ಖಾಕಿ ಬಿಟ್ಟು ಕಾವಿ ತೊಟ್ಟ ಸಿಬಿಐ ಅಧಿಕಾರಿ: ಐಷಾರಾಮಿ ಬದುಕು ತೊರೆದು ಗುಹೆ ಸೇರಿದ್ದೇಕೆ ಗೊತ್ತಾ? CBI Monk

A former CBI inspector who has shed his khaki uniform, donned saffron robes, and is living in a forest cave.
ಖಾಕಿ ತೊರೆದು ಕಾವಿ ಧರಿಸಿ ಕಾಡಿನ ಗುಹೆಯಲ್ಲಿ ವಾಸಿಸುತ್ತಿರುವ ಮಾಜಿ ಸಿಬಿಐ ಇನ್ಸ್‌ಪೆಕ್ಟರ್
Published on: 

ನವದೆಹಲಿ: ಇಂದಿನ ಆಧುನಿಕ ಜಗತ್ತಿನಲ್ಲಿ ಒಬ್ಬ ವ್ಯಕ್ತಿಯ ಯಶಸ್ಸನ್ನು ಆತ ಹೊಂದಿರುವ ಬ್ಯಾಂಕ್​ ಬ್ಯಾಲೆನ್ಸ್, ಐಷಾರಾಮಿ ಕಾರು, ದೊಡ್ಡ ಬಂಗಲೆ ಹಾಗೂ ಅವನ ಹುದ್ದೆಗಳ ಮೂಲಕ ಅಳೆಯುತ್ತಾರೆ. ಅದರಲ್ಲೂ ಇತ್ತೀಚೆಗೆ ಸರ್ಕಾರಿ ಕೆಲಸದಲ್ಲಿರುವವರಿಗೆ ನೀಡುವ ರಾಜ ಮರ್ಯಾದೆ ಬೇರಾರಿಗೂ ಇಲ್ಲ ಎಂದರೂ ತಪ್ಪಿಲ್ಲ.

ಆದರೆ, ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿಬಿಐ (CBI) ನಲ್ಲಿ ಇನ್ಸ್‌ಪೆಕ್ಟರ್ ಹುದ್ದೆಯಲ್ಲಿದ್ದ ಒಬ್ಬ ಇಂತಹ ಅಧಿಕಾರ, ಅಂತಸ್ತು ಮತ್ತು ಸಕಲ ಸೌಲಭ್ಯಗಳನ್ನು ಕ್ಷಣಮಾತ್ರದಲ್ಲಿ ತೊರೆದು, ದಟ್ಟವಾದ ಕಾಡಿನ ಗುಹೆಯಲ್ಲಿ ಸನ್ಯಾಸಿಯಾಗಿ ಬದುಕುತ್ತಿದ್ದಾನೆಂದರೆ ನೀವು ನಂಬಲೇ ಬೇಕು.

ಸದ್ಯ ಈ ಮಾಜಿ ಅಧಿಕಾರಿಯ ವೈರಲ್ ವಿಡಿಯೋವೊಂದು ನೆಟ್ಟಿಗರನ್ನು ಆಳವಾಗಿ ಚಿಂತಿಸುವಂತೆ ಮಾಡಿದೆ. ತಮ್ಮ ಹೆಸರನ್ನು ಬಹಿರಂಗಪಡಿಸದ ಈ ಸಾಧು, ತಾವು ಖಾಕಿ ಮತ್ತು ಅಧಿಕಾರವನ್ನು ಬಿಟ್ಟು ಕಾವಿ ತೊಡಲು ಕಾರಣವೇನು ಎಂಬುದನ್ನು ಮನಮುಟ್ಟುವಂತೆ ವಿವರಿಸಿದ್ದಾರೆ.

ಅಧಿಕಾರದ ನಡುವೆ ಉಸಿರುಗಟ್ಟುವ ವಾತಾವರಣ!

