ನ್ಯೂಸ್

ಉಪವಾಸದಿಂದ ಆಂತರಿಕ ಶುದ್ಧಿ

ಮೋಹನ್​ ಶೆಟ್ಟಿ

| ಮಹಮ್ಮದ್ ರಫೀ ಪಾಶ, (ಲೇಖಕರು ರಾಜ್ಯ ಸರಕು ಮತ್ತು ಸೇವಾ ತೆರಿಗೆಗಳ ಇಲಾಖೆಯ ಉಪ ಆಯುಕ್ತರು)

ರಂಜಾನ್ ತಿಂಗಳಲ್ಲಿ ತರಾವಿ ನಮಾಜ್ (ಪ್ರಾರ್ಥನೆ), ರೋಝಾ (ಉಪವಾಸ) ಮತ್ತು ಜಕಾತ್(ದಾನ)ಕ್ಕೆ ಹೆಚ್ಚು ಪ್ರಾಮುಖ್ಯವಿದೆ. ‘ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್’ ಈ ಶ್ಲೋಕವನ್ನು ಎಲ್ಲ ಮಸೀದಿಗಳಲ್ಲಿ ದಿನಕ್ಕೆ ಐದು ಬಾರಿ ಧ್ವನಿವರ್ಧಕದ ಮೂಲಕ ಹೇಳಿ ‘ನಮಾಜ್​ಗಾಗಿ ಬನ್ನಿ’ ಎಂದು ಕರೆಯಲಾಗುತ್ತದೆ. ಐದು ಬಾರಿ ನಮಾಜ್ ಕಡ್ಡಾಯವಾಗಿ ಮಾಡಲೇಬೇಕು. ಪುರುಷರು ಸಂಘಟಿತರಾಗಿ ಮಸೀದಿಗಳಲ್ಲಿ ನಮಾಜ್ ಮಾಡಿದರೆ ಸ್ತ್ರೀಯರು, ಚಿಕ್ಕ ಮಕ್ಕಳು ಮನೆಯಲ್ಲೇ ನಮಾಜ್ ಮಾಡುತ್ತಾರೆ. ಜಗತ್ತಿನ ಎಲ್ಲ ಕಡೆಯ ಮುಸ್ಲಿಂರು ಕಾಬಾ (ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾ ಇರುವ ದಿಕ್ಕು) ಮುಖ ಮಾಡಿ ನಮಾಜ್ ಮಾಡುತ್ತಾರೆ.

‘ಪರಮ ದಯಾಪರನೂ, ಕರುಣಾನಿಧಿಯೂ ಆದ ಅಲ್ಲಾಹುವಿನ ನಾಮದಿಂದ ಸರ್ವಸ್ತುತಿ. ಅವನು ಸಕಲ ವಿಶ್ವದ ಪ್ರಭು, ಪರಮ ದಯಾಳು, ಕರುಣಾನಿಧಿ, ನಿರ್ಣಾಯಕ ದಿನದ ಅಧಿಪತಿ, ನಾವು ನಿನ್ನನ್ನು ಮಾತ್ರ ಆರಾಧಿಸುತ್ತೇವೆ ಮತ್ತು ನಿನ್ನಿಂದ ಸಹಾಯ ಬೇಡುತ್ತೇನೆ. ನಮಗೆ ಸನ್ಮಾರ್ಗವನ್ನು ತೋರಿಸು, ನೀನು ಅನುಗ್ರಹಿಸಿದವರ ಮಾರ್ಗ, ನಿನ್ನ ಕ್ರೋಧಕ್ಕೆ ಪಾತ್ರರಾದವರ ಮಾರ್ಗ(ನೀನು ತೋರಿದ)ದಲ್ಲಿ ದಾರಿಯನ್ನು ತಪ್ಪಿ ನಡೆದವರ ಮಾರ್ಗವೂ ಅಲ್ಲ’ ಎಂದು ಪ್ರಾರ್ಥನೆ ಮಾಡುತ್ತಾರೆ.

