ನ್ಯೂಸ್

ಇಲ್ಲಿ ಕೌಟುಂಬಿಕ ಬಂಧನಗಳನ್ನು ಇಷ್ಟಪಡುವುದಿಲ್ಲ; ಅಮೆರಿಕದಲ್ಲಿ ನಡೆದ ದುಃಖದ ಸಂಗತಿ ಹಂಚಿಕೊಂಡ ಭಾರತೀಯ Sad Reality

ವಾಷಿಂಗ್ಟನ್: ಉತ್ತಮ ಜೀವನ ಮತ್ತು ಅವಕಾಶಗಳಿಗಾಗಿ ಅನೇಕ ಭಾರತೀಯರು ಹೊರ ದೇಶಗಳಲ್ಲಿ ನೆಲೆಸುವ ಕನಸನ್ನು ಕಾಣುತ್ತಾರೆ. ಆದರೆ, ಅಲ್ಲಿನ ಸಾಂಸ್ಕೃತಿಕ ಭಿನ್ನತೆಗಳು ಹಾಗೂ ಪ್ರತ್ಯೇಕತೆಗಳಿಗೆ ರೋಸಿಹೋಗಿರುತ್ತಾರೆ. ಅಂದಹಾಗೇ, ಭಾರತೀಯ ಮೂಲದ ಡಿಜಿಟಲ್ ಸೃಷ್ಟಿಕರ್ತ ಸಚಿನ್ ಸುಂಧು ಅಮೆರಿಕದಲ್ಲಿ ವಾಸಿಸುತ್ತಿದ್ದು, ಈ ವೇಳೆ ಅಲ್ಲೇ ಪಕ್ಕದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಹಿರಿಯ ವ್ಯಕ್ತಿಯೊಬ್ಬರು ನಿಧನರಾದ ನಂತರ ನಡೆದಂತಹ ದುಃಖಕರವಾದ ವಾಸ್ತವಗಳ (Sad Reality) ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲೇನಿದೆ?

ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಸಿಂಧು ತಮ್ಮ ಪಕ್ಕದ ಮನೆಯಲ್ಲಿ ನೆಲೆಸಿರುವ 80 ವರ್ಷದ ಹಿರಿಯ ವ್ಯಕ್ತಿಯೊಬ್ಬರ ಮೃತ ದೇಹ ಇಡೀ ದಿನವಾದರೂ ಪತ್ತೆಯಾಗಲಿಲ್ಲ. ಏಕೆಂದರೆ, ಅವರು ಪ್ರತ್ಯೇಕ ಜೀವನವನ್ನು ನಡೆಸುತ್ತಿದ್ದರು. ಹಾಗಾಗಿ ಅವರ ಸಾವಿನ ಬಗ್ಗೆ ಯಾರಿಗೂ ವಿಚಾರ ತಿಳಿದಿರಲಿಲ್ಲ ಎಂದು ವಿವರಿಸಿದ್ದಾರೆ.

ನಾನು ನಿಮ್ಮೆಲ್ಲರೊಂದಿಗೆ ತುಂಬಾ ನೋವಿನ ಸಂಗತಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ನನ್ನ ಮನೆಯ ಪಕ್ಕದ ಅಪಾರ್ಟ್​ಮೆಂಟ್​ನಲ್ಲಿ ಶಫರ್​ ಎಂಬ ನನ್ನ ಆತ್ಮೀಯ ಸ್ನೇಹಿತ ವಾಸಿಸುತ್ತಿದ್ದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಆತನಿಗೆ ಹೆಂಡತಿ, ಮಕ್ಕಳು ಯಾರೂ ಇರಲಿಲ್ಲ. ಈ ವಿಚಾರ ಬಹುಶಃ ನನಗಷ್ಟೇ ತಿಳಿದಿತ್ತು ಎಂದು ಹೇಳಿದರು.

ಸಮಯ 8 ಗಂಟೆಯಾಗಿತ್ತು. ಶಫರ್​ನನ್ನು ಕಾಣದೆ ಇಡೀ ದಿನ ಕಳೆದಿದ್ದೆ. ನಂತರ ಆತನನ್ನು ನೋಡುವ ಹಂಬಲದಿಂದ ನನ್ನಲ್ಲಿರುವ ಕೀಗಳನ್ನು ಬಳಸಿ ಆತನ ಮನೆಯೊಳಗೆ ಪ್ರವೇಶ ಪಡೆದೆ. ಆತ ಮಲಗುವ ಕೋಣೆಗೆ ಹೋದಾಗ ಆತ ನಿರ್ಜೀವವಾಗಿ ಮಲಗಿರುವುದನ್ನು ನಾನು ಕಂಡೆ. ತಕ್ಷಣವೇ, 911 ಗೆ ಕರೆ ಮಾಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಅವರು ಮೃತಪಟ್ಟಿದ್ದಾರೆಂದು ಘೋಷಿಸಿದ್ದಾರೆ ಎಂದರು.

ಭಾರತ ಮತ್ತು ಅಮೆರಿಕದಲ್ಲಿ ಸಾಂಸ್ಕೃತಿಕ ಮೌಲ್ಯಗಳಲ್ಲಿನ ವ್ಯತ್ಯಾಸದ ಬಗ್ಗೆ ಮಾತನಾಡಿದ ಸಿಂಧು, ಪಾಶ್ಚಿಮಾತ್ಯ ರಾಷ್ಟ್ರಗಳು ಬಲವಾದ ಕೌಟುಂಬಿಕ ಬಂಧನಗಳನ್ನು ಇಷ್ಟಪಡುವುದಿಲ್ಲ ಎಂದರು.

