ಆಸ್ಟ್ರೇಲಿಯಾದಲ್ಲಿ ಪತ್ತೆಯಾದ 1.2 ಕೆಜಿ ತೂಕದ ಟಿಬೂಬುರ್ರಾ ಸ್ಪಡ್ ಚಿನ್ನದ ಗಟ್ಟಿ 
ವಿದೇಶ

ಆಸ್ಟ್ರೇಲಿಯಾದ ಕಾಡಲ್ಲಿ ಸಿಕ್ಕಿದ 'ಚಿನ್ನದ ಆಲೂಗಡ್ಡೆ'! ಇದರ ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ! Gold Nugget

ಆಸ್ಟ್ರೇಲಿಯಾ: ಅದೃಷ್ಟ ಯಾವ ರೂಪದಲ್ಲಿ ಬರುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಇಲ್ಲೊಬ್ಬ ವ್ಯಕ್ತಿ ಹವ್ಯಾಸಕ್ಕಾಗಿ ಮಾಡಿದ ಕೆಲಸ ಇಂದು ಆತನನ್ನು ಕೋಟ್ಯಧಿಪತಿಯನ್ನಾಗಿ ಮಾಡಿದೆ. ಮೆಟೆಲ್​ ಡಿಟೆಕ್ಟರ್​ ಹಿಡಿದು ಹೊರಟ ಅನ್ವೇಷಕನೊಬ್ಬನಿಗೆ ಬರೋಬ್ಬರಿ 1.2 ಕೆಜಿ ತೂಕದ ಬೃಹತ್ ಚಿನ್ನದ ಗಟ್ಟಿ (Gold Nugget) ಸಿಕ್ಕಿರುವ ಘಟನೆ ಆಸ್ಟ್ರೇಲಿಯಾದಲ್ಲಿ ವರದಿಯಾಗಿದೆ.

ಸಾಮಾನ್ಯವಾಗಿ, ಭೂಮಿಯಾಳದಲ್ಲಿರುವ ಚಿನ್ನವನ್ನು ಪತ್ತೆ ಮಾಡುವುದು ಸಿನಿಮಾಗಳಲ್ಲಿ ನೋಡುವಂತೆ ಸುಲಭವಾಗಿರುವುದಿಲ್ಲ. ದಿನಗಟ್ಟಲೆ, ತಿಂಗಳುಗಟ್ಟಲೆ ಬಿಸಿಲಿನಲ್ಲಿ ಬೆವರು ಸುರಿಸಿದರೂ, ಬಹಳ ಕಡಿಮೆ ಪ್ರಮಾಣ ಹೆಚ್ಚಿನದಾಗಿ ಚಿನ್ನದ ಬದಲು ಬೇರೆ ಲೋಹಗಳೇ ಸಿಗುತ್ತವೆ. ಆದರೆ, ಈ ವ್ಯಕ್ತಿಗೆ ಭರ್ತಿ 1.2 ಕೆಜಿ ತೂಕದ ಬೃಹತ್ ಚಿನ್ನದ ಗಟ್ಟಿ ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ 1.30 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.

ಭೂಮಿಯ ಆಳದಲ್ಲಿ ಹೊಳೆದ ಅಚ್ಚರಿ

ಹೆಸರು ಬಹಿರಂಗಪಡಿಸಲು ಬಯಸದ ಈ ವ್ಯಕ್ತಿ, ವಾಯುವ್ಯ ನ್ಯೂ ಸೌತ್ ವೇಲ್ಸ್‌ನ ದೂರದ ಹಳ್ಳಿಯಾದ ಟಿಬೂಬುರ್ರಾ ಬಳಿಯ ‘ಮೌಂಟ್ ಸ್ಟುವರ್ಟ್ ಸ್ಟೇಷನ್’ ಎಂಬಲ್ಲಿ ಲೋಹ ಶೋಧಕ ಹಿಡಿದು ಅಲೆದಾಡುತ್ತಿದ್ದ. ಹಲವು ದಿನಗಳಿಂದ ಸತತವಾಗಿ ಹುಡುಕಾಟ ನಡೆಸುತ್ತಿದ್ದ ಅವರಿಗೆ ಎಂದಿನಂತೆ ಮಣ್ಣಿನಡಿಯಲ್ಲಿ ಕಸದ ವಸ್ತುಗಳೇ ಸಿಗುತ್ತಿದ್ದವು. ಆದರೆ ಆ ದಿನ ಅವರ ಮೆಟಲ್ ಡಿಟೆಕ್ಟರ್ ನೀಡಿದ ಒಂದು ವಿಚಿತ್ರ ಸಿಗ್ನಲ್ ಇಡೀ ಕಥೆಯನ್ನೇ ಬದಲಿಸಿದೆ.

