Powerball Tickets: ಕೆಲವೊಮ್ಮೆ ಸಣ್ಣ ಆಕಸ್ಮಿಕಗಳು, ಕಹಿ ಘಟನೆಗಳು ಆ ಕ್ಷಣಕ್ಕೆ ವಿಪರೀತ ನೋವು ಕೊಟ್ಟರೂ ಮುಂದೆ ಒಂದೊಳ್ಳೆ ಸಮಯ ನಿನಗಾಗಿ ಕಾದಿದೆ ಎಂಬುದನ್ನು ಪರೋಕ್ಷವಾಗಿ ಹೇಳುತ್ತವೆ. ಆದ್ರೆ, ಆ ಸಂದರ್ಭಕ್ಕೆ ನಮಗಿದು ಅರ್ಥವಾಗೋದಿಲ್ಲ. ಆಶ್ಚರ್ಯ ಎಂದರೆ, ಇದು ನಿಜವಾಗಿದಾಗಲೂ ನಮಗೆ ತಿಳಿಯುವುದಿಲ್ಲ. ಒಮ್ಮೊಮ್ಮೆ ಕೊರತೆಗಳೇ ಜೀವನದ ಅತಿದೊಡ್ಡ ಅದೃಷ್ಟ ಬಾಗಿಲನ್ನು ಓಪನ್ ಮಾಡುತ್ತವೆ ಎಂಬುದಕ್ಕೆ ಅಮೆರಿಕದಲ್ಲಿ ನಡೆದ ಈ ರೋಚಕ ಘಟನೆಯೇ ಜ್ವಲಂತ ಸಾಕ್ಷಿ.
ತನ್ನ ನೆಚ್ಚಿನ ಕೂಲ್ ಡ್ರಿಂಕ್ಸ್ ಖರೀದಿಸಲು ಆಸೆಗೆ ಬಿದ್ದ ವ್ಯಕ್ತಿಯೊಬ್ಬ, ಅಂಗಡಿಗೆ ಹೋಗುವ ಮುನ್ನವೇ ಪರ್ಸ್ ನೋಡಿಕೊಳ್ಳುವ ಬದಲು ಜ್ಯೂಸ್ ಕೊಂಡು ಬಳಿಕ ಪರ್ಸ್‌ನಲ್ಲಿ ಚಿಲ್ಲರೆ ಹಣಕ್ಕೆ ಪರದಾಡಿದರು. ಅಂಗಡಿಯ ಕ್ಯಾಷಿಯರ್ ಮುಂದೆ ತೀವ್ರ ಮುಜುಗರಕ್ಕೀಡಾದ ಸಂದರ್ಭದಲ್ಲಿ, ನನ್ನ ಪರ್ಸ್‌ನಲ್ಲಿ ಹಣವಿಲ್ಲ. ಬದಲಿಗೆ ಯಾವುದೋ ಹಳೆಯ ಲಾಟರಿಗಳಿವೆ. ಇದರಲ್ಲಿ ಚಿಲ್ಲರೆ ಕಾಸು ಸಿಗಬಹುದಾ ನೋಡಿ ಎಂದು ಕೇಳಿಕೊಂಡಿದ್ದಾರೆ. ಈ ಟಿಕೆಟ್ ಸ್ಕ್ಯಾನ್ ಮಾಡಿದ ಮಾಲೀಕರಿಗೆ ಈತ ಕ್ಷಣಮಾತ್ರದಲ್ಲಿ ಕೋಟ್ಯಾಧಿಪತಿ ಆದ ಎಂಬ ಸಂಗತಿ ತಿಳಿದು ಕೆಲ ನಿಮಿಷ ಭಾರಿ ಅಚ್ಚರಿಗೆ ಒಳಗಾದರು.
ಟಿಕೆಟ್‌ನ ಸ್ಕ್ಯಾನ್ ಮಾಡಿದಾಗ ಅದರಲ್ಲಿ ಬರೊಬ್ಬರಿ 1 ಮಿಲಿಯನ್ (ಅಂದಾಜು 9.48 ಕೋಟಿ ರೂ.) ಲಾಟರಿ ಗೆದ್ದಿರುವ ವಿಚಾರ ಬೆಳಕಿಗೆ ಬಂದಿದೆ. ಈ ವಿಷಯ ತಿಳಿದ ಕೂಡಲೇ ಮೈಕಲ್ ವಾಂಡರ್ ಲಗ್ ಖುಷಿಗೆ ಕೊನೆಯೇ ಇರಲಿಲ್ಲ. ಇದು ನಿಜವೋ ಅಥವಾ ತಮಾಷೆ ಮಾಡುತ್ತಿದ್ದಾರೋ ಎಂದು ಆರಂಭದಲ್ಲಿ ನಂಬುವುದೇ ಅವರಿಗೆ ಕಷ್ಟವಾಗಿತ್ತು. ದಿನಸಿ ಅಂಗಡಿಗೆ ದುಡ್ಡಿಲ್ಲದೇ ಬಂದಿದ್ದಕ್ಕೂ 9.8 ಕೋಟಿ ರೂ. ಒಡೆಯನಾದ ಬಗ್ಗೆ ತಿಳಿದ ಮೈಕಲ್ ಸಂಭ್ರಮಕ್ಕೆ ಕೊನೆಯೇ ಇಲ್ಲ ಎನ್ನುವಂತಾಗಿದೆ.
ಆ ಟಿಕೆಟ್‌ಗಳನ್ನು ಸ್ಕ್ಯಾನ್ ಮಾಡಿದಾಗ, ಅದರಲ್ಲಿ ಒಂದಕ್ಕೆ "ಮಿಚಿಗನ್ ಲಾಟರಿ ಕಚೇರಿಗೆ ತೆರಳಿ ನೇರವಾಗಿ ಕ್ಲೇಮ್ ಮಾಡಿ" ಎಂಬ ಸಂದೇಶವನ್ನು ಚೀಟಿಯ ಮೇಲೆ ಬರೆಯಲಾಗಿತ್ತು. ಇದೇನೆಂದು ಚೆಕ್ ಮಾಡಿದಾಗ, ವಾಂಡರ್ ಲಗ್ ಅವರು ಈ ವರ್ಷದ ಆಗಸ್ಟ್ 8ರಂದು ಪಾವರ್‌ಬಾಲ್ ಲಾಟರಿ ಡ್ರಾದಲ್ಲಿ 5 ಮುಖ್ಯ ಸಂಖ್ಯೆಗಳನ್ನು (05, 09, 35, 54, 63) ಸರಿಯಾಗಿ ಹೊಂದಿಸಿ 9.48 ಕೋಟಿ ಮೊತ್ತದ ಬಂಪರ್ ಬಹುಮಾನ ಗೆದ್ದಿರುವ ವಿಷಯ ತಿಳಿಯಿತು ಎಂದು ಕ್ಯಾಷಿಯರ್ ತಿಳಿಸಿದ್ದಾರೆ.
ಆಗಸ್ಟ್ 8ರಂದು 'ಬಿಗ್ ಟಾಪ್ ಮಾರ್ಕೆಟ್'ನಲ್ಲಿ ಖರೀದಿಸಿದ್ದ ಈ ಲಾಟರಿ ಟಿಕೆಟ್‌ನ ರಿಸಲ್ಟ್ ಬಗ್ಗೆ ಹೆಚ್ಚು ತಲೆಕಡಿಸಿಕೊಳ್ಳದೆ, ಕಳೆದ ಎರಡು ತಿಂಗಳಿನಿಂದ ಟಿಕೆಟ್ ಅನ್ನು ತಮ್ಮ ಪರ್ಸ್‌ನಲ್ಲೇ ಇಟ್ಟುಕೊಂಡು ಓಡಾಡುತ್ತಿದ್ದರು. ನಾನು ಲಾಟರಿ ಸಂಖ್ಯೆಗಳನ್ನು ನೋಡಿದ ತಕ್ಷಣವೇ ಶಾಕ್ ಆದೆ. ಎರಡು ತಿಂಗಳಿನಿಂದ 1 ಮಿಲಿಯನ್ ಡಾಲರ್ ಮೌಲ್ಯದ ಟಿಕೆಟ್ ನನ್ನ ಪರ್ಸ್‌ನಲ್ಲೇ ಇತ್ತು ಎಂಬುದನ್ನು ನನ್ನಿಂದ ನಂಬಲು ಸಾಧ್ಯವಾಗಲಿಲ್ಲ ಎಂದು ಮೈಕಲ್ ಸಂತಸ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).