ಹಾರ್ಮುಜ್ ಜಲಸಂಧಿಯ ರಕ್ಷಣೆಗೆ ಅಮೆರಿಕ ನಕಾರ! ಮಿತ್ರರಾಷ್ಟ್ರಗಳಿಗೆ ಟ್ರಂಪ್ ನೀಡಿದ ಆ ಒಂದು ಖಡಕ್ ಎಚ್ಚರಿಕೆ ಏನು?
ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ 34ನೇ ದಿನಕ್ಕೆ ಕಾಲಿಟ್ಟ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಗುರುವಾರ (ಏ.2) ರಾಷ್ಟ್ರವನ್ನುದ್ದೇಶಿಸಿ ಮಹತ್ವದ ಭಾಷಣ ಮಾಡಿದ್ದಾರೆ. ಇರಾನ್ ಸೇನಾ ಶಕ್ತಿ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಅವರ ನಾಯಕತ್ವ ಮತ್ತು ರಕ್ಷಣಾ ಮೂಲಸೌಕರ್ಯಗಳನ್ನು ಅಮೆರಿಕದ ಪಡೆಗಳು ವ್ಯವಸ್ಥಿತವಾಗಿ ಧ್ವಂಸಗೊಳಿಸಿವೆ ಎಂದು ಟ್ರಂಪ್ ಘರ್ಜಿಸಿದ್ದಾರೆ.
ಕೇವಲ ಹದಿನೈದು ದಿನಗಳ ಅಂತರದಲ್ಲಿ ಇರಾನ್ ಮೇಲೆ ಇನ್ನಷ್ಟು ತೀವ್ರತರವಾದ ದಾಳಿ ನಡೆಸುವುದಾಗಿ ಎಚ್ಚರಿಸಿದ ಟ್ರಂಪ್, ಇರಾನ್‌ನ ವಿದ್ಯುತ್ ಸ್ಥಾವರಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯಗಳ ಮೇಲೆ ಅಮೆರಿಕ ಕಣ್ಣಿಟ್ಟಿದೆ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಇರಾನ್ ಸೇನೆ ಈಗ ಅವಶೇಷಗಳ ರಾಶಿ’
ತಮ್ಮ ಆವೇಶಭರಿತ ಭಾಷಣದಲ್ಲಿ ಟ್ರಂಪ್, ಇರಾನ್‌ನ ನೌಕಾಪಡೆ ಮತ್ತು ವಾಯುಪಡೆಯ ಸಾಮರ್ಥ್ಯವನ್ನು ಬಹುತೇಕ ಶೂನ್ಯಕ್ಕೆ ಇಳಿಸಲಾಗಿದೆ ಎಂದು ಘೋಷಿಸಿದ್ದಾರೆ.
ಇಂದು ರಾತ್ರಿ ನಾನು ಹೆಮ್ಮೆಯಿಂದ ಹೇಳುತ್ತಿದ್ದೇನೆ, ಇರಾನ್ ನೌಕಾಪಡೆ ನಾಮಾವಶೇಷವಾಗಿದೆ. ಅವರ ವಾಯುಪಡೆ ಹರಿದು ಹಂಚಿಹೋಗಿದೆ. ಅವರ ಹೆಚ್ಚಿನ ನಾಯಕರು ಈಗ ಮಣ್ಣು ಸೇರಿದ್ದಾರೆ ಎಂದ ಟ್ರಂಪ್, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಕಮಾಂಡ್ ವ್ಯವಸ್ಥೆಯು ಸಂಪೂರ್ಣವಾಗಿ ನಾಶವಾಗುತ್ತಿದೆ ಎಂದು ತಿಳಿಸಿದರು.
ಕ್ಷಿಪಣಿ ಮತ್ತು ಡ್ರೋನ್ ಉಡಾವಣಾ ಕೇಂದ್ರಗಳನ್ನು ಧ್ವಂಸಗೊಳಿಸಲಾಗಿದ್ದು, ಇರಾನ್ ಈಗ ದಾಳಿ ಮಾಡುವ ಶಕ್ತಿಯನ್ನು ಕಳೆದುಕೊಂಡಿದೆ. ನಮ್ಮ ಶತ್ರುಗಳು ಸೋಲುತ್ತಿದ್ದಾರೆ. ಅಮೆರಿಕ ಗೆಲ್ಲುತ್ತಿದೆ, ಹಿಂದೆಂದಿಗಿಂತಲೂ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತಿದೆ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತೈಲಕ್ಕಾಗಿ ಪರಾವಲಂಬನೆಯಿಲ್ಲ: ಮಿತ್ರರಾಷ್ಟ್ರಗಳಿಗೆ ಖಡಕ್ ಎಚ್ಚರಿಕೆ
ಮಧ್ಯಪ್ರಾಚ್ಯದ ತೈಲದ ಮೇಲೆ ಅಮೆರಿಕ ಅವಲಂಬಿತವಾಗಿಲ್ಲ ಎಂಬ ಅಂಶವನ್ನು ಟ್ರಂಪ್ ಪುನರುಚ್ಚರಿಸಿದರು. ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹೋರ್ಮುಜ್ ಜಲಸಂಧಿಯ ರಕ್ಷಣೆಯ ಹೊಣೆಯನ್ನು ಇತರ ರಾಷ್ಟ್ರಗಳೇ ಹೊರಬೇಕು ಎಂದು ಟ್ರಂಪ್ ಕರೆ ನೀಡಿದ್ದಾರೆ.
