ನೇಪಾಳದಲ್ಲಿ ಭೀಕರ ಪ್ರವಾಹ: ಸುರಂಗದೊಳಗೆ ಕಣ್ಮರೆಯಾದ ಕಾರ್ಮಿಕರು 
ವಿದೇಶ

ಸುರಂಗದೊಳಗೆ 93 ಕಾರ್ಮಿಕರು ನಾಪತ್ತೆ! ತುದಿ ತಲುಪಿದ ಡ್ರೋನ್​ನಲ್ಲಿ ಕಂಡಿದ್ದೇನು? ವಿಫಲವಾದ ಕೊನೆಯ ಹುಡುಕಾಟ! Nepal Floods

ಕಠ್ಮುಂಡು: ನೇಪಾಳದಲ್ಲಿ ಭೀಕರ ಪ್ರವಾಹ (Nepal Floods) ಸೃಷ್ಟಿಸಿರುವ ಅಲ್ಲೋಲಕಲ್ಲೋಲದ ನಡುವೆ, ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣೆಗಾಗಿ ನಡೆಸಿದ ಕಾರ್ಯಾಚರಣೆ ಆಘಾತಕಾರಿ ಅಂತ್ಯ ಕಂಡಿದೆ.

ಅತ್ಯಾಧುನಿಕ ಥರ್ಮಲ್ ಡ್ರೋನ್‌ಗಳನ್ನು ಬಳಸಿ ಸುರಂಗದ ಕಡೆಯ ತುದಿಯವರೆಗೆ ತಲುಪಿದ ರಕ್ಷಣಾ ತಂಡಕ್ಕೆ ಅಲ್ಲಿ ಯಾರೂ ಜೀವಂತವಾಗಿಲ್ಲ ಎಂಬ ಕಹಿ ಸತ್ಯ ಎದುರಾಗಿದೆ.

111 ಮೆಗಾವ್ಯಾಟ್ ಸಾಮರ್ಥ್ಯದ ರಸುವಾಗಧಿ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಕನಿಷ್ಠ 93 ಕಾರ್ಮಿಕರು ಸಿಲುಕಿಕೊಂಡಿದ್ದು, ಅವರು ಯಾವುದೇ ಸುಳಿವಿಲ್ಲದೆ ಕಣ್ಮರೆಯಾಗಿದ್ದಾರೆ ಎಂದು ಶಂಕಿಸಲಾಗಿದೆ.

ಹೇಗಿತ್ತು ರಕ್ಷಣಾ ಕಾರ್ಯಾಚರಣೆ?

ಭೋಟೆ ಕೋಶಿ ನದಿಯಲ್ಲಿ ಉಕ್ಕಿ ಹರಿದ ಪ್ರವಾಹದ ನೀರು ಜಲವಿದ್ಯುತ್ ಯೋಜನೆಯನ್ನು ಮುಳುಗಿಸಿದಾಗ, ನೂರಾರು ಕಾರ್ಮಿಕರು ಸುರಂಗದ ಒಳಗೆ ಸಿಲುಕಿರಬಹುದು ಎಂಬ ಭೀತಿ ಎದುರಾಗಿತ್ತು. ಪರಿಸ್ಥಿತಿಯ ಗಂಭೀರತೆ ಅರಿತ ನೇಪಾಳಿ ಸೇನಾ ಸಿಬ್ಬಂದಿ, ನುರಿತ ಎಂಜಿನಿಯರ್‌ಗಳು ಮತ್ತು ತಂತ್ರಜ್ಞರ ಡ್ರೋನ್ ತಂಡ ಜಂಟಿಯಾಗಿ ರಕ್ಷಣಾ ಕಾರ್ಯಕ್ಕಿಳಿಯಿತು.

ನೇರವಾಗಿ ಮನುಷ್ಯರು ಒಳಗೆ ಹೋದರೆ ಪ್ರಾಣಾಪಾಯವಿದ್ದ ಕಾರಣ, ತಂಡವು ಅತ್ಯಾಧುನಿಕ ಥರ್ಮಲ್ ಡ್ರೋನ್‌ಗಳ ಮೊರೆ ಹೋಯಿತು. ಸುರಂಗದ ಒಂದೊಂದೇ ಮೂಲೆಗಳನ್ನು ಜಾಲಾಡುತ್ತಾ, ಕಣ್ಣಿಗೆ ಕಾಣದ ಕತ್ತಲಿನ ಒಳಭಾಗವನ್ನೆಲ್ಲ ಡ್ರೋನ್ ಕ್ಯಾಮೆರಾಗಳು ಜರಡಾಡಿದವು.


