Maldives: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಾಲ್ಡೀವ್ಸ್ ಮಾಜಿ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಂಗಳವಾರ(ನ. 03) ವರದಿಯಾಗಿದೆ.
ಈ ಕುರಿತು ಮಾಹಿತಿ ಬಿಡುಗಡೆ ಮಾಡಿರುವ ಮಾಲ್ಡೀವ್ಸ್ ಪೊಲೀಸರು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ನ್ಯಾಯಾಲಯದ ವಾರಂಟ್ ಆಧಾರದ ಮೇಲೆ 64 ವರ್ಷದ ಅಬ್ದುಲ್ಲಾ ಅವರನ್ನು ನವೆಂಬರ್ 2 ರಂದು ರಾತ್ರಿ 9.59ಕ್ಕೆ ಬಂಧಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಅಬ್ದುಲ್ಲಾ ಶಾಹಿದ್ ಅವರು ಈ ಹಿಂದೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾಗಿದ್ದರು. ಮತ್ತು 2028ರಲ್ಲಿ ನಡೆಯಲಿರುವ ಮಾಲ್ಡೀವ್ಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಕ್ಷದ ಪರವಾಗಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡುವ ಸಾಧ್ಯತೆಯಿತ್ತು ಎನ್ನಲಾಗಿದೆ.
ಆದಾಗ್ಯೂ, ಶಾಹಿದ್ ಅವರು ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ. ಮತ್ತು ಆಧಾರರಹಿತ ಆರೋಪಗಳನ್ನು ಮಾಡಲಾಗುತ್ತಿದೆ. ಯಾವುದೇ ರೀತಿ ಅಪಪ್ರಚಾರ ಮಾಡದಂತೆ, ಸುಳ್ಳು ಸುದ್ದಿ ಹರಡದಂತೆ ಕೇಳಿಕೊಂಡಿದ್ದಾರೆ.
ಮಾಲ್ಡೀವ್ಸ್ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ರಾಜಕಾರಣಿಗಳಲ್ಲಿ ಶಾಹಿದ್ ಕೂಡ ಒಬ್ಬರು. ಅವರು 2018 ರಿಂದ 2023 ರವರೆಗೆ ದೇಶದ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಆ ಸಮಯದಲ್ಲಿ, ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅಧ್ಯಕ್ಷರಾಗಿದ್ದರು. ಅವರು 2021-22 ರವರೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ (ಏಜೆನ್ಸೀಸ್).