ನೇಪಾಳ ಪ್ರವಾಹದ ಅವಶೇಷಗಳಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣಾ ಕಾರ್ಯಾಚರಣೆ 
ವಿದೇಶ

ಅವಶೇಷಗಳ ನಡುವೆ ಸಿಲುಕಿ ನಡುಗುತ್ತಿದ್ದ ವ್ಯಕ್ತಿ; ಮನಕಲಕುತ್ತೆ ನೇಪಾಳ ದುರಂತದ ಭೀಕರ ದೃಶ್ಯ | Nepal flood disaster

ಪ್ರಮುಖ ಮುಖ್ಯಾಂಶಗಳು

  • ನೇಪಾಳದಲ್ಲಿ ಭೀಕರ ದಿಢೀರ್ ಪ್ರವಾಹದಲ್ಲಿ ಅಪಾರ ಸಾವು-ನೋವು
  • 750ಕ್ಕೂ ಹೆಚ್ಚು ಜನ ನಾಪತ್ತೆಯಾದವರಲ್ಲಿ 133 ಭಾರತೀಯರು
  • ಪ್ರವಾಹದ ಅವಶೇಷಗಳ ನಡುವೆ ಸಿಲುಕಿದ್ದ ವ್ಯಕ್ತಿಯ ದೃಶ್ಯ ವೈರಲ್
Nepal flood: ನೇಪಾಳದಲ್ಲಿ ಪ್ರಕೃತಿ ವಿಕೋಪ ಮತ್ತೊಮ್ಮೆ ತನ್ನ ರುದ್ರರೂಪ ತೋರಿಸಿದೆ. ಟಿಬೆಟ್ ಗಡಿಯಿಂದ ಬಂದ ಭೀಕರ ದಿಢೀರ್ ಪ್ರವಾಹ ಮಧ್ಯ ನೇಪಾಳದ ಹಲವು ಪ್ರದೇಶಗಳನ್ನು ಅಕ್ಷರಶಃ ನುಂಗಿಹಾಕಿದ್ದು, ಅಪಾರ ಪ್ರಮಾಣದ ಸಾವು-ನೋವು ಮತ್ತು ಆಸ್ತಿ ಹಾನಿ ಸಂಭವಿಸಿದೆ. ಪ್ರವಾಹದ ಅವಶೇಷಗಳ ನಡುವೆ ವ್ಯಕ್ತಿಯೊಬ್ಬರು ನಡುಗುತ್ತಾ ಸಿಲುಕಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೋಡುಗರ ಮನಕಲಕುವಂತೆ ಮಾಡಿದೆ.
ಪ್ರವಾಹದ ರಭಸಕ್ಕೆ ಹಲವು ನಗರ ಮತ್ತು ಹಳ್ಳಿಗಳು ಜಲಾವೃತವಾಗಿದ್ದು, ರಸ್ತೆಗಳು ಹಾಗೂ ಪ್ರಮುಖ ಸೇತುವೆಗಳು ಕೊಚ್ಚಿಹೋಗಿವೆ. ಹಲವು ಜಲವಿದ್ಯುತ್ ಯೋಜನೆಗಳಿಗೂ ಹಾನಿಯಾಗಿದೆ. ರಸುವಾ ಮತ್ತು ಧಾಡಿಂಗ್ ಜಿಲ್ಲೆಗಳು ಸೇರಿದಂತೆ ಟಿಬೆಟ್ ಗಡಿಯ ಪ್ರದೇಶಗಳು ದುರಂತದ ಹೊಡೆತಕ್ಕೆ ತೀವ್ರವಾಗಿ ಸಿಲುಕಿವೆ.ಇದುವರೆಗೆ ಕನಿಷ್ಠ 157 ಮಂದಿ ಮೃತಪಟ್ಟಿದ್ದು, 750ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ. ಕಾಣೆಯಾದವರಲ್ಲಿ 133 ಭಾರತೀಯರೂ ಸೇರಿದ್ದಾರೆ ಎಂದು ವರದಿಯಾಗಿದೆ.

ಪ್ರವಾಹದಲ್ಲಿ ಸಿಲುಕಿ ನಡುಗಿದ ವ್ಯಕ್ತಿ

ಈ ಭೀಕರ ದುರಂತದ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಲವು ವಿಡಿಯೋಗಳು ಜನರನ್ನು ಬೆಚ್ಚಿಬೀಳಿಸುತ್ತಿವೆ. ಅವಶೇಷಗಳು, ಕೆಸರು ಮತ್ತು ನೀರಿನ ನಡುವೆ ಸಿಲುಕಿದ್ದ ವ್ಯಕ್ತಿಯೊಬ್ಬರು ನಡುಗುತ್ತಾ ಸಹಾಯಕ್ಕಾಗಿ ಕಾಯುತ್ತಿರುವ ದೃಶ್ಯ ಇದೀಗ ವೈರಲ್ ಆಗಿದೆ. ಹೆಲಿಕಾಪ್ಟರ್‌ಗಳನ್ನೂ ಬಳಸಿಕೊಂಡು ಅಪಾಯದಲ್ಲಿ ಸಿಲುಕಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದೆ.

133 ಭಾರತೀಯರು ನಾಪತ್ತೆ

ಅಧಿಕಾರಿಗಳ ಪ್ರಕಾರ, ಕನಿಷ್ಠ 133 ಭಾರತೀಯರು ಮತ್ತು 37 ಎನ್‌ಆರ್‌ಐಗಳು ನಾಪತ್ತೆಯಾಗಿದ್ದಾರೆ. ಕಾಣೆಯಾದ ಭಾರತೀಯರಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದವರೂ ಇದ್ದಾರೆ. ಭಾರತ ಸರ್ಕಾರ ಕೂಡ ರಕ್ಷಣಾ ಮತ್ತು ಪರಿಹಾರ ಕಾರ್ಯಕ್ಕೆ ನೆರವು ನೀಡಲು ಮುಂದಾಗಿದೆ. ನೇಪಾಳಕ್ಕೆ ಮೊದಲ ಹಂತದ ಪರಿಹಾರ ಸಾಮಗ್ರಿಗಳನ್ನು ಭಾರತ ಕಳುಹಿಸಿದೆ ಎಂದು ವರದಿಯಾಗಿದೆ.

ಭೂಕಂಪನಾ? ಭೂಕುಸಿತನಾ? ಕಾರಣವೇನು?

ಪ್ರವಾಹದ ವೇಳೆ ಟಿಬೆಟ್ ಪ್ರದೇಶದಲ್ಲಿ ಭೂಕಂಪನದ ವರದಿಯಾಗಿತ್ತು. ಬೆಳಗ್ಗೆ 8.37ಕ್ಕೆ ಭೂಕಂಪ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಪ್ರವಾಹ ಕಾಣಿಸಿಕೊಂಡಿದೆ ಎಂದು ನೇಪಾಳದ ವಿದೇಶಾಂಗ ಸಚಿವರು ಸಂಸತ್ತಿನಲ್ಲಿ ತಿಳಿಸಿದ್ದರು. ಆದರೆ ನಂತರದ ವಿಶ್ಲೇಷಣೆಯಲ್ಲಿ ಭೂಕಂಪಕ್ಕಿಂತ ಭೂಕುಸಿತವೇ ಪ್ರವಾಹಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ. ಹಿಮ, ಕಲ್ಲು ಹಾಗೂ ಮಣ್ಣು ನದಿಗೆ ಕುಸಿದು ಬಿದ್ದ ಪರಿಣಾಮ ಭೀಕರ ಪ್ರವಾಹ ಉಂಟಾಗಿರುವ ಸಾಧ್ಯತೆ ಇದೆ.

ರಕ್ಷಣಾ ಕಾರ್ಯಾಚರಣೆ ಚುರುಕು

ನೇಪಾಳ ಸೇನೆ, ಸಶಸ್ತ್ರ ಪೊಲೀಸ್ ಪಡೆ ಸಂತ್ರಸ್ತರ ರಕ್ಷಣೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಇದುವರೆಗೆ 3,300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಗಾಯಗೊಂಡ 49 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,(ಏಜೆನ್ಸೀಸ್​).