ಇಸ್ತಾನ್‌ಬುಲ್: ಮದುವೆ ಅಂದ್ಮೇಲೆ ಫೋಟೋಶೂಟ್ ಎನ್ನವುದು ಮಾಮೂಲಿ. ‘ತನ್ನ ಮದುವೆ ಫೋಟೋಶೂಟ್ ಜಗತ್ತಿನಲ್ಲಿಯೇ ಡಿಫರೆಂಟ್ ಆಗಿರಬೇಕು’ ಎಂದು ಇಂದಿನ ಯುವಪೀಳಿಗೆ ಸಮುದ್ರ ತೀರ, ಬೆಟ್ಟ-ಗುಡ್ಡ ಅಂತೆಲ್ಲಾ ಸುತ್ತಾಡಿ ಕ್ರಿಯೇಟಿವ್ ಆಗಿ ಪೋಸ್ ಕೊಡೋದು ಕಾಮನ್ ಆಗಿದೆ.
ಆದರೆ, ಕೆಲವೊಮ್ಮೆ ಈ ಅತಿಯಾದ ಕ್ರಿಯೇಟಿವಿಟಿ ಎಡವಟ್ಟು ಮಾಡಿದ್ದೂ ಇದೆ. ಸದ್ಯ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದ ಇಂಥದ್ದೇ ಒಂದು ಮದುವೆ ಫೋಟೋಶೂಟ್ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದ್ದು, ನೋಡುಗರನ್ನು ಒಂದು ಕ್ಷಣ ಬೆಚ್ಚಿಬೀಳಿಸಿದೆ.
ಇಸ್ತಾನ್‌ಬುಲ್‌ನ ಪ್ರಸಿದ್ಧ ಬೋಸ್ಪರಸ್ ಜಲಸಂಧಿಯ ಸಮುದ್ರ ತೀರ. ಹಿನ್ನೆಲೆಯಲ್ಲಿ ಅಲೆಗಳ ಅಬ್ಬರ, ಸುಂದರ ತಂಗಾಳಿ. ಹೊಸ ಬಾಳಿಗೆ ಕಾಲಿಡುತ್ತಿರುವ ವಧು ತನ್ನ ವೆಡ್ಡಿಂಗ್ ಗೌನ್ ಧರಿಸಿ, ಕ್ಯಾಮೆರಾಗೆ ಪೋಸ್ ನೀಡುತ್ತಿದ್ದಳು. ಫೋಟೋಗಳು ಇನ್ನಷ್ಟು ಆಕರ್ಷಕವಾಗಿ, ಸಿನಿಮಾದಂತೆ ಕಾಣಲಿ ಅಂತ ಆಕೆಯ ಕೈಗೆ ದೊಡ್ಡ ದೊಡ್ಡ ಗಾತ್ರದ ಬಲೂನ್‌ಗಳ ಗೊಂಚಲನ್ನೇ ನೀಡಲಾಗಿತ್ತು.
ಕ್ಯಾಮರಾಮನ್ ವಿಧವಿಧದ ಆಂಗಲ್‌ಗಳಲ್ಲಿ ಕ್ಲಿಕ್ ಮಾಡುತ್ತಿದ್ದ, ವಧು ಮುಗುಳುನಗುತ್ತಾ ಪೋಸ್ ಕೊಡುತ್ತಿದ್ದಳು. ಎಲ್ಲವೂ ಪ್ಲಾನ್ ಪ್ರಕಾರವೇ ಸಾಗುತ್ತಿತ್ತು. ಆದರೆ ಮುಂದಿನ ಕೆಲವೇ ಸೆಕೆಂಡುಗಳಲ್ಲಿ ಅಲ್ಲಿ ನಡೆದ ಘಟನೆ ಮಾತ್ರ ಎಲ್ಲರ ಎದೆಯಲ್ಲಿ ನಡುಕ ಹುಟ್ಟಿಸಿತು.
