ಹಾರಾಟ ನಡೆಸುವಾಗಲೇ ವಿಮಾನದ ಇಂಜಿನ್​ ಸ್ಫೋಟ ( Plane Engine Explosion ) 
ವಿದೇಶ

ಪೈಲಟ್​ ಅಲ್ಲ ಆತ ದೇವರು...30 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುವಾಗಲೇ ವಿಮಾನದ ಇಂಜಿನ್​ ಸ್ಫೋಟ! Plane Engine Explosion

ಪ್ರಮುಖ ಮುಖ್ಯಾಂಶಗಳು

  • ಆಗಸದಲ್ಲಿ ಹಾರಾಟ ನಡೆಸುವಾಗಲೇ ವಿಮಾನದ ಇಂಜಿನ್ ಇದ್ದಕ್ಕಿದ್ದಂತೆ ಸ್ಫೋಟ
  • ಇತ್ತೀಚೆಗೆ ನೈಜಿರಿಯಾ ದೇಶದಲ್ಲಿ ನಡೆದ ಭೀಕರ ಘಟನೆ
  • ಸುಮಾರು 30 ಸಾವಿರ ಅಡಿ ಎತ್ತರದಲ್ಲಿ ಸ್ಫೋಟಗೊಂಡ ವಿಮಾನದ ಇಂಜಿನ್​
  • ಸುಮಾರು 80 ಮಂದಿ ಪ್ರಯಾಣಿಕರು ಸಂಭವನೀಯ ದುರಂತದಿಂದ ಪಾರು
Plane Engine Explosion : ಆಗಸದಲ್ಲಿ ಹಾರಾಟ ನಡೆಸುವಾಗಲೇ ವಿಮಾನದ ಇಂಜಿನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡ ಘಟನೆ ಇತ್ತೀಚೆಗೆ ನೈಜಿರಿಯಾದಲ್ಲಿ ನಡೆದಿದ್ದು, ಸುಮಾರು 80 ಮಂದಿ ಪ್ರಯಾಣಿಕರು ಸಂಭವನೀಯ ದುರಂತದಿಂದ ಪಾರಾಗಿದ್ದಾರೆ.
ಕಳೆದ ಬುಧವಾರ ನೈಜಿರಿಯಾದ ಲಾಗೋಸ್‌ ನಗರದಿಂದ ಪೋರ್ಟ್ ಹಾರ್ಕೋರ್ಟ್‌ ನಗರಕ್ಕೆ ಅರಿಕ್​ ಏರ್​ ಬೋಯಿಂಗ್​ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಸುಮಾರು 30 ಸಾವಿರ ಅಡಿ ಎತ್ತರದಲ್ಲಿ ಈ ಘಟನೆ ನಡೆದಿದೆ.
ಆಗಸದಲ್ಲಿ ವಿಮಾನ ಸರಾಗವಾಗಿ ಹಾರಾಟ ನಡೆಸುತ್ತಿದ್ದಾಗ ಇದ್ದಕ್ಕಿದ್ದಂತೆ ಇಂಜಿನ್ ಸ್ಫೋಟಗೊಂಡಿತು. ಇದರ ಪರಿಣಾಮ ವಿಮಾನವು ಒಂದು ಕ್ಷಣ ಅಲುಗಾಡಿತು. ಇದರಿಂದಾಗಿ ವಿಮಾನದಲ್ಲಿದ್ದ ಪ್ರಯಾಣಿಕರು ಭಯದಿಂದ ಕೂಗಾಡಲು ಆರಂಭಿಸಿದರು. ಏನಾಗುತ್ತದೋ ಅನ್ನೋ ಭಯ ಪ್ರಯಾಣಿಕರನ್ನು ಆವರಿಸಿತ್ತು. ಈ ವೇಳೆ ಅನೇಕ ಪ್ರಯಾಣಿಕರು ತಮ್ಮ ಮೊಬೈಲ್​ ತೆಗೆದುಕೊಂಡು ಆ ಕ್ಷಣವನ್ನು ವಿಡಿಯೋ ರೆಕಾರ್ಟ್​ ಮಾಡಲು ಆರಂಭಿಸಿದರು. ಇನ್ನು ಕೆಲವರು ತಮ್ಮಿಷ್ಟದ ದೇವರುಗಳನ್ನು ಬೇಡಿಕೊಳ್ಳಲು ಶುರು ಮಾಡಿದರು.
ಇಂಜಿನ್​ ಸ್ಫೋಟದಿಂದಾಗಿ ಪ್ರಯಾಣಿಕರು ಜೀವ ಭಯದಲ್ಲಿ ನಡಗುವಾಗ, ಪೈಲಟ್ ಮಾತ್ರ ಸ್ವಲ್ಪವೂ ಎದೆಗುಂದದೆ ತಮ್ಮ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾದರು.
ಇಂಜಿನ್ ಸ್ಫೋಟಗೊಂಡಿದೆ ಎಂದು ಅರಿವಾದ ತಕ್ಷಣ, ತುರ್ತಾಗಿ ವಿಮಾನವನ್ನು ಬೆನಿನ್ ವಿಮಾನ ನಿಲ್ದಾಣಕ್ಕೆ ಪೈಲಟ್​ ತಿರುಗಿಸಿದರು. ಕಠಿಣ ಪರಿಸ್ಥಿತಿಗಳ ಹೊರತಾಗಿಯೂ, ವಿಮಾನವು ಬೆನಿನ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್​ ಆಯಿತು. ಇದು ಗೊತ್ತಾಗುತ್ತಿದ್ದಂತೆ ಒಳಗಿದ್ದ ಎಲ್ಲಾ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಪ್ರಯಾಣಿಕರಲ್ಲಿ ಯಾವುದೇ ಸಾವುನೋವುಗಳು ಸಂಭವಿಸದ ಕಾರಣ ಪೈಲಟ್ ಅವರ ಜಾಣ್ಮೆಯನ್ನು ಎಲ್ಲರೂ ಶ್ಲಾಘಿಸಿದರು.
ಇನ್ನೂ ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವಿಮಾನವು ಆಗಸದಲ್ಲಿ ಹಾರಾಟ ನಡೆಸುವಾಗ ಇಂಜಿನ್‌ನಿಂದ ಬೆಂಕಿಯ ಜ್ವಾಲೆಗಳು ಬರುತ್ತಿರುವುದನ್ನು ಪ್ರಯಾಣಿಕರು ತಮ್ಮ ಫೋನ್‌ಗಳಲ್ಲಿ ಚಿತ್ರೀಕರಿಸಿದ್ದಾರೆ. ಈ ವಿಡಿಯೋ ಇದೀಗ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಅಲ್ಲದೆ, ಪೈಲಟ್​ನ ಜಾಣ್ಮೆಗೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ.
ಅಂದಹಾಗೆ, ವಿಮಾನಯಾನ ಅಧಿಕಾರಿಗಳು ಈ ಅಪಘಾತದ ಬಗ್ಗೆ ಸಂಪೂರ್ಣ ತನಿಖೆಗೆ ಆದೇಶಿಸಿದ್ದಾರೆ. ಇದು ತಾಂತ್ರಿಕ ದೋಷವೋ ಅಥವಾ ಬೇರೆ ಯಾವುದಾದರೂ ಕಾರಣದಿಂದ ಇದು ಸಂಭವಿಸಿದೆಯೋ ಎಂದು ತಿಳಿಯಲು ತನಿಖೆ ನಡೆಸುತ್ತಿದ್ದಾರೆ, (ಏಜೆನ್ಸೀಸ್​).