31 ಪ್ರಾಂತ್ಯಗಳು, 31 ಸ್ವತಂತ್ರ ಸೈನ್ಯಗಳು! ಇಸ್ರೇಲ್ ಕ್ಷಿಪಣಿಗಳಿಗೆ ಸಿಗದ ಮೊಸಾಯಿಕ್ ಜಾಲ: ಅಮೆರಿಕ, ಇಸ್ರೇಲ್ ಮಿಲಿಟರಿ ತಂತ್ರಗಳನ್ನೂ ಫೇಲ್ ಮಾಡಿದ ಆ ವ್ಯಕ್ತಿ!
ಟೆಹ್ರಾನ್: ಇರಾನ್ ಮತ್ತು ಇಸ್ರೇಲ್ ನಡುವಿನ ಸಮರ ಭೀಕರ ಸ್ವರೂಪ ಪಡೆದುಕೊಂಡಿದೆ. ಆಪರೇಷನ್ ಎಪಿಕ್ ಫ್ಯೂರಿ ಅಡಿಯಲ್ಲಿ ಇಸ್ರೇಲ್ ಮತ್ತು ಅಮೆರಿಕ ಇರಾನ್‌ನ ಉನ್ನತ ನಾಯಕತ್ವವನ್ನು ಗುರಿಯಾಗಿಸಿಕೊಂಡು ಸರಣಿ ಹತ್ಯೆಗಳನ್ನು ನಡೆಸಿದ್ದರೂ, ಇರಾನ್‌ನ ಸೇನಾ ಶಕ್ತಿ ಮಾತ್ರ ಕುಗ್ಗಿಲ್ಲ. ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಸಾವಿನ ನಂತರವೂ ಇರಾನ್ ತಿರುಗೇಟು ನೀಡುತ್ತಲೇ ಇರುವುದಕ್ಕೆ ಕಾರಣ ಮೊಸಾಯಿಕ್ ಡಿಫೆನ್ಸ್ ಎಂಬ ಅತ್ಯಂತ ಸಂಕೀರ್ಣ ರಕ್ಷಣಾ ತಂತ್ರವಾಗಿದೆ. ಈ ಅದೃಶ್ಯ ಕೋಟೆಯನ್ನು ನಿರ್ಮಿಸಿದ ರೂವಾರಿ ಬೇರೆ ಯಾರೂ ಅಲ್ಲ, ಅವರು ಇರಾನ್‌ನ ಮಾಜಿ ಐಆರ್‌ಜಿಸಿ ಮುಖ್ಯಸ್ಥ ಮೇಜರ್ ಜನರಲ್ ಮೊಹಮ್ಮದ್ ಅಲಿ(Mohammad Ali Jafari) ಜಾಫರಿಯಾಗಿದ್ದಾರೆ.
ಯಾರು ಈ ಮೊಹಮ್ಮದ್ ಅಲಿ ಜಾಫರಿ..?
67 ವರ್ಷದ ಮೊಹಮ್ಮದ್ ಅಲಿ ಜಾಫರಿ ಇರಾನ್ ಸೇನಾ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದು. 2007 ರಿಂದ 2019 ರವರೆಗೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಮಾಂಡರ್-ಇನ್-ಚೀಫ್ ಆಗಿ ಸೇವೆ ಸಲ್ಲಿಸದ್ದಾರೆ. ಅಲ್ಲದೆ, ಇರಾನ್‌ನ ಯುದ್ಧತಂತ್ರವನ್ನೇ ಬದಲಿಸಿದವರು.
ಹಿನ್ನೆಲೆ: 1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಸೇನೆಗೆ ಸೇರಿದ ಇವರು, ಇರಾನ್-ಇರಾಕ್ ಯುದ್ಧದ ಸಮಯದಲ್ಲಿ ಗುಪ್ತಚರ ವಿಭಾಗದಲ್ಲಿ ಕೆಲಸ ಮಾಡಿದವರು.
