ಕ್ಷಣಾರ್ಧದಲ್ಲಿ ಜನರ ಮುಂದೆಯೇ ಬದಲಾಗುತ್ತೆ ಮುಖದ ಬಣ್ಣ, ಭಾವನೆ! ಚೀನಾದ 300 ವರ್ಷಗಳ ಕಲೆ ಬಗ್ಗೆ ಇಲ್ಲಿದೆ ರೋಚಕ ಮಾಹಿತಿ 
ವಿದೇಶ

ಕ್ಷಣಾರ್ಧದಲ್ಲಿ ಜನರ ಎದುರೇ ಬದಲಾಗುತ್ತೆ ಮುಖದ ಬಣ್ಣ, ಭಾವನೆ! ಚೀನಾದ 300 ವರ್ಷಗಳ ಕಲೆ ಬಗ್ಗೆ ಇಲ್ಲಿದೆ ರೋಚಕ ಮಾಹಿತಿ

Bian Lian: ಚೀನಾದ ಸಿಚುವಾನ್ ಪ್ರಾಂತ್ಯದ ಸಾಂಪ್ರದಾಯಿಕ ಒಪೆರಾ ಕಲೆಯಲ್ಲಿರುವ ‘ಬಿಯಾನ್ ಲಿಯಾನ್’ (Bian Lian) ನೋಡುಗರನ್ನು ಅಚ್ಚರಿಗೊಳಿಸುವ ವಿಶಿಷ್ಟ ಪ್ರದರ್ಶನಾತ್ಮಕ ಕಲೆ ಎಂಬುದು ಅನೇಕರಿಗೆ ಗೊತ್ತೇ ಇಲ್ಲ. ಸಹಸ್ರಾರು ಜನರ ಮುಂದೆ ಪ್ರದರ್ಶನ ಮಾಡುವ ಇಲ್ಲಿನ ಕಲಾವಿದರು, ಕ್ಷಣಮಾತ್ರದಲ್ಲಿ ಮುಖದ ಮೇಲಿನ ಬಣ್ಣ-ಬಣ್ಣದ ಮುಖವಾಡ ಮತ್ತು ಭಾವನೆಗಳನ್ನು ಕಣ್ಣು ಮಿಟುಕಿಸುವುದರಳೊಗೆ ಬದಲಾಯಿಸುತ್ತಾರೆ ಎಂದರೆ ನಂಬ್ತೀರಾ? ಅಸಲಿಗೆ ಇದು ನಂಬುವಂತ ಅದ್ಭುತ ಪ್ರಾಚೀನ ಸಾಂಪ್ರಾದಾಯಿಕ ಕಲೆ.

ಪಾತ್ರದ ಭಾವನೆ, ವ್ಯಕ್ತಿತ್ವ ಬದಲಾವಣೆ ನೋಡುಗರಲ್ಲಿ ಅಚ್ಚರಿ ಮೂಡಿಸುತ್ತದೆ. ಕೈಚಳಕ, ವೇಗದ ಚಲನೆ, ಸಂಗೀತ ಮತ್ತು ನೃತ್ಯದ ಸಮ್ಮಿಲನವಾಗಿರುವ ಈ ಕಲೆಯ ಹಿಂದಿರುವ ರಹಸ್ಯವೇ ಇದರ ಪ್ರಮುಖ ಆಕರ್ಷಣೆ ಎನ್ನಲಾಗಿದೆ. ಸಾಮಾನ್ಯವಾಗಿ ಕೇರಳದ ತೆಯ್ಯಂ ಸೇರಿದಂತೆ ಭಾರತದ ಹಲವು ಸಾಂಪ್ರದಾಯಿಕ ಕಲೆಗಳು ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತವೆ. ಇದೇ ರೀತಿ ಚೀನಾದಲ್ಲೂ ಶತಮಾನಗಳ ಇತಿಹಾಸ ಹೊಂದಿರುವ, ಕಣ್ಣೆದುರೇ ನಡೆಯುವ ಮಾಯೆಯಂತೆ ಕಾಣುವ ಈ ವಿಶಿಷ್ಟ ಕಲೆಯನ್ನು ‘ಬಿಯಾನ್ ಲಿಯಾನ್’ ಎಂದು ಕರೆಯಲಾಗಿದೆ.

ಏನಿದು 'ಬಿಯಾನ್ ಲಿಯಾನ್' ಕಲೆ?

