ಶ್ರೀಲಂಕಾದ ಜೈಲಿನಲ್ಲಿ ಎರಡು ಡ್ರಗ್ಸ್ ಗ್ಯಾಂಗ್‌ಗಳ ನಡುವೆ ಭೀಕರ ಬಡಿದಾಟ: 25 ಸಾವು, 100ಕ್ಕೂ ಅಧಿಕ ಕೈದಿಗಳಿಗೆ ಗಾಯ! Prison Riot
- ಶ್ರೀಲಂಕಾ ಜೈಲಿನಲ್ಲಿ ನಡೆದ ಭೀಕರ ರಕ್ತಪಾತಕ್ಕೆ 23 ಮಂದಿ ದುರ್ಮರಣ
- ಡ್ರಗ್ಸ್ ಮಾಫಿಯಾದ ಗ್ಯಾಂಗ್‌ವಾರ್‌ಗೆ ರಣರಂಗವಾದ ಕಾರಾಗೃಹ
- ಕೈಮೀರಿದ ಜೈಲು ಗಲಭೆ, ಹೆಲಿಕಾಪ್ಟರ್-ಡ್ರೋನ್ ಮೂಲಕ ಕಣ್ಗಾವಲು
- ಶ್ರೀಲಂಕಾದಲ್ಲಿ ಕಳೆದ 5 ವರ್ಷಗಳಲ್ಲೇ ನಡೆದ ಅತ್ಯಂತ ಭೀಕರ ಜೈಲು ದುರಂತ
ಕೊಲಂಬೊ: ಶ್ರೀಲಂಕಾದ ಜೈಲೊಂದರಲ್ಲಿ ( Prison Riot ) ಎರಡು ಗ್ಯಾಂಗ್‌ಗಳ ನಡುವೆ ನಡೆದ ರಕ್ತಸಿಕ್ತ ಸಂಘರ್ಷದಲ್ಲಿ ನಾಲ್ಕು ಮಂದಿ ಜೈಲು ಗಾರ್ಡ್‌ಗಳು ಸೇರಿದಂತೆ ಕನಿಷ್ಠ 25 ಜನರು ಸಾವಿಗೀಡಾಗಿದ್ದು, 100ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶ್ರೀಲಂಕಾ ರಾಜಧಾನಿ ಕೊಲಂಬೊದ ಉತ್ತರ ಭಾಗದಲ್ಲಿರುವ ನೆಗೊಂಬೊ ಮುಖ್ಯ ಜೈಲಿನಲ್ಲಿ ಭಾನುವಾರ ರಾತ್ರಿ ಎರಡು ಪ್ರಮುಖ ಡ್ರಗ್ಸ್ ಗ್ಯಾಂಗ್‌ಗಳ ನಡುವೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿ ಈ ಮಾರಣಹೋಮ ನಡೆದಿದೆ. ಇದು ಕಳೆದ ಐದು ವರ್ಷಗಳಲ್ಲೇ ಶ್ರೀಲಂಕಾ ಕಂಡ ಅತ್ಯಂತ ಭೀಕರ ಜೈಲು ದುರಂತ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ನೆಗೊಂಬೊ ಸರ್ಕಾರಿ ಆಸ್ಪತ್ರೆಯ ನಿರ್ದೇಶಕಿ ಪುಷ್ಪಾ ಗಮ್ಲತ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿ, ಸದ್ಯ ಆಸ್ಪತ್ರೆಯಲ್ಲಿ 25 ಮೃತದೇಹಗಳಿರುವುದನ್ನು ಖಚಿತಪಡಿಸಿದ್ದಾರೆ. ಇದರೊಂದಿಗೆ ತೀವ್ರವಾಗಿ ಗಾಯಗೊಂಡಿರುವ 100ಕ್ಕೂ ಹೆಚ್ಚು ಖೈದಿಗಳು ಹಾಗೂ ಜೈಲು ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ದಾಖಲಿಸಿಕೊಳ್ಳಲಾಗಿದೆ. ಗಾಯಗೊಂಡವರಲ್ಲಿ ಹಲವರಿಗೆ ಗಂಭೀರವಾದ ಗುಂಡೇಟು ಬಿದ್ದಿದ್ದರೆ, ಇನ್ನು ಕೆಲವರಿಗೆ ಮಾರಕಾಸ್ತ್ರಗಳಿಂದ ಕತ್ತರಿಸಿದ ಗಾಯಗಳು ಮತ್ತು ತೀವ್ರ ರಕ್ತಗಾಯಗಳಾಗಿವೆ ಎಂದು ತಿಳಿಸಿದ್ದಾರೆ.
