ನ್ಯೂಸ್

ಸಿಂಧೂ ನೀರು ಹರಿಬಿಡುವಂತೆ ಭಾರತಕ್ಕೆ ಅಂಗಲಾಚಿ ಬೇಡಿಕೊಂಡ ಪಾಕ್​! ಪತ್ರದ ಮೂಲಕ ಮನವಿ | Indus Waters Treaty

Indus Waters Treaty: ಏಪ್ರಿಲ್​ 22ರಂದು ಕಾಶ್ಮೀರದ ಪಹಲ್ಗಾಮ್​ನಲ್ಲಿ ಸಂಭವಿಸಿದ ಉಗ್ರರ ಭೀಕರ ಗುಂಡಿನ ದಾಳಿಯಲ್ಲಿ 26 ಅಮಾಯಕರು ಪ್ರಾಣ ಕಳೆದುಕೊಂಡರು. ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ ಭಾರತ ಸರ್ಕಾರ, ದಾಳಿ ನಡೆದ ಮರುದಿನವೇ ಪಾಕ್​ ಜೊತೆಗಿನ ಎಲ್ಲಾ ಸಂಪರ್ಕಗಳನ್ನು ಕಡಿದುಕೊಂಡಿತು. ಈ ಸಾಲಿನಲ್ಲಿ ಸಿಂಧೂ ನೀರು ಹಂಚಿಕೆ ಮೊದಲು. ಅಂದು ಸಿಂಧೂ ಹರಿಯುವಿಕೆಯನ್ನು ಸ್ಥಗಿತಗೊಳಿಸಿದ ಭಾರತ ಸರ್ಕಾರ, ಯುದ್ಧ ವಿರಾಮ ಘೋಷಣೆ ನಂತರವೂ ಒಂದು ಹನಿ ನೀರನ್ನು ಪಾಕ್​ ನೆಲಕ್ಕೆ ಹರಿಯಲು ಬಿಟ್ಟಿಲ್ಲ. ಸದ್ಯ ಇದೇ ಆ ದೇಶದ ನರಳಾಟಕ್ಕೆ ಕಾರಣವಾಗಿದೆ.

ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕ್ ಉಗ್ರರು ಅಡಗಿದ್ದ ತಾಣಗಳನ್ನು ಹುಡುಕಿ ಹುಡುಕಿ ದಾಳಿ ನಡೆಸಿದ ಭಾರತೀಯ ಸೇನೆ, ಕ್ಷಿಪಣಿ ಮತ್ತು ಡ್ರೋನ್ ಮೂಲಕ 25 ನಿಮಿಷಗಳ ಮೊದಲ ದಾಳಿಯಲ್ಲಿ 100ಕ್ಕೂ ಅಧಿಕ ಉಗ್ರರ ನೆತ್ತರನ್ನು ಹರಿಸಿತು. ಇದು ಎರಡು ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿತು. ಭಾರತದೊಂದಿಗಿನ ಯುದ್ಧ ವಿರಾಮ ಬಳಿಕ ಸದ್ಯ ಎಲ್ಲಾ ಯಥಾಸ್ಥಿತಿಗೆ ಮರಳಿದ್ದೇ ಆದರೂ ಸಿಂಧೂ ನೀರು ಬಿಡುವ ಬಗ್ಗೆ ಭಾರತ ಆಸಕ್ತಿ ತೋರಿಲ್ಲ. ಸದ್ಯ ಭಾರತದ ಈ ಕಠಿಣ ನಿರ್ಧಾರ ಪಾಕ್​ ಹನಿ ನೀರಿಗೂ ಪರದಾಡುವಂತೆ ಮಾಡಿದೆ.

