ಇಸ್ರೇಲ್ ದಾಳಿಗೆ ಭದ್ರತಾ ಮುಖ್ಯಸ್ಥನ ಸಾವು: ಖಚಿತಪಡಿಸಿದ ಇರಾನ್, ಯಾರು ಈ ಅಲಿ ಲಾರಿಜಾನಿ? Ali Larijani
- ಇಸ್ರೇಲ್ ದಾಳಿಗೆ ಇರಾನ್‌ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಹತ್ಯೆ
- ಅಲಿ ಲಾರಿಜಾನಿ ಸಾವನ್ನು ಖಚಿತಪಡಿಸಿದ ಇರಾನ್‌ನ ಸರ್ವೋಚ್ಛ ರಾಷ್ಟ್ರೀಯ ಭದ್ರತಾ ಮಂಡಳಿ
- ನಡೆಸಿದ ದಾಳಿಯಲ್ಲಿ ಲಾರಿಜಾನಿ ಜೊತೆಗೆ ಅವರ ಮಗ ಹಾಗೂ ಅಂಗರಕ್ಷಕರೂ ಸಾವು
ಟೆಹ್ರಾನ್: ನಾವು ನಡೆಸಿದ ವಾಯುದಾಳಿಯಲ್ಲಿ ಇರಾನ್‌ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ( Ali Larijani ) ಅವರನ್ನು ಹತ್ಯೆ ಮಾಡಿದ್ದೇವೆ ಎಂದು ಇಸ್ರೇಲ್ ಹೇಳಿಕೆ ನೀಡಿದ ಬೆನ್ನಲ್ಲೇ ಇರಾನ್‌ನ ಸರ್ವೋಚ್ಛ ರಾಷ್ಟ್ರೀಯ ಭದ್ರತಾ ಮಂಡಳಿಯು ಕೂಡ ಲಾರಿಜಾನಿ ಸಾವನ್ನು ಖಚಿತಪಡಿಸಿದೆ.
ಶಹೀದರ ಶುದ್ಧ ಆತ್ಮಗಳು ದೇವರ ನೀತಿವಂತ ಸೇವಕ ಶಹೀದ್ ಡಾ. ಅಲಿ ಲಾರಿಜಾನಿಯವರ ಶುದ್ಧೀಕರಿಸಲ್ಪಟ್ಟ ಆತ್ಮವನ್ನು ಸ್ವಾಗತಿಸಿವೆ ಎನ್ನುವ ಮೂಲಕ ಭದ್ರತಾ ಮಂಡಳಿ ಸಂತಾಪ ಸೂಚಿಸಿದೆ. ಅಲ್ಲದೆ, ಇಸ್ರೇಲ್ ನಡೆಸಿದ ದಾಳಿಯಲ್ಲಿ ಲಾರಿಜಾನಿ ಜೊತೆಗೆ ಅವರ ಮಗ ಮತ್ತು ಅವರ ಅಂಗರಕ್ಷಕರು ಕೂಡ ಹುತಾತ್ಮರಾಗಿದ್ದಾರೆ ಎಂದು ಮಂಡಳಿ ಹೇಳಿದೆ.
ಇರಾನ್ ಮತ್ತು ಇಸ್ಲಾಮಿಕ್ ಕ್ರಾಂತಿಯ ಪ್ರಗತಿಗಾಗಿ ಜೀವನಪರ್ಯಂತ ಹೋರಾಡಿದ ನಂತರ, ಲಾರಿಜಾನಿ ಅವರು ತಮ್ಮ ಬಹುಕಾಲದ ಆಸೆಯನ್ನು ಪೂರೈಸಿಕೊಂಡರು. ಅವರು ತಮ್ಮ ದೈವಿಕ ಕರೆಗೆ ಉತ್ತರಿಸಿದರು ಮತ್ತು ಸೇವೆಯ ಕಂದಕದಲ್ಲಿ ಗೌರವಯುತವಾಗಿ ಶಹೀದಿಯ ಸಿಹಿ ಕೃಪೆಯನ್ನು ಪಡೆದರು ಎಂದು ಭದ್ರತಾ ಮಂಡಳಿ ಹೇಳಿದೆ.
