ಸ್ಪೋಟದಲ್ಲಿ ಸತ್ತವರನ್ನು ಸಾಗಿಸುತ್ತಿರುವುದು
- ರಂಜಾನ್ ಮೊದಲ ದಿನವೇ ಕರಾಚಿಯಲ್ಲಿ ಭೀಕರ ದುರಂತ
- ಅಪಾರ್ಟ್‌ಮೆಂಟ್‌ನಲ್ಲಿ ಗ್ಯಾಸ್ ಸ್ಫೋಟಗೊಂಡು 16 ಜನ ಸಾವು
- ಅಡುಗೆ ಮಾಡುತ್ತಿದ್ದಾಗ ಸ್ಪೋಟ ಸಂಭವಿಸಿದೆ ಎಂದ ಸ್ಥಳೀಯರು
ಕರಾಚಿ: ಪಾಕಿಸ್ತಾನದ ಅತಿದೊಡ್ಡ ಬಂದರು ನಗರವಾದ ಕರಾಚಿಯಲ್ಲಿ ಗುರುವಾರ (ಫೆ.19) ಅಪಾರ್ಟ್ಮೆಂಟ್ ಕಟ್ಟಡವೊಂದರಲ್ಲಿ ಅನಿಲ ಸ್ಫೋಟ ಸಂಭವಿಸಿ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಸಿಂಧ್ ಪ್ರಾಂತ್ಯದ ರಾಜಧಾನಿ ಕರಾಚಿಯ ವಸತಿ ಪ್ರದೇಶದಲ್ಲಿ ಪವಿತ್ರ ರಂಜಾನ್ (Ramzan) ತಿಂಗಳ ಮೊದಲ ದಿನದಂದು ಜನರು ಬೆಳಗಿನ ಜಾವ ಊಟವನ್ನು ಸಿದ್ಧಪಡಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ರಿಜ್ವಾನ್ ಪಟೇಲ್ ಹೇಳಿದ್ದಾರೆ.
ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಬದುಕುಳಿದವರನ್ನು ಹುಡುಕಲು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ. ಆರಂಭದಲ್ಲಿ ಸಾವಿನ ಸಂಖ್ಯೆ 13 ಎಂದು ವರದಿಯಾಗಿತ್ತು, ಆದರೆ ಅವಶೇಷಗಳಿಂದ ಇನ್ನೂ ಮೂರು ಶವಗಳನ್ನು ಹೊರತೆಗೆದ ನಂತರ ಅದು 16 ಕ್ಕೆ ಏರಿದೆ ಎಂದು ಪಟೇಲ್ ಹೇಳಿದರು.
ಈ ಘಟನೆಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದು, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ರೀತಿಯ ಘಟನೆಗಳು ಮತ್ತೆ ಮರುಕಳಿಸದಂತೆ ಕಟ್ಟಡ ಸಂಹಿತೆ ಮತ್ತು ಗ್ಯಾಸ್ ಸಿಲಿಂಡರ್ ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸಬೇಕೆಂದು ಅವರು ಹೇಳಿದ್ದಾರೆ.
ಪಾಕಿಸ್ತಾನದ ಇತರ ಭಾಗಗಳಂತೆ ಕರಾಚಿಯಲ್ಲಿರುವ ಹೆಚ್ಚಿನ ಮನೆ ಮತ್ತು ಅಪಾರ್ಟ್‌ಮೆಂಟ್ ಕಟ್ಟಡಗಳಿಗೆ ಅಡುಗೆಗಾಗಿ ನೈಸರ್ಗಿಕ ಅನಿಲವನ್ನು ಸರ್ಕಾರ ಪೂರೂಸುತ್ತದೆ. ಆದರೆ ಅನೇಕ ಮನೆಗಳು ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಸಿಲೆಂಡರ್ಗಳನ್ನು ಹೆಚ್ಚಾಗಿ ಅವಲಂಬಿಸಿವೆ.
ಇದೇ ರೀತಿಯ ಘಟನೆಯು ಕಳೆದ ವರ್ಷ ಜುಲೈ ತಿಂಗಳಲ್ಲಿ ಸಂಭವಿಸಿದ್ದು, ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿದ್ದ ಮದುವೆಯ ಆರತಕ್ಷತೆ ಕಾರ್ಯಕ್ರಮದಲ್ಲಿ ಸಂಭವಿಸಿದ ಸ್ಪೋಟದಿಂದಾಗಿ ವಧು-ವರರು ಸೇರಿದಂತೆ ಸುಮಾರು ಎಂಟು ಜನರು ಸಾವನ್ನಪ್ಪಿದ್ದರು,(ಏಜನ್ಸೀಸ್).