ಪಾಕ್ ಡಬಲ್ ಗೇಮ್ಗೆ 250 ಬಲಿ? ಅಮೆರಿಕಕ್ಕೆ ಒಂದು ಮಾತು, ಇರಾನ್‌ಗೆ ಇನ್ನೊಂದು ಮಾತು ಹೇಳಿತೇ ನೆರೆರಾಷ್ಟ್ರ!
ಟೆಹ್ರಾನ್: ಅಮೆರಿಕ, ಇರಾನ್ ಮತ್ತು ಇಸ್ರೇಲ್ ನಡುವೆ ಶಾಂತಿ ಸ್ಥಾಪಿಸುವ ನೆಪದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನವು(Pakistan Betrayal), ಇಡೀ ವಿಶ್ವವನ್ನೇ ದಾರಿ ತಪ್ಪಿಸಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಪಾಕಿಸ್ತಾನವು ಅಮೆರಿಕ ಮತ್ತು ಇರಾನ್ ದೇಶಗಳಿಗೆ ಪ್ರತ್ಯೇಕ ಮತ್ತು ವಿಭಿನ್ನವಾದ ಕದನ ವಿರಾಮದ ಕರಡು ಪ್ರತಿಗಳನ್ನು ನೀಡುವ ಮೂಲಕ ಮಹಾ ವಂಚನೆ ಮಾಡಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಈ ರಾಜತಾಂತ್ರಿಕ ವಂಚನೆಯ ಪರಿಣಾಮವಾಗಿ ಲೆಬನಾನ್ ಮೇಲೆ ನಡೆದ ಭೀಕರ ಬಾಂಬ್ ದಾಳಿಯಲ್ಲಿ 250ಕ್ಕೂ ಹೆಚ್ಚು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ.
ಪಾಕಿಸ್ತಾನದ 'ನಕಲಿ' ಸಂಧಾನದ ಆಟ
ವರದಿಗಳ ಪ್ರಕಾರ, ಇರಾನ್ ನೀಡಿದ ಕದನ ವಿರಾಮದ ಪ್ರಸ್ತಾವನೆಯನ್ನು ಅಮೆರಿಕಕ್ಕೆ ತಲುಪಿಸುವಾಗ ಪಾಕಿಸ್ತಾನವು ಅದರಲ್ಲಿನ ಪ್ರಮುಖ ಅಂಶಗಳನ್ನು ಬದಲಾಯಿಸಿದೆ. ಅದೇ ರೀತಿ, ಅಮೆರಿಕ ನೀಡಿದ ಪ್ರತಿಕ್ರಿಯೆಯನ್ನು ಇರಾನ್‌ಗೆ ತಲುಪಿಸುವಾಗಲೂ ತನಗಿಷ್ಟ ಬಂದಂತೆ ತಿದ್ದುಪಡಿ ಮಾಡಿದೆ. ಈ ಮಾಹಿತಿ ತಿರುಚುವಿಕೆಯಿಂದಾಗಿ ಲೆಬನಾನ್ ದೇಶವು ಕದನ ವಿರಾಮದ ವ್ಯಾಪ್ತಿಗೆ ಬರುತ್ತದೆಯೇ ಇಲ್ಲವೇ ಎಂಬ ವಿಷಯದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ತೀವ್ರ ಗೊಂದಲ ಸೃಷ್ಟಿಯಾಯಿತು.
ಇರಾನ್ ನಂಬಿಕೆ: ಲೆಬನಾನ್ ಕೂಡ ಕದನ ವಿರಾಮದ ಭಾಗವಾಗಿದೆ ಎಂದು ಇರಾನ್ ಭಾವಿಸಿತ್ತು.
ಅಮೆರಿಕದ ನಿಲುವು: ಲೆಬನಾನ್ ಅನ್ನು ಈ ಒಪ್ಪಂದದಿಂದ ಹೊರಗಿಡಲಾಗಿದೆ ಎಂದು ಅಮೆರಿಕಕ್ಕೆ ಪಾಕಿಸ್ತಾನ ತಿಳಿಸಿತ್ತು.
250 ಜನರ ಸಾವಿಗೆ ಕಾರಣವಾದ ಆ ಒಂದು ಗಂಟೆ
ಈ ಗೊಂದಲದ ಲಾಭ ಪಡೆದ ಇಸ್ರೇಲ್, ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ನೆಲೆಗಳ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿತು. ಕದನ ವಿರಾಮ ಜಾರಿಯಲ್ಲಿದೆ ಎಂದು ಭಾವಿಸಿ ಮೈಮರೆತಿದ್ದ ಜನರಿಗೆ ಈ ದಾಳಿ ಸಿಡಿಲಿನಂತೆ ಎರಗಿತು. ಕೇವಲ ಕೆಲವು ಗಂಟೆಗಳ ಅಂತರದಲ್ಲಿ 250ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರು. ಇರಾನ್ ಈ ರಕ್ತಪಾತಕ್ಕೆ ಪಾಕಿಸ್ತಾನದ ಗೊಂದಲದ ರಾಜತಾಂತ್ರಿಕತೆಯೇ ನೇರ ಕಾರಣ ಎಂದು ಬೆರಳು ಮಾಡಿ ತೋರಿಸಿದೆ.