ಚೀನಾದ ಸಿಚುವಾನ್ ಪ್ರಾಂತ್ಯದ ಸಾಂಪ್ರದಾಯಿಕ ಒಪೆರಾ ಪ್ರದರ್ಶನದ ಪ್ರಮುಖ ಆಕರ್ಷಣೆ ಈ ಬಿಯಾನ್ ಲಿಯಾನ್. ಚೀನೀ ಭಾಷೆಯಲ್ಲಿ ‘ಬಿಯಾನ್ ಲಿಯಾನ್’ ಎಂದರೆ ‘ಮುಖ ಬದಲಾವಣೆ’ ಎಂದರ್ಥ. ಸುಮಾರು 300 ವರ್ಷಗಳ ಇತಿಹಾಸ ಹೊಂದಿರುವ ಈ ಕಲೆಯಲ್ಲಿ ಕಲಾವಿದರು ಸಂಗೀತ, ನೃತ್ಯ ಮತ್ತು ವೇಗದ ದೇಹಚಲನೆಗಳ ಮೂಲಕ ವಿವಿಧ ಮುಖವಾಡಗಳನ್ನು ಕ್ಷಣಾರ್ಧದಲ್ಲಿ ಬದಲಾಯಿಸುತ್ತಾರೆ.

ಪ್ರದರ್ಶನದ ವೇಳೆ ಕಲಾವಿದರು ತಲೆ ತಿರುಗಿಸುವುದು, ಕೈಗಳನ್ನು ವೇಗವಾಗಿ ಚಲಿಸುವುದು, ಬೀಸಣಿಗೆಯನ್ನು ಬೀಸುವುದು ಸೇರಿದಂತೆ ವಿವಿಧ ಭಂಗಿಗಳನ್ನು ಪ್ರದರ್ಶನದಲ್ಲಿ ಬಳಸುತ್ತಾರೆ. ಈ ಚಲನೆಗಳ ನಡುವೆ ಮುಖದ ಮೇಲಿನ ಮುಖವಾಡಗಳು ಒಂದರ ನಂತರ ಒಂದರಂತೆ ಬದಲಾಗುತ್ತವೆ. ಇದರಿಂದ ಪಾತ್ರದ ಭಾವನೆ ಮತ್ತು ವ್ಯಕ್ತಿತ್ವ ಕ್ಷಣಕ್ಷಣಕ್ಕೂ ಬದಲಾಗುತ್ತಿರುವಂತೆ ಪ್ರೇಕ್ಷಕರಿಗೆ ಭಾಸವಾಗುತ್ತದೆ.

ಮುಖವಾಡ ಬದಲಾವಣೆಯ ರಹಸ್ಯವೇನು?

ಈ ಕಲೆಯ ಹಿಂದಿರುವ ರಹಸ್ಯವನ್ನು ಕಲಾವಿದರಿಗೆ ಬಿಟ್ಟರೆ ಇನ್ಯಾರಿಗೂ ಗೊತ್ತಿಲ್ಲ. ಮುಖ್ಯವಾಗಿ, ಅದನ್ನು ಇತರರಿಗೆ ಬಿಟ್ಟುಕೊಡದಂತೆ ಕಾಪಾಡಿಕೊಂಡು ಬಂದಿರುವುದು ಇಲ್ಲಿನ ಸಂಪ್ರದಾಯದ ವಿಶೇಷತೆ. ಹಲವು ತಲೆಮಾರುಗಳಿಂದ ಆಯ್ದ ಕಲಾವಿದರಿಗೆ ರಹಸ್ಯವಾಗಿ ಈ ಕಲೆಯನ್ನು ಕಲಿಸಲಾಗುತ್ತಿದೆ. ಸಾಂಪ್ರದಾಯಿಕವಾಗಿ ಪುರುಷರಿಗೆ ಮಾತ್ರ ಈ ವಿದ್ಯೆಯನ್ನು ಕಲಿಸಲಾಗುತ್ತಿತ್ತು. ಆದರೀಗ, ಮಹಿಳೆಯರೂ ಈ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ ಎಂದು ಸ್ಮಿತ್ಸೋನಿಯನ್ ಸಂಸ್ಥೆ ತಿಳಿಸಿದೆ.

ಕೆಲವು ಪ್ರದರ್ಶನಗಳಲ್ಲಿ ಕಲಾವಿದರು ಹಲವು ಪದರಗಳ ಮುಖವಾಡಗಳನ್ನು ಧರಿಸಿರುತ್ತಾರೆ. ಉಡುಪುಗಳಿಗೆ ಜೋಡಿಸಲಾದ ಸೂಕ್ಷ್ಮ ದಾರಗಳ ಸಹಾಯದಿಂದ ಒಂದು ಮುಖವಾಡವನ್ನು ತೆಗೆದು ಮತ್ತೊಂದನ್ನು ಕ್ಷಣಾರ್ಧದಲ್ಲಿ ಪ್ರದರ್ಶಿಸುತ್ತಾರೆ. ಇನ್ನು ಕೆಲವು ತಂತ್ರಗಳಲ್ಲಿ ಮುಖಕ್ಕೆ ಬಣ್ಣ ಹಚ್ಚುವ ಅಥವಾ ಬಣ್ಣದ ಪುಡಿಯನ್ನು ಬಳಸುವ ವಿಧಾನಗಳೂ ಇವೆ. ಈ ಎಲ್ಲ ತಂತ್ರಗಳನ್ನು ಸಂಗೀತದ ಲಯ ಮತ್ತು ಕೈಚಳಕದೊಂದಿಗೆ ಸಂಯೋಜಿಸುವುದೇ ಕಲಾವಿದರ ನೈಪುಣ್ಯತೆ ಎನ್ನಲಾಗಿದೆ.

