ನ್ಯೂಸ್

ಕೃಷಿಗಿನ್ನು ಕೈಗಾರಿಕಾ ಮಾನ್ಯತೆ; ರೈತ ಸಮೃದ್ಧಿ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ಸಿದ್ಧತೆ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಜತೆಯಲ್ಲೇ ಕೃಷಿಗೆ ಕೈಗಾರಿಕೆ ಮಾನ್ಯತೆ ನೀಡಿ, ಅನ್ನದಾತರ ಆದಾಯ ವೃದ್ಧಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರೈತ ಸಮೃದ್ಧಿ ಯೋಜನೆ ಜಾರಿಗೆ ಮುಂದಾಗಿದೆ.

ಸಿಎಂ ಸಿದ್ದರಾಮಯ್ಯ ಬಜೆಟ್​ನಲ್ಲಿ ಪ್ರಕಟಿಸಿದ ನಂತರ ಯೋಜನೆ ಜಾರಿಗೆ ಸಂಬಂಧಿಸಿದಂತೆ ಮಣಿಪುರದ ಕೇಂದ್ರ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಸ್. ಅಯ್ಯಪ್ಪನ್ ಅಧ್ಯಕ್ಷತೆಯ ಉನ್ನತ ಸಮಿತಿ ಯೋಜನೆ ರೂಪುರೇಷೆ ಸಿದ್ಧಪಡಿಸಿದೆ. ಆ ಯೋಜನೆ ಜಾರಿಗೆ ತರಲು ಕೃಷಿ ಇಲಾಖೆ ಅಧ್ಯಯನ ನಡೆಸಿದೆ.

ಕೃಷಿಗೆ ಉದ್ಯಮದ ಮಾನ್ಯತೆ ಸಿಗುವಂತೆ ಮಾಡುವುದಕ್ಕೆ ಅಗತ್ಯವಾದ ಪೂರ್ವಸಿದ್ಧತೆ ಕೈಗೊಳ್ಳುವುದು ರೈತ ಸಮೃದ್ಧಿ ಯೋಜನೆಯ ಒಟ್ಟಾರೆ ಆಶಯ. ಕೇವಲ ಬೆಳೆ ಬೆಳೆಯುವುದಕ್ಕಷ್ಟೇ ಸೀಮಿತ ವಾಗದೆ ಸಮಗ್ರ ಕೃಷಿ ಪದ್ಧತಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಯೋಜನೆಗಳನ್ನು ಕ್ರೋಡೀಕರಿಸಿ ರಾಜ್ಯದಲ್ಲಿ ಪ್ರಗತಿಪರ ಕೃಷಿಕರನ್ನು ಹುಟ್ಟು ಹಾಕುವ ಆಶಯ ಹೊಂದಲಾಗಿದೆ. ಆಗಷ್ಟೇ ಉಳಿದ ರೈತರನ್ನು ವಿವಿಧ ವಿಚಾರದಲ್ಲಿ ಎಚ್ಚರಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಂಡ ಎಂಬ ಗಾದೆ ಮಾತಿಗೆ ಅನ್ವಯವಾಗುವ ರೀತಿ ರೈತರ ಬದುಕು ಸಂಕಷ್ಟಕ್ಕೆ ಸಿಲುಕಲಿದೆ.

ಕೃಷಿ ಕ್ಯಾಬಿನೆಟ್: ರೈತ ಸಮೃದ್ಧಿ ಯೋಜನೆಯನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಲು ಪ್ರತ್ಯೇಕ ಕೃಷಿ ಕ್ಯಾಬಿನೆಟ್​ನ ಅಗತ್ಯವನ್ನು ಸಿದ್ದರಾಮಯ್ಯ ಸರ್ಕಾರ ಮನಗಂಡಿದೆ. ಅದಕ್ಕಾಗಿಯೇ ಸಿಎಂ ಅಧ್ಯಕ್ಷತೆಯಲ್ಲಿ ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆಯ ಬಗ್ಗೆ ಬಜೆಟ್​ನಲ್ಲಿ ಪ್ರಸ್ತಾಪಿಸಿರುವಂತೆ ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆದಿವೆ. ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ಸಂಬಂಧಿಸಿದ ಕೃಷಿ, ಪಶು ಸಂಗೋಪನೆ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಸಹಕಾರ ಇಲಾಖೆಗಳ ನಡುವೆ ಸಮನ್ವಯತೆ ತರುವುದು ಉದ್ದೇಶ. ಈ ಸಚಿವರು ಆಗಾಗ ಸರಣಿ ಸಭೆ ನಡೆಸಿ ಯೋಜನೆಗಳನ್ನು ರೂಪಿಸಲಿದ್ದಾರೆ.

