ನಾಮಪತ್ರ ಹಿಂಪಡೆಯುವುದಾಗಿ ಘೋಷಿಸಿ ಕೆಲವೇ ಗಂಟೆಗಳಲ್ಲಿ ಯೂಟರ್ನ್​ ಹೊಡೆದ ರೆಜಿನಗರ ಮಮತಾ ಬ್ಯಾನರ್ಜಿ ಅಭ್ಯರ್ಥಿ | Rejinagar

ಮಾಜಿ ಸಿಎಂ ಮಮತಾ ಬ್ಯಾನರ್ಜಿ
ಮಾಜಿ ಸಿಎಂ ಮಮತಾ ಬ್ಯಾನರ್ಜಿ
Published on: 
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಉಪಚುನಾವಣೆಯಲ್ಲಿ ಹೈಡ್ರಾಮ ನಡೆಯುತ್ತಿದ್ದು, ನಿನ್ನೆ ನಂದಿಗ್ರಾಮ ಕ್ಷೇತ್ರದಲ್ಲಾದಂತೆ ಇಂದು(ಸೆ. 19) ರೆಜಿನಗರ(Rejinagar) ಕ್ಷೇತ್ರದಿಂದ ನಾಮಪತ್ರ ವಾಪಸ್ ಪಡೆಯುವುದಾಗಿ ಘೋಷಿಸಿ ಕೆಲವೇ ಗಂಟೆಗಳಲ್ಲಿ ಮಮತಾ ಬ್ಯಾನರ್ಜಿ ಬಣದ ಟಿಎಂಸಿ ಅಭ್ಯರ್ಥಿ ಚುನಾವಣೆಯಲ್ಲಿ ಹೋರಾಡುವುದಾಗಿ ಹೇಳಿದ್ದಾರೆ.
ರೆಜಿನಗರದಿಂದ ಮಮತಾ ಬ್ಯಾನರ್ಜಿ ಅವರ ಬಣದ ಅಭ್ಯರ್ಥಿಯಾಗಿ ರಬಿಯುಲ್ ಆಲಂ ಚೌಧರಿ ಸ್ಪರ್ಧಿಸುತ್ತಿದ್ದಾರೆ. ಶನಿವಾರ ಬೆಳಗ್ಗೆ ರಾಜ್ಯ ಸರ್ಕಾರ ಪಕ್ಷದ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಣೆ ಮಾಡಿದ್ದರು. 
ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಪಕ್ಷಕ್ಕೆ ಅಧಿಕೃತ ಚಿಹ್ನೆ ಇಲ್ಲ. ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ, ಮತ್ತು ಹೆಚ್ಚಿನವರು ಪ್ರದೇಶವನ್ನು ತೊರೆದಿದ್ದಾರೆ. ಹೀಗಿರುವಾಗ ನಾನು ಯಾರೊಂದಿಗೆ ಸೇರಿ ಚುನಾವಣೆ ಎದುರಿಸಲಿ? ಆಡಳಿತವು ಹೇರುತ್ತಿರುವ ಒತ್ತಡವನ್ನು ಪರಿಗಣಿಸಿ, ಚುನಾವಣಾ ಕಣದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಇದೇ ಕಾರಣಕ್ಕಾಗಿಯೇ ನಾನು ನನ್ನ ನಾಮಪತ್ರವನ್ನು ಹಿಂಪಡೆಯಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದರು.
ಆದರೆ ಮಧ್ಯಾಹ್ನದ ಹೊತ್ತಿಗೆ ಮಮತಾ ಬ್ಯಾನರ್ಜಿಯವರೊಂದಿಗೆ ಮಾತನಾಡಿದ ಬಳಿಕ ಯೂಟರ್ನ್ ಹೊಡೆದಿರುವ ಅವರು, ಮಮತಾ ಬ್ಯಾನರ್ಜಿ ಅವರ ಆದೇಶದ ಮೇರೆಗೆ ನನ್ನ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಕೈಬಿಟ್ಟಿದ್ದೇನೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ.
ನಂದಿಗ್ರಾಮ ಮತ್ತು ರೆಜಿನಗರ ಎರಡೂ ಕ್ಷೇತ್ರಗಳಿಗೆ ಅಕ್ಟೋಬರ್ 6 ರಂದು ಉಪಚುನಾವಣೆ ನಡೆಯಲಿದೆ. ಇದಕ್ಕೂ ಮುಂಚೆ ಶುಕ್ರವಾರ ನಂದಿಗ್ರಾಮದಿಂದ ಸ್ಪರ್ಧಿಸಿದ್ದ ಮಮತಾ ಬ್ಯಾನರ್ಜಿ ಅವರ ಬಣದ ಅಭ್ಯರ್ಥಿ ಸಂಚಿತಾ ಪ್ರಧಾನ್ ಡೇ, ಸಿಎಂ ಸುವೇಂದು ಅಧಿಕಾರಿ ಭೇಟಿ ಮಾಡಿದ ಬಳಿಕ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು. ಬಳಿಕ ಮಮತಾ ಬ್ಯಾನರ್ಜಿ ಆ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿಗೆ ಬೆಂಬಲ ಘೋಷಣೆ ಮಾಡಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net