Indian Woman: ನಾನು ವಿದೇಶದಲ್ಲಿ ನೆಲಸಬೇಕು, ಅಲ್ಲಿನ ಸಂಸ್ಥೆಗಳಲ್ಲಿ ಕೆಲಸ ಮಾಡಬೇಕು, ಕೈತುಂಬ ಹಣ ಸಂಪಾದಿಸುತ್ತಾ, ಅಲ್ಲೇ ಜೀವನ ನಡೆಸಬೇಕು ಎಂಬ ಹತ್ತಾರು ಕನಸು ನೂರಾರು ಮಂದಿಯದ್ದು. ಹೀಗಿರುವಾಗ, ಇಲ್ಲೊಬ್ಬ ಭಾರತೀಯ ಮಹಿಳೆ, 10 ವರ್ಷಕ್ಕೂ ಹೆಚ್ಚು ಕಾಲ ಯುನೈಟೆಡ್ ಕಿಂಗ್ಡಮ್ನ ಲಂಡನ್‌ನಲ್ಲಿ ವಾಸವಿದ್ದು, ಈಗ ದಿಢೀರ್ ದೇಶವನ್ನು ತೊರೆಯಲು ಬಯಸಿದ್ದಾರೆ. ಅದಕ್ಕೆ ಒಂದಷ್ಟು ಸಮಸ್ಯೆಗಳೇ ಕಾರಣ ಎಂದು ಹೇಳಿಕೊಂಡಿರುವುದು ಸದ್ಯ ನೆಟ್ಟಿಗರ ಗಮನ ಸೆಳೆದಿದೆ.
ಇದನ್ನೂ ಓದಿ: ರಷ್ಯಾ, ಯುಕ್ರೇನ್ ಯುದ್ದ: ಪುಟಿನ್ ಟ್ರಂಪ್ರನ್ನು ಆಟವಾಡಿಸುತ್ತಿದ್ದಾರೆ ಎಂದ ಫ್ರೆಂಚ್ ಅಧ್ಯಕ್ಷ| Emmanuel Macron
ವರದಿಯ ಪ್ರಕಾರ, ಲಂಡನ್‌ನಲ್ಲಿ ವಾಸಿಸುತ್ತಿದ್ದ ಭಾರತೀಯ ಉದ್ಯಮಿ ಪಲ್ಲವಿ ಛಿಬ್ಬರ್, ಹೆಚ್ಚಿನ ತೆರಿಗೆಗಳು ಮತ್ತು ದುಬಾರಿ ಆಗಿರುವ ವಸ್ತುಗಳ ಬೆಲೆಯಿಂದ ತಗುಲುತ್ತಿರುವ ಖರ್ಚು-ವೆಚ್ಚವನ್ನು ಭರಿಸಲು ಸಾಧ್ಯವಾಗದ ಹಿನ್ನೆಲೆ ನಗರವನ್ನು ತೊರೆದು, ತಮ್ಮ ಕುಟುಂಬವನ್ನು ಬೇರೆಡೆಗೆ ಕರೆದೊಯ್ಯಲು ನಿರ್ಧರಿಸಿದ್ದಾರೆ. ಮನಬಂದಂತೆ ವಿಧಿಸುವ ತೆರಿಗೆಗಳು ನನ್ನ ಈ ನಿರ್ಧಾರಕ್ಕೆ ಮೊದಲ ಹಾಗೂ ಪ್ರಮುಖ ಕಾರಣ ಎಂದಿದ್ದಾರೆ ಪಲ್ಲವಿ. ತಮಗೆ ಬರುವ ಸಂಬಳದ ಶೇ.50ರಷ್ಟು ಹಣ ನೇರ ಮತ್ತು ಪರೋಕ್ಷ ತೆರಿಗೆಗಳಿಗೆ ಕಡಿತಗೊಳ್ಳುತ್ತಿದೆ ಎಂದು ಬೇಸರ ತೋಡಿಕೊಂಡಿದ್ದಾರೆ.