ತಂತ್ರಗಾರಿಕೆಯ ಹುಟ್ಟು: 2003ರಲ್ಲಿ ಅಮೆರಿಕ ನೇತೃತ್ವದ ಪಡೆಗಳು ಇರಾಕ್ ಮೇಲೆ ದಾಳಿ ಮಾಡಿದಾಗ, ಸದ್ದಾಂ ಹುಸೇನ್ ಆಡಳಿತವು ಕ್ಷಣಾರ್ಧದಲ್ಲಿ ಕುಸಿದುಬಿದ್ದಿದ್ದನ್ನು ಜಾಫರಿ ಗಮನಿಸಿದರು. ಕೇಂದ್ರ ನಾಯಕತ್ವ ಹತನಾದ ತಕ್ಷಣ ಇಡೀ ಸೈನ್ಯ ಶರಣಾಗುವುದನ್ನು ತಡೆಯಲು ಅವರು ಈ ಮೊಸಾಯಿಕ್ ಮಾದರಿಯನ್ನು ಅಭಿವೃದ್ಧಿಪಡಿಸಿದರು.
ಏನಿದು ಮೊಸಾಯಿಕ್ ಡಿಫೆನ್ಸ್..? ಇದು ಹೇಗೆ ಕೆಲಸ ಮಾಡುತ್ತದೆ?
ಮೊಸಾಯಿಕ್ ಡಿಫೆನ್ಸ್ ಎಂದರೆ ಅಧಿಕಾರವನ್ನು ಒಂದೇ ಕೇಂದ್ರದಲ್ಲಿ ಕೇಂದ್ರೀಕರಿಸುವ ಬದಲು, ಅದನ್ನು ಇಡೀ ದೇಶಾದ್ಯಂತ ಸಣ್ಣ ಸಣ್ಣ ಸ್ವತಂತ್ರ ಘಟಕಗಳಾಗಿ ಹಂಚುವುದು.
ವಿಕೇಂದ್ರೀಕೃತ ಕಮಾಂಡ್: ಇರಾನ್‌ನ IRGC ಅನ್ನು 31 ಪ್ರಾಂತೀಯ ಕಮಾಂಡ್‌ಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಪ್ರಾಂತ್ಯವೂ ತನ್ನದೇ ಆದ ಶಸ್ತ್ರಾಸ್ತ್ರ, ಗುಪ್ತಚರ ವ್ಯವಸ್ಥೆ ಮತ್ತು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೊಂದಿದೆ.
ಶಿರಚ್ಛೇದನ ದಾಳಿಗೆ ಉತ್ತರ: ಅಮೆರಿಕ ಅಥವಾ ಇಸ್ರೇಲ್ ಇರಾನ್‌ನ ಸುಪ್ರೀಂ ಲೀಡರ್ ಅಥವಾ ಪ್ರಧಾನ ಸೇನಾ ಕಚೇರಿಯನ್ನು ಧ್ವಂಸಗೊಳಿಸಿದರೂ, ಈ 31 ಘಟಕಗಳು ಪರಸ್ಪರ ಸಂಪರ್ಕವಿಲ್ಲದಿದ್ದರೂ ಸ್ವತಂತ್ರವಾಗಿ ಯುದ್ಧ ಮುಂದುವರಿಸಬಲ್ಲವು.
ಅದೃಶ್ಯ ಜಾಲ: ಇದರಲ್ಲಿ ಕೇವಲ ನಿಯಮಿತ ಸೈನ್ಯ ಮಾತ್ರವಲ್ಲ, ಬಸಿಜ್ ಸ್ವಯಂಸೇವಕ ಪಡೆಗಳು, ಕ್ಷಿಪಣಿ ಘಟಕಗಳು ಮತ್ತು ನೌಕಾಪಡೆಗಳು ಒಂದು ಬೃಹತ್ ಜಾಲದಂತೆ ಕೆಲಸ ಮಾಡುತ್ತವೆ. ಒಂದು ಭಾಗಕ್ಕೆ ಹೊಡೆತ ಬಿದ್ದರೂ ಇಡೀ ಚಿತ್ರಣ ಕುಸಿಯುವುದಿಲ್ಲ.