ವರದಿಯಲ್ಲಿನ ಪ್ರಮುಖಾಂಶ: ಸ್ಥಳೀಯ ಮಾರುಕಟ್ಟೆ, ರಫ್ತು ಎರಡಕ್ಕೂ ಆದ್ಯತೆ ನೀಡಲಾಗುತ್ತದೆ. ಯಾವ ಪ್ರದೇಶದಲ್ಲಿ ಯಾವ ಬೆಳೆ ಬೆಳೆಯುತ್ತಾರೋ ಅಲ್ಲಿ ಅದರದೇ ಆದ ಕ್ಲಸ್ಟರ್ ನಿರ್ಮಾಣ ಮಾಡಲಾಗುತ್ತದೆ. ಮಂಡ್ಯದಲ್ಲಿ ರಾಗಿ, ಭತ್ತ, ವಿಜಯಪುರದಲ್ಲಿ ದ್ರಾಕ್ಷಿ, ಚಿತ್ರದುರ್ಗದಲ್ಲಿ ಶೇಂಗಾ, ಕೊಪ್ಪಳದಲ್ಲಿ ಹಣ್ಣು ಹೀಗೆ ಯೋಜನೆ ರೂಪಿಸಲಾಗುತ್ತಿದೆ. ರೈತರಿಗೆ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಕೋಯ್ಲೋತ್ತರ ತಂತ್ರಜ್ಞಾನದ ಮೂಲಕ ನಷ್ಟ ಕಡಿಮೆ ಮಾಡುವುದು, ಯಂತ್ರೋಪಕರಣಗಳ ಬಳಕೆ ಹೆಚ್ಚಿಸುವುದು, ಪ್ರಾಥಮಿಕ ಹಂತದ ಸಂಸ್ಕೃರಣೆಯನ್ನು ರೈತರೇ ಮಾಡುವಂತೆ ಮಾಡುವುದು, ಕೃಷಿ ಸಂಸ್ಕರಣಾ ಆಯುಕ್ತಾಲಯದ ಮೂಲಕ ಡೈರಿ, ಮೀನುಗಾರಿಕೆ ಹೀಗೆ ವಿವಿಧ ಕೃಷಿ ಹಾಗೂ ಕೃಷಿಗೆ ಪೂರಕ ಉತ್ಪನ್ನಗಳ ಸಂಸ್ಕರಣೆ ರೈತರ ಮನೆಯಂಗಲದಲ್ಲಿಯೇ ಆಗುವಂತೆ ನೋಡಿಕೊಳ್ಳುವ ಗುರಿಯೂ ಇದರಲ್ಲಿದೆ. ರೈತರ ಉತ್ಪನ್ನಗಳಿಗೆ ಡಿಜಿಟಲ್ ಫ್ಲಾಟ್​ಫಾರಂಗಳನ್ನು ಒದಗಿಸುವುದು, ಅದಕ್ಕೆ ತಕ್ಕಂತೆ ಉತ್ಪನ್ನ ಸಿದ್ಧಪಡಿಸವ ಬಗ್ಗೆ ಶಿಫಾರಸುಗಳನ್ನು ನೀಡಲಾಗಿದೆ. ಅವುಗಳ ಜಾರಿಗೆ ಇಲಾಖೆ ಚರ್ಚೆ ನಡೆಸಿದೆ.

ಯೋಜನೆಯ ಉದ್ದೇಶವೇನು?: * ಸುಸ್ಥಿರ, ಲಾಭದಾಯಕ ಗುರಿ * ಮಗ್ರ ಕೃಷಿಗೆ ಉತ್ತೇಜನ * ಕೃಷಿ ಆದಾಯ ಸುಸ್ಥಿರತೆಗೆ ಬೆಂಬಲ * ಮಣ್ಣಿನ ಗುಣ, ಮಾರುಕಟ್ಟೆ ಬೇಡಿಕೆ ಆಧರಿಸಿ ಬೆಳೆ ನಿರ್ಧಾರ ಮಾಡುವುದು * ಮಣ್ಣು ಪರೀಕ್ಷೆ ಗುಣಮಟ್ಟದ ಜಾಗೃತಿ * ಹೊಸ ಕೃಷಿ ಪದ್ಧತಿ, ತಂತ್ರಜ್ಞಾನದ ಅರಿವು * ಕೃಷಿ ಉತ್ಪನ್ನಗಳ ಸಂಗ್ರಹಣೆ ಹಾಗೂ ಮೌಲ್ಯವರ್ಧನೆಯ ಬಗ್ಗೆ ಮಾಹಿತಿ * ಉತ್ತಮ ಬೆಲೆ, ಮಾರುಕಟ್ಟೆ ಸಂಪರ್ಕ.

ಮೊದಲ ಆದ್ಯತೆ?: ರಾಜ್ಯದ 398 ಗ್ರಾ.ಪಂಗಳಲ್ಲಿ ಕೃಷಿ ಉತ್ಪಾದಕತೆ ಕಡಿಮೆ ಇದೆ. ಅಂತಹ ಕಡೆ ರೈತ ಸಮೃದ್ಧಿ ಯೋಜನೆಯನ್ನು ಮೊದಲ ಆದ್ಯತೆಯಲ್ಲಿ ಜಾರಿಗೆ ತರುವ ಬಗ್ಗೆ ಇಲಾಖೆಯಲ್ಲಿ ಚರ್ಚೆ ನಡೆದಿದೆ.

