ನ್ಯೂಸ್

ಲೇಡಿ ಡಾಕ್ಟರ್​ಗಳಿಗೆ ಕೈಕೊಟ್ಟ ಡೇಟಿಂಗ್ ಡಾಕ್ಟರ್ : ಕಬೀರ್ ಸಿಂಗ್ ಸಿನಿಮಾ ಪ್ರೇರಣೆಯ ಕೃತ್ಯ

ನವದೆಹಲಿ: ಶಹೀದ್ ಕಪೂರ್ ನಟನೆಯ ಬಾಲಿವುಡ್ ಸಿನಿಮಾ ಕಬೀರ್​ ಸಿಂಗ್​ನಿಂದ ಪ್ರೇರಿತನಾದ 31 ವರ್ಷದ ವ್ಯಕ್ತಿಯೊಬ್ಬ ಲೇಡಿ ಡಾಕ್ಟರ್ ಜತೆಗೆ ಡೇಟಿಂಗ್ ಮಾಡುವುದಕ್ಕಾಗಿ ಡಾಕ್ಟರ್ ತರ ಪೋಸ್ ಕೊಟ್ಟ ವಿಚಿತ್ರ ಘಟನೆ ರಾಷ್ಟ್ರರಾಜಧಾನಿಯಲ್ಲಿ ನಡೆದಿದೆ. ಡೇಟಿಂಗ್ ಡಾಕ್ಟರ್ ಮತ್ತು ಆತನ ಸಹಚರ ಈಗ ಪೊಲೀಸರ ಅತಿಥಿ. ತನಿಖೆ ವೇಳೆ ಅವರು ಬಹಿರಂಗ ಪಡಿಸಿದ ಅಂಶಗಳು ಕುತೂಹಲ ಕೆರಳಿಸುವಂಥದ್ದು..

ಬಂಧಿತ ಡೇಟಿಂಗ್ ಡಾಕ್ಟರ್ ಹೆಸರು ಆನಂದ ಕುಮಾರ್. ಆತನ ಸಹಚರ ಪ್ರಿಯಂ ಯಾದವ್. ಆರ್ಥೊಪೆಡಿಕ್ ಸರ್ಜನ್​ ಎಂದು ಪೋಸ್ ಕೊಟ್ಟು ಡೇಟಿಂಗ್ ವೆಬ್​ಸೈಟ್​ ಟಿಂಡರ್​ನಲ್ಲಿ ತನ್ನ ವಿವರ ಅಪ್ಡೇಟ್ ಮಾಡಿಕೊಂಡಿದ್ದ ಆನಂದ್​, ಲೇಡಿ ಡಾಕ್ಟರ್ ಒಬ್ಬರ ಜತೆಗೆ ಡೇಟಿಂಗ್ ಮಾಡುವುದಕ್ಕಾಗಿಯೇ ಡಾಕ್ಟರ್ ರೋಹಿತ್ ಗುಜ್ರಾಲ್​ ಎಂದು ಪೋಸ್ ಕೊಟ್ಟಿದ್ದ.

ಲೇಡಿ ಡಾಕ್ಟರ್​ ಜತೆಗೆ ಡೇಟಿಂಗ್ ಶುರು ಮಾಡಿಕೊಂಡ ನಂತರದಲ್ಲಿ ಖಾಸಗಿ ಕ್ಷಣಗಳನ್ನು ಸೆರೆಹಿಡಿದ ಆತ, ಆಕೆಗೆ ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಇದಾಗಿ ತನ್ನ ಬ್ಯಾಂಕ್ ಖಾತೆಗೆ 30,000 ರೂಪಾಯಿ ಹಾಕುವಂತೆ ಹೇಳಿದ್ದ. ಹಾಕದೇ ಇದ್ದರೆ ಖಾಸಗಿ ಕ್ಷಣಗಳ ಫೋಟೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಸಿದ್ದ. ಅದೂ ಅಲ್ಲದೆ, ಲೇಡಿ ಡಾಕ್ಟರ್ ಅವರಿಂದ ಹಣ ಪಡೆಯುವುದಕ್ಕಾಗಿ ಕಟ್ಟುಕಥೆಯನ್ನೂ ಸೃಷ್ಟಿಸಿದ್ದ. ತನ್ನ ತಂಗಿ ಜತೆಗೆ ಒಬ್ಬ ಗೆಳೆಯ ಆನಂದ್​ ಎಂಬಾತ ಮಲಗಿದ್ದ. ಆತ ಈಗ ಹಣಕ್ಕಾಗಿ ಪೀಡಿಸುತ್ತಿದ್ದಾನೆ ಎಂದೂ ಹೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಡೇಟಿಂಗ್ ಮಾಡಿ ಮಹಿಳೆಯರಿಂದ ಹಣ ದೋಚುವ ಕೆಲಸ ಮಾಡುವುದಕ್ಕೆ ಪ್ರೇರಣೆ ಏನು ಎಂಬ ಕಥೆಯನ್ನೂ ಆತ ಪೊಲೀಸಿಗೆ ಹೇಳಿದ್ದ. ಕಬೀರ್ ಸಿಂಗ್ ಸಿನಿಮಾ ನೋಡಿದ ಬಳಿಕ ಅದರ ಪಾತ್ರದಿಂದ ಪ್ರೇರಣೆ ಪಡೆದು ಈ ರೀತಿ ಡಾಕ್ಟರ್ ನಂತೆ ಪೋಸ್ ಕೊಡಲು ಆರಂಭಿಸಿದೆ ಎಂದೂ ಆರೋಪಿ ಆನಂದ್ ಕುಮಾರ್ ಹೇಳಿಕೊಂಡಿದ್ದಾನೆ.

ಕಳೆದ ನಾಲ್ಕು ತಿಂಗಳಿಂದ ಈತ ಇದೇ ಕೆಲಸ ಮಾಡಿದ್ದು, ಅನೇಕ ಮಹಿಳೆಯರನ್ನು ಇದೇ ರೀತಿ ವಂಚಿಸಿದ್ದಾನೆ. ಅವರಲ್ಲಿ ಕೆಲವರು ಇವನೇನೋ ಸಂಕಷ್ಟದಲ್ಲಿದ್ದಾನೆ. ಇಲ್ಲದಿದ್ದರೆ ಮದುವೆಯಾಗಿ ಬಿಡುತ್ತಿದ್ದ ಎಂದು ಆಲೋಚಿಸಿದ್ದಾರೆ. ಒಬ್ಬಾಕೆ ಈತನಿಗಾಗಿ 5 ಲಕ್ಷ ರೂಪಾಯಿ ಸಾಲಕ್ಕೂ ಅರ್ಜಿ ಹಾಕಿದ್ದಾರೆ. ಈತನ ಬಗ್ಗೆ ದೂರು ಬಂದ ಕಾರಣ ಶೋಧ ಕಾರ್ಯ ನಡೆಸಿ ಲಜಪತ್ ನಗರದಲ್ಲಿ ಬಂಧಿಸಿದ್ದು, ನಂತರ ಆತನ ಸಹಚರ ಪ್ರಿಯಂ ಯಾದವ್​ನನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)