ಆರಂಭದಲ್ಲಿ ಸಿಬಿಐ ಇನ್ಸ್‌ಪೆಕ್ಟರ್ ಆಗಿ ಕೆಲಸಕ್ಕೆ ಸೇರಿದಾಗ, ಜೀವನದಲ್ಲಿ ಎಲ್ಲವನ್ನೂ ಸಾಧಿಸಿಬಿಟ್ಟೆ ಎಂಬ ಖುಷಿ ಅವರಿಗಿತ್ತು. ಕೈತುಂಬಾ ಸಂಬಳ, ಮನೆ, ಕಾರು ಎಲ್ಲವೂ ಇತ್ತು. ಆದರೆ, ದಿನ ಕಳೆದಂತೆ ಆ ವ್ಯವಸ್ಥೆಯೊಳಗೆ ಅವರಿಗೆ ಉಸಿರುಗಟ್ಟುವ ಅನುಭವವಾಗತೊಡಗಿತು.

ಕಾನೂನು ಪಾಲನೆಯ ಹೆಸರಿನಲ್ಲಿ ಜನರೊಂದಿಗೆ ಒರಟಾಗಿ, ಕಠೋರವಾಗಿ ವರ್ತಿಸಬೇಕಾದ ಪರಿಸ್ಥಿತಿ ಅವರ ಸ್ವಭಾವಕ್ಕೆ ವಿರುದ್ಧವಾಗಿತ್ತು. ಹೊರಗಿನಿಂದ ನೋಡಲು ಎಲ್ಲವೂ ಇದ್ದರೂ, ಒಳಮನಸ್ಸಿನಲ್ಲಿ ಏನೋ ಒಂದು ರೀತಿಯ ಶೂನ್ಯ ಅವರನ್ನು ಕಾಡುತ್ತಿತ್ತು. ತಾವು ಹುಡುಕುತ್ತಿರುವ ನಿಜವಾದ ನೆಮ್ಮದಿ ಮತ್ತು ಸ್ವಾತಂತ್ರ್ಯ ಈ ಹುದ್ದೆಯಲ್ಲಿ ಇಲ್ಲ ಎಂಬ ಸತ್ಯ ಅವರಿಗೆ ಅರಿವಾಯಿತು.

ನರ್ಮದಾ ಪರಿಕ್ರಮ ಬದಲಿಸಿದ ಬದುಕು

ತಮ್ಮೊಳಗಿನ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ, ಒಂದು ದಿನ ಎಲ್ಲವನ್ನೂ ಬಿಟ್ಟು ಹೊರಟೇ ಬಿಟ್ಟರು. ಹಲವು ರಾಜ್ಯಗಳನ್ನು ಸುತ್ತಿದ ಅವರು, ಮಧ್ಯಪ್ರದೇಶದ ಓಂಕಾರೇಶ್ವರದ ಬಳಿ ನರ್ಮದಾ ನದಿ ತೀರದ ಪಾದಯಾತ್ರೆ ಕೈಗೊಂಡರು. ಆ ಕ್ಷಣದಿಂದ ಅವರ ಬದುಕಿನ ದಿಕ್ಕೇ ಬದಲಾಯಿತು.

ಆರಂಭದ ದಿನಗಳಲ್ಲಿ ಕಾಲಿಗೆ ಚಪ್ಪಲಿಯೂ ಇರಲಿಲ್ಲ, ಮಲಗಲು ಚಾಪೆಯೂ ಇರಲಿಲ್ಲ. ಸಿಕ್ಕ ಅಲ್ಪ ಆಹಾರವನ್ನೇ ಸೇವಿಸುತ್ತಾ, ಧ್ಯಾನ ಮತ್ತು ಪ್ರಾರ್ಥನೆಯಲ್ಲಿ ತೊಡಗಿದರು. ನಂತರ ಪರ್ವತವೊಂದರ ಮೇಲಿನ ದೇವಾಲಯದಲ್ಲಿ ಸಾಧು-ಸಂತರ ಒಡನಾಟ ಸಿಕ್ಕಿತು.

