ನ್ಯೂಸ್

ಆರಂಭವಾಗಿ ಒಂದೇ ತಿಂಗಳಲ್ಲಿ ಬಾಗಿಲು ಮುಚ್ಚಿದ ದೇಶದ ಮೊದಲ ಸೆಕ್ಸ್​ ಆಟಿಕೆಗಳ ಅಂಗಡಿ! ಕಾರಣ ಏನು ಗೊತ್ತಾ?

ಪಣಜಿ: ಕಳೆದ ತಿಂಗಳು ಭಾರತದ ಮೊಟ್ಟ ಮೊದಲ ಸೆಕ್ಸ್​ ಆಟಿಕೆಗಳ ಬಹಿರಂಗ ಅಂಗಡಿಯನ್ನು ಗೋವಾದ ಜನನಿಬೀಡ ಬೀಚ್ ಕಾಲಂಗಟ್ಟ್​ನಲ್ಲಿ ತೆರೆಯಲಾಗಿತ್ತು. ಆದರೆ, ಇದೀಗ ಆರಂಭವಾಗಿ ಒಂದೇ ತಿಂಗಳಲ್ಲಿ 'ಆ' ಅಂಗಡಿಯನ್ನು ಮುಚ್ಚಲಾಗಿದೆ.

ಹೌದು, ಭಾರತದಲ್ಲಿ ಆನ್​ಲೈನ್​ನಲ್ಲಿ ಸೆಕ್ಸ್​ ಆಟಿಕೆಗಳನ್ನು ಇಷ್ಟು ದಿನ ಮಾರಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಬಹಿರಂಗವಾಗಿ ಸೆಕ್ಸ್​ ಆಟಿಕೆಗಳನ್ನು ಮಾರುವ ಅಂಗಡಿಯನ್ನು ಗೋವಾದಲ್ಲಿ ತೆರೆಯಲಾಗಿತ್ತು. Kamakart ಕಂಪೆನಿಯ ಅಡಿಯಲ್ಲಿ ಕಾಮಾ ಗಿಜ್​ಮೋಸ್ ಎಂಬ ಅಂಗಡಿಯನ್ನು ಕಾಲಂಗಟ್ಟ್​ನಲ್ಲಿ ತೆರೆಯಲಾಗಿತ್ತು.

ಇದು ಗೋವಾದ ಸಂಪ್ರದಾಯವಾದಿಗಳ ಕಣ್ಣನ್ನು ಕೆಂಪಾಗಿಸಿತ್ತು. ಇದನ್ನು ವಿರೋಧಿಸಿದ ಬರಹಗಳು, ಪೊಸ್ಟ್​​ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಎಚ್ಚೆತ್ತುಕೊಂಡ ಕಾಲಂಗಟ್ಟ್ ಗ್ರಾಮ ಪಂಚಾಯಿತಿ, ಕಾಮಾ ಗಿಜ್​ಮೋಸ್ ಅಂಗಡಿಯನ್ನು ಇಂದು ಬಂದ್ ಮಾಡಿಸಿದೆ. ಅಂಗಡಿಯವರು ಅಂಗಡಿ ತೆರೆಯಲು ಸೂಕ್ತ ಅನುಮತಿ ಪಡೆದಿಲ್ಲ ಎಂದು ಆರೋಪಿಸಿ ಸೆಕ್ಸ್​ ಆಟಿಕೆಗಳ ಅಂಗಡಿಯನ್ನು ಬಂದ್ ಮಾಡಿಸಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಕಾಲಂಗಟ್ಟ್ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಎನ್ನುವರು, ಜನನಿಬೀಡ ಪ್ರದೇಶದಲ್ಲಿ ಸೆಕ್ಸ್ ಆಟಿಕೆಗಳನ್ನು ತೆರದಿದ್ದು ಹಲವರಿಗೆ ತೀವ್ರ ಮುಜುಗರ ತಂದೊಡ್ಡಿತ್ತು. ಹಲವರು ನಮಗೆ ದೂರು ನೀಡಿದ್ದರು. ಅಲ್ಲದೇ ಅಂಗಡಿಯವರು ಸೆಕ್ಸ್​ ಆಟಿಕೆಗಳನ್ನು ಮಾರಲು ಯಾವುದೇ ಪೂರ್ವಾನುಮತಿ ಪಡೆದಿದ್ದಿಲ್ಲ. ಹೀಗಾಗಿ ಆ ಅಂಗಡಿಯನ್ನು ಮುಚ್ಚಿಸಿದ್ದೇವೆ. ಆ ತರದ ಅಂಗಡಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಅಂಗಡಿ ಮುಚ್ಚಿಸಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ Kamakart ನ ಸಿಇಓ ಗಣೇಶನ್ ಎನ್ನುವರು, ಅಂಗಡಿ ಆರಂಭಕ್ಕೆ ನಾವು ಅರ್ಜಿ ನೀಡಿದ್ದೇವು. ಕಾನೂನು ಪ್ರಕಾರ ಎಲ್ಲವನ್ನು ಅನುಸರಿಸಿದ್ದೇವು. ಆದರೆ, ಸ್ಥಳೀಯರು ನಮ್ಮನ್ನು ಟಾರ್ಗೆಟ್ ಮಾಡಿದ್ದಾರೆ. ನಾವು ಗೋವಾದವರು ಅಲ್ಲ ಎನ್ನುವುದು ನಮಗೆ ಹಿನ್ನಡೆಯಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಇನ್ನೊಂದು ತಿಂಗಳಲ್ಲಿ ನಾವು ಅಂಗಡಿಯನ್ನು ಪುನಾರಂಭ ಮಾಡುತ್ತೇವೆ. ಸೆಕ್ಸ್ ಆಟಿಕೆಗಳನ್ನು ಮಾರುವುದು ಕಾನೂನು ಬಾಹಿರವಲ್ಲ. ಸೆಕ್ಸ್​ ಆಟಿಕೆಗಳನ್ನು ಬಳಸಲು ಹಲವು ಡಾಕ್ಟ್​​ರ್​ಗಳು ಹಲವರಿಗೆ ಸಲಹೆ ನೀಡಿರುತ್ತಾರೆ ಎಂದು ಗಣೇಶನ್ ಹೇಳಿದ್ದಾರೆ.

ಒಟ್ಟಿನಲ್ಲಿ ಸುಲಭವಾಗಿ ಸೆಕ್ಸ್​ ಆಟಿಕೆಗಳನ್ನು ಇನ್ಮುಂದೆ ತೆಗೆದುಕೊಳ್ಳಬಹುದು ಎಂದು ಕೊಂಡವರಿಗೆ ಕಾಲಂಗಟ್ಟ್ ಗ್ರಾಮ ಪಂಚಾಯಿತಿ ಶಾಕ್ ನೀಡಿದೆ. (ಏಜೇನ್ಸಿಸ್)