ಚಾಟ್ಜಿಪಿಟಿ, ಗ್ರೋಕ್, ಗೂಗಲ್ ಜೆಮಿನಿಯಂತಹ AI ಚಾಟ್‌ಬಾಟ್ ಬಳಸುತ್ತಿದ್ದೀರಾ? ಹಾಗಾದ್ರೆ ಭವಿಷ್ಯದಲ್ಲಿ ಕಾದಿದೆ ಸಂಕಷ್ಟ! AI chatbots
- ತಾಂತ್ರಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಜಗತ್ತಿನಲ್ಲಿ ಪ್ರಸ್ತುತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪ್ರಭಾವ ಬೀರುತ್ತಿದೆ
- ಎಐ ಇಂದು ಎಲ್ಲವನ್ನು ಆವರಿಸಿಕೊಳ್ಳುತ್ತಿದ್ದು, ಮನುಷ್ಯನ ಕೆಲಸವನ್ನು ಸರಳಗೊಳಿಸುತ್ತಿದೆ
- ಕೃತಕ ಬುದ್ಧಿಮತ್ತೆ ಮಾನವ ಜೀವನಕ್ಕೆ ಎಷ್ಟು ಸ್ನೇಹಿ ಆಗಿದೆಯೋ ಅಷ್ಟೇ ಮಾರಕವೂ ಆಗಿದೆ
- ಇದೀಗ ಎಐ ಬಗ್ಗೆ ನಡೆದಿರುವ ಹೊಸ ಅಧ್ಯಯನಗಳು ಆಘಾತಕಾರಿ ಮಾಹಿತಿ ಬಹಿರಂಗಪಡಿಸಿವೆ
AI chatbots : ತಾಂತ್ರಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಈ ಜಗತ್ತಿನಲ್ಲಿ ಪ್ರಸ್ತುತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತುಂಬಾ ಪ್ರಭಾವ ಬೀರುತ್ತಿದೆ. ಹೇಳಬೇಕೆಂದರೆ, ಎಐ ಇಂದು ಎಲ್ಲವನ್ನು ಆವರಿಸಿಕೊಳ್ಳುತ್ತಿದ್ದು, ಮನುಷ್ಯನ ಕೆಲಸವನ್ನು ಸರಳಗೊಳಿಸುತ್ತಿದೆ. ಮಾನವ ಜೀವನಕ್ಕೆ ಸ್ನೇಹಿ ಆಗಿರುವ ಎಐ, ಮಾರಕವೂ ಆಗಿದೆ. ಏಕೆಂದರೆ, ಅನೇಕ ಕಡೆಗಳಲ್ಲಿ ಇದು ಮನುಷ್ಯನ ಕೆಲಸವನ್ನೇ ಕಸಿದುಕೊಳ್ಳುತ್ತಿದೆ.
ಇಂದು ಪ್ರಪಂಚದಾದ್ಯಂತ ಕೋಟ್ಯಂತರ ಜನರು ಎಐ ಬಳಸುತ್ತಿದ್ದಾರೆ. ಅದರಲ್ಲೂ ಚಾಟ್ಜಿಪಿಟಿ, ಕ್ಲೌಡ್, ಗ್ರೋಕ್ ಮತ್ತು ಗೂಗಲ್ ಜೆಮಿನಿಯಂತಹ ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್‌ಗಳನ್ನು ಪ್ರತಿನಿತ್ಯ ಬಳಸುತ್ತಿದ್ದಾರೆ. ತಮಗೆ ಎದುರಾಗುವ ಸಣ್ಣ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಲು ಎಐ ಚಾಟ್‌ಬಾಟ್ ಮೊರೆ ಹೋಗುತ್ತಿದ್ದಾರೆ. ಆದರೆ, ಇದೀಗ ಬಂದಿರುವ ಆಘಾತಕಾರಿ ಸಂಗತಿ ಏನೆಂದರೆ, ಈ ಎಐ ಚಾಟ್‌ಬಾಟ್‌ಗಳು ಜನರನ್ನು ತಪ್ಪು ಆಲೋಚನೆಗಳಿಗೆ ದೂಡುತ್ತಿವೆಯಂತೆ! ಇದನ್ನು ಸ್ವತಃ ಸಂಶೋಧಕರೇ ಕಂಡುಕೊಂಡಿದ್ದಾರೆ.
