ನ್ಯೂಸ್

ವಿದೇಶಗಳಲ್ಲಿ ಮಿಂಚುತ್ತಿರುವ ಭಾರತೀಯ ಮೂಲದವರು

Webdesk - Ravikanth
ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್​ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇದೇ ರೀತಿ ಭಾರತೀಯ ಮೂಲದ ಅನೇಕರು ಪ್ರಸ್ತುತವಾಗಿ ವಿವಿಧ ದೇಶಗಳಲ್ಲಿ ಅತ್ಯುನ್ನತ ರಾಜಕೀಯ ಸ್ಥಾನಗಳನ್ನು ಅಲಂಕರಿಸಿದ್ದಾರೆ. ರಾಷ್ಟ್ರದ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನಿ ಇಂತಹ ಮಹತ್ವದ ಸ್ಥಾನಗಳಲ್ಲಿ ಅಧಿಕಾರ ನಡೆಸುತ್ತಿರುವ ಭಾರತೀಯ ಮೂಲದ ಕೆಲವರ ಸಂಕ್ಷಿಪ್ತ ಪರಿಚಯ ಇಲ್ಲಿದೆ.
ಪೋರ್ಚುಗಲ್ ಪ್ರಧಾನಿ ಅಂಟೋನಿಯೊ ಕೋಸ್ಟಾ
ಪೋರ್ಚುಗಲ್​ನ ಲಿಸ್ಬನ್​ನಲ್ಲಿ 1961ರಲ್ಲಿ ಕೋಸ್ಟಾ ಜನಿಸಿದರು. ಅವರು ಅರ್ಧ ಭಾರತೀಯ; ಇನ್ನರ್ಧ ಪೋರ್ಚುಗೀಸ್ ಆಗಿದ್ದಾರೆ. ಇವರ ತಂದೆ ಒರ್ಲಾಂಡೊ ಡ ಕೋಸ್ಟಾ ಅವರು ಗೋವಾದ ಕುಟುಂಬದಲ್ಲಿ ಜನಿಸಿದ್ದು, ಲೇಖಕರಾಗಿದ್ದರು. ತಾಯಿ ಅಂಟೊನಿಯಾ ಪಲ್ಲಾ ಅವರು ಪತ್ರಕರ್ತೆಯಾಗಿದ್ದರು. ಲಿಸ್ಬನ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದ ಕೋಸ್ಟಾ ಅವರು ನಂತರ ರಾಜಕೀಯ ಪ್ರವೇಶಿಸಿ ಸೊಷಿಯಲಿಸ್ಟ್ ಪಕ್ಷ ಸೇರಿದರು. ಸಂಸದೀಯ ವ್ಯವಹಾರಗಳು, ಕಾನೂನು ಸಚಿವರಾಗಿ ಕಾರ್ಯನಿರ್ವಹಿಸಿದರು. 2007ರಲ್ಲಿ ಪೋರ್ಚುಗಲ್ ರಾಜಧಾನಿ ಲಿಸ್ಬನ್​ನ ಮೇಯರ್ ಆಗಿ ಆಯ್ಕೆಯಾದರು. 2015ರ ನವೆಂಬರ್ 26ರಂದು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಕೋಸ್ಟಾ ಅವರನ್ನು ಗೋವಾದಲ್ಲಿ ಪ್ರೀತಿಯಿಂದ ಬಬುಶ್ ಎಂದು ಕರೆಯುತ್ತಾರೆ. ಕೊಂಕಣಿಯಲ್ಲಿ ಇದರರ್ಥ ಪ್ರೀತಿಯ ಯುವಕ ಎಂದರ್ಥ.
ಗಯಾನಾ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ
ಗಯಾನಾ ದೇಶದ ಲಿಯೊನಾರಾ ಪಟ್ಟಣದಲ್ಲಿ ಭಾರತೀಯ ಹಾಗೂ ಗಯಾನಾ ಮೂಲದ ಕುಟುಂಬದಲ್ಲಿ ಅಲಿ ಅವರು 1980ರಲ್ಲಿ ಜನಿಸಿದರು. ವೆಸ್ಟ್ ಇಂಡೀಸ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. 2006ರಲ್ಲಿ ಗಯಾನಾದ ನ್ಯಾಷನಲ್ ಅಸೆಂಬ್ಲಿಯ ಸದಸ್ಯರಾಗಿ ಆಯ್ಕೆಯಾದರು. ನಂತರ ವಸತಿ, ನೀರು, ಪ್ರವಾಸೋದ್ಯಮ, ವಾಣಿಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದರು. ಪೀಪಲ್ಸ್ ಪ್ರೊಗ್ರೆಸ್ಸಿವ್ ಪಾರ್ಟಿಯಿಂದ ಚುನಾವಣೆಗೆ ಸ್ಪರ್ಧಿಸಿ 2019ರ ಜ. 19ರಂದು ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾದರು. ಆದರೆ, ಹಲವಾರು ಚುನಾವಣೆ ವಂಚನೆ ಆರೋಪಗಳ ಹಿನ್ನೆಲೆಯಲ್ಲಿ ಮರು ಎಣಿಕೆ ನಡೆದ ನಂತರ 2020ರ ಆಗಸ್ಟ್ 2ರಂದು ಗಯಾನಾದ 10ನೇ ರಾಷ್ಟ್ರಪತಿಯಾಗಿ ಅವರು ಅಧಿಕಾರ ಸ್ವೀಕರಿಸಿದರು.
