36 ಗಂಟೆಗಳ ‘ಸೈಲೆಂಟ್ ಆಪರೇಷನ್’: ಇರಾನ್ ಉಸಿರುಗಟ್ಟಿಸಿದ ಅಮೆರಿಕದ ನೌಕಾಪಡೆ! ಸಂಪೂರ್ಣ ದಿಗ್ಬಂಧನ ಘೋಷಿಸಿದ ಸೆಂಟ್ರಲ್ ಕಮಾಂಡ್!
ವಾಷಿಂಗ್ಟನ್: ಮಧ್ಯಪ್ರಾಚ್ಯದ ಸಂಘರ್ಷ ಈಗ ನಿರ್ಣಾಯಕ ಹಂತವನ್ನು ತಲುಪಿದೆ. ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಮುಖ್ಯಸ್ಥ ಅಡ್ಮಿರಲ್ ಬ್ರಾಡ್ ಕೂಪರ್, ಇರಾನ್‌ನ ಎಲ್ಲಾ ಪ್ರಮುಖ ಬಂದರುಗಳಿಗೆ ವಿಧಿಸಲಾಗಿದ್ದ ಸಮುದ್ರ ದಿಗ್ಬಂಧನವನ್ನು ಸಂಪೂರ್ಣವಾಗಿ ಜಾರಿಗೊಳಿಸಲಾಗಿದೆ ಎಂದು ಘೋಷಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ಇರಾನ್‌ನ ವಿದೇಶಿ ವ್ಯಾಪಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಆ ರಾಷ್ಟ್ರದ ಆರ್ಥಿಕ ಬೆನ್ನೆಲುಬು ಮುರಿದಂತಾಗಿದೆ.
36 ಗಂಟೆಗಳಲ್ಲಿ ಇರಾನ್ ಉಸಿರುಗಟ್ಟಿಸಿದ ಅಮೆರಿಕ ನೌಕಾಪಡೆ!
ಈ ಬಗ್ಗೆ ಅಡ್ಮಿರಲ್ ಬ್ರಾಡ್ ಕೂಪರ್ ಅವರು ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಈ ಮಹತ್ವದ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ದಿಗ್ಬಂಧನ ಆರಂಭವಾದ ಕೇವಲ 36 ಗಂಟೆಗಳ ಒಳಗಾಗಿ ಅಮೆರಿಕದ ಪಡೆಗಳು ಇರಾನ್‌ನ ಒಳಬರುವ ಮತ್ತು ಹೊರಹೋಗುವ ಎಲ್ಲಾ ವಾಣಿಜ್ಯ ಹಡಗುಗಳ ಸಂಚಾರವನ್ನು ಯಶಸ್ವಿಯಾಗಿ ತಡೆಹಿಡಿದಿವೆ.
ಇರಾನ್‌ನ ಶೇ. 90ರಷ್ಟು ಆರ್ಥಿಕತೆಯು ಸಮುದ್ರ ಮಾರ್ಗದ ಅಂತಾರಾಷ್ಟ್ರೀಯ ವ್ಯಾಪಾರವನ್ನು ಅವಲಂಬಿಸಿದೆ. ನಮ್ಮ ಪಡೆಗಳು ಈಗ ಸಮುದ್ರದ ಮೇಲೆ ಸಂಪೂರ್ಣ ಪ್ರಾಬಲ್ಯ ಹೊಂದಿದ್ದು, ಇರಾನ್‌ನ ಆರ್ಥಿಕ ವ್ಯವಹಾರಗಳನ್ನು ಶೂನ್ಯಕ್ಕೆ ಇಳಿಸಿವೆ ಎಂದು ಅಡ್ಮಿರಲ್ ಕೂಪರ್ ತಿಳಿಸಿದ್ದಾರೆ.
ಯುದ್ಧದ ನಡುವೆ ಶಾಂತಿ ಮಂತ್ರ: ಟ್ರಂಪ್ ಮಾಸ್ಟರ್ ಪ್ಲಾನ್..?