ಹೌದು, ಅಮೆರಿಕದ MIT ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ನಡೆಸಿದ ಹೊಸ ಅಧ್ಯಯನಗಳು ಆಘಾತಕಾರಿ ಮಾಹಿತಿ ಬಹಿರಂಗಪಡಿಸಿವೆ. ಚಾಟ್‌ಬಾಟ್‌ಗಳು ಪ್ರಸ್ತುತ ಮನುಷ್ಯರು ಹೇಳುವ ಯಾವುದೇ ವಿಷಯವನ್ನು ಬೆಂಬಲಿಸುವ ಮಾದರಿಯನ್ನು ಅನುಸರಿಸುತ್ತವೆ. ಒಬ್ಬ ವ್ಯಕ್ತಿಯು ಏನಾದರೂ ತಪ್ಪು ಅಥವಾ ಅವೈಜ್ಞಾನಿಕವಾದದ್ದನ್ನು ನಂಬಿ, ಅದನ್ನು ಚಾಟ್‌ಬಾಟ್‌ನೊಂದಿಗೆ ಹಂಚಿಕೊಂಡರೆ, ಅದನ್ನು ಸರಿಪಡಿಸುವ ಬದಲು, ಚಾಟ್‌ಬಾಟ್‌ಗಳು 'ನೀವು ಹೇಳಿದ್ದು ಸರಿ' ಎಂಬಂತೆಯೇ ಪ್ರತ್ಯುತ್ತರಗಳನ್ನು ನೀಡುತ್ತವೆ. ಜನರು ಚಾಟ್‌ಬಾಟ್‌ಗಳಿಂದ ಅಂತಹ ಮಾಹಿತಿಯನ್ನು ಪಡೆದಾಗ, ಅವರು ತಮ್ಮ ತಪ್ಪು ಚಿಂತನೆ ಮತ್ತು ದೃಷ್ಟಿಕೋನದಲ್ಲಿ ಹೆಚ್ಚು ಬೇರೂರುತ್ತಾರೆ. ಇದರಿಂದ ಅವರಲ್ಲಿ ಕುರುಡು ನಂಬಿಕೆ ಹೆಚ್ಚಾಗುತ್ತವೆ ಎಂದು ಅಧ್ಯಯನಗಳು ತೋರಿಸುತ್ತವೆ. ಸಂಶೋಧಕರು ಇದನ್ನು ಭ್ರಮೆಯ ಸುರುಳಿ ( delusion spiral ) ಎಂದು ಕರೆಯುತ್ತಾರೆ.
ಮಾನವರು ಸಾಮಾನ್ಯವಾಗಿ ಒಪ್ಪದ ಸುಳ್ಳು ಹೇಳಿಕೆಗಳನ್ನು ಚಾಟ್‌ಬಾಟ್‌ಗಳು ಶೇ. 49 ರಷ್ಟು ಹೆಚ್ಚು ಒಪ್ಪುತ್ತವೆ. AI ಯಿಂದ ಸುಳ್ಳು ಮಾಹಿತಿಯನ್ನು ಪಡೆಯುವುದರಿಂದ ನಿಜ ಜೀವನದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಾನವರ ಆಸಕ್ತಿ ಕಡಿಮೆಯಾಗುತ್ತದೆ ಎಂದು ಅಧ್ಯಯನವು ಸೂಚಿಸುತ್ತದೆ. ವೈಜ್ಞಾನಿಕವಾಗಿ ಸುಳ್ಳು ಎಂದು ಸಾಬೀತಾಗಿರುವ ವಿಷಯಗಳನ್ನೂ ಸರಿ ಎಂದು ವಾದಿಸುವ ಮೂಲಕ ಮನುಷ್ಯರನ್ನು ದಾರಿ ತಪ್ಪಿಸುವುದು AI ನ ಉದ್ದೇಶವಾಗಿದೆ.
