ವಾಷಿಂಗ್ಟನ್: ಅಮೆರಿಕದ ರಾಜಕೀಯದಲ್ಲಿಗ ದೊಡ್ಡ ಬಿರುಗಾಳಿಯೊಂದ ಸೃಷ್ಟಿಯಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯ ಅಧಿಕಾರದ ಹಾದಿ ಹೂವಿನಂತಿರುತ್ತಾ? ಅಥವಾ ಮುಳ್ಳಿನಿಂದ ಕೂಡಿರುತ್ತಾ? ಎಂದು ನಿರ್ಧರಿಸುವ ಮಧ್ಯಂತರ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ.
ಸಾಮಾನ್ಯವಾಗಿ ಅಮೆರಿಕದಲ್ಲಿ ಅಧ್ಯಕ್ಷರಾದವರು ತಮ್ಮ ಮೊದಲ ಎರಡು ವರ್ಷಗಳನ್ನು ಆರಾಮವಾಗಿ ಕಳೆದರೂ, ಈ ಮಧ್ಯಂತರ ಚುನಾವಣೆ ಬಂದಾಗ ಮಾತ್ರ ಅವರ ಎದೆಯಲ್ಲಿ ನಡುಕ ಶುರುವಾಗುತ್ತದೆ. ಕಾರಣ ಈ ಚುನಾವಣೆಯಲ್ಲಿ ಪ್ರಜೆಗಳು, ಅಧ್ಯಕ್ಷರ ಆಡಳಿತದಿಂದ ಎಷ್ಟು ಸಂತುಷ್ಟರಾಗಿದ್ದಾರೆಂಬ ಅಂಕಿ-ಅಂಶ ದೊರೆಯುತ್ತದೆ.
ಅಮೆರಿಕದ ಅಧ್ಯಕ್ಷರ ಅಧಿಕಾರಾವಧಿ ನಾಲ್ಕು ವರ್ಷ. ಇದರ ಅರ್ಧ ಅವಧಿ, ಅಂದರೆ ಸರಿಯಾಗಿ ಎರಡು ವರ್ಷ ಮುಗಿಯುತ್ತಿದ್ದಂತೆ ಈ ಮಧ್ಯಂತರ ಚುನಾವಣೆಗಳು ನಡೆಯುತ್ತವೆ. ಅಮೆರಿಕದ ಸಂಸತ್ತಾದ ಕಾಂಗ್ರೆಸ್ನಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಹಾಗೂ ಸೆನೆಟ್ ಎಂಬ ಎರಡು ಪ್ರಮುಖ ಸದನಗಳಿವೆ.
ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಕೆಳಮನೆ): ಇಲ್ಲಿನ ಎಲ್ಲಾ 435 ಸದಸ್ಯರಿದ್ದು, ಇದರ ಅಧಿಕಾರಾವಧಿ ಕೇವಲ ಎರಡು ವರ್ಷ. ಹೀಗಾಗಿ ಇಲ್ಲಿ ಎಲ್ಲಾ ಕ್ಷೇತ್ರಗಳಿಗೆ ಮಧ್ಯಂತರ ಚುನಾವಣೆ ನಡೆಯುತ್ತದೆ.
ಸೆನೆಟ್ (ಮೇಲ್ಮನೆ): ಸೆನೆಟರ್‌ಗಳ ಒಟ್ಟು ಅಧಿಕಾರವಧಿ ಆರು ವರ್ಷ. ಇಲ್ಲಿ ಒಟ್ಟು 100 ಸ್ಥಾನಗಳಿದ್ದು, ಈ ಪೈಕಿ ಸುಮಾರು ಮೂರನೇ ಒಂದು ಭಾಗದಷ್ಟು, ಅಂದರೆ 35 ಸ್ಥಾನಗಳಿಗೆ ಮಾತ್ರ ಮಧ್ಯಂತರ ಚುನಾವಣೆ ನಡೆಯುತ್ತದೆ.
