ನವದೆಹಲಿ: 19ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಕೇವಲ ನಾಲ್ಕು ದಿನಗಳು ಬಾಕಿ ಇರುವಾಗ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ಇಂಗ್ಲೆಂಡ್‌ನ ಆರಂಭಿಕ ಆಟಗಾರ ಬೆನ್ ಡಕೆಟ್ (Ben Duckett) ರಾಷ್ಟ್ರೀಯ ತಂಡದ ಕಡೆಗೆ ಹೆಚ್ಚಿನ ಗಮನ ಹರಿಸುವ ಕಾರಣವನ್ನು ನೀಡಿ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.
ಕ್ಷಮೆ ಯಾಚಿಸಿದ ಡಕೆಟ್
ಹರಾಜಿನಲ್ಲಿ 2 ಕೋಟಿ ರೂಪಾಯಿಗೆ ಮಾರಾಟವಾಗಿದ್ದ ಡಕೆಟ್, ಈ ಬಾರಿ ಕೆ.ಎಲ್. ರಾಹುಲ್ ಅವರೊಂದಿಗೆ ದೆಹಲಿ ಪರ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಿತ್ತು. ಆದರೆ, ಟೆಲಿಗ್ರಾಫ್ ಸ್ಪೋರ್ಟ್ ಜೊತೆ ಮಾತನಾಡಿದ ಅವರು, ಇದು ತುಂಬಾ ಕಷ್ಟಕರವಾದ ನಿರ್ಧಾರ. ದೆಹಲಿ ಫ್ರಾಂಚೈಸಿ ನನ್ನ ಮೇಲೆ ಇಟ್ಟಿದ್ದ ನಂಬಿಕೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಮತ್ತು ಬರಲು ಸಾಧ್ಯವಾಗದಿದ್ದಕ್ಕೆ ಕ್ಷಮೆ ಯಾಚಿಸುತ್ತೇನೆ.
ಈಗ ನನಗೆ 31 ವರ್ಷ ವಯಸ್ಸು, ಮುಂದಿನ ದಿನಗಳಲ್ಲಿ ದೆಹಲಿ ತಂಡವನ್ನು ಮತ್ತೇ ಪ್ರತಿನಿಧಿಸುವ ಅವಕಾಶ ಸಿಗಬಹುದು ಎಂದು ಆಶಿಸುತ್ತೇನೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನನ್ನ ವೃತ್ತಿಜೀವನಕ್ಕೆ ಇದು ಸರಿಯಾದ ನಿರ್ಧಾರ ಎಂದು ತಿಳಿಸಿದ್ದಾರೆ.
ಕಾರಣವೇನು..?
ಡಕೆಟ್ ಈ ನಿರ್ಧಾರ ತೆಗೆದುಕೊಳ್ಳಲು ಅವರ ಇತ್ತೀಚಿನ ಕಳಪೆ ಫಾರ್ಮ್ ಪ್ರಮುಖ ಕಾರಣ ಎನ್ನಲಾಗಿದ್ದು, ಆಶಸ್ ಸರಣಿಯ 5 ಪಂದ್ಯಗಳಲ್ಲಿ ಅವರು ಕೇವಲ 202 ರನ್ ಗಳಿಸಿದ್ದರು. ಅಲ್ಲದೆ, ಟಿ20 ವಿಶ್ವಕಪ್‌ನಲ್ಲೂ ಅವರಿಗೆ ಆಡುವ ಅವಕಾಶ ಸಿಗದೆ ಬೆಂಚ್ ಕಾಯಬೇಕಾಯಿತು. ಐಪಿಎಲ್‌ನಲ್ಲೂ ಅದೇ ಪರಿಸ್ಥಿತಿ ಮರುಕಳಿಸಬಹುದು ಮತ್ತು ಮುಂದೆ ಬರಲಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಿದ್ಧರಾಗಲು ಸಮಯ ಬೇಕು ಎಂಬ ಉದ್ದೇಶದಿಂದ ಅವರು ಐಪಿಎಲ್‌ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
ಬಿಸಿಸಿಐನಿಂದ 3 ವರ್ಷಗಳ ನಿಷೇಧ?
ಬೆನ್ ಡಕೆಟ್ ಈ ಹಠಾತ್ ನಿರ್ಧಾರವು ಅವರಿಗೆ ದುಬಾರಿಯಾಗುವ ಸಾಧ್ಯತೆಯಿದ್ದು, ಬಿಸಿಸಿಐ ನಿಯಮಗಳ ಪ್ರಕಾರ, ಯಾವುದೇ ಆಟಗಾರ ಹರಾಜಿನಲ್ಲಿ ಆಯ್ಕೆಯಾದ ಬಳಿಕ ಗಾಯದ ಸಮಸ್ಯೆ ಇಲ್ಲದೆ ಟೂರ್ನಿಯಿಂದ ಹಿಂದೆ ಸರಿದರೆ, ಅಂತಹ ಆಟಗಾರನ ಮೇಲೆ 3 ವರ್ಷಗಳ ಕಾಲ ಐಪಿಎಲ್ ನಿಷೇಧ ಹೇರಲಾಗುತ್ತದೆ. ಈ ಹಿಂದೆ ಹ್ಯಾರಿ ಬ್ರೂಕ್ ಅವರ ವಿಷಯದಲ್ಲೂ ಇಂತಹದ್ದೇ ಕ್ರಮ ಕೈಗೊಳ್ಳಲಾಗಿತ್ತು. ಹೀಗಾಗಿ, ಡಕೆಟ್ ಮುಂದಿನ ಮೂರು ಸೀಸನ್‌ಗಳಲ್ಲಿ ಐಪಿಎಲ್ ಆಡುವ ಅವಕಾಶ ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ಡೆಲ್ಲಿ ತಂಡದ ಮುಂದಿನ ನಡೆ ಏನು..?
ಡಕೆಟ್ ಅಲಭ್ಯತೆಯ ನಡುವೆಯೂ ಡೆಲ್ಲಿ ಕ್ಯಾಪಿಟಲ್ಸ್ ಇನ್ನೂ ಯಾವುದೇ ಬದಲಿ ಆಟಗಾರನನ್ನು ಘೋಷಿಸಿಲ್ಲ. ಆದರೆ, ತಂಡದಲ್ಲಿ ಪೃಥ್ವಿ ಶಾ, ಪಾತುಮ್ ನಿಸ್ಸಂಕಾ ಮತ್ತು ಸಾಹಿಲ್ ಪಾರಿಖ್ ಅವರಂತಹ ಆರಂಭಿಕ ಆಯ್ಕೆಗಳು ಇರುವುದು ಫ್ರಾಂಚೈಸಿಗೆ ಸಮಾಧಾನಕರ ಸಂಗತಿಯಾಗಿದೆ(ಏಜೆನ್ಸೀಸ್).