ಜಾಫರಿ ತಂತ್ರದ ಹಿಂದಿನ ಎರಡು ಪ್ರಮುಖ ಗುರಿಗಳು
ಜಾಫರಿ ರೂಪಿಸಿದ ಈ ಸಿದ್ಧಾಂತವು ಇರಾನ್ ಅನ್ನು ಕೇವಲ ರಕ್ಷಣಾತ್ಮಕವಾಗಿ ಮಾತ್ರವಲ್ಲದೆ, ಆಕ್ರಮಣಕಾರಿಯಾಗಿಯೂ ಬಲಪಡಿಸಿದೆ.
ಅವಧಿಯ ವಿಸ್ತರಣೆ: ಶತ್ರು ರಾಷ್ಟ್ರಗಳು ವೇಗವಾಗಿ ಯುದ್ಧ ಗೆಲ್ಲುವುದನ್ನು ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ. ದೇಶವನ್ನು ಸಣ್ಣ ಸಣ್ಣ ಯುದ್ಧಭೂಮಿಗಳಾಗಿ ಪರಿವರ್ತಿಸಿ ಶತ್ರು ಪಡೆಯನ್ನು ದೀರ್ಘಕಾಲದವರೆಗೆ ದಣಿಯುವಂತೆ ಮಾಡುವುದು.
ಅರೆ-ಸೇನಾ ಪಡೆಗಳ ಬಳಕೆ: ಲೆಬನಾನ್‌ನ ಹಿಜ್ಬುಲ್ಲಾ, ಯೆಮೆನ್‌ನ ಹೌತಿಗಳು ಮತ್ತು ಸಿರಿಯಾದ ಅರೆ-ಸೇನಾ ಪಡೆಗಳನ್ನು ಈ ರಕ್ಷಣಾ ವ್ಯೂಹಕ್ಕೆ ಜೋಡಿಸಲಾಗಿದೆ. ಅಮೆರಿಕ ಇರಾನ್ ಮೇಲೆ ನೇರ ದಾಳಿ ಮಾಡಿದರೆ, ಈ ಸ್ಲೀಪರ್ ಸೆಲ್‌ಗಳು ಜಗತ್ತಿನ ಬೇರೆ ಬೇರೆ ಮೂಲೆಗಳಲ್ಲಿ ದಾಳಿ ಆರಂಭಿಸುತ್ತವೆ.
ಇಂದಿನ ಯುದ್ಧದಲ್ಲಿ ಇದರ ಪ್ರಭಾವ
ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಗ್ಚಿ ಹೇಳುವಂತೆ, ನಮ್ಮ ರಾಜಧಾನಿಯ ಮೇಲೆ ಬಾಂಬ್ ದಾಳಿಯಾದರೂ ಯುದ್ಧ ಮಾಡುವ ನಮ್ಮ ಸಾಮರ್ಥ್ಯಕ್ಕೆ ಧಕ್ಕೆಯಾಗುವುದಿಲ್ಲ. ಅಮೆರಿಕದ ಇತಿಹಾಸದಲ್ಲಿ ವಿಯೆಟ್ನಾಂ ಅಥವಾ ಅಫ್ಘಾನಿಸ್ತಾನದ ಸೋಲಿನಿಂದ ಪಾಠ ಕಲಿತಿರುವ ಜಾಫರಿ, ಇರಾನ್ ಅನ್ನು ಅಜೇಯ ಕೋಟೆಯನ್ನಾಗಿ ಮಾಡಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರೀಕ್ಷಿಸಿದಂತೆ ಇರಾನ್ ಸರ್ಕಾರವು ಒಳಗಿನಿಂದ ಕುಸಿಯುತ್ತಿಲ್ಲ. ಇದಕ್ಕೆ ಕಾರಣ ಜನರಲ್ ಜಾಫರಿ ಅವರು ದಶಕಗಳ ಕಾಲ ಶ್ರಮಿಸಿ ಸಿದ್ಧಪಡಿಸಿದ ಈ ಮೊಸಾಯಿಕ್ ಅಚ್ಚು. ಉನ್ನತ ನಾಯಕತ್ವ ಇಲ್ಲದಿದ್ದರೂ ಕೆಳಹಂತದ ಸೈನಿಕರಿಗೆ ಏನು ಮಾಡಬೇಕು ಎಂಬುದು ಮೊದಲೇ ತಿಳಿದಿರುತ್ತದೆ,(ಏಜೆನ್ಸೀಸ್).