ಬಣ್ಣಗಳಿಗೂ ಇದೆ ವಿಶೇಷ ಅರ್ಥ

ಬಿಯಾನ್ ಲಿಯಾನ್ ಪ್ರದರ್ಶನದಲ್ಲಿ ಬಳಸುವ ಮುಖವಾಡಗಳು ವಿವಿಧ ಬಣ್ಣ ಮತ್ತು ವಿನ್ಯಾಸಗಳಿಂದ ಕೂಡಿರುತ್ತವೆ. ಕೆಂಪು, ಹಳದಿ, ನೀಲಿ, ಹಸಿರು, ಕಂದು ಹಾಗೂ ಚಿನ್ನದ ಬಣ್ಣಗಳ ಮುಖವಾಡಗಳು ಪಾತ್ರಗಳ ಸ್ವಭಾವ ಮತ್ತು ಭಾವನೆಗಳನ್ನು ಪ್ರತಿನಿಧಿಸುತ್ತವೆ. ವೀರ ಪಾತ್ರಗಳು, ಖಳನಾಯಕರು ಹಾಗೂ ಹಾಸ್ಯಪಾತ್ರಗಳನ್ನು ವಿಭಿನ್ನ ಮುಖವಾಡಗಳ ಮೂಲಕ ತೋರಿಸಲಾಗುತ್ತದೆ ಎಂದು ವಿವರಿಸಲಾಗಿದೆ.

ಚೀನಾದ ಸಾಂಸ್ಕೃತಿಕ ಪರಂಪರೆಯ ಭಾಗ

ಬಿಯಾನ್ ಲಿಯಾನ್ ಕೇವಲ ಮನರಂಜನೆಯ ಕಲೆಯಲ್ಲ. ಇದು ಚೀನಾದ ಸಾಂಪ್ರದಾಯಿಕ ರಂಗಭೂಮಿ, ಜನಪದ ಕಥೆಗಳು ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿದೆ. ಚೀನಾದಲ್ಲಿ ಇದನ್ನು ರಾಷ್ಟ್ರೀಯ ಅಮೂರ್ತ ಸಾಂಸ್ಕೃತಿಕ ಪರಂಪರೆಯಾಗಿ ಗುರುತಿಸಲಾಗಿದೆ. ಇಂದಿಗೂ ಸಿಚುವಾನ್ ಒಪೆರಾದಲ್ಲಿ ಈ ಕಲೆ ಪ್ರೇಕ್ಷಕರನ್ನು ಆಕರ್ಷಿಸುತ್ತಿದ್ದು, ಚೀನಾದ ಗಡಿಗಳನ್ನು ಮೀರಿ ಜಗತ್ತಿನ ವಿವಿಧೆಡೆ ಜನಪ್ರಿಯತೆ ಗಳಿಸಿದೆ.

ಮುಖವಾಡಗಳ ಬದಲಾವಣೆಯ ವೇಗ, ಕಲಾವಿದರ ಅದ್ಭುತ ಕೈಚಳಕ ಮತ್ತು ಪ್ರದರ್ಶನದ ರೋಚಕತೆ ಇವೆಲ್ಲವೂ ಸೇರಿ ಬಿಯಾನ್ ಲಿಯಾನ್ ಕಲೆಯನ್ನು ಜಗತ್ತಿನ ವಿಶಿಷ್ಟ ಪ್ರದರ್ಶನ ಕಲೆಗಳಲ್ಲಿ ಒಂದಾಗಿಸಿವೆ. ಈ ಕಲೆಯ ಬಗ್ಗೆ ಮಾಹಿತಿ ಇದ್ದವರು ದೇಶ-ವಿದೇಶಗಳಿಂದ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ಮೂಲಕ ಇದು ಕೇವಲ ಸ್ಥಳೀಯರಿಗೆ ಸೀಮಿತವಾದ ಕಲೆಯಲ್ಲ ಎಂದು ಹೇಳಲಾಗಿದೆ,(ಏಜೆನ್ಸೀಸ್).