ಸಮುದ್ರದ ಕಡೆಯಿಂದ ಅಚಾನಕ್ಕಾಗಿ ಬೀಸಿದ ಬಿರುಗಾಳಿ ಇಡೀ ಸೀನ್ ಅನ್ನೇ ಬದಲಿಸಿಬಿಟ್ಟಿತು. ವಧುವಿನ ಕೈಯಲ್ಲಿದ್ದ ಬಲೂನ್‌ಗಳನ್ನು ಗಾಳಿ ತನ್ನತ್ತ ಎಳೆಯತೊಡಗಿತು. ಗಾಳಿಯ ರಭಸ ಎಷ್ಟಿತ್ತೆಂದರೆ, ವಧುವಿಗೆ ತನ್ನ ದೇಹದ ಸಮತೋಲನ ಕಾಪಾಡಿಕೊಳ್ಳುವುದೇ ಸವಾಲಾಗಿ ಪರಿಣಮಿಸಿತು.
ಬಲೂನ್‌ಗಳು ಆಕೆಯನ್ನು ನೆಲದಿಂದ ಮೇಲಕ್ಕೆ ಎತ್ತಿ, ಸಮುದ್ರ ತೀರದ ರಕ್ಷಣಾ ಗೋಡೆಯ ಕಡೆಗೆ ಎಳೆದುಕೊಂಡು ಹೋಗತೊಡಗಿದವು. ಅತ್ತ ಬಲೂನ್ ಬಿಡಲಾರದೆ, ಇತ್ತ ನಿಯಂತ್ರಣ ಕಳೆದುಕೊಂಡ ಆಕೆ ಹಿಂದಕ್ಕೆ ಹೆಜ್ಜೆ ಹಾಕುತ್ತಿದ್ದ ದೃಶ್ಯ ನಿಜಕ್ಕೂ ಭಯ ಹುಟ್ಟಿಸುವಂತಿತ್ತು. ಇನ್ನೇನು ಆಕೆ ಗೋಡೆಗೆ ಬಡಿದು ಅಥವಾ ಸಮುದ್ರದ ಪಾಲಾಗಿ ದೊಡ್ಡ ಅನಾಹುತವೇ ನಡೆದುಹೋಗುತ್ತೆ ಎನ್ನುವಷ್ಟರಲ್ಲಿ ಪವಾಡವೊಂದು ನಡೆಯಿತು.
ಅಲ್ಲಿ ಆಗುತ್ತಿದ್ದ ಅಪಾಯವನ್ನು ಗ್ರಹಿಸಿದ ಫೋಟೋಗ್ರಾಫರ್, ಕ್ಯಾಮರಾವನ್ನು ಬದಿಗೊತ್ತಿ ಮಿಂಚಿನ ವೇಗದಲ್ಲಿ ಓಡಿಬಂದರು. ಗೋಡೆಗೆ ಡಿಕ್ಕಿ ಹೊಡೆಯುವ ಮೊದಲು ವಧುವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಅವರ ಸಮಯಪ್ರಜ್ಞೆಯಿಂದಾಗಿ ವಧು ಅಪಾಯದಿಂದ ಪಾರಾಗಿದ್ದಾಳೆ.
ಈ ರೋಚಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಆಗುತ್ತಿದ್ದಂತೆ ಕ್ಷಣಾರ್ಧದಲ್ಲೇ ಲಕ್ಷಾಂತರ ವೀಕ್ಷಣೆಗಳನ್ನು ಪಡೆದು ವೈರಲ್ ಆಗಿದೆ. ನೆಟ್ಟಿಗರು ಈ ವಿಡಿಯೋಗೆ ತಮಾಷೆಯ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಒಬ್ಬ ಬಳಕೆದಾರ, "ಏನೇ ಆಗ್ಲಿ, ವಧು ಮಾತ್ರ ಪ್ರಾಣ ಹೋದ್ರೂ ಬಲೂನ್ ಬಿಡೋಕೆ ರೆಡಿ ಇರ್ಲಿಲ್ಲ ನೋಡಿ!" ಎಂದು ಕಾಲೆಳೆದರೆ, ಮತ್ತೊಬ್ಬರು "ಫೋಟೋ ಸುಂದರವಾಗಿ ಬರೋದು ಮುಖ್ಯ, ಆದರೆ ಜೀವದ ಜೊತೆ ಹೀಗೆ ಆಟವಾಡಬಾರದು" ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ, (ಏಜೆನ್ಸೀಸ್).