ನಮ್ಮ ಇಂಧನ ಭದ್ರತೆ ನಮಗೆ ಮುಖ್ಯ ಎಂದ ವಿದೇಶಾಂಗ ಇಲಾಖೆ
- ರಷ್ಯಾ ತೈಲ ಖರೀದಿಸಿದ್ರೆ 100% ದಂಡ ವಿಧಿಸೋ ಅಮೆರಿಕ ಬೆದರಿಕೆ
- ಅಮೆರಿಕದ ಬೆದರಿಕೆಗೆ ಭಾರತ ಡೋಂಟ್ ಕೇರ್
- ನಮ್ಮ ಇಂಧನ ಭದ್ರತೆ ನಮಗೆ ಮುಖ್ಯ ಎಂದ ವಿದೇಶಾಂಗ ಇಲಾಖೆ
ನವದೆಹಲಿ: ರಷ್ಯಾದಿಂದ ಅಗ್ಗದ ದರದಲ್ಲಿ ಕಚ್ಚಾ ತೈಲ ಖರೀದಿಸುತ್ತಿರುವ ಭಾರತ ಸೇರಿದಂತೆ ವಿಶ್ವದ ಪ್ರಮುಖ 5 ದೇಶಗಳಿಗೆ ಅಮೆರಿಕ ಈಗ ಬಿಗ್ ಶಾಕ್ ನೀಡಲು ಮುಂದಾಗಿದೆ. ರಷ್ಯಾದ ತೈಲ ಕೊಳ್ಳುವ ದೇಶಗಳ ಮೇಲೆ ಬರೋಬ್ಬರಿ 100 ಪ್ರತಿಶತದ ವರೆಗೆ ಭಾರೀ ಸುಂಕ (India on USA Tariffs) ಅಥವಾ ದಂಡ ವಿಧಿಸುವ ಹೊಸ ಮಸೂದೆಗೆ ಅಮೆರಿಕದ 60 ಸೆನೆಟರ್‌ಗಳು ಬೆಂಬಲ ಸೂಚಿಸಿದ್ದಾರೆ.
ಈ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲವೂ ಇರುವುದರಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಅಮೆರಿಕದ ಈ ತಂತ್ರದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಭಾರತ ಸರ್ಕಾರ, ಅಲ್ಲಿನ ಬೆಳವಣಿಗೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಶುಕ್ರವಾರ (ಜು.17) ಪ್ರಕಟಿಸಿದೆ.
ನಮ್ಮ ನಿಲುವು ಸ್ಪಷ್ಟ
ಶುಕ್ರವಾರ (ಜು.17) ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್, ಅಮೆರಿಕದ ಪ್ರಸ್ತಾವಿತ ಹೊಸ ಕಾನೂನಿನ ಬಗ್ಗೆ ನಮಗೆ ಅರಿವಿದೆ. ನಾವು ಈ ಬೆಳವಣಿಗೆಗಳನ್ನು ಹತ್ತಿರದಿಂದ ಟ್ರ್ಯಾಕ್ ಮಾಡುತ್ತಿದ್ದೇವೆ ಎಂದಿದ್ದಾರೆ.
ಭಾರತದ ತೈಲ ನೀತಿಯನ್ನು ಸ್ಪಷ್ಟಪಡಿಸಿದ ಅವರು, ನಮ್ಮ ದೇಶದ ಇಂಧನ ಅಗತ್ಯತೆ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಾವು ಪ್ರಪಂಚದ ಬೇರೆ ಬೇರೆ ದೇಶಗಳಿಂದ ತೈಲವನ್ನು ಖರೀದಿಸುತ್ತೇವೆ. ಯಾವುದೇ ಒಂದು ದೇಶದ ಮೇಲೆ ನಾವು ಅವಲಂಬಿತವಾಗಿಲ್ಲ. ಇನ್ನು ಪರ್ಷಿಯನ್ ಕೊಲ್ಲಿಯಲ್ಲಿ ಭಾರತದ ವಾಣಿಜ್ಯ ಹಡಗುಗಳ ಸಂಚಾರ ಎಂದಿನಂತೆ ನಿಯಮಿತವಾಗಿ ನಡೆಯುತ್ತಿದ್ದು, ಪ್ರಸ್ತುತ ಭಾರತದ ಧ್ವಜ ಹೊತ್ತ 7 ಪ್ರಮುಖ ಹಡಗುಗಳು ಅಲ್ಲಿ ಸುರಕ್ಷಿತವಾಗಿವೆ ಎಂದು ತಿಳಿಸಿದ್ದಾರೆ.
