ನ್ಯೂಸ್

VIDEO: ಮಾಲ್ಡೀವ್ಸ್​ನಿಂದ 588 ಭಾರತೀಯರನ್ನು ಹೊತ್ತು ತಂದ ಐಎನ್​ಎಸ್​ ಜಲಾಶ್ವ...!

ಕೊಚ್ಚಿ: ಕರೊನಾ ಲಾಕ್​ಡೌನ್​ನಿಂದ ಬೇರೆ ದೇಶಗಳಲ್ಲಿ ಸಿಲುಕಿ ಪರದಾಡುತ್ತಿದ್ದ ಅದೆಷ್ಟೋ ಭಾರತೀಯರನ್ನು ಏರ್​ ಇಂಡಿಯಾ ವಿಮಾಗಳ ಮೂಲಕ ವಾಪಸ್ ಕರೆತರಲಾಗಿದೆ.

ಇದೀಗ ಮತ್ತೊಂದು ಹಂತದಲ್ಲಿ ದ್ವೀಪ ರಾಷ್ಟ್ರ ಮಾಲ್ಡೀವ್ಸ್​ನಲ್ಲಿ ಸಿಲುಕಿದ್ದ 588 ಭಾರತೀಯರನ್ನು ಭಾರತೀಯ ನೌಕಾಪಡೆ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತಂದಿದೆ.

ನೇವಿಯ ಐಎನ್​ಎಸ್​ ಜಲಾಶ್ವ ಹಡಗಿನಲ್ಲಿ ಮಾಲ್ಡೀವ್ಸ್​ನಿಂದ 588 ಜನರನ್ನು ಕರೆದುಕೊಂಡು ಬರಲಾಗಿದ್ದು, ಇಂದು ಕೊಚ್ಚಿಯನ್ನು ತಲುಪಿದ್ದಾರೆ. ಈ ಹಡಗು ಶನಿವಾರ ಮಾಲ್ಡೀವ್ಸ್ನ ಮೇಲ್​​ ಬಂದರಿನಿಂದ ಹೊರಟಿತ್ತು.

ಮಾಲ್ಡೀವ್ಸ್​ನಿಂದ ಭಾರತಕ್ಕೆ ಬಂದ 588 ಮಂದಿಯಲ್ಲಿ 497 ಪುರುಷರು, 70 ಮಹಿಳೆಯರು, 21 ಮಕ್ಕಳು ಇದ್ದಾರೆ. 70 ಮಹಿಳೆಯರಲ್ಲಿ ಆರು ಗರ್ಭಿಣಿಯರು ಇದ್ದಾರೆ.

ಮಾಲ್ಡೀವ್ಸ್​ನಿಂದ ಹೊರಡುವಾಗ ಗಾಳಿ, ಮಳೆ ಇತ್ತು. ಈ ಮಧ್ಯೆ ಎಲ್ಲರನ್ನೂ ಸುರಕ್ಷಿತವಾಗಿ ಭಾರತಕ್ಕೆ ತಲುಪಿಸಿದ್ದಾಗಿ ಇಂಡಿಯನ್ ನೇವಿ ಟ್ವೀಟ್ ಮೂಲಕ ತಿಳಿಸಿದೆ.

ಹೀಗೆ ಬಂದವರಲ್ಲಿ 568 ಮಂದಿ ಕೇರಳದವರೇ ಇದ್ದಾರೆ. ಉಳಿದವರೆಲ್ಲ ತಮಿಳುನಾಡು, ತೆಲಂಗಾಣ, ಲಕ್ಷದ್ವೀಪದವರು. ಇದು ಜಲಾಶ್ವದ ಎರಡನೇ ಟ್ರಿಪ್​ ಆಗಿದೆ. ಮೊದಲ ಬಾರಿ ಮೇ 12ರಂದು 698 ಮಂದಿಯನ್ನು ಕರೆದುಕೊಂಡು ಬಂದಿತ್ತು.

ಬೇರೆ ದೇಶಗಳಲ್ಲಿ ಸಿಲುಕಿರು ಭಾರತೀಯರನ್ನು ಸಮುದ್ರ ಮಾರ್ಗದ ಮೂಲಕ ಕರೆತರುವ ಕಾರ್ಯಾಚರಣೆಗೆ ಸಮುದ್ರ ಸೇತು ಎಂದು ಹೆಸರಿಡಲಾಗಿದೆ.

ಸಮುದ್ರ ಸೇತು ಕಾರ್ಯಾಚರಣೆಯಡಿ ಇದುವರೆಗೆ ಮಾಲ್ಡೀವ್ಸ್​ನಿಂದ ಒಟ್ಟು 22 ರಾಜ್ಯಗಳ 1488 ಭಾರತೀಯರನ್ನು ಕರೆತರಲಾಗಿದೆ. ಅದರಲ್ಲಿ 205 ಮಹಿಳೆಯರು (133 ಗರ್ಭಿಣಿಯರು) 38 ಮಕ್ಕಳು ಎಂದು ನೇವಿ ತಿಳಿಸಿದೆ.

ಭಾರತವನ್ನು ಸಮುದ್ರ ಮಾರ್ಗದ ಮೂಲಕ ತಲುಪಿದ ಎಲ್ಲರಿಗೂ ಸ್ಕ್ರೀನ್​ ಟೆಸ್ಟ್ ಮಾಡಲಾಗಿದೆ. ಕೊವಿಡ್​ ಲಕ್ಷಣಗಳು ಇದ್ದವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹಾಗೇ ಉಳಿದವರೆನ್ನಲ್ಲ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಅವರವರ ಊರುಗಳಿಗೆ ತಲುಪಲು ಬಸ್​ ವ್ಯವಸ್ಥೆಯನ್ನೂ ಮಾಡಲಾಗಿದೆ. (ಏಜೆನ್ಸೀಸ್)