ಅಮೆರಿಕದ ಬಗ್ಗೆ ನನಗೆ ನಿಜವಾಗಿಯೂ ಇಷ್ಟವಿಲ್ಲದ ಒಂದು ವಿಷಯವೆಂದರೆ ಇಲ್ಲಿನ ಜನರು ಕುಟುಂಬದ ಮಹತ್ವವನ್ನು ಹೊಂದಿರುವುದಿಲ್ಲ. ಮಕ್ಕಳೊಂದಿಗೆ, ಹೆತ್ತವರೊಂದಿಗೆ ಬದುಕಲು ಇಷ್ಟಪಡುವುದಿಲ್ಲ. ಆದರೆ, ಭಾರತದಲ್ಲಿ, ನಾವು ನಮ್ಮ ಹಿರಿಯರನ್ನು ನೋಡಿಕೊಳ್ಳುತ್ತೇವೆ. ಅವರ ಜೊತೆಯಾಗಿ ನಿಲ್ಲುತ್ತೇವೆ. ಆ ಸಂಸ್ಕೃತಿ ಇಲ್ಲಿ ಅಸ್ತಿತ್ವದಲ್ಲಿಲ್ಲ. ಅದಕ್ಕಾಗಿ ಅನೇಕ ವೃದ್ಧರು ಒಬ್ಬಂಟಿಯಾಗಿ ಸಾಯುತ್ತಾರೆ ಎಂದು ಅಭಿಪ್ರಾಯ ಸೂಚಿಸಿದರು.

ಭಾರತ ದೇಶದಲ್ಲಿ ಯಾವುದೇ ವ್ಯಕ್ತಿ ಮೃತಪಟ್ಟಾಗ ಅಥವಾ ಅಪಾಯದಲ್ಲಿದ್ದಾಗ ಮನೆಯ ಜನರು ಮುಂದೆ ಬರದಿದ್ದರೆ, ನೆರೆಹೊರೆಯವರು ಅಂತ್ಯಕ್ರಿಯೆಯನ್ನು ನೆರವೇರಿಸಲು ಮುಂದಾಗುತ್ತಾರೆ. ಹಾಗಾಗಿ ಯಾರೇ ಆಗಿರಲಿ ಮನೆಯಿಂದ ದೂರ ಇದ್ದರೆ, ನಿಮ್ಮ ಕುಟುಂಬದೊಂದಿಗೆ ಸಂಪರ್ಕದಲ್ಲಿರಿ. ಪ್ರತಿದಿನ ಹಿರಿಯರೊಂದಿಗೆ ಮಾತನಾಡಿ ಎಂದು ವಿಡಿಯೋ ಮೂಲಕ ಒತ್ತಾಯಿಸಿದರು.

ಇಂಟರ್ನೆಟ್ ಪ್ರತಿಕ್ರಿಯೆಗಳು

ಈ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ಪ್ರಸಾರವಾಗುತ್ತಿದ್ದಂತೆಯೇ, ಬಳಕೆದಾರರನ್ನು ಆಕರ್ಷಿಸಿತು. ಕೆಲವರು ಸಿಂಧು ಅವರ ಚಿಂತನಶೀಲ ನಡವಳಿಕೆಯನ್ನು ಶ್ಲಾಘಿಸಿದರು, ಆದರೆ ಇನ್ನು ಕೆಲವರು ಒಂಟಿತನವು ಕೆಲವೊಮ್ಮೆ ಆಯ್ಕೆಯಲ್ಲ ಆದರೆ ಸಂದರ್ಭಗಳ ಪರಿಣಾಮವಾಗಿದೆ ಎಂದು ಅಭಿಪ್ರಾಯಪಟ್ಟರು.

ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಯಾರಿಗೂ ತೊಂದರೆ ನೀಡದೆ ಅವರು ದೂರ ಹೋಗಿದ್ದಾರೆ. ಅವರನ್ನು ನೋಡಲು ಹೋಗಿ ನೀವು ತುಂಬಾ ದಯೆ ತೋರಿಸಿದ್ದೀರಿ ಎಂದು ಕಾಮೆಂಟ್​ ಮಾಡಿದ್ದಾರೆ.

ಅಮೆರಿಕದ ಬೆಳವಣಿಗೆಗೆ ಪರಮಾಣು ಕುಟುಂಬ ವ್ಯವಸ್ಥೆಯು ಹೇಗೆ ಕೊಡುಗೆ ನೀಡಿದೆ ಎಂಬುದನ್ನು ಒಬ್ಬ ಬಳಕೆದಾರರು ಎತ್ತಿ ತೋರಿಸಿದ್ದು, ಅಮೆರಿಕದಲ್ಲಿ ವಿರೋಧಾಭಾಸ ಇದೆ. ಇಲ್ಲಿನ ಕುಟುಂಬ ವ್ಯವಸ್ಥೆಯಿಂದಾಗಿ ಅಮೆರಿಕ ಅಭಿವೃದ್ಧಿ ಹೊಂದಿದೆ. ಪ್ರತಿಯೊಬ್ಬರೂ ಸ್ವತಂತ್ರರಾಗಿದ್ದಾರೆ. ಯಾರ ಜವಬ್ದಾರಿಯನ್ನು ಯಾರೂ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)