ಏನಿದು ರಷ್ಯಾವನ್ನು ನಿಷೇಧಿಸುವ ಕಾಯ್ದೆ?
ಅಮೆರಿಕದ ಸೆನೆಟ್‌ನಲ್ಲಿ ರಿಪಬ್ಲಿಕನ್ ಬಹುಮತದ ನಾಯಕ ಸೆನೆಟರ್ ಜಾನ್ ಥೂನ್ ನೇತೃತ್ವದಲ್ಲಿ ಈ ಮಸೂದೆಯನ್ನು ಮಂಡಿಸಲಾಗಿದೆ. ಇದರ ಪ್ರಕಾರ, ಉಕ್ರೇನ್ ಯುದ್ಧದ ನಡುವೆಯೂ ರಷ್ಯಾದಿಂದ ತೈಲ ಮತ್ತು ನೈಸರ್ಗಿಕ ಅನಿಲವನ್ನು ಅತಿ ಹೆಚ್ಚು ಖರೀದಿಸುತ್ತಿರುವ ಚೀನಾ, ಭಾರತ, ಸ್ಲೋವಾಕಿಯಾ, ಹಂಗೇರಿ ಮತ್ತು ಅಜೆರ್ಬೈಜಾನ್ ದೇಶಗಳನ್ನು ಗುರಿಯಾಗಿಸಿ ಈ 100% ಸುಂಕದ ಅಸ್ತ್ರವನ್ನು ಬಳಸಲು ಟ್ರಂಪ್ ಆಡಳಿತಕ್ಕೆ ಮುಕ್ತ ಅಧಿಕಾರ ಸಿಗಲಿದೆ.
ಈ ಮಸೂದೆಯು ಆಗಸ್ಟ್ ತಿಂಗಳ ಒಳಗಾಗಿಯೇ ಅಮೆರಿಕ ಸಂಸತ್ತಿನಲ್ಲಿ ಅಂಗೀಕಾರಗೊಳ್ಳುವ ಸಾಧ್ಯತೆಯಿದ್ದು, ಇದರ ಅಂತಿಮ ಸುಂಕದ ದರವನ್ನು ಅಮೆರಿಕದ ವ್ಯಾಪಾರ ಪ್ರತಿನಿಧಿ ನಿರ್ಧರಿಸಲಿದ್ದಾರೆ. ಆದರೆ, ಅಮೆರಿಕ ತನ್ನದೇ ಆದ ಕೆಲವು ಯುರೋಪಿಯನ್ ಮಿತ್ರರಾಷ್ಟ್ರಗಳಿಗೆ ಹಾಗೂ ತನ್ನ ಪರಮಾಣು ರಿಯಾಕ್ಟರ್‌ಗಳಿಗೆ ಬೇಕಾಗುವ ಯುರೇನಿಯಂ ಖರೀದಿಗೆ ಈ ಮಸೂದೆಯಿಂದ ವಿನಾಯಿತಿ ನೀಡುವ ಮೂಲಕ ಇಬ್ಬಂದಿ ನೀತಿಯನ್ನೂ ಪ್ರದರ್ಶಿಸಿದೆ.
ಜೂನ್‌ನಲ್ಲಿ ರೆಕಾರ್ಡ್ ಬ್ರೇಕ್ ಮಾಡಿದ್ದ ಭಾರತದ ತೈಲ ಖರೀದಿ!
ರಷ್ಯಾ-ಉಕ್ರೇನ್ ಯುದ್ಧ ಆರಂಭವಾದಾಗಿನಿಂದ ಪಾಶ್ಚಿಮಾತ್ಯ ದೇಶಗಳ ವಿರೋಧದ ನಡುವೆಯೂ ಭಾರತ ರಷ್ಯಾದಿಂದ ರಿಯಾಯಿತಿ ದರದಲ್ಲಿ ಭಾರಿ ಪ್ರಮಾಣದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಇತ್ತೀಚಿನ ವರದಿಯ ಪ್ರಕಾರ, ಜೂನ್ ತಿಂಗಳೊಂದರಲ್ಲೇ ಭಾರತದ ರಷ್ಯಾ ತೈಲ ಆಮದು ಶೇ.34 ರಷ್ಟು ಜಿಗಿತ ಕಂಡಿದ್ದು, ದಾಖಲೆಯ ಮಟ್ಟವನ್ನು ತಲುಪಿದೆ.
ಜೂನ್‌ನಲ್ಲಿ ಭಾರತ ಬರೋಬ್ಬರಿ 4.5 ಬಿಲಿಯನ್ ಯುರೋ (ಸುಮಾರು 41,000 ಕೋಟಿ ರೂಪಾಯಿ) ಮೌಲ್ಯದ ತೈಲವನ್ನು ರಷ್ಯಾದಿಂದ ಖರೀದಿಸಿದೆ. ಇದು ರಷ್ಯಾದ ಒಟ್ಟು ತೈಲ ರಫ್ತಿನ ಶೇಕಡಾ 36 ರಷ್ಟಾಗಿದೆ. ಸದ್ಯ ಚೀನಾ ಬಿಟ್ಟರೆ ರಷ್ಯಾ ತೈಲದ 2ನೇ ಅತಿ ದೊಡ್ಡ ಖರೀದಿದಾರ ದೇಶ ಭಾರತವಾಗಿದೆ.
ಶೇ. 500 ರಿಂ ಶೇ. 100 ಕ್ಕೆ ಇಳಿದ ಅಮೆರಿಕ!
ಕಳೆದ ವರ್ಷ ಅಮೆರಿಕ ಮಂಡಿಸಿದ್ದ ರಷ್ಯಾ ನಿರ್ಬಂಧ ಕಾಯ್ದೆ 2025 ರ ಆರಂಭಿಕ ಆವೃತ್ತಿಯಲ್ಲಿ ಭಾರತ ಸೇರಿದಂತೆ ರಷ್ಯಾ ತೈಲ ಖರೀದಿಸುವ ದೇಶಗಳ ಮೇಲೆ ಬರೋಬ್ಬರಿ ಶೇ. 500 ರಷ್ಟು ಸುಂಕ ವಿಧಿಸಲು ಪ್ರಸ್ತಾಪಿಸಲಾಗಿತ್ತು. ಆದರೆ ಜಾಗತಿಕ ಆರ್ಥಿಕತೆಯ ಮೇಲೆ ಇದರ ಭೀಕರ ಪರಿಣಾಮವನ್ನು ಅರಿತ ಅಮೆರಿಕ, ಈಗ ಆ ಜಾಗದಲ್ಲಿ ಹೊಸ ಮೃದು ಆವೃತ್ತಿಯನ್ನು ತಂದಿದ್ದು, ಸುಂಕವನ್ನು ಶೇ. 100 ಕ್ಕೆ ಇಳಿಸಿದೆ. ಅಲ್ಲದೆ, ಅಮೆರಿಕ ಅಧ್ಯಕ್ಷರು ತಮಗೆ ವಿಶೇಷ ಎನಿಸಿದರೆ ಭಾರತದಂತಹ ಮಿತ್ರರಾಷ್ಟ್ರಗಳಿಗೆ ಈ ಸುಂಕದಿಂದ ವಿನಾಯಿತಿ ನೀಡುವ ಅಧಿಕಾರವನ್ನೂ ಈ ಮಸೂದೆಯಲ್ಲಿ ಉಳಿಸಿಕೊಳ್ಳಲಾಗಿದೆ, (ಏಜನ್ಸೀಸ್).