"ಲಂಡನ್ ದಿನದಿಂದ ದಿನಕ್ಕೆ ವಿಪರೀತ ದುಬಾರಿಯಾಗುತ್ತಿದೆ. ಮತ್ತು ದೈನಂದಿನ ವೆಚ್ಚಗಳು ಆರ್ಥಿಕ ಒತ್ತಡವನ್ನು ಹೆಚ್ಚಿಸುತ್ತಿವೆ. ಇಲ್ಲಿ ಸುಮಾರು 10 ವರ್ಷಗಳ ಕಾಲ ಜೀವನ ಮಾಡಿದ ಬಳಿಕ ಈಗ ನಾನು ಲಂಡನ್‌ನಿಂದ ದೂರ ಉಳಿಯಲು ಬಯಸಿದ್ದೇನೆ" ಎಂದು ವಿಡಿಯೊದಲ್ಲಿ ಪಲ್ಲವಿ ಹೇಳಿದ್ದಾರೆ. "ಮೊದಲನೆಯದಾಗಿ, ನಾನು ಸ್ಪಷ್ಟಪಡಿಸಲು ಬಯಸುವುದಿಷ್ಟೇ. ನಾನು ಲಂಡನ್ನ ಬಹಳ ಇಷ್ಟಪಡುತ್ತೇನೆ. ಈ ನಗರದಂತಹ ಸ್ಥಳ ನಿಜವಾಗಿಯೂ ಭೂಮಿಯ ಮೇಲೆ ಬೇರೆಡೆ ಇಲ್ಲ. ನಾನು ಪಕ್ಕಾ ಲಂಡನ್ ಹುಡುಗಿ. ನನ್ನ ಹೃದಯದ ಒಂದು ಭಾಗ ಶಾಶ್ವತವಾಗಿ ಇಲ್ಲೇ ಇರುತ್ತದೆ" ಎಂದಿದ್ದಾರೆ.
"ಆದರೆ ಈ ಸಮಯದಲ್ಲಿ, ನಾವು ವಾಸ್ತವವನ್ನು ನಿರ್ಲಕ್ಷಿಸಲು ಸಾಧ್ಯವೇ ಇಲ್ಲ. ಬದುಕಿನ ವೆಚ್ಚದ ಬಿಕ್ಕಟ್ಟು, ಬದುಕುಳಿಯಲು ಎದುರಾಗುತ್ತಿರುವ ಸಮಸ್ಯೆಗಳು ಮತ್ತು ಹೆಚ್ಚುತ್ತಿರುವ ಖರ್ಚುಗಳು ಸುಲಭದ ಮಾತಲ್ಲ. ಇದೊಂದು ಕಠಿಣ ಸಮಯ ಮತ್ತು ನನ್ನ ಇತರ ಸ್ನೇಹಿತರು ಸಹ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬದುಕು ನಡೆಸಲು ಹೆಣಗಾಡುತ್ತಿದ್ದಾರೆ. ನನ್ನ 16 ವರ್ಷದ ಮಗನಿಗೆ ಇದು ತುಂಬಾ ಕಷ್ಟಕರವಾಗಿದೆ. ಈಗ ಅವನು ಹೊಸ ಶಾಲೆಯ ವಿದ್ಯಾರ್ಥಿಯಾಗಿ ಬದಲಾಗಬೇಕಿದೆ. ಸಂಪೂರ್ಣವಾಗಿ ಹೊಸದಾಗಿ ಪ್ರಾರಂಭಿಸಬೇಕಾಗಿದೆ" ಎಂದು ಹೇಳಿದ್ದಾರೆ.
ಪಲ್ಲವಿ ಅವರ ಈ ಪೋಸ್ಟ್ ಜಾಲತಾಣಗಳಲ್ಲಿ ಹರಿದಾಡಿದ್ದು, ಹಲವರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಆಕೆಯ ನಿರ್ಧಾರವನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಲಂಡನ್‌ನಲ್ಲಿ ವಿಧಿಸಲಾದ ತೆರಿಗೆಗಳು ಮತ್ತು ತಗಲುವ ವೆಚ್ಚದ ಬಗ್ಗೆ ತಮ್ಮ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).