ಅಲಿ ಲಾರಿಜಾನಿ ಯಾರು?
ಅಂದಹಾಗೆ, ಅಲಿ ಲಾರಿಜಾನಿಯ ಪೂರ್ಣ ಹೆಸರು ಅಲಿ ಅರ್ದಶೀರ್ ಲಾರಿಜಾನಿ. ಇವರು ಇರಾನ್‌ನ ಪ್ರಮುಖ ರಾಜಕಾರಣಿ, ಮಾಜಿ ಸೇನಾಧಿಕಾರಿ ಮತ್ತು ತತ್ತ್ವಜ್ಞಾನಿ ಆಗಿದ್ದರು. ಇರಾನ್‌ನ ಸರ್ವೋಚ್ಛ ರಾಷ್ಟ್ರೀಯ ಭದ್ರತಾ ಮಂಡಳಿಯ ಸೆಕ್ರೆಟರಿ ಆಗಿದ್ದರು ಹಾಗೂ ಸುಪ್ರೀಂ ಲೀಡರ್ ಅಲಿ ಖಮೇನಿ ಬಳಿಕ ದೇಶದ ಅಧಿಕೃತ ನಾಯಕನಂತೆ ಕಾರ್ಯನಿರ್ವಹಿಸುತ್ತಿದ್ದರು. ಇರಾನ್-ಇರಾಕ್ ಯುದ್ಧದಲ್ಲಿ IRGCನಲ್ಲಿ ಸೇವೆ ಸಲ್ಲಿಸಿ, ಸಂಸ್ಕೃತಿ ಸಚಿವ, ರಾಷ್ಟ್ರೀಯ ಟಿವಿ ಮುಖ್ಯಸ್ಥ, ಮಾಜಿ ಮ್ಯಾಜಿಸ್ಟರ್ ಪ್ರೆಸಿಡೆಂಟ್ ಆಗಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು.
ಯುದ್ಧದ ಹಿನ್ನೆಲೆ ಏನು?
2026, ಫೆಬ್ರವರಿ 28ರಂದು ಆರಂಭವಾದ ಈ ಯುದ್ಧವು ಇರಾನ್ ಮತ್ತು ಇಸ್ರೇಲ್ ನಡುವಿನ ದಶಕಗಳ ಕಾಲದ 'ನೆರಳು ಯುದ್ಧ' (Shadow War) ನೇರ ಸಂಘರ್ಷವಾಗಿ ಬದಲಾದ ಮಹತ್ವದ ತಿರುವು. ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ತಡೆಯಲು ರಾಜತಾಂತ್ರಿಕ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ, ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ 'ಆಪರೇಷನ್ ಎಪಿಕ್ ಫ್ಯೂರಿ' ಮತ್ತು 'ರೋರಿಂಗ್ ಲಯನ್' ಎಂಬ ಹೆಸರಿನಡಿ ಇರಾನ್ ಮೇಲೆ ಬೃಹತ್ ವೈಮಾನಿಕ ದಾಳಿಗಳನ್ನು ನಡೆಸಿದವು. ಫೆಬ್ರವರಿ 28ರ ಮುಂಜಾನೆ ನಡೆದ ಈ ದಾಳಿಯಲ್ಲಿ ಇರಾನ್‌ನ ಪರಮಾಣು ಕೇಂದ್ರಗಳು, ಕ್ಷಿಪಣಿ ನೆಲೆಗಳು ಮತ್ತು ರಾಜಧಾನಿ ಟೆಹ್ರಾನ್‌ನಲ್ಲಿದ್ದ ಪ್ರಮುಖ ಸರ್ಕಾರಿ ಕಚೇರಿಗಳನ್ನು ಗುರಿಪಡಿಸಲಾಯಿತು. ಈ ವೇಳೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್ ಮತ್ತು ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ನೂರಾರು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸುತ್ತಿದೆ. ಸದ್ಯ ಯುದ್ಧ ಮುಂದುವರಿದಿದೆ, (ಏಜೆನ್ಸೀಸ್).