ಡೊನಾಲ್ಡ್ ಟ್ರಂಪ್ 
ವಿದೇಶ

ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ 100% ಸುಂಕ: ಮಸೂದೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ: ಭಾರತದ ಮೇಲೆ ಪರಿಣಾಮ | Donald Trump

ವಾಷಿಂಗ್ಟನ್: ರಷ್ಯಾ ದೇಶದಿಂದ ಕಚ್ಚಾತೈಲ ಮತ್ತು ಗ್ಯಾಸ್ ಖರೀದಿಸುವ ದೇಶಗಳಿಗೆ 100% ಸುಂಕ ವಿಧಿಸುವ ಲಿಂಡ್ಸೆ ಒ. ಗ್ರಹಾಂ ಸ್ಯಾಂಕ್ಷನಿಂಗ್ ರಷ್ಯಾ ಅಂಡ್ ಇರಾನ್ ಆಕ್ಟ್ ಆಫ್ 2026 ಎಂಬ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಶನಿವಾರ(ಸೆ. 19) ಸಹಿ ಹಾಕಿದ್ದು, ಇದು ಭಾರತದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. 
ಗುರುವಾರ ಅಮೆರಿಕ ಕಾಂಗ್ರೆಸ್​​ನಲ್ಲಿ ಡೆಮಾಕ್ರಟಿಕ್ ಪಕ್ಷದ ಇಬ್ಬರು ಸಂಸದರು ಪಕ್ಷದ ವಿರುದ್ಧವಾಗಿ ಬೆಂಬಲಿಸಿದ್ದರಿಂದ 214-211 ಮತಗಳಿಂದ ಮಸೂದೆ ಅಂಗೀಕಾರಗೊಂಡಿತ್ತು. ಎರಡೂ ದಿನಗಳ ಬಳಿಕ ಇಂದು ಟ್ರಂಪ್ ಕಾನೂನಿಗೆ ಸಹಿ ಹಾಕಿದ್ದಾರೆ. 
ಈ ಮಸೂದೆಯು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ರಷ್ಯಾದ ತೈಲ ಮತ್ತು ಗ್ಯಾಸ್ ಖರೀದಿಸುವ ಅಗ್ರ ಐದು ಆಮದುದಾರ ದೇಶಗಳ ಸರಕುಗಳ ಮೇಲೆ 100 ಪ್ರತಿಶತ ಸುಂಕವನ್ನು ವಿಧಿಸಲು ಅವಕಾಶ ನೀಡುತ್ತದೆ. ಪ್ರಸ್ತುತ, ರಷ್ಯಾದಿಂದ ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳುವ ಅಗ್ರ ಐದು ದೇಶಗಳೆಂದರೆ ಚೀನಾ, ಭಾರತ, ಅಜೆರ್ಬೈಜಾನ್, ಹಂಗೇರಿ ಮತ್ತು ಸ್ಲೋವಾಕಿಯಾ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. 
ಜೊತೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉದ್ಯಮಿಗಳು ಮತ್ತು ಹಣಕಾಸು ಸಂಸ್ಥೆಗಳು ಸೇರಿದಂತೆ ರಷ್ಯಾದ ನಾಯಕರು ಹಾಗೂ ಅಧಿಕಾರಿಗಳ ಮೇಲೆ ನಿರ್ಬಂಧಗಳನ್ನು ವಿಧಿಸಲು ಈ ಮಸೂದೆಯು ಉದ್ದೇಶಿಸಿದೆ. ರಷ್ಯಾಕ್ಕೆ ಸಂಬಂಧಿಸಿದ ಕ್ರಮಗಳ ಜೊತೆಗೆ, ಈ ಮಸೂದೆಯು 1996ರ 'ಇರಾನ್ ನಿರ್ಬಂಧಗಳ ಕಾಯಿದೆ'ಯ ಅವಧಿಯನ್ನು 2031ರವರೆಗೆ ವಿಸ್ತರಿಸಲಿದೆ. ಇರಾನ್‌ನ ಇಂಧನ ವಲಯದಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ಈ ಕಾಯಿದೆಯಡಿ ದಂಡ ವಿಧಿಸಲಾಗುತ್ತದೆ ಎನ್ನಲಾಗಿದೆ.

ಇಂಧನ ಭದ್ರತೆಯೇ ಪ್ರಮುಖ ಆದ್ಯತೆ 

ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಶೇ. 100ರಷ್ಟು ಸುಂಕ ವಿಧಿಸುವ ಮಸೂದೆಗೆ ಅಮೆರಿಕ ಕಾಂಗ್ರೆಸ್​ನಲ್ಲಿ ಅಂಗೀಕರಿಸಿದ ಬೆನ್ನಲ್ಲೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಭಾರತದ ವ್ಯಾಪಾರ, ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುತ್ತೇವೆ ಎಂದು ಹೇಳಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ವಿದೇಶಾಂಗ ಸಚಿವಾಲಯ, ಹಿಂದಿನ ಹಲವಾರು ಸಂದರ್ಭಗಳಲ್ಲಿ ಹೇಳಿದಂತೆ, ಭಾರತವು ತನ್ನ 1.4 ಶತಕೋಟಿ ಜನರಿಗೆ ಇಂಧನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ದೃಢವಾಗಿ ಬದ್ಧವಾಗಿದೆ. ಮತ್ತು ವೈವಿಧ್ಯಮಯ ಪೂರೈಕೆ ಮೂಲಗಳ ಮೂಲಕ ಅದನ್ನು ಮುಂದುವರಿಸುತ್ತದೆ ಎಂದು ತಿಳಿಸಿದೆ (ಏಜೆನ್ಸೀಸ್).