ಆರಂಭದಲ್ಲಿ ಈ ಸಿಗ್ನಲ್ ತೀರಾ ಸಾಮಾನ್ಯವಾಗಿತ್ತು. ಆದರೆ ಸುಮಾರು 100 ಮಿಲಿಮೀಟರ್ (ಕೆಲವೇ ಇಂಚು) ಆಳಕ್ಕೆ ಮಣ್ಣನ್ನು ಅಗೆಯುತ್ತಿದ್ದಂತೆ ಡಿಟೆಕ್ಟರ್ ಜೋರಾಗಿ ಶಬ್ದ ಮಾಡಲು ಶುರುಮಾಡಿತು. "ಮೊದಲ ಅಥವಾ ಎರಡನೇ ಬಾರಿ ಮಣ್ಣು ಕೆರೆದಾಗ ಕೆಂಪು ಮಣ್ಣಿನ ಮಧ್ಯೆ ಹೊಳೆಯುವ ಹಳದಿ ಚುಕ್ಕೆಯೊಂದು ಕಣ್ಣಿಗೆ ಬಿತ್ತು. ಕೈ ಹಾಕಿ ಮೇಲೆತ್ತಿ ನೋಡಿದಾಗ ನನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ!" ಎಂದು ಆ ವ್ಯಕ್ತಿ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಅವರು ಮಣ್ಣಿನಿಂದ ಬೃಹತ್ ಬಂಗಾರದ ಗಟ್ಟಿಯನ್ನು ಹೊರತೆಗೆಯುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, "ಇದನ್ನು ನೋಡಿ! ನಿಜಕ್ಕೂ ನಂಬೋಕೆ ಆಗ್ತಿಲ್ಲ!" ಎಂದು ಅವರು ಕೂಗುವ ದೃಶ್ಯ ನೆಟ್ಟಿಗರ ಹುಬ್ಬೇರಿಸಿದೆ.

ಏನಿದು ‘ಟಿಬೂಬುರ್ರಾ ಸ್ಪಡ್’?

ಆಲೂಗಡ್ಡೆಯ ಆಕಾರದಲ್ಲಿರುವ ಕಾರಣ ಈ ಚಿನ್ನದ ಗಟ್ಟಿಗೆ ‘ಟಿಬೂಬುರ್ರಾ ಸ್ಪಡ್’ (Tibooburra Spud) ಎಂದು ಹೆಸರಿಡಲಾಗಿದೆ. ದೊರೆತಿರುವ ಗಟ್ಟಿಯ ತೂಕ ಸುಮಾರು 1.2 ಕಿಲೋಗ್ರಾಂ. ಇದರಲ್ಲಿ ಕ್ವಾರ್ಟ್ಜ್ ಕಲ್ಲು ಮಿಶ್ರಣವಾಗಿದ್ದು, ಪರೀಕ್ಷೆಗಳ ಪ್ರಕಾರ ಬರೋಬ್ಬರಿ 940 ಗ್ರಾಂನಷ್ಟು ನೂರಕ್ಕೆ ನೂರು ಶುದ್ಧ ಬಂಗಾರವಿದೆ ಎಂದು ತಿಳಿದುಬಂದಿದೆ.

ಮಾರುಕಟ್ಟೆಯಲ್ಲಿ ಇದರ ಕಚ್ಚಾ ಮೌಲ್ಯವೇ ಸುಮಾರು 1.50 ರಿಂದ 1.60 ಲಕ್ಷ ಡಾಲರ್ (ಸುಮಾರು 1.30 ಕೋಟಿ ರೂ.) ಎಂದು ಅಂದಾಜಿಸಲಾಗಿದೆ. ಆದರೆ ಅಪರೂಪದ ನೈಸರ್ಗಿಕ ಚಿನ್ನದ ಗಟ್ಟಿಗಳನ್ನು ಕಲೆಹಾಕುವ ಸಂಗ್ರಾಹಕರು ಇದಕ್ಕೆ ಮಾರುಕಟ್ಟೆ ಬೆಲೆಗಿಂತಲೂ ದುಪ್ಪಟ್ಟು ಹಣ ನೀಡಲು ಸಿದ್ಧರಿರುತ್ತಾರೆ. ಹೀಗಾಗಿ ಇದು ಇನ್ನೂ ಹೆಚ್ಚಿನ ಬೆಲೆಗೆ ಹರಾಜಾಗುವ ಸಾಧ್ಯತೆಯಿದೆ.

ಕ್ರೇಜ್ ಆಗಿ ಬದಲಾಗುತ್ತಿರುವ ಚಿನ್ನದ ಬೇಟೆ!

ಈ ಘಟನೆಯ ನಂತರ ಆಸ್ಟ್ರೇಲಿಯಾದಲ್ಲಿ ಮೆಟಲ್ ಡಿಟೆಕ್ಟರ್ ಹಿಡಿದು ಹೊರಡುವವರ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಸ್ಥಳೀಯ ಉಪಕರಣ ಮಾರಾಟಗಾರರು ಹೇಳುವಂತೆ, "ಇತ್ತೀಚಿನ ದಿನಗಳಲ್ಲಿ ವಾರಾಂತ್ಯದ ಮೋಜು ಮತ್ತು ಸಾಹಸಕ್ಕಾಗಿ ಚಿನ್ನ ಹುಡುಕುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ 1 ಕೆಜಿಗಿಂತ ದೊಡ್ಡ ಚಿನ್ನದ ಗಟ್ಟಿ ಸಿಗುವುದು ಜೀವಮಾನದಲ್ಲೇ ಅತ್ಯಂತ ಅಪರೂಪದ ಪವಾಡ." ಎಂದು ಹೇಳಿದ್ದಾರೆ, (ಏಜೆನ್ಸೀಸ್​).