ಒಂದು ವೇಳೆ ಈ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ನರು ಮಕಾಡೆ ಮಲಗಿದರೆ, ಟ್ರಂಪ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕಾ? ಎಂಬ ಪ್ರಶ್ನೆ ಎಲ್ಲಡೆ ಚರ್ಚೆಯಾಗುತ್ತಿದೆ. ಆದರೆ, ಇದಕ್ಕೆ ಉತ್ತರ ಖಂಡಿತ ಇಲ್ಲ! ಅಮೆರಿಕದ ಸಂವಿಧಾನದ ಪ್ರಕಾರ ಅಧ್ಯಕ್ಷರ ಆಯ್ಕೆ ಪ್ರತ್ಯೇಕವಾಗಿ ನಡೆಯುತ್ತದೆ.
ಹೀಗಾಗಿ ಸಂಸತ್ತಿನಲ್ಲಿ ಎಷ್ಟೇ ಸ್ಥಾನಗಳು ಕೈತಪ್ಪಿದರೂ ಜನವರಿ 20, 2029 ರವರೆಗೆ ಡೊನಾಲ್ಡ್ ಟ್ರಂಪ್ ಅವರೇ ಅಧಿಕಾರದಲ್ಲಿ ಇರುತ್ತಾರೆ. ಒಂದು ವೇಳೆ ವಿರೋಧ ಪಕ್ಷವಾದ ಡೆಮಾಕ್ರಟ್‌ಗಳು ಮೇಲುಗೈ ಸಾಧಿಸಿದರೆ, ಆಗ ದೇಶದಲ್ಲಿ "ವಿಭಜಿತ ಸರ್ಕಾರ" (Divided Government) ರೂಪುಗೊಳ್ಳುತ್ತದೆ. ಅಂದರೆ, ಕಾರಿನ ಸ್ಟೀರಿಂಗ್ ಟ್ರಂಪ್ ಕೈಯಲ್ಲಿದ್ದರೆ, ಬ್ರೇಕ್ ಮತ್ತು ಗೇರ್ ವಿರೋಧ ಪಕ್ಷದ ಕೈಗೆ ಹೋಗುತ್ತದೆ.
ಡೆಮಾಕ್ರಟ್‌ಗಳು ಕೆಳಮನೆಯನ್ನು ಗೆದ್ದರೆ, ಟ್ರಂಪ್ ತರಲು ಬಯಸುವ ತೆರಿಗೆ ಕಡಿತ, ಹೊಸ ವಲಸೆ ನೀತಿಗಳು ಮತ್ತು ಖರ್ಚು-ವೆಚ್ಚದ ಯೋಜನೆಗಳಿಗೆ ಸುಲಭವಾಗಿ ಒಪ್ಪಿಗೆ ಸಿಗಲ್ಲ. ಪ್ರತಿಯೊಂದು ಕಾನೂನು ಪಾಸ್ ಮಾಡಲೂ ವಿರೋಧಿಗಳ ಮುಂದೆ ಅಂಗಲಾಚಬೇಕಾದ ಸ್ಥಿತಿ ಬರಬಹುದು.
ಡೆಮಾಕ್ರಟಿಕ್ ನಾಯಕರು ಅಧಿಕಾರಕ್ಕೆ ಬಂದರೆ ಸುಮ್ಮನೆ ಕೂರುವುದಿಲ್ಲ. ಟ್ರಂಪ್ ಆಡಳಿತದ ಹಳೆಯ ಫೈಲ್‌ಗಳನ್ನು ಹೊರತೆಗೆಯುವುದು, ಸಮನ್ಸ್ ಜಾರಿ ಮಾಡುವುದು ಮತ್ತು ಸಾಕ್ಷ್ಯಗಳನ್ನು ಕೋರ್ಟ್ ಮೆಟ್ಟಿಲೇರಿಸುವ ಮೂಲಕ ಟ್ರಂಪ್‌ಗೆ ದಿನಕ್ಕೊಂದು ತಲೆನೋವು ಶುರುವಾಗಲಿದೆ.
