ಸಾಗರದ ಆಳದಲ್ಲಿ ಪತ್ತೆಯಾದ ಕಪ್ಪು ಮೊಟ್ಟೆಗಳು: ಓಪನ್​ ಮಾಡಿದ ಸಂಶೋಧಕರಿಗೆ ಕಾದಿತ್ತು ಬಿಗ್​ ಶಾಕ್​! Black Eggs  
ವಿದೇಶ

ಸಾಗರದ ಆಳದಲ್ಲಿ ಪತ್ತೆಯಾದ ಕಪ್ಪು ಮೊಟ್ಟೆಗಳು: ಓಪನ್​ ಮಾಡಿದ ಸಂಶೋಧಕರಿಗೆ ಕಾದಿತ್ತು ಬಿಗ್​ ಶಾಕ್​! Black Eggs

ಪ್ರಮುಖ ಮುಖ್ಯಾಂಶಗಳು

  • ಈ ಜಗತ್ತು ಸಾಕಷ್ಟು ನಿಗೂಢಗಳಿಂದ ಕೂಡಿರುವುದು ಹೊಸ ಸಂಗತಿಯೇನಲ್ಲ
  • ವಿಷ್ಮಯಕಾರಿ ಜಗತ್ತಿನ ಬಗ್ಗೆ ಮನುಷ್ಯ ತಿಳಿದುಕೊಳ್ಳಬೇಕಾದ ವಿಚಾರ ಸಮುದ್ರದಷ್ಟಿದೆ
  • ಈಗ ಮನುಷ್ಯರು ತಿಳಿದುಕೊಂಡಿರುವುದು ಒಂದು ಬೊಗಸೆಯಷ್ಟು ಮಾತ್ರ
  • ಈ ಭೂಮಿಯ ಮೇಲಿರುವ ಸಾಗರಗಳ ಆಳವನ್ನು ಕಂಡುಹಿಡಿಯಲು ಇನ್ನೂ ಸಾಧ್ಯವಾಗಿಲ್ಲ.
Black Eggs : ಈ ಜಗತ್ತು ಸಾಕಷ್ಟು ನಿಗೂಢಗಳಿಂದ ಕೂಡಿರುವುದು ಹೊಸ ಸಂಗತಿಯೇನಲ್ಲ. ವಿಷ್ಮಯಕಾರಿ ಜಗತ್ತಿನ ಬಗ್ಗೆ ಮನುಷ್ಯ ತಿಳಿದುಕೊಳ್ಳಬೇಕಾದ ವಿಚಾರ ಸಮುದ್ರದಷ್ಟಿದೆ. ಈಗ ತಿಳಿದುಕೊಂಡಿರುವುದು ಒಂದು ಬೊಗಸೆಯಷ್ಟು ಮಾತ್ರ. ನಮ್ಮ ಸಂಶೋಧಕರು ಬಾಹ್ಯಾಕಾಶದ ಸಾಕಷ್ಟು ರಹಸ್ಯಗಳನ್ನು ಪತ್ತೆಹಚ್ಚಿದ್ದಾರೆ. ಆದರೆ, ಈ ಭೂಮಿಯ ಮೇಲಿರುವ ಸಾಗರಗಳ ಆಳವನ್ನು ಕಂಡುಹಿಡಿಯಲು ಇನ್ನೂ ಸಾಧ್ಯವಾಗಿಲ್ಲ.
ಸಾಗರದ ಅತ್ಯಂತ ಆಳವಾದ ಕತ್ತಲೆಯ ಜಗತ್ತಿನಲ್ಲಿ ನಮ್ಮ ಊಹೆಗೂ ನಿಲುಕದ ಸಾಕಷ್ಟು ರಹಸ್ಯಗಳು ಅಡಗಿವೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ ಏನೆಂದರೆ, ಸಾಗರದಲ್ಲಿರುವ ಜೀವಿಗಳ ಸಂಖ್ಯೆ ಭೂಮಿಯ ಮೇಲಿನ ಜೀವಿಗಳಿಗಿಂತಲೂ ಹೆಚ್ಚು. ಅವುಗಳ ಜಾತಿಗಳು ಮತ್ತು ಪ್ರಭೇದಗಳನ್ನು ಎಣಿಸುವುದು ಸುಲಭದ ಕೆಲಸವಲ್ಲ. ಒಂದು ರೀತಿ ಆಕಾಶದಲ್ಲಿರುವ ನಕ್ಷತ್ರಗಳನ್ನು ಎಣಿಸಿದಂತೆ. ಸಾಗರದ ಆಳದಲ್ಲಿ ಏಲಿಯನ್‌ಗಳು ಕೂಡ ಅಡಗಿರಬಹುದು ಎನ್ನಲಾಗುತ್ತಿದೆ. ಈ ಕುರಿತಾದ ಅನೇಕ ಕಥೆಗಳು ಈಗಾಗಲೇ ನಮ್ಮ ನಡುವೆ ಹರಿದಾಡುತ್ತಿವೆ. ಇದರ ನಡುವೆ ನಮ್ಮ ಸಂಶೋಧಕರು ಇತ್ತೀಚೆಗೆ ಒಂದು ವಿಚಿತ್ರ ಜೀವಿಯನ್ನು ಕಂಡುಹಿಡಿದಿದ್ದು, ವಿಜ್ಞಾನ ಲೋಕವೇ ಅಚ್ಚರಿಗೊಂಡಿದೆ.