ಜಕಾತ್ (ದಾನ): ಇಸ್ಲಾಂ ಧರ್ಮದಲ್ಲಿ ದಾನಕ್ಕೆ ‘ಜಕಾತ್’ ಎನ್ನಲಾಗುತ್ತದೆ. ನಮಾಜ್ ನಂತರದ ಸ್ಥಾನ ಈ ಜಕಾತ್​ಗೆ ಕೊಡಲಾಗಿದೆ. ಇದು ಇಸ್ಲಾಂನ ಅತಿ ಪ್ರಮುಖ ಆಧಾರಸ್ತಂಭವಾಗಿದೆ. ಪ್ರತಿಯೊಬ್ಬ ಮುಸ್ಲಿಂನು ತನ್ನ ಸ್ವತ್ತು, ಸಂಪತ್ತುಗಳ ಎರಡೂವರೆ ಶೇಕಡವನ್ನು ಪ್ರತಿ ವರ್ಷ ಬಡಬಗ್ಗರಿಗೆ, ದೀನ-ದಲಿತರಿಗೆ, ಸಾಲದಲ್ಲಿ ಮುಳುಗಿದವರಿಗೆ ಅಥವಾ ಧರ್ಮ ಕಾರ್ಯಗಳಿಗೆ ಕಡ್ಡಾಯವಾಗಿ ನೀಡಲೇಬೇಕು. ಉತ್ತಮ ಸ್ಥಿತಿಯಿರುವ ಮುಸ್ಲಿಮರು ನಗದು, ವ್ಯಾಪಾರ, ಸರಕು, ಬೆಳ್ಳಿ, ಬಂಗಾರ ಇತ್ಯಾದಿಗಳ 40ನೇ ಒಂದಂಶವನ್ನು, ನೀರಾವರಿಯ ಕೃಷಿಕರಾದರೆ ಉತ್ಪನ್ನಗಳ ಇಪ್ಪತ್ತನೇ ಒಂದಂಶವನ್ನು ದಾನ ನೀಡಬೇಕು ಎಂಬ ನಿಯಮವಿದೆ. ಇವುಗಳೆಲ್ಲ ರಂಜಾನ್ ಸಮಯದಲ್ಲಿ ಆಗಬೇಕು. ಈ ದಾನ ರಹಸ್ಯವಾಗಿ ಇರಬೇಕು.

ಬಲಗೈಯಿಂದ ಕೊಟ್ಟದಾನ ಎಡಗೈಗೆ ತಿಳಿಯಬಾರದು ಎಂಬ ಮಾತು ಇದೆ. ದಾನ ಕೊಡುವಾಗ ಹೆಮ್ಮೆಯ ಬದಲು ವಿನೀತ ಭಾವವಿರಬೇಕು. ಇದು ಇಲ್ಲದೆ ಹೋದರೆ ಅದು ಅಹಂಗೆ ಕಾರಣವಾಗುತ್ತದೆ. ಮದ್ಯಪಾನ ಮಾಡುವವರಿಗೆ, ಗಾಂಜಾ ಸೇವಿಸುವವರಿಗೆ, ಕಳ್ಳರಿಗೆ, ಜೂಜುಕೋರರಿಗೆ ಎಂದಿಗೂ ದಾನ ಮಾಡಬಾರದು. ಮನುಷ್ಯನು ತನ್ನ ಮಕ್ಕಳಿಗೆ ಹೊಟ್ಟೆಗೆ ಇಲ್ಲದಿರುವಾಗ ದಾನ ಮಾಡಬಾರದು. ಮನುಷ್ಯನು ತನ್ನ ಮಕ್ಕಳಿಗೆ ಹೊಟ್ಟೆಗೆ ಹಾಕದೆ ದಾನ ನೀಡಬೇಕು ಎಂಬ ನಿಯಮ ಇಲ್ಲ. ಸರಳ ಜೀವನ ನಡೆಸಲು ತನಗೆ ಎಷ್ಟು ಬೇಕೋ ಅಷ್ಟು ಇಟ್ಟುಕೊಂಡು ಉಳಿದಿದ್ದನ್ನು ದಾನ ಮಾಡಬೇಕು ಎಂದು ಇಸ್ಲಾಂ ಧರ್ಮದಲ್ಲಿ ಹೇಳಲಾಗಿದೆ. ರಂಜಾನಿನ ಸಮಯದಲ್ಲಿ ಚಿನ್ನ, ಬೆಳ್ಳಿ ವಸ್ತುಗಳು, ಧಾನ್ಯ, ಹಣವನ್ನು ದಾನ ಮಾಡಬಹುದು. ದಾನಕ್ಕಾಗಿ ಬಡವರು ತಮ್ಮ ಮನೆಗೆ ಬರುವುದು ಇಸ್ಲಾಂ ಧರ್ಮದಲ್ಲಿ ಇಲ್ಲ. ದಾನಿಗಳೇ ಖುದ್ದಾಗಿ ಹೋಗಿ ಬಡವರಿಗೆ ದಾನ ಮಾಡಬೇಕು ಎಂಬ ನಿಯಮ ಇದೆ. ಏಕೆಂದರೆ ಭಿಕ್ಷಾಟನೆ ಮಾಡುವುದನ್ನು ಇಸ್ಲಾಂ ಧರ್ಮ ಖಂಡಿಸಿದೆ. ಕೊಡುವ ಕೈಯು ಪಡೆಯುವವನ ಕೈಗಿಂತ ಉತ್ತಮವಾದುದೆಂದು ಪ್ರವಾದಿಗಳು ಹೇಳಿದ್ದಾರೆ.

