ನ್ಯೂಸ್

ಇಂಜೆಕ್ಷನ್, ಇಂಪ್ಲಾಂಟ್ ಗರ್ಭನಿರೋಧಕ: ಬೆಂಗಳೂರು, ಬೀದರ್, ಮೈಸೂರು, ಯಾದಗಿರಿ ಜಿಲ್ಲೆಗಳಲ್ಲಿ ಪ್ರಾಯೋಗಿಕ ಜಾರಿ

Webdesk - Ravikanth

| ಪಂಕಜ ಕೆ.ಎಂ. ಬೆಂಗಳೂರು 
ತಾಯಂದಿರ ಮರಣ ಪ್ರಮಾಣ ತಗ್ಗಿಸಲು ಹಾಗೂ ಆರೋಗ್ಯಕರ ಶಿಶುಗಳ ಜನನಕ್ಕೆ ಮಕ್ಕಳ ನಡುವೆ ಅಂತರ ಕಾಯ್ದುಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ‘ಅಂತರಾ ಇಂಜೆಕ್ಷನ್’ ಮತ್ತು ‘ಸಬ್ ಡರ್ಮಲ್ ಸಿಂಗಲ್ ರಾಡ್ ಇಂಪ್ಲಾಂಟ್’ ಎಂಬ ಎರಡು ನೂತನ ಗರ್ಭನಿರೋಧಕಗಳನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗುತ್ತಿದೆ. ಈ ನೂತನ ಗರ್ಭನಿರೋಧಕಗಳ ಪ್ರಾಯೋಗಿಕ ಪರೀಕ್ಷೆಗಾಗಿ ಬೆಂಗಳೂರು, ಬೀದರ್, ಮೈಸೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುತ್ತಿದ್ದು, ಸೆಪ್ಟೆಂಬರ್ ಕೊನೆಯ ವಾರದಲ್ಲಿ ಯೋಜನೆಗೆ ಚಾಲನೆ ದೊರೆಯಲಿದೆ.

ಬೆಂಗಳೂರಿನ ಕೆ.ಸಿ. ಜನರಲ್ ಮತ್ತು ವಾಣಿವಿಲಾಸ ಆಸ್ಪತ್ರೆ ಹಾಗೂ ಬೀದರ್ ಜಿಲ್ಲೆಯ ವೈದ್ಯಕೀಯ ಕಾಲೇಜು ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಆಸ್ಪತ್ರೆಗಳಲ್ಲಿ ‘ಸಬ್ ಡರ್ಮಲ್ ಸಿಂಗಲ್ ರಾಡ್ ಇಂಪ್ಲಾಂಟ್’ ಸೇವೆ ದೊರೆಯಲಿದೆ. ಮೈಸೂರು ಜಿಲ್ಲಾ ಆಸ್ಪತ್ರೆ ಹಾಗೂ ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ನೂತನ ‘ಅಂತರಾ ಇಂಜೆಕ್ಷನ್’ ಪರಿಚಯಿಸಲಾಗುತ್ತಿದೆ. ಇದು ಪ್ರಾಯೋಗಿಕವಾಗಿರುವುದರಿಂದ ಈ ಸೇವೆ ನಾಲ್ಕು ಜಿಲ್ಲೆಗಳ ಆಯ್ದ ಆಸ್ಪತ್ರೆಗಳಲ್ಲಿ ಮಾತ್ರ ದೊರೆಯಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಂತರಾ ಇಂಜೆಕ್ಷನ್: ಅಂತರಾ ಇಂಟ್ರಾ ಮಸ್ಕು ್ಯರ್ ಇಂಜೆಕ್ಷನ್ ಈಗಾಗಲೇ ಲಭ್ಯವಿದ್ದು, ಅದನ್ನು ಮಾಂಸಖಂಡಕ್ಕೆ ನೀಡಲಾಗುತ್ತಿದೆ. ಹೊಸ ‘ಅಂತರಾ ಇಂಜೆಕ್ಷನ್’ ಅನ್ನು ಚರ್ಮದ ಕಳಪದರಕ್ಕೆ ಅಂದರೆ ಫ್ಯಾಟ್​ಗೆ ನೀಡಲಾಗುತ್ತದೆ. ಈ ಎರಡೂ ಇಂಜೆಕ್ಷನ್​ಗಳೂ ಒಂದೇ ರೀತಿ ಕೆಲಸ ಮಾಡುತ್ತವೆ. ಆದರೆ, ಹೊಸ ಇಂಜೆಕ್ಷನ್​ನಲ್ಲಿ ಗರ್ಭಧರಿಸುವಿಕೆಯ ಪ್ರಕ್ರಿಯೆಯನ್ನು ಹೆಚ್ಚು ನಿಧಾನಗೊಳಿಸುತ್ತದೆ. ಕಡಿಮೆ ವಯಸ್ಸಿಗೆ ವಿವಾಹವಾದವರು, ಇಲ್ಲವೆ ಒಂದು ಮಗು ಪಡೆದವರು ಮತ್ತೊಂದು ಮಗುವಿನ ನಡುವೆ ಅಂತರ ಕಾಯ್ದುಕೊಳ್ಳಲು ಇದನ್ನು ಪಡೆಯಬಹುದು. ಪ್ರತಿ ಮೂರು ತಿಂಗಳಿಗೊಮ್ಮೆ ತೆಗೆದುಕೊಳ್ಳಬೇಕಾಗುತ್ತದೆ. ಮಗು ಪಡೆಯಲು ಬಯಸಿದಾಗ ಇಂಜೆಕ್ಷನ್ ನಿಲ್ಲಿಸಿದ 6-7 ತಿಂಗಳ ನಂತರ ಗರ್ಭಧರಿಸಬಹುದಾಗಿದೆ.

ಸಿಂಗಲ್ ರಾಡ್ ಇಂಪ್ಲಾಂಟ್: ಸಬ್ ಡರ್ಮಲ್ ಸಿಂಗಲ್ ರಾಡ್ ಇಂಪ್ಲಾಂಟ್ ಎಂಬ ಕಿರು ಸಾಧನವನ್ನು ಮಹಿಳೆಯ ಕೈ ತೋಳಿನ ಒಳಭಾಗಕ್ಕೆ ಅಳವಡಿಸಲಾಗುತ್ತದೆ. ಕೆಲಸಕ್ಕೆ ಹೆಚ್ಚು ಬಳಕೆ ಮಾಡದ ಕೈಗೆ ಇದನ್ನು ಒಮ್ಮೆ ಹಾಕಿದರೆ ಮೂರು ವರ್ಷಗಳ ವರೆಗೆ ಗರ್ಭಧರಿಸಲು ಸಾಧ್ಯವಾಗುವುದಿಲ್ಲ. ಮಗು ಪಡೆಯಲು ಬಯಸಿದಲ್ಲಿ ಈ ಇಂಪ್ಲಾಂಟ್ ಅನ್ನು ಮಧ್ಯದಲ್ಲೇ ತೆಗೆಸಬಹುದು.

ಗರ್ಭನಿರೋಧಕಗಳ ಬಹು ಆಯ್ಕೆ: ಈ ನೂತನ ವಿಧಾನಗಳನ್ನು ಪರಿಚಯಿಸುವ ಮೂಲಕ ಮಹಿಳೆಯರಿಗೆ ಗರ್ಭನಿರೋಧಕಗಳ ಆಯ್ಕೆಗಳನ್ನು ಹೆಚ್ಚಿಸಲಾಗುತ್ತಿದೆ. ಮಗು ಪಡೆಯಲು ಬಯಸುವವರೆಗೂ ದಂಪತಿಗೆ ಇದು ತಾತ್ಕಾಲಿಕ ಆಯ್ಕೆ ವಿಧಾನವಾಗಲಿದೆ. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇರುವುದಿಲ್ಲ ಎನ್ನುತ್ತಾರೆ ವೈದ್ಯರು.

