ಜನಪ್ರಿಯ 'ಗ್ರಾಂಡ್ ಥೆಫ್ಟ್ ಆಟೋ 6' (GTA 6) ಗೇಮ್‌ನ ರೇಡಿಯೋ ಸ್ಟೇಷನ್‌ನಲ್ಲಿ ಮೊಳಗುತ್ತಿರುವ 1982ರ ಬಂಗಾಳಿ ಡಿಸ್ಕೋ ಹಾಡು 'ಆಜ್ ಶನಿಬಾರ್'. 
ವಿದೇಶ

ಹಾಲಿವುಡ್​ ಗೇಮ್​​ನಲ್ಲಿ ಬೆಂಗಾಲಿ ಸಂಗೀತ​: GTA 6 ನಲ್ಲಿ ಮೊಳಗಿದ 'ಆಜ್​​​ ಶನಿವಾರ್​'! ವಿಡಿಯೋ ವೈರಲ್​|Aaj Shanibaar

ನವದೆಹಲಿ: ವಿಡಿಯೋ ಗೇಮ್ ಪ್ರಿಯರ ನೆಚ್ಚಿನ 'ಗ್ರಾಂಡ್ ಥೆಫ್ಟ್ ಆಟೋ 6' (GTA 6) ಗೇಮ್‌ನಲ್ಲಿ ಈಗ ಭಾರತೀಯ ಮ್ಯೂಸಿಕ್​ನ ಹವಾ ಶುರುವಾಗಿದೆ. ಬರೋಬ್ಬರಿ 40 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಬಂಗಾಳಿ ಡಿಸ್ಕೋ ಹಾಡೊಂದು ಈ ಗೇಮ್‌ನಲ್ಲಿ ಸೇರ್ಪಡೆಯಾಗಿದ್ದು, ಇಡೀ ವಿಶ್ವದ ಗೇಮರ್‌ಗಳ ಗಮನ ಸೆಳೆಯುತ್ತಿದೆ.

ಕೋಲ್ಕತ್ತಾ ಮೂಲದ ಗಾಯಕಿ ರೂಪಾ ಬಿಸ್ವಾಸ್ ಹಾಡಿರುವ 'ಆಜ್ ಶನಿವಾರ್' (Aaj Shanibaar) ಎಂಬ ಹಾಡು, GTA 6 ಗೇಮ್‌ನಲ್ಲಿರುವ ವರ್ಲ್ಡ್‌ವೈಡ್ ಎಫ್‌ಎಂ ರೇಡಿಯೋ ಸ್ಟೇಷನ್‌ನಲ್ಲಿ ಪ್ಲೇ ಆಗುತ್ತಿದೆ. ಗೇಮ್ ಆಡುವಾಗ ಕಾರು ಚಲಾಯಿಸುತ್ತಾ ರೇಡಿಯೋ ಆನ್ ಮಾಡಿದ ಭಾರತೀಯ ಆಟಗಾರರಿಗೆ, ಅಲ್ಲಿ ತಮ್ಮದೇ ದೇಶದ ಬಂಗಾಳಿ ಹಾಡು ಕೇಳಿಬಂದಾಗ ಒಂದು ಕ್ಷಣ ನಂಬಲೂ ಸಾಧ್ಯವಾಗಲಿಲ್ಲ. ಈ ಅನಿರೀಕ್ಷಿತ ಸರ್ಪ್ರೈಸ್ ಕಂಡು ಭಾರತೀಯ ಗೇಮರ್‌ಗಳು ಫುಲ್ ಥ್ರಿಲ್ ಆಗಿದ್ದಾರೆ.

1982ರ ಈ ಹಾಡಿನ ಹಿಂದಿದೆ ದೊಡ್ಡ ಇತಿಹಾಸ!

'ಆಜ್ ಶನಿವಾರ್' ಹಾಡು 1982ರಲ್ಲಿ ಬಿಡುಗಡೆಯಾದ ರೂಪಾ ಬಿಸ್ವಾಸ್ ಅವರ ಡಿಸ್ಕೋ ಜಾಝ್ ಆಲ್ಬಂನದ್ದು. ಈ ಹಾಡಿಗೆ ಗ್ರಾಮ್ಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಖ್ಯಾತ ಸರೋದ್ ವಾದಕ ಉಸ್ತಾದ್ ಆಶಿಶ್ ಖಾನ್ ಸಂಗೀತ ನೀಡಿದ್ದರು. ಇವರು ದಿಗ್ಗಜ ಸಂಗೀತಗಾರ ಉಸ್ತಾದ್ ಅಲ್ಲಾವುದ್ದೀನ್ ಖಾನ್ ಅವರ ಮೊಮ್ಮಗ ಕೂಡ ಹೌದು.

ಆಶಿಶ್ ಖಾನ್ ಈ ಆಲ್ಬಂ ನಿರ್ಮಾಣ ಮಾಡುವುದರ ಜೊತೆಗೆ ಸರೋದ್ ನುಡಿಸಿದ್ದರೆ, ಅವರ ಸಹೋದರ ಪ್ರಣೇಶ್ ಖಾನ್ ತಬಲಾ ಸಾಥ್ ನೀಡಿದ್ದರು. ಇನ್ನು ಆಶಿಶ್ ಅವರ ಪತ್ನಿ ಫಿರೋಜಾ ಖಾನ್ ಸಂಗೀತ ಮತ್ತು ಸಾಹಿತ್ಯಕ್ಕೆ ಕೈಜೋಡಿಸಿದ್ದರು. ಪಾಶ್ಚಾತ್ಯ ಡಿಸ್ಕೋ ಬೀಟ್‌ಗಳು, ಫಂಕ್ ಶೈಲಿ ಮತ್ತು ನಮ್ಮ ಭಾರತೀಯ ಶಾಸ್ತ್ರೀಯ ಸಂಗೀತದ ಅದ್ಭುತ ಮಿಶ್ರಣ ಈ ಹಾಡಿನಲ್ಲಿದೆ. ಬಂಗಾಳಿ ಜೊತೆಗೆ ಹಿಂದಿ ಸಾಹಿತ್ಯವೂ ಇರುವುದು ಇದರ ವಿಶೇಷತೆಯಾಗಿದೆ.

80ರ ದಶಕದ ಡಿಸ್ಕೋ ಕ್ರೇಜ್ ಈಗ ಗ್ಲೋಬಲ್!

1980 ರ ದಶಕದಲ್ಲಿ ಭಾರತದಲ್ಲಿ ಡಿಸ್ಕೋ ಸಂಗೀತದ ಅಲೆ ಜೋರಾಗಿತ್ತು. ನಜಿಯಾ ಹಸನ್ ಅವರ ಆಪ್ ಜೈಸಾ ಕೋಯಿ ಮತ್ತು ಮಿಥುನ್ ಚಕ್ರವರ್ತಿ ಅವರ ಡಿಸ್ಕೋ ಡ್ಯಾನ್ಸರ್ ಸಿನಿಮಾದ ಹಾಡುಗಳು ಸಖತ್ ಸೌಂಡ್ ಮಾಡುತ್ತಿದ್ದ ಕಾಲವದು. ಅದೇ ಸಮಯದಲ್ಲಿ ಬಂದ 'ಆಜ್ ಶನಿವಾರ್' ಹಾಡಿಗೆ ತನ್ನದೇ ಆದ ಅಭಿಮಾನಿ ಬಳಗವಿತ್ತು. ಆದರೆ, ಈಗ GTA 6 ನಂತಹ ಅಂತಾರಾಷ್ಟ್ರೀಯ ಮಟ್ಟದ ಗೇಮ್‌ನಲ್ಲಿ ಈ ಹಾಡು ಕಾಣಿಸಿಕೊಂಡಿರುವುದರಿಂದ, ಭಾರತದ ಗಡಿ ದಾಟಿ ವಿದೇಶಿ ಕೇಳುಗರನ್ನೂ ಹುಚ್ಚೆಬ್ಬಿಸುತ್ತಿದೆ, (ಏಜೆನ್ಸೀಸ್​).