ಭಾಷೆಯ ಹೆಸರಲ್ಲಿ ವಂಚನೆ: ಫಾರ್ಸಿ vs ಇಂಗ್ಲಿಷ್
ಇರಾನ್ ಬಿಡುಗಡೆ ಮಾಡಿದ ಪ್ರಸ್ತಾವನೆಯಲ್ಲಿ ಮತ್ತೊಂದು ಆಘಾತಕಾರಿ ಅಂಶವೆಂದರೆ ಭಾಷಾ ವ್ಯತ್ಯಾಸವಾಗಿದೆ.
ಫಾರ್ಸಿ ಆವೃತ್ತಿ: ಇರಾನ್‌ನ ಸ್ಥಳೀಯ ಫಾರ್ಸಿ ಭಾಷೆಯ ಪತ್ರದಲ್ಲಿ ಪರಮಾಣು ಯುರೇನಿಯಂ ಸಮೃದ್ಧಗೊಳಿಸುವಿಕೆಗೆ ಅವಕಾಶ ನೀಡಬೇಕು ಎಂಬ ಅಂಶವಿತ್ತು.
ಇಂಗ್ಲಿಷ್ ಆವೃತ್ತಿ: ಆದರೆ ಜಾಗತಿಕವಾಗಿ ಹಂಚಲಾದ ಇಂಗ್ಲಿಷ್ ಪತ್ರದಲ್ಲಿ ಈ ಪರಮಾಣು ಅಂಶವನ್ನೇ ನಾಪತ್ತೆ ಮಾಡಲಾಗಿತ್ತು.
ಇದರಿಂದಾಗಿ ಇರಾನ್ ತನ್ನ ದೇಶದ ಜನರಿಗೆ ನಾವು ಪರಮಾಣು ಹಕ್ಕನ್ನು ಉಳಿಸಿಕೊಂಡಿದ್ದೇವೆ ಎಂದು ಸುಳ್ಳು ಹೇಳಲು ಹವಣಿಸಿತ್ತು. ಆದರೆ ಪಾಕಿಸ್ತಾನವು ಈ ಎರಡು ಆವೃತ್ತಿಗಳ ನಡುವಿನ ವ್ಯತ್ಯಾಸವನ್ನು ಸರಿಪಡಿಸುವ ಬದಲು, ತನ್ನ ಲಾಭಕ್ಕಾಗಿ ಗೊಂದಲವನ್ನು ಮತ್ತಷ್ಟು ಹೆಚ್ಚಿಸಿತು.
ಇಸ್ರೇಲ್ ಮತ್ತು ಅಮೆರಿಕದ ಆಕ್ರೋಶ
ಇಸ್ರೇಲ್ ರಾಯಭಾರಿ ರೂವೆನ್ ಅಜರ್ ಈಗಾಗಲೇ ಹೇಳಿರುವಂತೆ, ಪಾಕಿಸ್ತಾನವು ಒಂದು ನಂಬಲರ್ಹ ಆಟಗಾರನಲ್ಲ. ಅತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇರಾನ್‌ನ ಈ ಪ್ರಸ್ತಾವನೆಗಳನ್ನು ವಂಚನೆಯ ಜಾಲ ಎಂದು ಕರೆದಿದ್ದಾರೆ. ಲೆಬನಾನ್ ಮೇಲೆ ದಾಳಿ ನಡೆದ ಬೆನ್ನಲ್ಲೇ, ನಾವು ಲೆಬನಾನ್ ಅನ್ನು ಕದನ ವಿರಾಮದ ಭಾಗ ಎಂದು ಎಂದೂ ಒಪ್ಪಿರಲಿಲ್ಲ ಎಂದು ವೈಟ್ ಹೌಸ್ ಸ್ಪಷ್ಟಪಡಿಸಿದೆ.
ಪಾಕಿಸ್ತಾನಕ್ಕೆ ಜಾಗತಿಕ ಮುಖಭಂಗ
ಮಧ್ಯಸ್ಥಿಕೆ ವಹಿಸಿ ಶಾಂತಿ ತರುತ್ತೇವೆ ಎಂದು ಬೀಗುತ್ತಿದ್ದ ಪಾಕಿಸ್ತಾನಕ್ಕೆ ಈಗ ಜಾಗತಿಕ ಮಟ್ಟದಲ್ಲಿ ತೀವ್ರ ಮುಖಭಂಗವಾಗಿದೆ. ಒಂದು ಕಡೆ ಇರಾನ್ ತನಗೆ ವಂಚನೆಯಾಗಿದೆ ಎನ್ನುತ್ತಿದ್ದರೆ, ಇನ್ನೊಂದೆಡೆ ಅಮೆರಿಕವು ಪಾಕಿಸ್ತಾನದ ಮೇಲೆ ಅಸಮಾಧಾನ ವ್ಯಕ್ತಪಡಿಸಿದೆ. ಲೆಬನಾನ್‌ನ ಅಮಾಯಕರ ರಕ್ತ ಈಗ ಪಾಕಿಸ್ತಾನದ ರಾಜತಾಂತ್ರಿಕ ವೈಫಲ್ಯಕ್ಕೆ ಸಾಕ್ಷಿಯಾಗಿದೆ,(ಏಜೆನ್ಸೀಸ್).