ಡೆಮಾಕ್ರಟ್‌ಗಳು ಕೆಳಮನೆಯಲ್ಲಿ ಸರಳ ಬಹುಮತ ಪಡೆದರೆ, ಟ್ರಂಪ್ ವಿರುದ್ಧ ಮತ್ತೊಮ್ಮೆ ದೋಷಾರೋಪಣೆ ಪ್ರಕ್ರಿಯೆ ಆರಂಭಿಸುವ ಸಾಧ್ಯತೆ ದಟ್ಟವಾಗಿದೆ. ಆದರೆ ಅವರನ್ನು ಅಧಿಕಾರದಿಂದ ತೆಗೆದುಹಾಕಲು ಸೆನೆಟ್‌ನಲ್ಲಿ 2/3 ಬಹುಮತ ಬೇಕಾಗಿರುವುದರಿಂದ, ಕುರ್ಚಿ ಉಳಿದುಕೊಂಡರೂ ರಾಜಕೀಯವಾಗಿ ಟ್ರಂಪ್ ಮುಖಭಂಗ ಅನುಭವಿಸಬೇಕಾಗುತ್ತದೆ.
ಸೆನೆಟ್ ಕೈತಪ್ಪಿದರೆ ಫೆಡರಲ್ ಜಡ್ಜ್‌ಗಳು, ಉನ್ನತ ಅಧಿಕಾರಿಗಳು ಹಾಗೂ ನ್ಯಾಯಾಂಗ ನೇಮಕಾತಿಗಳಿಗೆ ಟ್ರಂಪ್ ಮಾಡುವ ಶಿಫಾರಸುಗಳನ್ನು ಡೆಮಾಕ್ರಟ್‌ಗಳು ನೇರವಾಗಿ ತಿರಸ್ಕರಿಸಬಹುದು. ಇದರಿಂದ ಆಡಳಿತ ಯಂತ್ರವೇ ನಿಂತುಹೋಗುವ ಅಪಾಯವಿದೆ.
ಬಜೆಟ್ ಪಾಸ್ ಮಾಡುವ ವಿಚಾರದಲ್ಲಿ ಉಭಯ ಪಕ್ಷಗಳ ನಡುವೆ ಹಗ್ಗಜಗ್ಗಾಟ ನಡೆದು, 2027 ರಲ್ಲಿ ಅಮೆರಿಕ ಸರ್ಕಾರಕ್ಕೆ ಹಣಕಾಸಿನ ಮುಗ್ಗಟ್ಟು ಎದುರಾಗಬಹುದು. ಸಾಲದ ಮಿತಿ ಹೆಚ್ಚಿಸಲು ಒಪ್ಪಂದವಾಗದಿದ್ದರೆ ಸರ್ಕಾರಿ ಕಚೇರಿಗಳೇ ಬಂದ್ ಆಗುವ ಅಪಾಯವೂ ಇದೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ಮಧ್ಯಂತರ ಚುನಾವಣೆ ಟ್ರಂಪ್ ಪಾಲಿಗೆ ಮಾಡು ಇಲ್ಲವೇ ಮಡಿ ಹೋರಾಟವಾಗಿದ್ದು, ಮುಂದಿನ ಎರಡು ವರ್ಷ ಕಾಲ ಟ್ರಂಪ್ ರಾಜನಂತೆ ಮೆರೆಯುತ್ತಾರೋ ಅಥವಾ ವಿರೋಧ ಪಕ್ಷದ ಚಕ್ರವ್ಯೂಹದಲ್ಲಿ ಸಿಲುಕಿ ಒದ್ದಾಡುತ್ತಾರೋ ಅನ್ನೋದನ್ನ ಅಮೆರಿಕದ ಮತದಾರ ನಿರ್ಧರಿಸಬೇಕಿದೆ, (ಏಜೆನ್ಸೀಸ್).