ನ್ಯೂಸ್

ಕೆನಡಾದ ಕಡಲತೀರದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಭಾರತದ ವಿದ್ಯಾರ್ಥಿನಿಯ ಮೃತದೇಹ ಪತ್ತೆ..! Indian student

ಒಟ್ಟಾವಾ : ಕೆನಡಾದಲ್ಲಿ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿನಿ(Indian student) ವಂಶಿಕಾ ಸೈನಿ ನಿಗೂಢವಾಗಿ ಸಾವಿನ್ನಪ್ಪಿದ್ದಾರೆ ಎಂದು ಭಾರತೀಯ ಹೈಕಮಿಷನ್ ಸೋಮವಾರ(ಏ.28) ದೃಢಪಡಿಸಿದೆ.

ಆಮ್ ಆದ್ಮಿ ಪಕ್ಷದ ನಾಯಕ ಮತ್ತು ಪಂಜಾಬ್ ಶಾಸಕ ಕುಲ್ಜಿತ್ ಸಿಂಗ್ ರಾಂಧವಾ ಅವರ ಆಪ್ತ ಸಹಾಯಕ ದವೀಂದರ್ ಸೈನಿ ಅವರ ಮಗಳಾದ ವಂಶಿಕಾ ಡಿಪ್ಲೊಮಾ ವಿದ್ಯಾಭ್ಯಾಸಕ್ಕಾಗಿ ಎರಡುವರೆ ವರ್ಷಗಳ ಹಿಂದೆ ಒಟ್ಟಾವಾಗೆ ತೆರಳಿದ್ದರು.

ನಡೆದ ಘಟನೆ ಏನು?

ಏ.25 ರಂದು ಬಾಡಿಗೆ ಮನೆ ಹುಡುಕಲು ಹೊರಟಿದ್ದ ವಂಶಿಕಾ ಇಡೀ ದಿನ ಕಳೆದರೂ ಮರಳಿ ಬರಲಿಲ್ಲ. ಆ ರಾತ್ರಿ ಸುಮಾರು 11:40 ರ ಸುಮಾರಿಗೆ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಮರುದಿನ ಇದ್ದ ಪ್ರಮುಖ ಪರೀಕ್ಷೆಗೆ ವಂಶಿಕಾ ಹಾಜಾರಾಗದಿದ್ದಾಗ ಕುಟುಂಬದ ಸದಸ್ಯರು ಗಾಬರಿಗೊಂಡಿದ್ದಾರೆ. ನಂತರ ಕನಡಾದಲ್ಲಿ ವಂಶಿಕಾಳ ಸ್ನೇಹಿತರು, ಕುಟುಂಬಸ್ಥರು ಆಕೆಗಾಗಿ ಎಷ್ಟೇ ಹುಡುಕಾಟ ನಡೆಸಿದರೂ ಅವಳ ಸುಳಿವು ಸಿಗಲಿಲ್ಲ, ತದನಂತರ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದರು.

"ಒಟ್ಟಾವಾದಲ್ಲಿ ಭಾರತದ ವಿದ್ಯಾರ್ಥಿನಿ ವಂಶಿಕಾ ಸಾವಿನ ಸುದ್ದಿ ತಿಳಿದು ನಮಗೆ ತುಂಬಾ ದುಃಖವಾಗಿದೆ. ಈ ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಮತ್ತು ಸ್ಥಳೀಯ ಪೊಲೀಸರ ಪ್ರಕಾರ ಕಾರಣ ತನಿಖೆಯಲ್ಲಿದೆ. ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ನಾವು ದುಃಖಿತರ ಸಂಬಂಧಿಕರು ಮತ್ತು ಸ್ಥಳೀಯ ಸಮುದಾಯ ಸಂಘಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ" ಎಂದು ಭಾರತೀಯ ಹೈಕಮಿಷನ್ ತಿಳಿಸಿತ್ತು

ಬೀಚ್‌ನಲ್ಲಿ ಶವ ಪತ್ತೆ, ತನಿಖೆ ಮುಂದುವರಿಕೆ

ನಂತರ ಕೂಡಲೇ ತನಿಖೆ ಪ್ರಾರಂಭಿಸಿದ ಪೊಲೀಸರು ಸತತ ನಾಲ್ಕು ದಿನಗಳ ಕಾಲ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ವಂಶಿಕಾ ಮೃತದೇಹ ಕಡಲತೀರದಲ್ಲಿ ಪತ್ತೆಯಾಗಿದೆ. ಸಾವಿಗೆ ಸರಿಯಾದ ಕಾರಣ ತಿಳಿದು ಬಂದಿಲ್ಲವಾದರೂ, ವಂಶಿಕಾಳನ್ನು ಕೊಲೆ ಮಾಡಲಾಗಿದೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. (ಏಜೆನ್ಸೀಸ್​)