ನಮ್ಮ ಮಿತ್ರರಾಷ್ಟ್ರಗಳು ಈ ಜಲಸಂಧಿಯನ್ನು ರಕ್ಷಿಸಿಕೊಳ್ಳುವ ಧೈರ್ಯ ತೋರಿಸಬೇಕು. ಅಮೆರಿಕ ತನ್ನ ಮಿತ್ರರ ಹಿತರಕ್ಷಣೆಗೆ ಸದಾ ಸಿದ್ಧವಿದೆ, ಆದರೆ ಜಾಗತಿಕ ಭದ್ರತೆಯ ಜವಾಬ್ದಾರಿಯನ್ನು ಎಲ್ಲರೂ ಹಂಚಿಕೊಳ್ಳಬೇಕು ಎಂದು ಹೇಳುವ ಮೂಲಕ ಅಮೆರಿಕದ ವಿದೇಶಾಂಗ ನೀತಿಯಲ್ಲಿನ ಮಹತ್ವದ ಬದಲಾವಣೆಯನ್ನು ಯುಎಸ್ ಅಧ್ಯಕ್ಷ ಸೂಚಿಸಿದ್ದಾರೆ.
ಅಣ್ವಸ್ತ್ರದ ಹಾದಿಗೆ ಬ್ರೇಕ್: ಹಳೆಯ ನೀತಿಗಳಿಗೆ ಟೀಕೆ
ತಮ್ಮ ಭಾಷಣದುದ್ದಕ್ಕೂ ಇರಾನ್ ವಿರುದ್ಧ ಕಠಿಣ ನಿಲುವು ತಳೆದ ಟ್ರಂಪ್, ಇರಾನ್ ಯಾವುದೇ ಕಾರಣಕ್ಕೂ ಅಣ್ವಸ್ತ್ರಗಳನ್ನು ಹೊಂದಲು ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಈ ಸಂದರ್ಭದಲ್ಲಿ ಅವರು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಅವಧಿಯಲ್ಲಿ ನಡೆದ ಇರಾನ್ ಅಣ್ವಸ್ತ್ರ ಒಪ್ಪಂದವನ್ನು ತೀವ್ರವಾಗಿ ಟೀಕಿಸಿದ್ದಾರೆ.
ಹಿಂದಿನ ಅಧ್ಯಕ್ಷರು ಮಾಡಿದ ತಪ್ಪುಗಳನ್ನು ನಾನು ಸರಿಪಡಿಸುತ್ತಿದ್ದೇನೆ. ಕಾಸೆಮ್ ಸುಲೈಮಾನಿಯ ಹತ್ಯೆ ಮತ್ತು ಪರಮಾಣು ಒಪ್ಪಂದದಿಂದ ಹೊರಬಂದ ನಿರ್ಧಾರಗಳು ಅಮೆರಿಕದ ಹಿತದೃಷ್ಟಿಯಿಂದ ಅನಿವಾರ್ಯವಾಗಿದ್ದವು. ಈ ಕೆಲಸವನ್ನು ಬೇರೆ ಯಾವ ಅಧ್ಯಕ್ಷರೂ ಮಾಡಲು ಧೈರ್ಯ ತೋರಲಿಲ್ಲ ಎಂದು ಟ್ರಂಪ್ ತಮ್ಮ ಹಳೆಯ ನಿರ್ಧಾರಗಳನ್ನು ಸಮರ್ಥಿಸಿಕೊಂಡಿದ್ದಾರೆ.
ಮುಂದಿನ ಹೆಜ್ಜೆ: 'ಫಿನಿಶ್ ದಿ ಜಾಬ್'
ಮುಂಬರುವ ಎರಡು ಮೂರು ವಾರಗಳಲ್ಲಿ ಇರಾನ್ ಮೇಲಿನ ಕಾರ್ಯಾಚರಣೆಯನ್ನು ತೀವ್ರಗೊಳಿಸುವ ಮೂಲಕ ಈ ಸಂಘರ್ಷಕ್ಕೆ ತುರ್ತು ಅಂತ್ಯ ಹಾಡುವುದಾಗಿ ಟ್ರಂಪ್ ತಿಳಿಸಿದ್ದಾರೆ. ಅಮೆರಿಕದ ಪಡೆಗಳು ಅತ್ಯಂತ ನಿಖರವಾಗಿ ಶತ್ರುಗಳ ತಾಣಗಳನ್ನು ಗುರಿ ಮಾಡುತ್ತಿದ್ದು, ಇರಾನ್‌ನ ಆಡಳಿತ ವ್ಯವಸ್ಥೆಯನ್ನು ಹಳಿತಪ್ಪಿಸುವುದೇ ಅಮೆರಿಕದ ಏಕೈಕ ಗುರಿ ಎಂಬುದು ಈ ಭಾಷಣದಿಂದ ಸ್ಪಷ್ಟವಾಗಿದೆ,(ಏಜೆನ್ಸೀಸ್).