ಕೆಲವು ವರ್ಷಗಳ ಕಾಲ ಅಲ್ಲಿಯೇ ಇದ್ದು, ಹಳ್ಳಿಯ ಮಕ್ಕಳಿಗೆ ಪ್ರಕೃತಿಯ ಪಾಠ ಹೇಳಿಕೊಡಲು ಶುರುಮಾಡಿದರು. ಇಂದು ಅವರು ದಟ್ಟ ಕಾಡಿನ ಗುಹೆಯೊಂದರಲ್ಲಿ ವಾಸಿಸುತ್ತಿದ್ದು, ಕಟ್ಟಿಗೆ ಒಲೆಯ ಮೇಲೆ ಅಡುಗೆ ಮಾಡಿಕೊಂಡು, ಧ್ಯಾನದಲ್ಲಿ ಪರಮ ಶಾಂತಿಯನ್ನು ಕಂಡುಕೊಂಡಿದ್ದಾರೆ.

Also Read
ನಾಲ್ಕು ವರ್ಷದಿಂದ ಅವನೊಂದಿಗೆ ಮಾತನಾಡಿಲ್ಲ: ಮಗ 'ಜೊರಾವರ್' ನೆನೆದು ಭಾವುಕರಾದ ಶಿಖರ್ ಧವನ್! Shikhar Dhawan
A former CBI inspector who has shed his khaki uniform, donned saffron robes, and is living in a forest cave.

ಮನೆಯಿಂದಲೇ ಭ್ರಷ್ಟಾಚಾರ ಶುರುವಾಗುತ್ತದೆ!

ವಿಡಿಯೋದಲ್ಲಿ ಅವರು ಸಮಾಜದ ಬಗ್ಗೆ ಹೇಳಿರುವ ಒಂದು ಮಾತು ಎಲ್ಲರ ಕಣ್ಣು ತೆರೆಸುವಂತಿದೆ. ಭ್ರಷ್ಟಾಚಾರ ಶುರುವಾಗುವುದು ಹೊರಗಿನಿಂದಲ್ಲ, ನಮ್ಮ ಸ್ವಂತ ಮನೆಗಳಿಂದಲೇ. ಪೋಷಕರು ತಮ್ಮ ಮಕ್ಕಳನ್ನು ಪಕ್ಕದ ಮನೆಯವರ ಶ್ರೀಮಂತಿಕೆಗೆ ಹೋಲಿಸಲು ಶುರುಮಾಡಿದಾಗ, ಮಕ್ಕಳನ್ನು ತಪ್ಪು ದಾರಿಗೆ ತಳ್ಳುತ್ತಾರೆ. ಅಂತಹ ವಾತಾವರಣದಲ್ಲಿ ಬೆಳೆದ ಮಗು ಮುಂದೆ ದೊಡ್ಡ ಕಲೆಕ್ಟರ್, ಡಾಕ್ಟರ್ ಅಥವಾ ಎಂಜಿನಿಯರ್ ಆದರೂ ಸಮಾಜವನ್ನು ಲೂಟಿ ಮಾಡುವುದನ್ನೇ ಕಲಿಯುತ್ತದೆ ಎಂದು ಅವರು ಕಟುವಾಗಿ ಹೇಳಿದ್ದಾರೆ.

ಪೋಷಕರು ತಮ್ಮ ಮಕ್ಕಳನ್ನು ಐಎಎಸ್, ಐಪಿಎಸ್ ಅಧಿಕಾರಿಗಳನ್ನಾಗಿ ಮಾಡುವ ಮೊದಲು, ಒಬ್ಬ ಒಳ್ಳೆಯ ಮನುಷ್ಯರನ್ನಾಗಿ ಬೆಳೆಸಬೇಕು. ಕೇವಲ ಬಟ್ಟೆ ಬದಲಾಯಿಸಿದರೆ ಸನ್ಯಾಸಿಯಾಗುವುದಿಲ್ಲ; ಮಾಡುವ ಕೆಲಸದಲ್ಲಿ ಸಂಪೂರ್ಣ ಪ್ರಾಮಾಣಿಕತೆ ಇರುವುದೇ ನಿಜವಾದ ಆಧ್ಯಾತ್ಮಿಕತೆ ಎಂಬ ಅವರ ಮಾತುಗಳು ಸದ್ಯ ಸೋಷಿಯಲ್​ ಮೀಡಿಯಾನಲ್ಲಿ ವೈರಲ್ ಆಗಿವೆ, (ಏಜೆನ್ಸೀಸ್).

Related Stories