ಮಾರಿಷಸ್ ಪ್ರಧಾನಿ ಪ್ರವಿಂದ ಜಗನ್ನಾಥ
ಜಗನ್ನಾಥ ಅವರು ಹಿಂದು ಅಹಿರ್ ಕುಟುಂಬದಲ್ಲಿ ಮಾರಿಷಸ್​ನ ವಾಕೋಸ್- ಫೋನಿಕ್ಸ್​ನಲ್ಲಿ 1961ರಲ್ಲಿ ಜನಿಸಿದರು. ಇವರ ತಂದೆ ಅನಿರುದ್ಧ ಜಗನ್ನಾಥ ಅವರು ವಕೀಲರು. ತಾಯಿ ಸರೋಜಿನಿ ಬಲ್ಲಾ ಅವರು ಶಾಲೆಯ ಶಿಕ್ಷಕಿ. ಬಕಿಂಗ್​ಹ್ಯಾಮ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಅನಿರುದ್ಧ ಪಡೆದರು. 1990ರಲ್ಲಿ ಮಿಲಿಟಂಟ್ ಸೋಷಿಯಲಿಸ್ಟ್ ಮೂವ್​ವೆುಂಟ್ ಪಕ್ಷಕ್ಕೆ ಸೇರ್ಪಡೆಯಾದರು. ನಂತರ ಕೃಷಿ, ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದರು. 2010ರಲ್ಲಿ ಮೈತ್ರಿಕೂಟದ ಮೂಲಕ ಉಪಪ್ರಧಾನಿಯಾಗಿ ನೇಮಕಗೊಂಡರು. 2019ರ ನವೆಂಬರ್​ನಲ್ಲಿ ಪ್ರಧಾನಿಯಾಗಿ ಆಯ್ಕೆಯಾದರು.
ಮಾರಿಷಸ್ ಅಧ್ಯಕ್ಷ ಪೃಥ್ವಿರಾಜ್​ಸಿಂಗ್ ರೂಪುನ್
ಆರ್ಯ ಸಮಾಜದ ಹಿಂದು ಕುಟುಂಬದಲ್ಲಿ ರೂಪುನ್ 1959ರಲ್ಲಿ ಜನಿಸಿದರು. ಸೆಂಟ್ರಲ್ ಲ್ಯಾಂಕಾಷೈರ್ ವಿಶ್ವವಿದ್ಯಾಲಯದಿಂದ ಕಾನೂನು ಸ್ನಾತಕೋತ್ತರ ಪದವಿ ಪಡೆದರು. 1983ರಲ್ಲಿ ಮಿಲಿಟಂಟ್ ಸೊಷಿಯಲಿಸ್ಟ್ ಮೂವ್​ವೆುಂಟ್ ಪಕ್ಷ ಸೇರ್ಪಡೆಯಾದರು. ನಂತರ ಶಾಸಕರಾಗಿ ಆಯ್ಕೆಯಾದರು. 2010ರಲ್ಲಿ ಉಪಸ್ಪೀಕರ್ ಆದರು. ಸಾಮಾಜಿಕ ಐಕ್ಯತೆ ಮತ್ತು ಆರ್ಥಿಕ ಸಬಲಿಕರಣ; ಕಲೆ ಮತ್ತು ಸಂಸ್ಕೃತಿ ಸಚಿವರಾಗಿ ಕಾರ್ಯನಿರ್ವಹಿಸಿದರು. 2019ರ ಡಿ.2ರಂದು ರಾಷ್ಟ್ರಾಧ್ಯಕ್ಷರಾಗಿ ನೇಮಕಗೊಂಡರು.
ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್
ಅಮೆರಿಕದ ಕ್ಯಾಲಿಫೋರ್ನಿಯಾದ ಒಕ್​ಲ್ಯಾಂಡ್​ನಲ್ಲಿ 1964ರಲ್ಲಿ ಕಮಲಾದೇವಿ ಹ್ಯಾರಿಸ್ ಜನಿಸಿದರು. ತಮಿಳು ಮೂಲದ ತಾಯಿ ಶ್ಯಾಮಲಾ ಗೋಪಾಲನ್, ಬ್ರಿಟಿಷ್ ಜಮೈಕಾ ಮೂಲದ ತಂದೆ ಡೋನಾಲ್ಡ್ ಹ್ಯಾರಿಸ್ ಅವರ ಮಗಳು ಕಮಲಾ ಕಾನೂನು ಶಿಕ್ಷಣ ಪಡೆದರು. 2003ರಲ್ಲಿ ಸ್ಯಾನ್​ಫ್ರಾನ್ಸಿಸ್ಕೊದ ಜಿಲ್ಲಾ ಅಟಾರ್ನಿ ಚುನಾವಣೆ, 2010ರಲ್ಲಿ ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ಚುನಾವಣೆಯಲ್ಲಿ ಗೆದ್ದರು. 2016ರಲ್ಲಿ ಅಮೆರಿಕದ ಸೆನೆಟ್ ಪ್ರವೇಶಿಸಿದರು. ಬೈಡನ್ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಕಮಲಾ ಹ್ಯಾರಿಸ್ ಅವರು ಅಮೆರಿಕದ 46ನೇ ಉಪಾಧ್ಯಕ್ಷರಾಗಿ 2021ರ ಜನವರಿ 20ರಂದು ಅಧಿಕಾರ ವಹಿಸಿಕೊಂಡರು.
ಕೀನ್ಯಾ ಉಪಾಧ್ಯಕ್ಷ ಭರತ್ ಜಗ್ದಿಯೊ
ಭರತ್ ಅವರು ಭಾರತೀಯ ಮೂಲದ ಹಿಂದು ಕುಟುಂಬದಲ್ಲಿ 1964ರಲ್ಲಿ ಜನಿಸಿದರು. 13ನೇ ವಯಸ್ಸಿನಲ್ಲಿ ಪೀಪಲ್ಸ್ ಪ್ರೊಗ್ರೆಸ್ಸಿವ್ ಪಾರ್ಟಿಯ ಯುವ ಘಟಕವನ್ನು ಸೇರಿದರು. 1984ರಲ್ಲಿ ಉನ್ನತ ಅಧ್ಯಯನಕ್ಕಾಗಿ ರಷ್ಯಾಕ್ಕೆ ತೆರಳಿದರು. ಹಣಕಾಸು ಸಚಿವರಿಗೆ ವಿಶೇಷ ಸಲಹೆಗಾರರಾದರು. 1993ರಲ್ಲಿ ಕಿರಿಯ ಹಣಕಾಸು ಸಚಿವ ಹಾಗೂ 1995ರಲ್ಲಿ ಹಿರಿಯ ಹಣಕಾಸು ಸಚಿವರಾದರು. 1997ರಲ್ಲಿ ಎರಡನೇ ಉಪಾಧ್ಯಕ್ಷರಾಗಿ ನೇಮಕಗೊಂಡರು. 2020ರ ಆಗಸ್ಟ್ 3ರಂದು ಪ್ರಥಮ ಉಪಾಧ್ಯಕ್ಷರಾದರು.

ಚಂದ್ರಿಕಾಪ್ರಸಾದ ಸಂತೋಖಿ: ಚಾನ್ ಸಂತೋಖಿ ಎಂದೇ ಗುರುತಿಸಲಾಗುವ ಚಂದ್ರಿಕಾಪ್ರಸಾದ ಅವರು ಭಾರತದ ಮೂಲದ ಹಿಂದು ಕುಟುಂಬದಲ್ಲಿ ಸುರಿನಾಮ್ ಲೆಲಿಡ್ರಾಪ್​ನಲ್ಲಿ 1959ರಲ್ಲಿ ಜನಿಸಿದರು. ಶಿಷ್ಯವೇತನದ ಮೂಲಕ ನೆದರ್​ಲೆಂಡ್​ನ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದುಕೊಂಡ ನಂತರ ಪೊಲೀಸ್ ಇನ್ಸ್​ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದರು. 1989ರಲ್ಲಿ ರಾಷ್ಟ್ರೀಯ ತನಿಖಾ ಇಲಾಖೆಯ ಮುಖ್ಯಸ್ಥರಾಗಿ ನೇಮಕಗೊಂಡರು. 2005ರಲ್ಲಿ ಪ್ರೊಗ್ರೆಸ್ಸಿವ್ ರಿಫಾಮ್ರ್ ಪಾರ್ಟಿ ವತಿಯಿಂದ ನ್ಯಾಯ ಮತ್ತು ಪೊಲೀಸ್ ಸಚಿವರಾಗಿ ನೇಮಕಗೊಂಡರು. ಅಪರಾಧ ಮತ್ತು ಡ್ರಗ್ ದಂಧೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡರು. 2011ರಲ್ಲಿ ವೂರುಇಟ್ಸೆವಿಂಡ್ರ ಹರ್ವೆಮಿಂಗ್ಸ್ ಪಾರ್ಟಿಯ (ವಿಎಚ್​ಪಿ) ರಾಷ್ಟ್ರೀಯ ಅಧ್ಯಕ್ಷರಾದರು. 2020ರ ಜುಲೈ 13ರಂದು ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾದರು.