ನವದೆಹಲಿ: ಬಾಯ್ಫ್ರೆಂಡ್ ಜತೆ ನಿರಂತರವಾಗಿ ಮಸೇಜ್ ಮಾಡುತ್ತಿದ್ದ ಸಹೋದರಿಯನ್ನು ನೋಡಿ ಸಿಟ್ಟಿಗೆದ್ದ ಅಪ್ರಾಪ್ತ ತಮ್ಮ ಆಕೆಗೆ ಗುಂಡು ಹಾರಿಸಿರುವ ಘಟನೆ ಈಶಾನ್ಯ ದೆಹಲಿಯ ವೆಲ್ಕಮ್ ಏರಿಯಾದಲ್ಲಿ ನಡೆದಿದೆ.
ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. 17 ವರ್ಷದ ಆರೋಪಿ ಸಹೋದರ ಗುಂಡು ಹಾರಿಸಿ, ಇದೀಗ ಪರಾರಿಯಾಗಿದ್ದಾನೆ.
ಈ ಘಟನೆ ಗುರುವಾರ ನಡೆದಿದೆ. ಪದೇಪದೆ ಎಚ್ಚರಿಕೆ ನೀಡಿದರೂ ಸಹೋದರಿ ಬಾಯ್ ಫ್ರೆಂಡ್ ಜತೆ ಚಾಟಿಂಗ್ನಲ್ಲಿ ಬಿಜಿಯಾಗಿರುವುದನ್ನು ತಮ್ಮ ಗಮನಿಸಿದ್ದ. ಗುರುವಾರ ಮತ್ತೆ ಎಚ್ಚರಿಕೆ ನೀಡಿದ್ದು, ಇಬ್ಬರ ನಡುವಿನ ವಾಗ್ವಾದಕ್ಕೆ ಕಾರಣವಾಗಿತ್ತು. ಬಳಿಕ ನಿಯಂತ್ರಣ ಕಳೆದುಕೊಂಡ ತಮ್ಮ ದೇಶಿ ನಿರ್ಮಿತ ಪಿಸ್ತೂಲ್ನಿಂದ ಸಹೋದರಿಯ ಹೊಟ್ಟೆಗೆ ಗುಂಡು ಹಾರಿಸಿ, ಎಸ್ಕೇಪ್ ಆಗಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ ಆರೋಪಿ ಆತನ ಸ್ನೇಹಿತನೊಬ್ಬನಿಂದ ಅಕ್ರಮ ಶಸ್ತ್ರಾಸ್ತ್ರ ಪಡೆದುಕೊಂಡಿರುವುದು ತಿಳಿದುಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಪರಾರಿಯಾಗಿರುವ ಆರೋಪಿ ತಮ್ಮನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. (ಏಜೆನ್ಸೀಸ್)