ರೋಝಾ (ಉಪವಾಸ): ಉಪ ಎಂದರೆ ಸಮೀಪ. ವಾಸ ಎಂದರೆ ಇರುವುದು. ಅಂದರೆ ಭಗವಂತನ ಹತ್ತಿರ ಇರುವುದನ್ನು ಉಪವಾಸ ಎನ್ನುವರು. ರಂಜಾನ್ ಸಮಯದಲ್ಲಿ ಈ ಉಪವಾಸಕ್ಕೆ ಹೆಚ್ಚು ಪ್ರಾಮುಖ್ಯ ನೀಡಲಾಗಿದೆ. ರಂಜಾನಿನಲ್ಲಿ ಒಂದು ತಿಂಗಳ ಕಾಲ ಉಪವಾಸ ಮಾಡುತ್ತಾರೆ. ಪ್ರತಿದಿನ ಬೆಳಗ್ಗೆ ಮಸೀದಿಯಿಂದ ಆಜ್ಞೆ ಆದ ಕೂಡಲೇ ಅನ್ನ, ನೀರನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಸಂಜೆ ಮಸೀದಿಯಿಂದ ಇಫ್ತಾರ್ ಕೊಟ್ಟ ಮೇಲೆ ನೀರು ಮತ್ತು ಖರ್ಜೂರವನ್ನು ಸೇವಿಸಿ ನಮಾಜ್​ಗೆ ಹೋಗಬೇಕು ಹಾಗೂ ಜಗಳ, ಗಲಾಟೆಯಿಂದ ದೂರ ಇರಬೇಕು. ಈ ಉಪವಾಸ ವ್ರತ ಇಂದ್ರಿಯಗಳ ನಿಗ್ರಹದ ಉದ್ದೇಶವಾಗಿದೆ. ಈ ಉಪವಾಸ ವ್ರತದಿಂದ ಹಸಿವು, ಬಾಯಾರಿಕೆ ಕಷ್ಟಗಳನ್ನು ಅನುಭವಿಸುವ ಮೂಲಕ ಬಡವರು ಅನುಭವಿಸುವ ಕಷ್ಟಗಳ ನೋವು ತಿಳಿಯುತ್ತದೆ ಹಾಗೂ ಪ್ರತಿಯೊಬ್ಬ ಶ್ರೀಮಂತ ವ್ಯಕ್ತಿಗೂ ಇದರ ಅರ್ಥ ತಿಳಿಯಬೇಕು ಎಂಬ ಉದ್ದೇಶವಿದೆ. ಅನಾರೋಗ್ಯ ಪೀಡಿತರು, ಚಿಕ್ಕ ಮಕ್ಕಳು, ವೃದ್ಧರು, ಗರ್ಭಿಣಿಯರು, ಬಾಣಂತಿಯರುಗಳಿಗೆ ಈ ಉಪವಾಸ ವ್ರತ ಕಡ್ಡಾಯವಲ್ಲ. ಆರೋಗ್ಯದ ದೃಷ್ಟಿಯಿಂದಲೂ ಈ ಉಪವಾಸ ಮನುಷ್ಯನ ದೇಹದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ.