ಅಬ್ರಹಾಂ ಒಪ್ಪಂದದ ಆಫರ್ ಧೂಳೀಪಟ: ಟ್ರಂಪ್ ಷರತ್ತಿಗೆ ಡೋಂಟ್ ಕೇರ್ ಎಂದ ನೆರೆರಾಷ್ಟ್ರ! ನಾವು ಇಸ್ರೇಲ್​ ಜತೆ ಸೇರಲ್ಲ ಎಂದು ಪಾಕ್​ ರಕ್ಷಣಾ ಸಚಿವ! 
ವಿದೇಶ

ಅಬ್ರಹಾಂ ಒಪ್ಪಂದದ ಆಫರ್ ಧೂಳೀಪಟ: ಟ್ರಂಪ್ ಷರತ್ತಿಗೆ ಡೋಂಟ್ ಕೇರ್ ಎಂದ ನೆರೆರಾಷ್ಟ್ರ! ನಾವು ಇಸ್ರೇಲ್​ ಜತೆ ಸೇರಲ್ಲ ಎಂದು ಪಾಕ್​ ರಕ್ಷಣಾ ಸಚಿವ! Pakistan Rejects Abraham Accords

ಇಸ್ಲಾಮಾಬಾದ್: ಮಧ್ಯಪ್ರಾಚ್ಯದ ಭೀಕರ ಯುದ್ಧಕ್ಕೆ ಶಾಶ್ವತ ವಿರಾಮ ಹಾಡುವ ನೆಪದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರಿಗೆ ತರಲು ಹೊರಟಿರುವ ಬೃಹತ್ ಜಾಗತಿಕ ರಾಜತಾಂತ್ರಿಕ ಸ್ಕೆಚ್‌ಗೆ ಪಾಕಿಸ್ತಾನ(Pakistan Rejects Abraham Accords) ಮೊದಲ ಆಘಾತ ನೀಡಿದೆ. ಇಸ್ರೇಲ್ ದೇಶದೊಂದಿಗೆ ಮುಸ್ಲಿಂ ರಾಷ್ಟ್ರಗಳು ಸ್ನೇಹ ಸಂಬಂಧ ಸ್ಥಾಪಿಸುವ ಅಮೆರಿಕ ಪ್ರಾಯೋಜಿತ ಅಬ್ರಹಾಂ ಒಪ್ಪಂದವನ್ನು ಪಾಕಿಸ್ತಾನ ಅಧಿಕೃತವಾಗಿ ತಿರಸ್ಕರಿಸಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್, ನಮ್ಮ ಮೂಲಭೂತ ಸಿದ್ಧಾಂತ ಮತ್ತು ಇಸ್ಲಾಮಿಕ್ ತತ್ವಗಳಿಗೆ ಧಕ್ಕೆ ತರುವ ಯಾವುದೇ ಒಪ್ಪಂದಕ್ಕೆ ಪಾಕಿಸ್ತಾನ ಸಹಿ ಹಾಕುವುದಿಲ್ಲ ಎಂದು ಅಮೆರಿಕದ ಮುಖಕ್ಕೇ ಹೊಡೆದಂತೆ ಹೇಳಿಕೆ ನೀಡಿದ್ದಾರೆ.
ಸೋಮವಾರವಷ್ಟೇ ಡೊನಾಲ್ಡ್ ಟ್ರಂಪ್ ಅವರು ತಮ್ಮ 'ಟ್ರೂತ್ ಸೋಶಿಯಲ್' ಖಾತೆಯಲ್ಲಿ ಪೋಸ್ಟ್ ಹಾಕಿ, ಇರಾನ್ ಜೊತೆಗಿನ ಅಮೆರಿಕದ ಶಾಂತಿ ಮಾತುಕತೆಗಳು ಯಶಸ್ವಿಯಾಗಬೇಕಾದರೆ ಸೌದಿ ಅರೇಬಿಯಾ, ಕತಾರ್, ಟರ್ಕಿ, ಈಜಿಪ್ಟ್ ಮತ್ತು ಪಾಕಿಸ್ತಾನದಂತಹ ಪ್ರಭಾವಿ ಮುಸ್ಲಿಂ ರಾಷ್ಟ್ರಗಳು ಏಕಕಾಲದಲ್ಲಿ ಇಸ್ರೇಲ್ ಅನ್ನು ಮಾನ್ಯ ಮಾಡುವ ಅಬ್ರಹಾಂ ಒಪ್ಪಂದಕ್ಕೆ ಸೇರುವುದು ಕಡ್ಡಾಯ ಎಂದು ಷರತ್ತು ವಿಧಿಸಿದ್ದರು.

"ಒಂದು ದಿನವೂ ನಂಬಲರ್ಹವಲ್ಲದ ಇಸ್ರೇಲ್ ಜೊತೆ ಸಭೆ ಅಸಾಧ್ಯ!": ಪಾಕ್ ಸಚಿವರ ಆಕ್ರೋಶ

ಅಮೆರಿಕದ ಒತ್ತಡಕ್ಕೆ ಮಣಿಯಲು ನಿರಾಕರಿಸಿದ ಪಾಕ್​ ರಕ್ಷಣಾ ಸಚಿವ ಖವಾಜಾ, ಇಸ್ರೇಲ್ ಸರ್ಕಾರದ ವಿಶ್ವಾಸಾರ್ಹತೆಯನ್ನೇ ಬಲವಾಗಿ ಪ್ರಶ್ನಿಸಿದ್ದಾರೆ. ಒಂದು ದಿನವೂ ಯಾರ ನಂಬಿಕೆಯನ್ನು ಉಳಿಸಿಕೊಳ್ಳದ, ನಿರಂತರವಾಗಿ ಜಾಗತಿಕ ಒಪ್ಪಂದಗಳನ್ನು ಉಲ್ಲಂಘಿಸುವ ಜನರ ಜೊತೆ ನಾವು ಹೇಗೆ ಕುಳಿತು ಮಾತನಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇಸ್ರೇಲ್ ಅನ್ನು ಒಂದು ಸಾರ್ವಭೌಮ ದೇಶವಾಗಿ ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ಸ್ವತಂತ್ರ ಪ್ಯಾಲೆಸ್ಟೈನ್ ರಾಷ್ಟ್ರ ಉದಯವಾಗುವವರೆಗೂ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಗುಡುಗಿದ್ದಾರೆ.
ಇದೇ ವೇಳೆ ಪಾಕಿಸ್ತಾನದ ಪ್ರಸಿದ್ಧ ಪಾಸ್‌ಪೋರ್ಟ್ ಪಾಲಿಸಿಯನ್ನು ನೆನಪಿಸಿದ ಖವಾಜಾ, ಇಡೀ ವಿಶ್ವದಲ್ಲೇ ಇಸ್ರೇಲ್ ದೇಶದ ಹೆಸರನ್ನು ತನ್ನ ಪಾಸ್‌ಪೋರ್ಟ್‌ನಿಂದಲೇ ಸಂಪೂರ್ಣವಾಗಿ ಹೊರಗಿಟ್ಟಿರುವ ಏಕೈಕ ದೇಶ ನಮ್ಮದು. ಹೀಗಿರುವಾಗ ಟ್ರಂಪ್ ಅವರ ಒಪ್ಪಂದಕ್ಕೆ ನಾವು ಹೇಗೆ ಒಪ್ಪಿಗೆ ನೀಡಲು ಸಾಧ್ಯ ಎಂದು ಕಿಡಿಕಾರಿದ್ದಾರೆ.

ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಜೊತೆ ಚರ್ಚಿಸಿದ್ದ ಟ್ರಂಪ್!

ಇರಾನ್ ಜೊತೆಗಿನ ಯುದ್ಧವನ್ನು ಕೊನೆಗೊಳಿಸುವ ಮಾತುಕತೆಗಳ ಭಾಗವಾಗಿ ಡೊನಾಲ್ಡ್ ಟ್ರಂಪ್ ಅವರು ಜಾಗತಿಕ ನಾಯಕರಾದ ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್, ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದ್ದರು ಎನ್ನಲಾಗಿದೆ.
ಈ ಐತಿಹಾಸಿಕ ಮಾತುಕತೆಯ ಬೆನ್ನಲ್ಲೇ ಟ್ರಂಪ್ ತಮ್ಮ ಪ್ರತಿನಿಧಿಗಳಿಗೆ ಅಬ್ರಹಾಂ ಒಪ್ಪಂದದ ವ್ಯಾಪ್ತಿಯನ್ನು ವಿಸ್ತರಿಸಲು ಆದೇಶಿಸಿದ್ದರು. ಒಪ್ಪಂದಕ್ಕೆ ಒಪ್ಪದಿದ್ದರೆ ಮತ್ತೆ ರಣರಂಗಕ್ಕೆ ಮರಳಿ ಭೀಕರ ಯುದ್ಧ ಎದುರಿಸಬೇಕಾಗುತ್ತದೆ ಎಂಬ ಪರೋಕ್ಷ ಬೆದರಿಕೆಯನ್ನೂ ಟ್ರಂಪ್ ಹಾಕಿದ್ದರು. ಅದರೆ, ಪಾಕಿಸ್ತಾನ ಸರ್ಕಾರವು ಸಾರ್ವಜನಿಕ ಮತ್ತು ಆಂತರಿಕ ಇಸ್ಲಾಮಿಕ್ ಸಂವೇದನೆಗಳಿಗೆ ಹೆದರಿ ಅಮೆರಿಕದ ಬೇಡಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿದೆ.
2020 ರಲ್ಲಿ ಟ್ರಂಪ್ ಅವರ ಮೊದಲ ಅವಧಿಯಲ್ಲಿ ಯುಎಇ ಮತ್ತು ಬಹ್ರೇನ್ ದೇಶಗಳು ಇಸ್ರೇಲ್ ಜೊತೆ ಈ ಒಪ್ಪಂದ ಮಾಡಿಕೊಂಡಿದ್ದವು. ಆದರೆ, ಪ್ರಸಕ್ತ ಸಾಲಿನಲ್ಲಿ ಪಾಕಿಸ್ತಾನವು ಅಮೆರಿಕದ ಈ ಬಿಗ್ ಪ್ಲಾನ್‌ಗೆ ರೆಡ್ ಸಿಗ್ನಲ್ ತೋರಿಸಿರುವುದು ವಾಷಿಂಗ್ಟನ್ ಮತ್ತು ಇಸ್ಲಾಮಾಬಾದ್ ನಡುವೆ ಮತ್ತೊಂದು ಸುತ್ತಿನ ಶೀತಲ ಸಮರಕ್ಕೆ ನಾಂದಿ ಹಾಡಿದೆ,(ಏಜೆನ್ಸೀಸ್​).