Donald Trump | ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

ನನ್ನ ಹತ್ಯೆಗೆ ಇರಾನ್ ಸಂಚು, ಅವರ ಪ್ರತಿಯೊಂದು ಹಿಟ್‌ಲಿಸ್ಟ್‌ನಲ್ಲೂ ನನ್ನ ಹೆಸರಿದೆ ಎಂಬ ಆಘಾತಕಾರಿ ಹೇಳಿಕೆ ನೀಡಿದ ಟ್ರಂಪ್​ | Donald Trump

ವಾಷಿಂಗ್ಟನ್: ತಮ್ಮ ಹತ್ಯೆಗೆ ಮಾಡಲು ಇರಾನ್ ಸಂಚು ರೂಪಿಸುತ್ತಿದೆ ಮತ್ತು ಅವರ ಪ್ರತಿಯೊಂದು ಹಿಟ್‌ಲಿಸ್ಟ್​​ಲ್ಲೂ ತಮ್ಮ ಹೆಸರಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಬುಧವಾರ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ಟರ್ಕಿಯಲ್ಲಿ ನಡೆಯುತ್ತಿರುವ ನ್ಯಾಟೋ ಶೃಂಗಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಅವರು ನನ್ನನ್ನು ಕೊಲ್ಲಲು ಬಯಸಿದ್ದಾರೆ. ನಾನು ಅವರ ಪ್ರತಿಯೊಂದು ಪಟ್ಟಿಯಲ್ಲಿದ್ದೇನೆ. ಇಂದು ಬೆಳಿಗ್ಗೆಯೂ ನೋಡಿದೆ, ಇಲ್ಲಿಯವರೆಗೆ ನಾನು ಸ್ವಲ್ಪ ಮಟ್ಟಿಗೆ ಅದೃಷ್ಟಶಾಲಿಯಾಗಿದ್ದೀನಿ ಎನ್ನಿಸುತ್ತದೆ. ಆದರೆ ಆ ಅದೃಷ್ಟ ಹೆಚ್ಚು ಕಾಲ ಮುಂದುವರಿಯದಿರಬಹುದು ಎಂದು ಹೇಳಿದ್ದಾರೆ.

ಇರಾನ್‌ನೊಂದಿಗಿನ ಒಪ್ಪಂದ ಕೊನೆಗೊಂಡಿದೆ – ಟ್ರಂಪ್ ಘೋಷಣೆ

ಇರಾನ್‌ನೊಂದಿಗಿನ ತಿಳಿವಳಿಕೆ ಒಪ್ಪಂದ (Memorandum of Understanding) ಸಂಪೂರ್ಣವಾಗಿ ಮುಕ್ತಾಯಗೊಂಡಿದೆ ಎಂದು ಸಾರಿದ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆಗಳನ್ನು ನೀಡಿದ್ದಾರೆ. ಇರಾನ್‌ನ ಸಂಸದರನ್ನೂ ನೀಚರು ಎಂದು ಕರೆದಿರುವ ಅವರು, ತಮಗೆ ಅವರು ಇಷ್ಟವಿಲ್ಲ ಎಂದು ಕಿಡಿಕಾರಿದ್ದಾರೆ.
ಅಮೆರಿಕವು ಇರಾನ್‌ನ 80 ಕ್ಕೂ ಹೆಚ್ಚು ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದ ನಂತರ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಟ್ರಂಪ್, ನನಗೆ ಅವರು ಎಷ್ಟೂ ಇಷ್ಟವಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವು ಅವರೊಂದಿಗೆ ಮಾತುಕತೆ ನಡೆಸಿ ಸಾಕಷ್ಟು ಸಮಯ ವ್ಯರ್ಥ ಮಾಡಿದ್ದೇವೆ. ನಾವು ನಮ್ಮ ಕೆಲಸವನ್ನು ಮುಂದುವರಿಸಬೇಕು. ಅವರು ಅತ್ಯಂತ ದುಷ್ಟ ಮತ್ತು ಹಿಂಸಾತ್ಮಕ ಜನರು. ನನ್ನ ಮಟ್ಟಿಗೆ ಇರಾನ್ ಜೊತೆಗಿನ ಕದನ ವಿರಾಮ ಮತ್ತು ಒಪ್ಪಂದ ಮುಗಿದ ಅಧ್ಯಾಯ ಎಂದು ಸ್ಪಷ್ಟಪಡಿಸಿದ್ದಾರೆ.

