ್​ ಪೋಸ್ಟ್​​

ಸುಂಕ ಕಡಿತ ಮತ್ತು ವ್ಯಾಪಾರ ಒಪ್ಪಂದದ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​, ಎರಡೂ ದೇಶಗಳು ವ್ಯಾಪಾರ ಒಪ್ಪಂದಕ್ಕೆ ಬಂದಿವೆ ಎಂದು ಘೋಷಿಸಿದ್ದಾರೆ.
ಇದರ ಅಡಿಯಲ್ಲಿ ಅಮೆರಿಕಕ್ಕೆ ರಫ್ತು ಮಾಡುವ ಭಾರತೀಯ ಸರಕುಗಳ ಮೇಲಿನ ಸುಂಕವನ್ನು 25% ರಿಂದ 18% ಕ್ಕೆ ಇಳಿಸಲಾಗುವುದು, ಇದು ತಕ್ಷಣದಿಂದ ಜಾರಿಗೆ ಬರಲಿದೆ ಎಂದರು. ಪ್ರಧಾನಿ ಮೋದಿಯನ್ನು ಉತ್ತಮ ಸ್ನೇಹಿತ ಎಂದು ಬಣ್ಣಿಸಿರುವ ಟ್ರಂಪ್​, ಈ ಒಪ್ಪಂದವು ಇಬ್ಬರು ನಾಯಕರ ನಡುವಿನ ನೇರ ಮಾತುಕತೆಯ ಬಳಿಕವೇ ನಡೆಯಿತು ಎಂದಿದ್ದಾರೆ.

ಪ್ರಧಾನಿ ಮೋದಿ ಪೋಸ್ಟ್​

ಇದೇ ವಿಷಯವಾಗಿ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಪ್ರಧಾನಿ ಮೋದಿ, ತಮ್ಮ ಮತ್ತು ಟ್ರಂಪ್​ ನಡುವಿನ ಸಂಭಾಷಣೆಯನ್ನು ದೃಢಪಡಿಸಿದರು ಮತ್ತು ಸುಂಕ ಕಡಿತವನ್ನು ಸ್ವಾಗತಿಸಿದರು. ಇಂದು ನನ್ನ ಆತ್ಮೀಯ ಸ್ನೇಹಿತ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತನಾಡಿದ್ದು ಅದ್ಭುತ ಅನುಭವ, ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು ಈಗ 18% ರಷ್ಟು ಕಡಿಮೆ ಸುಂಕವನ್ನು ಹೊಂದಿರುವುದು ಸಂತೋಷ ತಂದಿದೆ ಎಂದು ಪ್ರಧಾನಿ ಹೇಳಿದ್ದು, ಭಾರತದ 1.4 ಬಿಲಿಯನ್ ಜನರ ಪರವಾಗಿ ಟ್ರಂಪ್‌ಗೆ ಧನ್ಯವಾದ ಅರ್ಪಿಸಿದ್ದಾರೆ.
ಎರಡು ದೊಡ್ಡ ಆರ್ಥಿಕತೆಗಳು ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಗಳ ನಡುವಿನ ಸಹಕಾರವು ಪರಸ್ಪರ ಪ್ರಯೋಜನಕಾರಿ ಬೆಳವಣಿಗೆಗೆ ಅವಕಾಶಗಳನ್ನು ತೆರೆಯುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಟ್ರಂಪ್ ನಾಯಕತ್ವವನ್ನು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಅತ್ಯಗತ್ಯ ಎಂದು ನಮೋ, ಅಮೆರಿಕಾ ಅಧ್ಯಕ್ಷರ ಶಾಂತಿ ನೆಲೆಸುವ ಪ್ರಯತ್ನಗಳನ್ನು ಭಾರತ ಸಂಪೂರ್ಣವಾಗಿ ಬೆಂಬಲಿಸುತ್ತದೆ ಮತ್ತು ದ್ವಿಪಕ್ಷೀಯ ಪಾಲುದಾರಿಕೆಯನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ಯಲು ಎದುರು ನೋಡುತ್ತಿದೆ ಎಂದು ಹೇಳಿದರು.