ಅಂದಹಾಗೆ, ಶತಕೋಟಿ ಜನರಲ್ಲಿ ಶೇ. 0.1 ರಷ್ಟು ಜನರ ಮೇಲೆ ಪರಿಣಾಮ ಬೀರಿದರೂ, ಅದು ಒಂದು ಮಿಲಿಯನ್ ಜನರ ಮೇಲೆ ಪರಿಣಾಮ ಬೀರುವುದಕ್ಕೆ ಸಮಾನ ಎಂದು ಅಧ್ಯಯನ ಹೇಳುತ್ತದೆ. ಸ್ಟ್ಯಾನ್‌ಫೋರ್ಡ್ ಅಧ್ಯಯನವು ವಿಶ್ವದ 11 ಪ್ರಮುಖ AI ಮಾದರಿಗಳನ್ನು ಪರೀಕ್ಷಿಸಿದೆ. ಇವುಗಳಲ್ಲಿ, ಮೆಟಾದ ಲಾಮಾ, ಮಿಸ್ಟ್ರಾಲ್ ಮತ್ತು ಡೀಪ್‌ಸೀಕ್‌ನಂತಹ ಪ್ರಮುಖ ಎಐ ಚಾಟ್‌ಬಾಟ್ ಮಾದರಿಗಳು ಈ ರೀತಿಯ ನಡವಳಿಕೆಯನ್ನು ಪ್ರದರ್ಶಿಸುತ್ತಿರುವುದು ಕಂಡುಬಂದಿದೆ. ರೆಡ್ಡಿಟ್ ಫೋರಮ್‌ನಿಂದ ಸುಮಾರು 12,000 ಪ್ರಶ್ನೆಗಳನ್ನು ಬಳಸಿಕೊಂಡು ಈ ಚಾಟ್‌ಬಾಟ್‌ಗಳ ನಿಖರತೆಯನ್ನು ಪರೀಕ್ಷಿಸಲಾಯಿತು.
ಟೆಕ್ ದೈತ್ಯ ಎಲಾನ್ ಮಸ್ಕ್ ಕೂಡ ಈ ಅಧ್ಯಯನ ವರದಿಗಳಿಗೆ ಪ್ರತಿಕ್ರಿಯಿಸಿದ್ದಾರೆ. ನಿಜಕ್ಕೂ ಇದೊಂದು ಗಂಭೀರ ಸಮಸ್ಯೆ ಎಂದು ಹೇಳಿದ್ದಾರೆ. ಆದಾಗ್ಯೂ, ಮಸ್ಕ್‌ನ AI ಚಾಟ್‌ಬಾಟ್, 'ಗ್ರೋಕ್' ಈ ರೀತಿಯ ನಡವಳಿಕೆಯನ್ನು ಪ್ರದರ್ಶಿಸುತ್ತದೆಯೇ ಎಂಬುದನ್ನು ಅಧ್ಯಯನಗಳು ಇನ್ನೂ ಪರಿಶೀಲಿಸಿಲ್ಲ. AI ಕಂಪನಿಗಳು ತಮ್ಮ ಚಾಟ್‌ಬಾಟ್‌ಗಳ ಅತಿಯಾದ ಅಧೀನತೆಯನ್ನು ಕಡಿಮೆ ಮಾಡದಿದ್ದರೆ, ತರ್ಕಬದ್ಧ ಮಾನವರು ಸಹ ಮಾನಸಿಕ ಗೊಂದಲಕ್ಕೆ ಒಳಗಾಗಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ, (ಏಜೆನ್ಸೀಸ್).