ಸಾವಿರಾರು ಖೈದಿಗಳನ್ನು ಹೊಂದಿರುವ ನೆಗೊಂಬೊ ಜೈಲಿನಲ್ಲಿ ಭಾನುವಾರ ಸಂಜೆ ಇಬ್ಬರು ಗ್ಯಾಂಗ್‌ಗಳ ನಡುವೆ ಹೊಡೆದಾಟ ಆರಂಭವಾಗಿತ್ತು. ಜೈಲಿನ ಒಂದು ಭಾಗದಲ್ಲಿ ಗಲಾಟೆ ತೀವ್ರಗೊಳ್ಳುತ್ತಿದ್ದಂತೆ, ಅದರ ಪಕ್ಕದ ಬ್ಯಾರಕ್‌ನಲ್ಲಿದ್ದ ಮಹಿಳಾ ಖೈದಿಗಳು ತಮಗೂ ಅಪಾಯವಾಗಬಹುದು ಎಂಬ ಭೀತಿಯಿಂದ ಹಾಗೂ ತಮ್ಮನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಜೈಲಿನ ಮೇಲ್ಛಾವಣಿ ಮೇಲೇರಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ತೂಕ ತಡೆಯಲಾರದೆ ಛಾವಣಿಯ ಒಂದು ಭಾಗ ಕುಸಿದು ಬಿದ್ದಿದ್ದು, ಹಲವು ಮಹಿಳಾ ಖೈದಿಗಳೂ ಗಾಯಗೊಂಡಿದ್ದಾರೆ.
ಸೋಮವಾರ ಮುಂಜಾನೆ ಪರಿಸ್ಥಿತಿ ಸಂಪೂರ್ಣವಾಗಿ ಕೈಮೀರಿ ಹೋದಾಗ ಗಲಭೆಯನ್ನು ಹತ್ತಿಕ್ಕಲು ಪೊಲೀಸರು ಮತ್ತು ವಿಶೇಷ ಕಮಾಂಡೋ ಪಡೆಗಳನ್ನು ಸ್ಥಳಕ್ಕೆ ಕರೆಯಿಸಲಾಯಿತು, ಆದರೆ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತು ಕಮಾಂಡೋಗಳನ್ನು ಜೈಲಿನ ಒಳಗೆ ನಿಯೋಜಿಸಲಿಲ್ಲ. ಇತ್ತ ಜೈಲಿನ ಒಳಗಿನಿಂದ ನಿರಂತರವಾಗಿ ಗುಂಡಿನ ಸದ್ದು ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ, ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ನಿಗಾ ಇಡಲು ವಾಯುಪಡೆಯು ಡ್ರೋನ್‌ಗಳು ಹಾಗೂ ಹೆಲಿಕಾಪ್ಟರ್ ಅನ್ನು ಬಳಸಿದೆ. ಜೈಲಿನೊಳಗೆ ತಾಯ್ತಂದೆ, ಪತಿ, ಮಕ್ಕಳಿದ್ದಾರೆ ಎಂದು ತಿಳಿದ ನೂರಾರು ಖೈದಿಗಳ ಸಂಬಂಧಿಕರು ಜೈಲಿನ ಹೊರಗೆ ಜಮಾಯಿಸಿದ್ದು, ಆಕ್ರಂದನ ಮುಗಿಲು ಮುಟ್ಟಿದೆ.
ಶ್ರೀಲಂಕಾದಲ್ಲಿ ಜೈಲುಗಳ ಅತಿಯಾದ ಜನದಟ್ಟಣೆಯೇ ಇಂತಹ ದಂಗೆಗಳಿಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಅಧಿಕೃತ ಮಾಹಿತಿಯ ಪ್ರಕಾರ, ದೇಶದ ಜೈಲುಗಳಲ್ಲಿ ಒಟ್ಟು 41,250 ಖೈದಿಗಳಿದ್ದು, ಇದು ಜೈಲುಗಳ ನೈಜ ಸಾಮರ್ಥ್ಯಕ್ಕಿಂತ ಬರೋಬ್ಬರಿ ನಾಲ್ಕು ಪಟ್ಟು ಹೆಚ್ಚಾಗಿದೆ. ಈ ಹಿಂದೆ ಡಿಸೆಂಬರ್ 2020 ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಉತ್ತುಂಗದಲ್ಲಿದ್ದಾಗ ಇಂತಹುದೇ ಮತ್ತೊಂದು ಜೈಲಿನಲ್ಲಿ ನಡೆದಿದ್ದ ದಂಗೆಯಲ್ಲಿ 11 ಖೈದಿಗಳು ಸಾವಿಗೀಡಾಗಿ, 117 ಮಂದಿ ಗಾಯಗೊಂಡಿದ್ದರು. ಆ ಸಮಯದಲ್ಲಿ ಸರ್ಕಾರ ಜೈಲುಗಳ ದಟ್ಟಣೆ ಕಡಿಮೆ ಮಾಡಲು ನೂರಾರು ಖೈದಿಗಳನ್ನು ಬಿಡುಗಡೆ ಮಾಡಿತ್ತು, ಆದರೆ ಈಗ ಮತ್ತೆ ಡ್ರಗ್ಸ್ ಗ್ಯಾಂಗ್‌ಗಳ ವೈಷಮ್ಯಕ್ಕೆ ಜೈಲು ರಣರಂಗವಾಗಿ ಮಾರ್ಪಟ್ಟಿದೆ, (ಏಜೆನ್ಸೀಸ್).