ದುಬೈ: ಭಾರತದ ಕೇರಳ ಮೂಲದ ಮಹಿಳೆಯೊಬ್ಬಳು ದುಬೈನಲ್ಲಿ ತನ್ನ ಗಂಡನ ಕಾರು ಪಾರ್ಕಿಂಗ್ಗೆ ಸಹಾಯ ಮಾಡಲು ಹೋಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಆಕಸ್ಮಿಕವಾಗಿ ಆದ ಅಪಘಾತಕ್ಕೆ 45 ವರ್ಷದ ಮಹಿಳೆ ಬಲಿಯಾಗಿದ್ದಾಳೆ.
ಲಿಜಿ ಹೆಸರಿನ ಮಹಿಳೆ ತನ್ನ ಗಂಡ ಮತ್ತು ಮಗಳೊಂದಿಗೆ ಅರನ್ ಸಂಯುಕ್ತ ಸಂಸ್ಥಾನದ ಉಮ್ ಅಲ್ ಕ್ವೈನ್‌ನಲ್ಲಿ ವಾಸವಿದ್ದಾರೆ. ಅವರ ಹಿರಿಯ ಮಗ ಭಾರತದಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾನೆ. ಲಿಜಿ ದಂಪತಿ ಶನಿವಾರದಂದು ಆರೋಗ್ಯ ಪರಿಶೀಲನೆಗಾಗಿ ಆಸ್ಪತ್ರೆಗೆ ಹೋಗಿದ್ದರು. ಆಸ್ಪತ್ರೆಯಿಂದ ಬಂದ ದಂಪತಿ ಕಾರನ್ನು ಪಾರ್ಕಿಂಗ್ ಮಾಡಲು ಮುಂದಾಗಿದ್ದಾರೆ. ಕಾರಿನ ಮುಂದೆ ನಿಂತ ಲಿಜಿ ಗಂಡನಿಗೆ ಪಾರ್ಕಿಂಗ್ ಮಾಡಲು ನಿರ್ದೇಶನ ನೀಡಲಾರಂಭಿಸಿದ್ದಾಳೆ. ಆದರೆ ಈ ವೇಳೆ ಕಾರು ಅಚಾನಕ್ಕಾಗಿ ಮುಂದೆ ಹೋಗಿದ್ದು, ಮುಂದಿದ್ದ ಗೋಡೆಗೆ ಲಿಜಿಯನ್ನು ತಳ್ಳಿಕೊಂಡು ಹೋಗಿದೆ. ಅದರಿಂದಾಗಿ ಆಕೆ ಅಲ್ಲಿಯೇ ಕೊನೆಯುಸಿರೆಳೆದಿದ್ದಾಳೆ.
ಲಿಜಿಯ ಸಾವಿನಿಂದಾಗಿ ಅಜ್ಮಾನ್ನಲ್ಲಿರುವ ಭಾರತೀಯ ಸಮುದಾಯ ಆಘಾತಕ್ಕೊಳಗಾಗಿದೆ. ಅಜ್ಮಾನ್ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಆಕೆಯ ದೇಹವನ್ನು ವಾಪಸ್ಸು ಭಾರತಕ್ಕೆ ಕಳುಹಿಸಿಕೊಡಲು ಭಾರತೀಯ ಸಂಘವು ಕುಟುಂಬವನ್ನು ಬೆಂಬಲಿಸುತ್ತಿದೆ ಎಂದು ತಿಳಿಸಲಾಗಿದೆ. (ಏಜೆನ್ಸೀಸ್)