ರಷ್ಯಾದ ಇಂಧನ ರಾಜತಾಂತ್ರಿಕತೆಗೆ ಚೇಕ್​- ಮೇಟ್..!

ಈ ಒಪ್ಪಂದದ ಅತ್ಯಂತ ಆಶ್ಚರ್ಯಕರ ಮತ್ತು ತೀವ್ರತೆಯ ಅಂಶವೆಂದರೆ ಇಂಧನ ಕ್ಷೇತ್ರವಾಗಿದೆ. ಪ್ರಧಾನಿ ಮೋದಿ ಅವರು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಲು ಮತ್ತು ಬದಲಾಗಿ ಅಮೆರಿಕ ಹಾಗೂ ವೆನೆಜುವೆಲಾದಿಂದ ಇಂಧನ ಖರೀದಿಸಲು ಸಮ್ಮತಿಸಿದ್ದಾರೆ. ಈ ನಡೆಯು ರಷ್ಯಾ-ಯುಕ್ರೇನ್ ಯುದ್ಧವನ್ನು ಕೊನೆಗಾಣಿಸುವ ಟ್ರಂಪ್ ಅವರ ಪ್ರಯತ್ನಕ್ಕೆ ಬಲ ನೀಡಲಿದೆ. ಸೆನೆಟರ್ ಲಿಂಡ್ಸೆ ಗ್ರಹಾಂ ಹೇಳುವಂತೆ, ಪುಟಿನ್ ಅವರ ಯುದ್ಧ ಯಂತ್ರಕ್ಕೆ ಹಣಕಾಸಿನ ನೆರವು ನೀಡುತ್ತಿದ್ದ ಭಾರತ ಈಗ ದಾರಿ ಬದಲಿಸಿದ್ದಾರೆ. ಇದು ಯುದ್ಧದ ರಕ್ತಪಾತವನ್ನು ನಿಲ್ಲಿಸಲು ಸಹಕಾರಿಯಾಗಿತ್ತದೆ.

$500 ಬಿಲಿಯನ್ ಡಾಲರ್ ಹೂಡಿಕೆಯ ಭರವಸೆ

ಭಾರತವು ಇನ್ಮುಂದೆ ಅಮೆರಿಕದಿಂದ ಸುಮಾರು $500 ಬಿಲಿಯನ್ ಡಾಲರ್ ಮೌಲ್ಯದ ಇಂಧನ, ತಂತ್ರಜ್ಞಾನ, ಕೃಷಿ ಮತ್ತು ಕಲ್ಲಿದ್ದಲು ಉತ್ಪನ್ನಗಳನ್ನು ಖರೀದಿಸಲು ಬದ್ಧವಾಗಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕವು ತನ್ನ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳಿಗೆ ಸುಂಕ ಕಡಿಮೆ ಮಾಡಿದೆ. ಪ್ರಧಾನಿ ಮೋದಿ ಅವರು ಮೇಡ್ ಇನ್ ಇಂಡಿಯಾ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹೊಸ ಮನ್ನಣೆ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಪರಿಣಾಮಗಳು

ಈ ಒಪ್ಪಂದವು ಕೇವಲ ಎರಡು ದೇಶಗಳಿಗಷ್ಟೇ ಸೀಮಿತವಾಗಿಲ್ಲ. ಇದು:
1. ಇಂಡೋ-ಪೆಸಿಫಿಕ್ ವಲಯದಲ್ಲಿ ಅಮೆರಿಕ ಮತ್ತು ಭಾರತದ ಹಿಡಿತವನ್ನು ಬಲಪಡಿಸುತ್ತದೆ.
2. ರಷ್ಯಾದ ತೈಲ ಆದಾಯಕ್ಕೆ ಭಾರಿ ಹೊಡೆತ ನೀಡುತ್ತದೆ.
3. ಅಮೆರಿಕದ ಉತ್ಪಾದನಾ ಮತ್ತು ಕೃಷಿ ವಲಯದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ,(ಏಜೆನ್ಸೀಸ್​​).