ಪೆಸಿಫಿಕ್​ ಸಾಗರದ ಆಳದಲ್ಲಿ ಕಪ್ಪು ಮೊಟ್ಟೆ

ತಮ್ಮ ಸಂಶೋಧನೆಯ ಭಾಗವಾಗಿ, ಜಪಾನ್​ನ ಟೋಕಿಯೊ ವಿಶ್ವವಿದ್ಯಾಲಯ ಮತ್ತು ಹೊಕ್ಕೈಡೊ ವಿಶ್ವವಿದ್ಯಾಲಯದ ಸಂಶೋಧಕರು ಇತ್ತೀಚೆಗೆ ಪೆಸಿಫಿಕ್ ಮಹಾಸಾಗರದಲ್ಲಿ ರೋಬೋಟಿಕ್ ಡೈವ್ ನಡೆಸಿದರು. ಸುಮಾರು 6,200 ಮೀಟರ್ ಆಳದಲ್ಲಿ, ದೊಡ್ಡ ಬಂಡೆಗೆ ಅಂಟಿಕೊಂಡಂತಿರುವ ಕಪ್ಪು ಮೊಟ್ಟೆಗಳನ್ನು ಪತ್ತೆಹಚ್ಚಿದರು. ಆ ಮೊಟ್ಟೆಗಳು 3 ಮಿಲಿಮೀಟರ್​ ಅಗಲವಿತ್ತು ಮತ್ತು ನೋಡಲು ತುಂಬಾ ವಿಚಿತ್ರವಾಗಿದ್ದವು. ಹೇಳಬೇಕೆಂದರೆ, ಹಾಲಿವುಡ್ ಸಿನಿಮಾಗಳಲ್ಲಿ ತೋರಿಸಿರುವ ಅನ್ಯಲೋಕದ ಮೊಟ್ಟೆಗಳಂತೆಯೇ ಇದ್ದವು. ಆ ಮೊಟ್ಟೆಗಳನ್ನು ನೋಡಿ ವಿಜ್ಞಾನಿಗಳು ಆಶ್ಚರ್ಯಚಕಿತರಾದರು.

