ನ್ಯೂಸ್

ಲಾಕ್​ಡೌನ್​ನಿಂದ ನಷ್ಟದ ಜತೆಗೆ ಲಾಭವೂ ಹೆಚ್ಚು: ದೆಹಲಿಯಲ್ಲಾದ ಮಹತ್ತರ ಬದಲಾವಣೆಯೇ ಸಾಕ್ಷಿ!

ನವದೆಹಲಿ: ಮಹಾಮಾರಿ ಕರೊನಾ ವೈರಸ್​ ತಡೆಗಟ್ಟಲು ದೇಶದಲ್ಲಿ ಹೇರಲಾಗಿರುವ ಲಾಕ್​ಡೌನ್​ನಿಂದಾಗಿ ಮತ್ತೊಂದು ಅನುಕೂಲತೆ ಜನತೆಗೆ ಸಿಕ್ಕಿದೆ. ವಾಹನ ಸಂಚಾರ ಬಹುತೇಕ ಸ್ತಬ್ಧವಾಗಿರುವುದರಿಂದ ಭಾರತದಲ್ಲಿ ವಾಯುಮಾಲಿನ್ಯ ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಬಹುಮುಖ್ಯವಾಗಿ ರಾಷ್ಟ್ರ ರಾಜಧಾನಿ ದೆಹಲಿಯ ಜನತೆ ಕಳೆದ ಕೆಲ ತಿಂಗಳ ಹಿಂದೆ ವಾಯುಮಾಲಿನ್ಯದಿಂದ ಹೈರಾಣಾಗಿದ್ದರು. ಎತ್ತ ನೋಡಿದರೂ ಹೊಗೆಯುಕ್ತ ಗಾಳಿಯನ್ನು ನೋಡಿ ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಲಾಕ್​ಡೌನ್​ನಿಂದ ಸ್ಪಷ್ಟವಾದ ನೀಲಿ ಆಕಾಶ ದೆಹಲಿಯಲ್ಲಿ ಕಳೆದ ವೀಕೆಂಡ್​ನಿಂದ ಕಾಣತೊಡಗಿದೆ.

ಮುಂದಿನ ದಿನಗಳಲ್ಲಿ ವಾಯುಮಾಲಿನ್ಯ ಮಟ್ಟ ಮತ್ತಷ್ಟು ಒಳ್ಳೆಯ ಫಲಿತಾಂಶವನ್ನು ನೀಡಲಿದೆ ಎಂದು ವಾಯು ಗುಣಮಟ್ಟ ಸೂಚ್ಯಂಕ ಸೂಚಿಸಿದೆ. ಇದೇ ಸಮಯದಲ್ಲಿ ದೇಶದ 90ಕ್ಕಿಂತ ಹೆಚ್ಚು ನಗರಗಳಲ್ಲಿಯೂ ಕನಿಷ್ಠ ಮಟ್ಟದ ವಾಯುಮಾಲಿನ್ಯ ದಾಖಲಾಗಿದೆ.

ಸದ್ಯ ದೆಹಲಿಯ ಹೊರಭಾಗದಲ್ಲಿ ಯಾವುದೇ ವಾಹನ ಓಡಾಟವಿಲ್ಲದೇ ಶುದ್ಧ ಗಾಳಿಯೊಂದಿಗೆ ಸುಂದರವಾದ ನೀಲಾಕಾಶ ಕಾಣುತ್ತಿದ್ದರೂ ಅದನ್ನು ಸವಿಯುವ ಅವಕಾಶವನ್ನು ಕರೊನಾ ಕಿತ್ತುಕೊಂಡಿದೆ. ಜನರು ಮನೆಯಲ್ಲಿ ಉಳಿದುಕೊಂಡಿರುವುದರಿಂದ ಪರಿಸರದಲ್ಲಾಗುತ್ತಿರುವ ಬದಲಾವಣೆಯನ್ನು ನೋಡಲಾಗುತ್ತಿಲ್ಲ. ಜಾಲತಾಣದಲ್ಲಿ ಸಾಕಷ್ಟು ಮಂದಿ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, ದೆಹಲಿಯಲ್ಲಿ ಮತ್ತೆ ನಮಗೆ ಉಸಿರಾಡಲು ಶುದ್ಧ ಗಾಳಿ ಸಿಕ್ಕಿದೆ. ಎಂಥಾ ಅದ್ಭುತ ದಿನ. ಕರೊನಾದಿಂದಾಗಿ ದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ಕಡಿಮೆಯಾಗುತ್ತಿದೆ ಎಂದೆಲ್ಲಾ ಪ್ರತಿಕ್ರಿಯಿಸಿದ್ದಾರೆ.

ಇದಕ್ಕೂ ಮುನ್ನ ದೆಹಲಿ ವಾಯುಸ್ಥಿತಿ 25 ಸಿಗರೇಟ್​ಗಳಿಗೆ ಸಮನಾಗಿತ್ತು ಎಂದು ವರದಿಯಾಗಿತ್ತು. ಇದೀಗ ಲಾಕ್​ಡೌನ್​ ಆಗಿರುವ ಪರಿಣಾಮ ದೆಹಲಿಯಲ್ಲಿ ಮತ್ತೆ ಶುದ್ಧ ಗಾಳಿ ಸಿಕ್ಕಿದೆ. (ಏಜೆನ್ಸೀಸ್​)