ಕೊನೆಯ ತುದಿಯವರೆಗೆ ಡ್ರೋನ್ ತೆರಳಿ ಹುಡುಕಾಟ ನಡೆಸಿದರೂ, ಒಳಗೆ ಯಾರೊಬ್ಬರೂ ಜೀವಂತವಿರುವ ಅಥವಾ ಸುಳಿದಿರುವ ಯಾವುದೇ ಕುರುಹು ಸಿಗಲಿಲ್ಲ. ಅಂತಿಮವಾಗಿ ಸೇನಾ ನೇತೃತ್ವದ ತಂಡ ಸುರಂಗದಿಂದ ಬರಿಗೈಯಲ್ಲಿ ವಾಪಸ್ ಬರುವಂತಾಯಿತು. ಡ್ರೋನ್ ವರದಿ ಸ್ಪಷ್ಟವಾಗುತ್ತಿದ್ದಂತೆ, ರಕ್ಷಣಾ ತಂಡಗಳು ರಸುವಾ ಜಿಲ್ಲೆಯಗೆ ಮರಳಿದವು.

ಪ್ರಳಯಕ್ಕೆ ನಲುಗಿದ ನೇಪಾಳ: ಲೆಕ್ಕಕ್ಕಿಲ್ಲದಷ್ಟು ಸಾವು-ನೋವು

ಕಳೆದ ಬುಧವಾರದಿಂದ ನೇಪಾಳದಲ್ಲಿ ಪ್ರವಾಹದ ಅಬ್ಬರಕ್ಕೆ ನೂರಾರು ಅಮಾಯಕ ಜೀವಗಳು ಬಲಿಯಾಗಿವೆ. ದೇಶಾದ್ಯಂತ ಒಟ್ಟು ಸಾವಿನ ಸಂಖ್ಯೆ 900 ಗಡಿದಾಟಿದ್ದರೆ, ಸುಮಾರು 4,500ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.
ಪ್ರವಾಹದ ಅಬ್ಬರಕ್ಕೆ ಸಿಲುಕಿ ಜಲವಿದ್ಯುತ್ ಯೋಜನೆಗಳಲ್ಲಿದ್ದ ನೂರಾರು ಕಾರ್ಮಿಕರು ಭೂಗತರಾಗುವಂತಾಯಿತು. ಕಾಣೆಯಾದವರು ಸುರಂಗದೊಳಗೆ ಇದ್ದಾರಾ, ಪ್ರವಾಹಕ್ಕೆ ಕೊಚ್ಚಿಹೋಗಿದ್ದಾರಾ ಅಥವಾ ಎತ್ತರದ ಪ್ರದೇಶಗಳಿಗೆ ಓಡಿಹೋಗಿ ಬದುಕುಳಿದಿದ್ದಾರಾ ಎಂಬುದನ್ನು ಪತ್ತೆ ಹಚ್ಚಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಮತ್ತು ನಿರ್ವಹಣಾ ಪ್ರಾಧಿಕಾರ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಕೇವಲ ಜಲವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದಂತೆ ಒಟ್ಟು 933 ಜನರು ನಾಪತ್ತೆಯಾಗಿದ್ದಾರೆ. ಆದರೆ ನಿರಂತರ ಶ್ರಮದ ನಡುವೆಯೂ, ರಕ್ಷಣಾ ಸಿಬ್ಬಂದಿ ಇಲ್ಲಿಯವರೆಗೆ ಕೇವಲ 279 ಜನರನ್ನು ಮಾತ್ರ ಸುರಂಗಗಳಿಂದ ಸುರಕ್ಷಿತವಾಗಿ ಹೊರತರಲು ಶಕ್ತರಾಗಿದ್ದಾರೆ, (ಏಜನ್ಸೀಸ್​).