ಓಪನ್​ ಮಾಡಿದಾಗ ಕಾದಿತ್ತು ಅಚ್ಚರಿ

ಅಂದಹಾಗೆ, ಸಮುದ್ರದಲ್ಲಿ ಮೀನುಗಳು ಮಾತ್ರವಲ್ಲ, ಮೊಟ್ಟೆ ಇಡುವ ಇನ್ನೂ ಅನೇಕ ಜಾತಿಗಳಿವೆ. ಆದ್ದರಿಂದ ಈ ಕಪ್ಪು ಮೊಟ್ಟೆಗಳು ಯಾವ ರೀತಿಯ ಮೊಟ್ಟೆಗಳಾಗಿರಬಹುದು ಎಂಬ ಅನುಮಾನವನ್ನು ಹುಟ್ಟುಹಾಕಿತು. ಹೀಗಾಗಿ, ಸಂಶೋಧಕರು ರೋಬೋಟಿಕ್ ಕೈಯಿಂದ ಮೊಟ್ಟೆಗಳಲ್ಲಿ ಒಂದನ್ನು ಒಡೆದರು. ಆ ಸಮಯದಲ್ಲಿ, ಅದರಿಂದ ಹಾಲಿನಂತಹ ದ್ರವ ಹೊರಬಂದಿತು. ಅದರೊಳಗೆ ಸಣ್ಣ ಜೀವಿಗಳು ಕೂಡ ಕಾಣಿಸಿಕೊಂಡವು. ಅವೆಲ್ಲವೂ ನೀರಿನಲ್ಲಿ ಚದುರಿಹೋದವು. ಆದಾಗ್ಯೂ, ಮೊದಲು ಅಂತಹ ಜೀವಿಗಳನ್ನು ನೋಡದ ಕಾರಣ, ಅವು ಯಾವುವು ಎಂದು ಸಂಶೋಧಕರಿಗೆ ಅರ್ಥವಾಗಲಿಲ್ಲ. ಅಲ್ಲದೆ, ಅವರು ನೋಡಿದ್ದು ಮೊಟ್ಟೆಗಳಲ್ಲ, ಗೂಡುಗಳು ಎಂದು ನಿರ್ಧರಿಸಿದರು.

ಚಪ್ಪಟೆ ಹುಳುಗಳಂತಿದ್ದವು

ಆ ಕಪ್ಪು ಮೊಟ್ಟೆಯಂತಹ ಗೂಡುಗಳಲ್ಲಿ ಕಂಡುಬಂದ ಜೀವಿಗಳು ಹಿಂದೆಂದೂ ನೋಡಿರದ ಜೀವಿಗಳಾಗಿದ್ದವು. ಅವು ಚಪ್ಪಟೆ ಹುಳುಗಳಂತಿದ್ದವು. ಚಪ್ಪಟೆ ಹುಳುಗಳು ಸಾಮಾನ್ಯವಾಗಿ ಬಂಡೆಗಳಿಗೆ ಅಂಟಿಕೊಳ್ಳುತ್ತವೆ. ಆದರೆ ಮೊಟ್ಟೆಯಂತಹ ಗೂಡುಗಳಲ್ಲಿ ಅವು ಕಾಣಿಸಿಕೊಂಡಿರುವುದು ಇದೇ ಮೊದಲು. ಸಮುದ್ರದೊಳಗಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ಅವು ಹಾಗೆ ಗೂಡುಗಳನ್ನು ನಿರ್ಮಿಸಿರಬಹುದು ಎಂದು ಸಂಶೋಧಕರು ಭಾವಿಸಿದ್ದಾರೆ. ಸದ್ಯ ಆ ಗೂಡುಗಳ ಮಾದರಿಗಳನ್ನು ಸಂಗ್ರಹಿಸಿ ಸಂಶೋಧನೆ ನಡೆಸಲಾಗುತ್ತಿದೆ.
ಈ ಅಧ್ಯಯನದಿಂದ ಕಂಡುಬಂದ ಅನಿರೀಕ್ಷಿತ ಆವಿಷ್ಕಾರವೆಂದರೆ, ಸಾಗರದ ಹದಲ್ (ಅಬಿಸಲ್) ವಲಯದಲ್ಲೂ ಕೆಲವು ಜಾತಿಯ ಚಪ್ಪಟೆ ಹುಳುಗಳಿವೆ ಮತ್ತು ಚಪ್ಪಟೆ ಹುಳುಗಳ ಕುಟುಂಬದ ಅನೇಕ ಸದಸ್ಯರು ಇದೇ ರೀತಿಯ ಭ್ರೂಣವನ್ನು ಹೊಂದಿದ್ದಾರೆ ಎಂಬುದು. ಅಂದಹಾಗೆ, ಭ್ರೂಣದ ಬೆಳವಣಿಗೆಗೆ ದೊಡ್ಡ ಬದಲಾವಣೆಗಳಿಗೆ ಒಳಗಾಗುವ ಅಗತ್ಯವಿಲ್ಲದ ಕಾರಣ, ಈ ಜೀವಿಗಳು ಭೂವೈಜ್ಞಾನಿಕ ಸಮಯದಲ್ಲಿ ಆಳವಿಲ್ಲದ ಕರಾವಳಿ ನೀರಿನಿಂದ ಆಳ ವಲಯಕ್ಕೆ ವಲಸೆ ಹೋಗಲು ಸಾಧ್ಯವಾಯಿತು. ಅವು ವಯಸ್ಕ ಜೀವಿಗಳಾಗಿ ಬೆಳೆದಂತೆ ಅವುಗಳ ಮೊಟ್ಟೆಗಳ ರೂಪದಲ್ಲಿ ಗೂಡುಗಳನ್ನು ಕಟ್ಟುತ್ತವೆ. ಇದರಿಂದ ನೀರೊಳಗಿನ ಒತ್ತಡ ಮತ್ತು ಆಳದ ಕಠಿಣ ರಾಸಾಯನಿಕ ಪರಿಸರದಿಂದ ರಕ್ಷಿಣೆ ಪಡೆಯುತ್ತದೆ ಎಂದು ತಿಳಿದುಬಂದಿದೆ.

ಹೇಗೆ ಸಾಧ್ಯ?

ಅಂದಹಾಗೆ, ಇಷ್ಟೊಂದು ಆಳಗಳಲ್ಲಿ ಅಖಂಡ ಭ್ರೂಣಗಳನ್ನು ಕಂಡುಹಿಡಿದಿರುವುದು ಇದೇ ಮೊದಲು. ಆದ್ದರಿಂದ, ಈ ಸಂಶೋಧನೆಗಳು ಸರಳವಾದ ದೇಹವನ್ನು ಹೊಂದಿರುವ ಜೀವಿಗಳು ಭೂವೈಜ್ಞಾನಿಕ ಸಮಯದಲ್ಲಿ ಆಳವಿಲ್ಲದ ಕರಾವಳಿಯಿಂದ ಸಾಗರಗಳ ಆಳವಾದ ಪ್ರದೇಶಗಳಿಗೆ ಹೇಗೆ ಚಲಿಸಲು ಸಾಧ್ಯವಾಯಿತು ಎಂಬುದನ್ನು ತಿಳಿಯಲು ಹೆಚ್ಚುವರಿ ಅಧ್ಯಯನಗಳನ್ನು ನೆಡಸಬೇಕಾಗಿದೆ. ಸುಮಾರು 6,000 ಮೀಟರ್ ಆಳದಲ್ಲಿ ಅವುಗಳ ಜೀವನಶೈಲಿಯ ಬಗ್ಗೆ ತಿಳಿದುಕೊಳ್ಳಲು ಹೆಚ್ಚಿನ ಸಂಶೋಧನೆ ಪ್ರಾರಂಭಿಸಿದ್ದಾರೆ. ಮೊಟ್ಟೆಗಳಂತೆಯೇ ಗೋಳಾಕಾರದ ಗೂಡುಗಳು ಬಂಡೆಗಳಿಗೆ ಬಹಳ ಬಿಗಿಯಾಗಿ ಜೋಡಿಸಲ್ಪಟ್ಟಿವೆ ಎಂದು ಸಂಶೋಧಕರು ಹೇಳಿದ್ದಾರೆ. ಆದಾಗ್ಯೂ, ಅವು ಮೊಟ್ಟೆಗಳಲ್ಲ, ಬದಲಾಗಿ ಚಪ್ಪಟೆ ಹುಳುಗಳ ಸಂತಾನೋತ್ಪತ್ತಿ ಕೇಂದ್ರಗಳಾಗಿವೆ ಎಂದು ಹೇಳಿದ್ದಾರೆ. ಸಂಶೋಧನೆಯ ಸಮಯದಲ್ಲಿ ನಡೆಸಿದ ಡಿಎನ್ಎ ಪರೀಕ್ಷೆಗಳು ಈ ಜೀವಿಗಳು ಇನ್ನೂ ವಿವರಿಸದ ಜೀವಿಗಳ ಹೊಸ ಜಾತಿಯಾದ ಪ್ಲಾಟಿಹೆಲ್ಮಿಂಥೆಸ್ ಫೈಲಮ್‌ಗೆ ಸೇರಿವೆ ಎಂದು ಬಹಿರಂಗಪಡಿಸಿವೆ, (ಏಜೆನ್ಸೀಸ್​).