ಯುದ್ಧ ವಿರಾಮದಿಂದ ನಿರಾಳವಾಗಿರುವ ಪಾಕಿಸ್ತಾನ, ಇದೀಗ ಪತ್ರದ ಮೂಲಕ ಸಿಂಧೂ ನೀರು ಬಿಡುವಂತೆ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಿರುವುದಾಗಿ ವರದಿಗಳು ತಿಳಿಸಿವೆ. ಸಿಂಧೂ ಜಲ ಒಪ್ಪಂದ ರದ್ದುಗೊಳಿಸಿರುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಪಾಕ್​ ಭಾರತಕ್ಕೆ ಪತ್ರ ಬರೆದಿದೆ. ಸಿಂಧೂ ಜಲ ಒಪ್ಪಂದದಡಿಯಲ್ಲಿ ತನ್ನ ಪ್ರದೇಶಕ್ಕೆ ನದಿಗಳ ಹರಿವಿಗೆ ಮರು ಚಾಲನೆ ನೀಡುವಂತೆ ಪಾಕಿಸ್ತಾನದ ಜಲಸಂಪನ್ಮೂಲ ಸಚಿವಾಲಯ ನವದೆಹಲಿಗೆ ಪತ್ರ ಬರೆದಿದೆ ಎಂದು ವರದಿಯಲ್ಲಿ ಉಲ್ಲೇಖಗೊಂಡಿದೆ,(ಏಜೆನ್ಸೀಸ್).

ಪಾಕಿಸ್ತಾನಕ್ಕೆ 'ಸಿಂಧೂ'ರವೇ ಆಸರೆ

ಭಾರತವು ಸಿಂಧೂ ನದಿ ಜಲಾನಯನ ಪ್ರದೇಶದ 80 ಪ್ರತಿಶತದಷ್ಟು ನೀರನ್ನು ಪಾಕಿಸ್ತಾನದೊಂದಿಗೆ ಹಂಚಿಕೊಳ್ಳುತ್ತದೆ. ಪಾಕಿಸ್ತಾನದಲ್ಲಿರುವ ತರ್ಬೆಲಾ ಮತ್ತು ಮಂಗ್ಲಾದಂತಹ ಜಲವಿದ್ಯುತ್ ಸ್ಥಾವರಗಳು ವಿದ್ಯುತ್ ಉತ್ಪಾದಿಸಲು ಈ ನದಿಯಿಂದ ಹರಿದುಬರುವ ನಿರಂತರ ನೀರಿನ ಮೇಲೆ ಹೆಚ್ಚು ಅವಲಂಬಿತವಾಗಿವೆ. ಪ್ರಸ್ತುತ ಸಿಂಧೂ ಜಲ ಒಪ್ಪಂದ ಸ್ಥಗಿತಗೊಳಿಸಿರುವ ಹಿನ್ನೆಲೆ ಪಾಕ್​ ಜಿಡಿಪಿ ಮತ್ತು ಷೇರುಪೇಟೆ ಭಾರೀ ಕುಸಿತ ಅನುಭವಿಸಿದೆ.

ಸಿಂಧೂ ಜಲ ಒಪ್ಪಂದದ ರದ್ದು ಪಾಕಿಸ್ತಾನದ ಕೃಷಿ ವಲಯದ ಮೇಲೆ ಮಾತ್ರವಲ್ಲದೆ ವಿದ್ಯುತ್ ಪೂರೈಕೆಯ ಮೇಲೂ ತೀವ್ರ ಪರಿಣಾಮ ಬೀರಲಿದೆ. ನೀರಿನ ಲಭ್ಯತೆ ಮತ್ತು ನೀರಿನ ಕೊರತೆಯಲ್ಲಿನ ಅಸ್ಥಿರತೆಯಿಂದಾಗಿ, ಪಾಕಿಸ್ತಾನ ಪ್ರತಿ ವರ್ಷ 19 ಮಿಲಿಯನ್ ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತದೆ. ಕಲ್ಲಿದ್ದಲು ಆಮದುಗಳಿಂದಾಗಿ ದೇಶದ ಮೇಲಿನ ಆರ್ಥಿಕ ಹೊರೆ 2021ರ ವೇಳೆಗೆ 1.5 ಬಿಲಿಯನ್ ಡಾಲರ್​ ತಲುಪಿದೆ. ಪ್ರಸ್ತುತ, ಪಾಕಿಸ್ತಾನವು ತನ್ನ ಜಿಡಿಪಿಯ ಶೇ. 60ಕ್ಕಿಂತ ಹೆಚ್ಚು ಸಾಲದ ಶೂಲದಲ್ಲಿ ಸಿಲುಕಿದೆ.