PM Modi : ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಧ್ವಜ ಹಾರಿಸುವುದನ್ನು ತಡೆದವರಿಗೆ 11 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದ ಅಮೆರಿಕ ಮೂಲದ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಮತ್ತು ಆತನ 'ಸಿಖ್ಸ್ ಫಾರ್ ಜಸ್ಟೀಸ್' ಸಂಘಟನೆಯ ವಿರುದ್ಧ ಪ್ರಕರಣ ದಾಖಲಾಗಿದೆ.
ಉಗ್ರ ಪನ್ನುನ್ ಭಾರತದ ಸಾರ್ವಭೌಮತ್ವವನ್ನು ಬಹಿರಂಗವಾಗಿ ಪ್ರಶ್ನೆ ಮಾಡಿರುವ ವಿಡಿಯೋವನ್ನು ಆಧಾರವಾಗಿಟ್ಟುಕೊಂಡು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಕರಣ ದಾಖಲಿಸಿದೆ.
ಅಂದಹಾಗೆ, ಆಗಸ್ಟ್ 10 ರಂದು ಪಾಕಿಸ್ತಾನದ ಲಾಹೋರ್ ಪ್ರೆಸ್ ಕ್ಲಬ್‌ನಲ್ಲಿ ನಡೆದ 'ಮೀಟ್ ದಿ ಪ್ರೆಸ್' ಕಾರ್ಯಕ್ರಮದ ಸಂದರ್ಭದಲ್ಲಿ ಉಗ್ರ ಪನ್ನುನ್ ಈ ಘೋಷಣೆ ಮಾಡಿದ್ದನು. ಎಸ್‌ಎಫ್‌ಜೆಯ ಜನರಲ್ ಕೌನ್ಸೆಲ್ ಆಗಿರುವ ಪನ್ನು, ಅಮೆರಿಕದಿಂದಲೇ ವಿಡಿಯೋ ಲಿಂಕ್ ಮೂಲಕ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದನು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು.
ಪನ್ನುನ್ ತಮ್ಮ ಭಾಷಣದುದ್ದಕ್ಕೂ ಭಾರತದ ವಿರುದ್ಧ ವಿಷ ಕಾರಿದ್ದನು. ಪಂಜಾಬ್, ದೆಹಲಿ, ಹರಿಯಾಣ ಮತ್ತು ಹಿಮಾಚಲ ಪ್ರದೇಶವನ್ನು ಒಳಗೊಂಡಿರುವ ಖಲಿಸ್ತಾನ್ ಎಂದು ಕರೆಯಲ್ಪಡುವ ನಕ್ಷೆಯನ್ನು ಇದೇ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದನು. ಅಲ್ಲದೆ, ಭಾರತದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಭದ್ರತೆಯನ್ನು ಅಡ್ಡಿಪಡಿಸುವ ಮತ್ತು ಭಾರತದ ವಿರುದ್ಧ ಸಿಖ್ಖರಲ್ಲಿ ಅಸಮಾಧಾನವನ್ನು ಹರಡುವ ಚಟುವಟಿಕೆಗಳಲ್ಲಿ ಆತ ತೊಡಗಿಸಿಕೊಂಡಿದ್ದು, ಈ ಎಲ್ಲ ಅಂಶವನ್ನು ಎನ್‌ಐಎ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದಿಷ್ಟೇ ಅಲ್ಲದೆ, ಭಾರತದ ವಿರುದ್ಧ ಹೋರಾಡಲು 'ಹುತಾತ್ಮರ ಗುಂಪು' ರಚಿಸಿರುವುದಾಗಿಯೂ ಸಿಖ್ ಫಾರ್ ಜಸ್ಟೀಸ್ ಹೇಳಿಕೊಂಡಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಗಂಭೀರ ಅಪರಾಧವೆಂದು ಪರಿಗಣಿಸಿ, ಸರ್ಕಾರವು ಈ ಪ್ರಕರಣವನ್ನು ದೇಶದ ಪ್ರಮುಖ ಭಯೋತ್ಪಾದನಾ ವಿರೋಧಿ ಸಂಸ್ಥೆಯಾದ NIA ಗೆ ಹಸ್ತಾಂತರಿಸಿದೆ. ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ BNS ಸೆಕ್ಷನ್ 61(2) (ಕ್ರಿಮಿನಲ್ ಪಿತೂರಿ) ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ NIA ಪ್ರಕರಣವನ್ನು ದಾಖಲಿಸಿದ್ದು, ತನಿಖೆ ಆರಂಭಿಸಿದೆ. (ಏಜೆನ್ಸೀಸ್)