ಒಂದೆಡೆ ಮಾಹಿತಿ: ಕೃಷಿಗೆ ಸಂಬಂಧಿಸಿದ ಎಲ್ಲ ಮಾಹಿತಿಯೂ ಒಂದೆಡೆ ಸಿಗುವಂತೆ ನೋಡಿಕೊಳ್ಳಲು ಸಹ ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದ ರೈತರ ಪರ ಯೋಜನೆಗಳಿಗೆ ಸಾಕಷ್ಟು ಅನು ಕೂಲವಾಗುತ್ತದೆ.

ಯಾವುದಕ್ಕೆಷ್ಟು ವೆಚ್ಚ?

(ಡಾ. ಅಯ್ಯಪ್ಪನ್ ಸಮಿತಿ ಪ್ರಕಾರ )

* ಪ್ರಸಕ್ತ ಬಜೆಟ್​ನಲ್ಲಿ 10 ಕೋಟಿ ರೂ.ಸಿಕ್ಕಿದೆ

* ಸಮಗ್ರ ಕೃಷಿ ಪದ್ಧತಿ ಅಳವಡಿಕೆಗೆ -ಠಿ;6 ಕೋಟಿ

* ಕೃಷಿ ಉತ್ಪಾದಕ ಸಂಸ್ಥೆಗಳು, ಸ್ವ ಸಹಾಯ ಸಂಘಗಳ ಮೂಲಕ ತರಬೇತಿಗೆ 1 ಕೋಟಿ ರೂ.

* ಬ್ರಾ್ಯಂಡಿಂಗ್, ರಫ್ತು, ಮಾರುಕಟ್ಟೆಗೆ -ಠಿ;2 ಕೋಟಿ

* ಮಣ್ಣು ಪರೀಕ್ಷೆಗೆ 1 ಕೋಟಿ ರೂಪಾಯಿ

ಏನೆಲ್ಲ ಶಿಫಾರಸು?

* ಎಂಎಸ್​ಎಂ ವಲಯದಲ್ಲಿ ಕೃಷಿ ಲಿಂಕ್

* ಕೃಷಿ ಉತ್ಪಾದಕ ಸಂಸ್ಥೆ, ಸ್ಟಾರ್ಟಪ್ ಬಳಕೆ

* ರೈತರ ಸಾಮರ್ಥ್ಯ ಹೆಚ್ಚಿಸುವ ಅಗತ್ಯತೆ

* ಇದಕ್ಕಾಗಿ ಸ್ವಸಹಾಯ ಸಂಘಗಳ ಬಳಕೆ

*  ಮಣ್ಣು ಪರೀಕ್ಷೆ, ಮಣ್ಣಿಗೆ ತಕ್ಕ ಬೆಳೆ ಸೂತ್ರ

*  ಬೆಳೆಗೆ ತಕ್ಕಂತೆ ಬ್ರಾಂಡಿಂಗ್ ಮಾಡುವುದು

*  ಮಾರುಕಟ್ಟೆ ವ್ಯವಸ್ಥೆ ಮುಕ್ತಗೊಳಿಸುವುದು

*  ಕಂಪನಿಗಳಿಗೆ ವಿಶೇಷ ರಿಯಾಯ್ತಿ ನೀಡಿಕೆ

*  ಸಂಸ್ಕರಣೆಗೆ ಕ್ಲಸ್ಟರ್​ಗಳ ರಚನೆ ಆಗಬೇಕು

ಸಮಗ್ರ ಕೃಷಿಗೆ ಪೂರಕವಾಗುವ ಯೋಜನೆ ರೂಪಿಸಿ ಅನುಷ್ಠಾನಕ್ಕೆ ರೈತರಿಂದ ಬೇಡಿಕೆ ಇತ್ತು. ಸಿಎಂ ಬಜೆಟ್​ನಲ್ಲಿ ಕೃಷಿ ಸಮೃದ್ಧಿ ಘೋಷಣೆ ಮಾಡಿದ್ದರು. ಯೋಜನೆ ಜಾರಿಗಾಗಿ ಎಸ್. ಅಯ್ಯಪ್ಪನ್ ಸಮಿತಿ ವರದಿ ನೀಡಿದೆ. ಸಮಿತಿಯ ವರದಿ ಜಾರಿಗೆ ತಂದರೆ ರೈತರ ಆತ್ಮಹತ್ಯೆ ತಡೆಯಲು ಸಾಧ್ಯವಾಗುತ್ತದೆ. ಆದಷ್ಟು ಶೀಘ್ರ ರೈತ ಸಮೃದ್ಧಿ ಯೋಜನೆ ಜಾರಿಗೆ ಬರಲಿದೆ. ಕೃಷಿ ಕ್ಯಾಬಿನೆಟ್ ಸಹ ಬೇಗ ಆಗಲಿದೆ. | ಎನ್. ಚಲುವರಾಯಸ್ವಾಮಿ ಕೃಷಿ ಸಚಿವ