ನ್ಯೂಸ್

ಬೆಂಗಳೂರಿನ ಬನಶಂಕರಿಯಲ್ಲಿ 12 ಅಡಿ ಉದ್ದದ ಹೆಬ್ಬಾವು ಪತ್ತೆ: ಮನೆಯೊಳಗೆ ಬಂದಿದ್ದ ಉರಗ ರಕ್ಷಣೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಭಾರೀ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಉಂಟು ಮಾಡಿದೆ. ಹಾವನ್ನು ರಕ್ಷಣೆ ಮಾಡಲಾಗಿದ್ದು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

ಬನಶಂಕರಿ 6 ನೇ ಹಂತದಲ್ಲಿರುವ ಮನೆಯೊಂದರಲ್ಲಿ 12 ಅಡಿ ಉದ್ದದ ಇಂಡಿಯನ್ ರಾಕ್ ಪೈಥಾನ್ ಕಾಣಿಸಿಕೊಂಡಿದೆ. ಮನೆಯೊಳಗೆ ಹಾವು ಬಂದಿದ್ದನ್ನು ನೋಡಿದ ಆಘಾತಕ್ಕೆ ಒಳಗಾದ ಮನೆ ಮಂದಿ, ತಕ್ಷಣ ಉರಗ ರಕ್ಷಕರಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಆಗಮಿಸಿದ ಉರಗ ರಕ್ಷಕ ಕಪಿಲ್ ಮತ್ತು ರಶ್ಮಿ ಅವರು ಹೆಬ್ಬಾವನ್ನು ರಕ್ಷಣೆ ಮಾಡಿ, ಬಿಎಂ ಕಾವಲ್ ಕಾಡಿಗೆ ಸ್ಥಳಾಂತರ ಮಾಡಿದ್ದಾರೆ.

ನೀರಿನ ಚಾನಲ್​ನಲ್ಲಿ ಪತ್ತೆ

ಈ ಹಿಂದೆ ಏಪ್ರಿಲ್​ 25ರಂದು ಬಿಬಿಎಂಪಿ ವ್ಯಾಪ್ತಿಯ ಅಂಜನಾಪುರ ವಾರ್ಡ್​ನ ಕಂಬತ್ತಳ್ಳಿಯಲ್ಲಿ ಸುಮಾರು 14 ಅಡಿ ಉದ್ದದ ಹೆಬ್ಬಾವನ್ನು ರಕ್ಷಣೆ ಮಾಡಿ, ಅರಣ್ಯ ಪ್ರದೇಶಕ್ಕೆ ಬಿಡಲಾಗಿತ್ತು. ಹಂದಿ ಸಾಕಣೆ ಕೇಂದ್ರದ ನೀರಿನ ಚಾನಲ್​ನೊಳಗೆ ಸೇರಿಕೊಂಡಿದ್ದ ಹೆಬ್ಬಾವನ್ನು ರಕ್ಷಣೆ ಮಾಡಲು ಸತತ 4 ಗಂಟೆ ಕಾರ್ಯಾಚರಣೆ ನಡೆಸಲಾಯಿತು. ವನ್ಯಜೀವಿ ಸಂರಕ್ಷಕ ರಹೀದಾಸ್ ಅವರು ಹಾವನ್ನು ರಕ್ಷಣೆ ಮಾಡಿದ್ದರು.

ಸಹಾಯವಾಣಿಗೆ ಕರೆ ಮಾಡಿ

ಹಾವುಗಳು ಬಿಸಿಲಿನ ತಾಪಕ್ಕೆ ಹೊರಬರುತ್ತಿವೆ. ಇವುಗಳಿಗೆ ಯಾರೂ ಹಾನಿಯುಂಟುಮಾಡದೆ ಬಿಬಿಎಂಪಿ ಅರಣ್ಯ ವಿಭಾಗದ ವನ್ಯಜೀವಿ ತಂಡಗಳಿಗೆ ಕರೆ ಮಾಡಿ ಸಂರಕ್ಷಣೆ ಮಾಡಲು ಹಾಗೂ ಸೂಕ್ತ ಆವಾಸ ಸ್ಥಾನಕ್ಕೆ ಬಿಡಲು ಸಾರ್ವಜನಿಕರು ಅನುವು ಮಾಡಿಕೊಡಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸರಿನಾ ಸಿಕ್ಕಲಿಗರ್ ಮನವಿ ಮಾಡಿದ್ದಾರೆ ಎಲ್ಲಿಯಾದರೂ ಇಂಥ ಜೀವಿಗಳು ಕಂಡುಬಂದರೆ ತಕ್ಷಣ ಸಹಾಯವಾಣಿ 080- 22221188 ಕರೆ ಮಾಡುವಂತೆ ಕೋರಿದ್ದಾರೆ.