ಒಂದೆಡೆ ಮಿಲಿಟರಿ ಶಕ್ತಿಯ ಮೂಲಕ ಇರಾನ್ ಅನ್ನು ಹಣ್ಣು ಮಾಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮತ್ತೊಂದೆಡೆ ಇರಾನ್ ತೀವ್ರವಾಗಿ ಸಂಧಾನಕ್ಕೆ ಹಾತೊರೆಯುತ್ತಿದೆ ಎಂದು ಹೇಳಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಎರಡನೇ ಸುತ್ತಿನ ಮಾತುಕತೆಗಳು ಈ ಸಂಘರ್ಷಕ್ಕೆ ಅಂತ್ಯ ಹಾಡಬಹುದು ಎಂಬ ನಿರೀಕ್ಷೆ ಇದೆ.
ದಿಗ್ಬಂಧನದ ಪ್ರಮುಖ ಪರಿಣಾಮಗಳು
ತೈಲ ರಫ್ತು ಸ್ಥಗಿತ: ಇರಾನ್‌ನ ಪ್ರಮುಖ ಆದಾಯ ಮೂಲವಾದ ತೈಲ ರಫ್ತು ಈಗ ಶೂನ್ಯಕ್ಕೇರಿದೆ.
ಆಮದು ವ್ಯತ್ಯಯ: ಅಗತ್ಯ ವಸ್ತುಗಳು ಮತ್ತು ಆಹಾರ ಸಾಮಗ್ರಿಗಳ ಆಮದು ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.
ಜಾಗತಿಕ ತೈಲ ಮಾರುಕಟ್ಟೆ: ಈ ದಿಗ್ಬಂಧನದಿಂದಾಗಿ ಜಾಗತಿಕವಾಗಿ ತೈಲ ಬೆಲೆಗಳಲ್ಲಿ ಏರಿಳಿತ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಸಂಧಾನ ವಿಫಲ, ದಿಗ್ಬಂಧನ ಸಫಲ!
ಕಳೆದ ವಾರಾಂತ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆದ ಶಾಂತಿ ಮಾತುಕತೆಗಳು ಯಾವುದೇ ಫಲ ನೀಡದ ಹಿನ್ನೆಲೆಯಲ್ಲಿ, ಸೋಮವಾರದಿಂದಲೇ ಈ ಕಠಿಣ ದಿಗ್ಬಂಧನವನ್ನು ಜಾರಿಗೆ ತರಲು ಟ್ರಂಪ್ ಆದೇಶಿಸಿದ್ದರು. ಅಮೆರಿಕದ ಈ ತಂತ್ರವು ಇರಾನ್ ಅನ್ನು ಅನಿವಾರ್ಯವಾಗಿ ಒಪ್ಪಂದದ ಮೇಜಿನ ಬಳಿ ತರುವಂತೆ ಮಾಡಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಈಗ ಇಡೀ ಜಗತ್ತಿನ ಕಣ್ಣು ಇಸ್ಲಾಮಾಬಾದ್ ಮೇಲೆ ನೆಟ್ಟಿದೆ. ಇರಾನ್ ತನ್ನ ಬಿಗಿ ಹಿಡಿತವನ್ನು ಸಡಿಲಿಸಿ ಅಮೆರಿಕದ ಷರತ್ತುಗಳಿಗೆ ಒಪ್ಪುತ್ತದೆಯೇ ಅಥವಾ ಸಂಘರ್ಷ ಮತ್ತಷ್ಟು ಭೀಕರವಾಗುತ್ತದೆಯೇ ಎಂಬುದು ಮುಂದಿನ 48 ಗಂಟೆಗಳಲ್ಲಿ ನಿರ್ಧಾರವಾಗಲಿದೆ,(ಏಜೆನ್ಸೀಸ್).