ಲಭ್ಯವಿರುವ ಗರ್ಭನಿರೋಧಕಗಳು: ಈಗಾಗಲೇ ಮಾಲಾ-ಎನ್ ಮತ್ತು ಛಾಯಾ ಸೇರಿ ತುರ್ತು ಗರ್ಭ ನಿರೋಧಕ ಮಾತ್ರೆಗಳು ಲಭ್ಯವಿದೆ. ಅಂತರಾ ಇಂಜೆಕ್ಷನ್, ಕಾಂಡೋಮ್ಳು ಹಾಗೂ ಕಾಪರ್ಟಿ ಸೌಲಭ್ಯವೂ ಇದೆ. ಆದರೆ, ಬಹಳಷ್ಟು ಮಂದಿ ನಿತ್ಯ ಮಾತ್ರೆ ಸೇವಿಸಲು ಹಿಂಜರಿಯುತ್ತಾರೆ. ಇನ್ನೂ ಕೆಲವರು ಕಾಂಡೋಮ್ ಬಳಸಲು ಹಾಗು ಕಾಪರ್ಟಿ ಹಾಕಿಸಿಕೊಳ್ಳಲು ಬಯಸುವುದಿಲ್ಲ. ಅಂತಹವರು ಈ ನೂತನ ವಿಧಾನಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ನೂತನ ಗರ್ಭನಿರೋಧಕಗಳ ಸೇವೆ ಒದಗಿಸಲು ಯಾರನ್ನು ಆಯ್ಕೆ ಮಾಡಬೇಕು? ಅವುಗಳ ಮಾನದಂಡಗಳೇನು ಎಂಬ ಬಗ್ಗೆ ಈಗಾಗಲೇ ಐಇಸಿ, ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುತ್ತಿದೆ. ಹಂತ ಹಂತವಾಗಿ ನಾಲ್ಕು ಜಿಲ್ಲೆಗಳಾದ್ಯಂತ ತರಬೇತಿ ಪೂರ್ಣಗೊಳಿಸಿ ಸೆಪ್ಟೆಂಬರ್ ಅಂತ್ಯಕ್ಕೆ ಯೋಜನೆ ಜಾರಿಗೊಳಿಸಲಾಗುವುದು.  | ಆರೋಗ್ಯಾಧಿಕಾರಿ

ಹೆಚ್ಚುತ್ತಿರುವ ಟೀನೇಜ್ ಪ್ರೆಗ್ನೆನ್ಸಿ: ಭಾರತದಲ್ಲಿ ಹದಿಹರೆಯದವರು ಗರ್ಭಧರಿಸುವ ಪ್ರಮಾಣ ಹೆಚ್ಚಾಗುತ್ತಿದೆ. ಮಾತ್ರವಲ್ಲ, ಇವರಲ್ಲಿ ಮಕ್ಕಳ ನಡುವಿನ ಅಂತರವೂ ಕಡಿಮೆ ಆಗುತ್ತಿದೆ. ಇದರಿಂದ ತಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟಸಾಧ್ಯ. ಅವಧಿಪೂರ್ವ ಶಿಶುಗಳ ಜನನವೂ ಹೆಚ್ಚುತ್ತಿದ್ದು, ಈ ಮಕ್ಕಳಲ್ಲಿ ಕಡಿಮೆ ತೂಕ, ದೃಷ್ಟಿ ಸಮಸ್ಯೆ, ಪೋಷಕಾಂಶದ ಕೊರತೆ, ಬೆಳವಣಿಗೆ ಕುಗ್ಗುವಿಕೆ ಸೇರಿ ದೀರ್ಘಾವಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನವು ಈ ನೂತನ ಗರ್ಭನಿರೋಧಕಗಳನ್ನು ಪರಿಚಯಿಸುತ್ತಿದೆ.