Earthquake 
ವಿದೇಶ

ವೆನೆಜುವೆಲಾ ಬಳಿಕ ಜಪಾನ್‌ನಲ್ಲೂ ಭೂಮಿ ಕಂಪನ; 7.2 ತೀವ್ರತೆ ದಾಖಲು!

ಟೋಕಿಯೊ (ಜಪಾನ್): ವೆನೆಜುವೆಲಾ ಬಳಿಕ ಜಪಾನ್‌ನ ಉತ್ತರ ಕರಾವಳಿ ಭಾಗದ ಸಮುದ್ರ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಹಲವು ಪ್ರದೇಶಗಳಲ್ಲಿ ಕಂಪನ(Earthquake) ಅನುಭವವಾಗಿದೆ. ಆದರೆ ಸುನಾಮಿ ಅಪಾಯ ಇಲ್ಲ ಎಂದು ಜಪಾನ್ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಭೂಕಂಪದಿಂದ ಯಾವುದೇ ಸಾವು-ನೋವು ಅಥವಾ ದೊಡ್ಡ ಮಟ್ಟದ ಹಾನಿ ಸಂಭವಿಸಿರುವ ವರದಿಗಳು ಸದ್ಯಕ್ಕೆ ಬಂದಿಲ್ಲ.
ಜಪಾನ್ ಹವಾಮಾನ ಇಲಾಖೆ (JMA) ಪ್ರಕಾರ, ಇವಾಟೆ ಪ್ರಾಂತ್ಯದ ಪೂರ್ವ ಕರಾವಳಿಯ ಸಮುದ್ರ ಭಾಗದಲ್ಲಿ ಭೂಕಂಪ ಸಂಭವಿಸಿದೆ. ಇದು ಸುಮಾರು 50 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ. ಆರಂಭದಲ್ಲಿ ಭೂಕಂಪದ ತೀವ್ರತೆಯನ್ನು 6.9 ಎಂದು ಅಂದಾಜಿಸಲಾಗಿತ್ತು. ಬಳಿಕ ಅದನ್ನು 7.2ಕ್ಕೆ ಪರಿಷ್ಕರಿಸಲಾಯಿತು.ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಭೂಕಂಪದ ತೀವ್ರತೆಯನ್ನು 6.9 ಎಂದು ದಾಖಲಿಸಿದೆ.

ಟೋಕಿಯೊದಲ್ಲೂ ಅನುಭವವಾದ ಕಂಪನ

ಭೂಕಂಪವು ಬೆಳಗಿನ ದಟ್ಟ ಸಂಚಾರ ವೇಳೆಯಲ್ಲಿ ಸಂಭವಿಸಿದ್ದರಿಂದ ಉತ್ತರ-ಪೂರ್ವ ಜಪಾನ್‌ನ ಹಲವು ಭಾಗಗಳಲ್ಲಿ ಜನರು ಕಂಪನ ಅನುಭವಿಸಿದರು. ರಾಜಧಾನಿ ಟೋಕಿಯೊದಲ್ಲೂ ಸೌಮ್ಯ ಕಂಪನ ಕಂಡುಬಂದಿದೆ. ಇತ್ತೀಚಿನ ತಿಂಗಳುಗಳಲ್ಲಿ ಇದೇ ಪ್ರದೇಶದಲ್ಲಿ ಹಲವು ಪ್ರಬಲ ಭೂಕಂಪಗಳು ಸಂಭವಿಸಿದ್ದವು. ಕಳೆದ ಡಿಸೆಂಬರ್‌ನಲ್ಲಿ ಸಂಭವಿಸಿದ್ದ ಭೂಕಂಪದ ಬಳಿಕ ವಾರಪೂರ್ತಿ ಮುನ್ನೆಚ್ಚರಿಕೆ ಸೂಚನೆ ಕೂಡ ನೀಡಲಾಗಿತ್ತು.

ಅಣುಸ್ಥಾವರಗಳಲ್ಲಿ ಯಾವುದೇ ಸಮಸ್ಯೆ ಇಲ್ಲ

ಜಪಾನ್ ಸರ್ಕಾರದ ಮುಖ್ಯ ವಕ್ತಾರ ಮಿನೊರು ಕಿಹಾರಾ ಮಾತನಾಡಿ, ಯಾವುದೇ ಸಾವು-ನೋವು ಅಥವಾ ಹಾನಿಯ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ. 2011ರ ಭೂಕಂಪ ಮತ್ತು ಸುನಾಮಿಯಿಂದ ಹಾನಿಗೊಳಗಾಗಿದ್ದ ಫುಕುಶಿಮಾ ದೈಇಚಿ ಅಣುಸ್ಥಾವರ ಸೇರಿದಂತೆ ದೇಶದ ಪ್ರಮುಖ ಅಣು ವಿದ್ಯುತ್ ಘಟಕಗಳು ಹಾಗೂ ಅಮೋರಿ ಪ್ರದೇಶದ ಇಂಧನ ಮರುಸಂಸ್ಕರಣಾ ಘಟಕದಲ್ಲಿ ಯಾವುದೇ ಅಸಹಜ ಸ್ಥಿತಿ ಕಂಡುಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಶಾಲೆಗಳಿಗೆ ರಜೆ, ರೈಲು ಸಂಚಾರ ತಾತ್ಕಾಲಿಕ ಸ್ಥಗಿತ

ಅಮೋರಿ ಪ್ರಾಂತ್ಯದ ಹಶಿಕಾಮಿ ಪಟ್ಟಣದ ಶಾಲಾ ಮುಖ್ಯ ಶಿಕ್ಷಕಿ ಟೊಮೊಕೊ ನಾಗಾನೆ ಅವರು, ಭೂಕಂಪ ಎಚ್ಚರಿಕೆ ಸಂದೇಶ ಬಂದಾಗ ತಾವು ವಾಹನ ಚಲಾಯಿಸುತ್ತಿದ್ದೆ ಎಂದು ತಿಳಿಸಿದ್ದಾರೆ. ಶಾಲೆಗೆ ಆಗಮಿಸಿದ್ದ ಮಕ್ಕಳು ಸುರಕ್ಷಿತರಾಗಿದ್ದರು. ಆದರೆ ಕೆಲ ಮಕ್ಕಳು ಭಯದಿಂದ ಅತ್ತಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಆ ದಿನದ ತರಗತಿಗಳನ್ನು ರದ್ದುಗೊಳಿಸಿ ಎಲ್ಲ ಮಕ್ಕಳನ್ನೂ ಸುರಕ್ಷಿತವಾಗಿ ಮನೆಗಳಿಗೆ ಕಳುಹಿಸಲಾಯಿತು ಎಂದು ಅವರು ಹೇಳಿದ್ದಾರೆ.ಭೂಕಂಪದ ನಂತರ ಉತ್ತರ-ಪೂರ್ವ ಜಪಾನ್‌ನಲ್ಲಿ ಕೆಲವು ಬುಲೆಟ್ ರೈಲುಗಳು ಹಾಗೂ ಸ್ಥಳೀಯ ರೈಲುಗಳ ಸಂಚಾರವನ್ನು ಸುರಕ್ಷತಾ ಪರಿಶೀಲನೆಗಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ಎಚ್ಚರಿಕೆಯಿಂದಿರಲು ಪ್ರಧಾನಿ ಮನವಿ

ಜಪಾನ್ ಪ್ರಧಾನಿ ಸನಾಯೆ ತಕೈಚಿ ಮಾತನಾಡಿ, ಸರ್ಕಾರದ ತುರ್ತು ತಂಡಗಳು ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿವೆ ಎಂದು ತಿಳಿಸಿದ್ದಾರೆ. ಅಗತ್ಯವಿದ್ದರೆ ತಕ್ಷಣ ಪರಿಹಾರ ಕಾರ್ಯಾಚರಣೆ ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ ಎಂದರು. ಸಂಭಾವ್ಯ ನಂತರದ ಕಂಪನಗಳ (ಆಫ್ಟರ್‌ಶಾಕ್) ಬಗ್ಗೆ ಎಚ್ಚರಿಕೆ ನೀಡಿರುವ ಅವರು, ಪೀಡಿತ ಪ್ರದೇಶದ ಜನರು ಜಾಗರೂಕರಾಗಿರುವಂತೆ ಮನವಿ ಮಾಡಿದ್ದಾರೆ.
ಸೆಂದೈ ಮತ್ತು ಮೊರಿಯೋಕಾ ಸೇರಿದಂತೆ ಹಲವು ನಗರಗಳ ನಿವಾಸಿಗಳು ಕೆಲ ನಿಮಿಷಗಳ ಕಾಲ ಭೂಕಂಪದ ಕಂಪನ ಅನುಭವಿಸಿದ್ದಾಗಿ ತಿಳಿಸಿದ್ದಾರೆ. ಆದರೆ ಯಾವುದೇ ದೊಡ್ಡ ಹಾನಿ ಕಂಡುಬಂದಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ,(ಏಜೆನ್ಸೀಸ್​​).