ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್
- ಪಾಕಿಸ್ತಾನದ ಆಡಳಿತದಲ್ಲಿ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮಿತಿ ಮೀರಿದ ಹಸ್ತಕ್ಷೇಪ
- ನನ್ನ ಬಾಸ್ ಅಸಿಮ್ ಮುನೀರ್ ಅಲ್ಲ; ಶಹಬಾಜ್ ಷರೀಫ್ ಎಂದ ರಕ್ಷಣಾ ಸಚಿವ ಖ್ವಾಜಾ ಆಸಿಫ್
- ಇದು ಪಾಕಿಸ್ತಾನದಲ್ಲಿ ಮಿಲಿಟರಿ ದಂಗೆಗೆ ಕಾರಣವಾಗಬಹುದು ಎಂದ ರಾಜಕೀಯ ವಿಶ್ಲೇಷಕರು
ಪಾಕಿಸ್ತಾನ: ಪಾಕಿಸ್ತಾನವು ತನ್ನ ಮಿಲಿಟರಿ ನಿಯಂತ್ರಿತ ಆಡಳಿತದ ಮೂಲಕ ಜಗತ್ತಿನಲ್ಲಿ ಕುಖ್ಯಾತಿಯನ್ನು ಗಳಿಸಿದೆ. ಪಾಕಿಸ್ತಾನದ ಮುಖ್ಯ ಆಡಳಿತಗಾರ ಪ್ರಧಾನ ಮಂತ್ರಿಯಾಗಿದ್ದರೂ ಸಹ ಸೇನಾ ಮುಖ್ಯಸ್ಥ ಮಿಲಿಟರಿ ಆಡಳಿತದ ಹೊರತಾಗಿ ಉಳಿದ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುವ ಸುದ್ದಿಗಳನ್ನು ನಾವು ಕೇಳುತ್ತಾ ಇರುತ್ತೇವೆ.
ಆದರೆ ಪ್ರಸ್ತುತ ಪಾಕಿಸ್ತಾನದ ರಾಜಕೀಯದಲ್ಲಿ ಪ್ರಧಾನಿ ಶಹಬಾಜ್ ಷರೀಫ್ ಅವರ ಆಡಳಿತದಲ್ಲಿ, ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ (Asim Munir) ಅವರ ಹಸ್ತಕ್ಷೇಪ ಮಿತಿಮೀರುತ್ತಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗಿನ ರಾಜಕೀಯ ಸಭೆಗೆ ಒಬ್ಬರೇ ತೆರಳುವ ಮೂಲಕ ಪಾಕಿಸ್ತಾನದಲ್ಲಿ ಪ್ರಧಾನ ಮಂತ್ರಿಯದ್ದು ಎರಡನೇ ದರ್ಜೆಯ ಸ್ಥಾನ ಎನ್ನುವ ರೀತಿ ವರ್ತಿಸುತ್ತಿದ್ದಾರೆ.
ಅಸಿಮ್ ಮುನೀರ್ ಅವರ ಈ ನಡುವಳಿಕೆಗಳಿಗೆ ಪಾಕಿಸ್ತಾನದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು, ಇತ್ತೀಚೆಗೆ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್, ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ನನ್ನ ಬಾಸ್ ಅಲ್ಲ ಎನ್ನುವ ಹೇಳಿಕೆ ನೀಡುವ ಮೂಲಕ ಮುಂದೆ ಎದುರಾಗಬಹುದಾದ ದಂಗೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮುನೀರ್ ಪಾಕಿಸ್ತಾನ ಸರ್ಕಾರವನ್ನು ನಡೆಸುತ್ತಿದ್ದಾರೆಯೇ?
ಖಾಸಗಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ಗೆ, ಟ್ರಂಪ್ ಅವರ ನೆಚ್ಚಿನ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಪಾಕಿಸ್ತಾನದ ಸರ್ಕಾರವನ್ನು ನಡೆಸುತ್ತಿದ್ದಾರೆ? ಎಂದು ಹೇಳಲಾಗುತ್ತದೆ. ಇದರ ಬಗ್ಗೆ ನೀವು ಏನು ಹೇಳುತ್ತಿರಿ ಎಂದು ಕೇಳಿದಾಗ, ಆಸಿಫ್, ನಮ್ಮ ದೇಶದ ಇತಿಹಾಸವನ್ನು ನೋಡಿದಾಗ ಸರ್ಕಾರದ ಮೇಲೆ ಮಿಲಿಟರಿ ಮುಖ್ಯಸ್ಥರ ಹಿಡಿತ ಇರುವುದು ಕಂಡುಬರುತ್ತದೆ. ಹಾಗೆಂದ ಮಾತ್ರಕ್ಕೆ ಪ್ರಧಾನಿ ಮತ್ತು ಅವರ ಸಚಿವರು ಕೈಕಟ್ಟಿ ಕುಳಿತಿರುತ್ತಾರೆ ಎಂದಲ್ಲ ಎಂದು ಅವರು ಉತ್ತರಿಸಿದ್ದಾರೆ.
ಅಸಿಮ್ ಮುನೀರ್ ನನ್ನ ಬಾಸ್ ಅಲ್ಲ: ಖ್ವಾಜಾ ಆಸಿಫ್
ಇನ್ನೂ ಪಾಕಿಸ್ತಾನ ಮಿಲಿಟರಿ ನಿಯಂತ್ರಣದಲ್ಲಿದಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಖ್ವಾಜಾ ಆಸಿಫ್, ಇಂದಿನ ಪರಿಸ್ಥಿತಿ ಬೇರೆ ರೀತಿಯಲ್ಲಿದೆ, ಪ್ರಸ್ತುತ ನಾವು ಅಫ್ಘಾನಿಸ್ತಾನದ ಭಯೋತ್ಪಾದನೆ ಮತ್ತು ಭಾರತದ ಆರ್ಥಿಕ ಬೆದರಿಕೆಗಳನ್ನು ಎದುರಿಸುತ್ತಿರುವ ಕಾರಣ ಸೇನೆ ನಮ್ಮ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಬೇಕಾಗಿದೆ ಎಂದರು. ಈ ಉತ್ತರಕ್ಕೆ ಮರು ಪ್ರಶ್ನೆಯಾಗಿ, ಹಾಗಾದರೇ ನಿಮ್ಮ ಬಾಸ್ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅಲ್ಲವೇ? ಎಂದು ಕೇಳಿದಾಗ, ಇಲ್ಲ ನನ್ನ ಬಾಸ್ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅಲ್ಲ, ಪ್ರಧಾನಿ ಶಹಬಾಜ್ ಷರೀಫ್ ನನ್ನ ಬಾಸ್ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಉತ್ತರಿಸಿದರು.
ಹೇಳಿಕೆ ಕುರಿತು ಫುಲ್ ಚರ್ಚೆ
ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರ ಈ ಹೇಳಿಕೆ ಈದೀಗ ಜಾಗತಿಕ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಪಾಕಿಸ್ತಾನದ ಹುಟ್ಟಿನಿಂದ ಆಡಳಿತದ ಮೇಲೆ ಸೇನಾ ಮುಖ್ಯಸ್ಥರು ಹಿಡಿತದ ಜತೆಗೆ ಭಯವನ್ನು ಇಟ್ಟುಕೊಂಡು ಬಂದಿದ್ದಾರೆ. ಈದೀಗ ಖ್ವಾಜಾ ಆಸಿಫ್ ಅವರ ಈ ಹೇಳಿಕೆ ಪಾಕಿಸ್ತಾನದಲ್ಲಿ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರ ಪ್ರಭಾವ ಕಡಿಮೆಯಾಗಿದೆ ಮತ್ತು ಮುದೊಂದು ದಿನ ಪಾಕಿಸ್ತಾನ ಮಿಲಿಟರಿ ಆಡಳಿತದಿಂದ ಮುಕ್ತಿ ಪಡೆಯಲಿದೆ ಎನ್ನುವುದನ್ನು ಹೇಳುತ್ತಿದೆ ಎಂದು ಕೆಲವು ವಿಶ್ಲೇಷಕರು ಹೇಳಿದರೆ, ಈ ಹೇಳಿಕೆ ಪಾಕಸ್ತಾನದಲ್ಲಿ ನಾಗರಿಕ ದಂಗೆಯನ್ನೂ ಸಹ ಸೃಷ್ಠಿಸಬಹುದು ಎಂದು ಇನ್ನು ಕೆಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ,(ಏಜನ್ಸೀಸ್).