ಖಮೇನಿ ಅಂತ್ಯಕ್ರಿಯೆಯಲ್ಲಿ ಟ್ರಂಪ್ ಹತ್ಯೆ ಮಾಡಿ ಎಂಬ ಘೋಷಣೆ

ಇತ್ತೀಚೆಗೆ ಹತ್ಯೆಗೀಡಾದ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆಯ ಸಂದರ್ಭದಲ್ಲಿ, ತೆಹ್ರಾನ್‌ನ ಗ್ರಾಂಡ್ ಮೊಸಲ್ಲಾ ಪ್ರಾರ್ಥನಾ ಸಂಕೀರ್ಣದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರನ್ನು ಹತ್ಯೆ ಮಾಡುವಂತೆ ಸಾರ್ವಜನಿಕವಾಗಿ ಕರೆ ನೀಡಲಾಗಿದೆ. ಪ್ರಾರ್ಥನಾ ಮಂದಿರದಾದ್ಯಂತ ಟ್ರಂಪ್ ಮತ್ತು ನೆತನ್ಯಾಹು ಹತ್ಯೆಗೆ ಕರೆ ನೀಡುವ ಪೋಸ್ಟರ್‌ಗಳು ಮತ್ತು ಗೋಡೆಬರಹಗಳು ಪ್ರದರ್ಶನಗೊಂಡಿವೆ.
ಅಂತ್ಯಕ್ರಿಯೆಯ ಕಾರ್ಯಕ್ರಮ ನಡೆಸಿಕೊಟ್ಟ ಕವಿ ಮೊಹಮ್ಮದ್ ರಸೌಲಿ ಮೈಕ್​ಗಳಲ್ಲಿ ಮಾತನಾಡಿ, ಇಂದಿನಿಂದ ಶವವಸ್ತ್ರವೇ ನಮ್ಮ ಉಡುಪು. ನಿಮ್ಮ ರಕ್ತದ ಮೇಲೆ ಪ್ರಮಾಣ ಮಾಡಿ ಹೇಳುತ್ತಿದ್ದೇವೆ; ಟ್ರಂಪ್‌ನ ಹತ್ಯೆ ನಮ್ಮ ಜವಾಬ್ದಾರಿ. ಜಗತ್ತಿನ ಅತ್ಯಂತ ನೀಚ ವ್ಯಕ್ತಿ ಇನ್ನೂ ಏಕೆ ಜೀವಂತವಾಗಿದ್ದಾನೆ..? ಟ್ರಂಪ್‌ಗೆ ಈ ಜಗತ್ತು ಇನ್ಮುಂದೆ ಸುರಕ್ಷಿತವಲ್ಲ. ನಮ್ಮ ಇಮಾಮ್‌ನನ್ನು ಕೊಂದ ವ್ಯಕ್ತಿಯನ್ನು ನಾವು ಏಕೆ ಕೊಲ್ಲಬಾರದು..? ಎಂದು ನೆರೆದಿದ್ದ ಜನಸ್ತೋಮವನ್ನು ಪ್ರಚೋದಿಸಿದರು.
ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ 29 ವರ್ಷದ ಸಣ್ಣ ದಿನಸಿ ಅಂಗಡಿ ನೌಕರ ಘೋಲಾಂರೆಜಾ ಸಾಬೂನಿ ಮಾತನಾಡಿ, ನಾನು ಇಲ್ಲಿಗೆ ಆಕ್ರೋಶ ಹೊರಹಾಕಲು ಮತ್ತು ಸೇಡು ತೀರಿಸಿಕೊಳ್ಳಲು ಬಂದಿದ್ದೇನೆ. ಅವರು ನಮ್ಮ ಇಮಾಮ್‌ನನ್ನು ಕೊಂದಿದ್ದಾರೆ, ನಾವು ಅವರ ನಾಯಕ ಟ್ರಂಪ್‌ನನ್ನು ಕೊಲ್ಲಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ(ಏಜೆನ್ಸೀಸ್​).